ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಸಿ. ಜೋಸೆಫ್ ವಿಜಯ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿರುಗೇಟು ನೀಡಿದ್ದಾರೆ. “ಹಿಂದಿನ ಡಿಎಂಕೆ ಸರ್ಕಾರ 10 ಲಕ್ಷ ಕೋಟಿ ರೂಪಾಯಿ ಸಾಲ ಬಿಟ್ಟು, ಖಜಾನೆಯನ್ನು ಖಾಲಿ ಮಾಡಿದೆ” ಎಂಬ ವಿಜಯ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ‘ತಮಿಳುನಾಡಿನ ಸಾಲವು ಅನುಮತಿಸಲಾದ ಮಿತಿಯೊಳಗೇ ಇದೆ’ ಎಂದು ತಿಳಿಸಿದ್ದಾರೆ.
‘ಎಕ್ಸ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಶುಭಾಶಯ ತಿಳಿಸಿದ್ದಾರೆ ಹಾಗೂ ಹೊಸ ಸರ್ಕಾರ ಮಾಡಿದ ತಕ್ಷಣದ ಘೋಷಣೆಗಳನ್ನು ಸ್ವಾಗತಿಸಿದ್ದಾರೆ. ಆದರೆ, ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ವಿಜಯ್ ಅವರ ಟೀಕೆಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಆರಂಭದಲ್ಲೇ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಲು ಶುರು ಮಾಡಬೇಡಿ. ಸರ್ಕಾರದ ಬಳಿ ಖಂಡಿತಾ ಹಣ ಇದೆ. ಆದರೆ, ಅದನ್ನು ಜನರಿಗೆ ನೀಡುವ ಇಚ್ಛಾಶಕ್ತಿ ಹಾಗೂ ಆಡಳಿತ ನಡೆಸುವ ಸಾಮರ್ಥ್ಯ ಬೇಕು” ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಯನ್ನು ಫೆಬ್ರವರಿ ತಿಂಗಳ ಬಜೆಟ್‌ನಲ್ಲಿಯೇ ವಿವರವಾಗಿ ಮಂಡಿಸಲಾಗಿತ್ತು ಎಂದು ಸ್ಟಾಲಿನ್ ನೆನಪಿಸಿದ್ದಾರೆ. “ಫೆಬ್ರವರಿ ಬಜೆಟ್‌ನಲ್ಲಿಯೇ ನಾವು ತಮಿಳುನಾಡು ಸರ್ಕಾರದ ಆರ್ಥಿಕ ಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸಿದ್ದೇವೆ. ಇದು ನಿಮಗೆ ಗೊತ್ತಿರಲಿಲ್ಲವೇ? ಅದಾದ ಮೇಲೆಯೇ ನೀವು ಜನರಿಗೆ ವಿವಿಧ ಭರವಸೆಗಳನ್ನು ನೀಡಿದ್ದು? ನಿಮಗೆ ಮತ ಹಾಕಿ ಗೆಲ್ಲಿಸಿದ ಜನರನ್ನು ಮತ್ತೆ ವಂಚಿಸಬೇಡಿ ಮತ್ತು ವಿಷಯವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಬೇಡಿ” ಎಂದು ಚಾಟಿ ಬೀಸಿದ್ದಾರೆ.
ಇದನ್ನು ಓದಿದ್ದೀರಾ? ಲಖೀಂಪುರ್ ಖೇರಿ ಪ್ರಕರಣ: ಪ್ರಭಾವಿಯ ಪುತ್ರನ ರಕ್ಷಣೆಗೆ ಸಾಕ್ಷ್ಯಗಳ ವಿಚಾರಣೆ ವಿಳಂಬವೇ?
ತಮ್ಮ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಸಮರ್ಥಿಸಿಕೊಂಡ ಸ್ಟಾಲಿನ್, ಕೋವಿಡ್-19 ಸಾಂಕ್ರಾಮಿಕ, ಪ್ರವಾಹ ಹಾಗೂ ‘ಕೇಂದ್ರ ಬಿಜೆಪಿ ಸರ್ಕಾರದ ನಿರ್ಲಕ್ಷ್ಯ’ದಂತಹ ಸವಾಲುಗಳ ನಡುವೆಯೂ ತಮ್ಮ ಸರ್ಕಾರವು ಜನ ಕಲ್ಯಾಣ ಯೋಜನೆಗಳನ್ನು ನಿರಂತರವಾಗಿ ಮುಂದುವರಿಸಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಆಡಳಿತಕ್ಕೆ ಹೊಸದಾಗಿ ಕಾಲಿಟ್ಟಿರುವ ವಿಜಯ್ ಅವರಿಗೆ ಸಲಹೆಯ ರೂಪದಲ್ಲಿ ಮಾತನಾಡಿದ ಸ್ಟಾಲಿನ್, “ಕೇವಲ ಕಾರ್ಯಗತಗೊಳಿಸಲು ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡುತ್ತೇನೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ನೀವು, ಈಗಷ್ಟೇ ಆಡಳಿತ ವ್ಯವಸ್ಥೆಗೆ ಹೆಜ್ಜೆ ಇಟ್ಟಿದ್ದೀರಿ. ನಮ್ಮಂತೆಯೇ ನೀವೂ ಸಹ ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬೇಕು ಎಂಬ ಸೂಕ್ಷ್ಮತೆಯನ್ನು ಶೀಘ್ರದಲ್ಲೇ ಕಲಿಯುತ್ತೀರಿ ಎಂದು ನಾನು ನಂಬಿದ್ದೇನೆ” ಎಂದು ಹೇಳಿದ್ದಾರೆ.




