ಪಿಯು ಕಾಲೇಜಿನ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಗುಣಮಟ್ಟ ಸಾಧಿಸಿದೆ. ಕಳೆದ ಸಭೆಯಲ್ಲಿ ಸೂಚಿಸಿದ್ದ ಯಾವುದೇ ಅಂಶಗಳನ್ನು ಪಾಲಿಸಿಲ್ಲ. ಕಳಪೆ ಗುಣಮಟ್ಟದ ಪಿಯು ಕಾಲೇಜುಗಳನ್ನು ಗುರುತಿಸಿ ಫಲಿತಾಂಶ ಉತ್ತಮಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಶಾಸಕ ಎಸ್.ವಿ. ಸಂಕನೂರು ಬೇಸರ ವ್ಯಕ್ತಪಡಿಸಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಯಲ್ಲಿ ಮಾತನಾಡಿದ ಅವರು, “ಫಲಿತಾಂಶ ಉತ್ತಮಗೊಳಿಸಲು 14 ಅಂಶಗಳ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ ವಿ ಸಂಕನೂರು ಅವರು ನಿಮ್ಮ ತರಬೇತಿ ಶಿಬಿರಗಳು ಪ್ರಯೋಜಕ್ಕೆ ಬಂದಿಲ್ಲ” ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಧಾನ ಸಭೆಯ ಸಭಾಧ್ಯಕ್ಷ ಜಿ.ಎಸ್. ಪಾಟೀಲ, ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಕಾಲೇಜುಗಳ ಪಟ್ಟಿ ಮಾಡಿ ಫಲಿತಾಂಶದಲ್ಲಿ ಅವುಗಳ ಸಾಧನೆಯ ವರದಿ ಸಲ್ಲಿಸುವಂತೆ ಸೂಚಿಸಿಸರು.
ಪಿಯು ಕಾಲೇಜಿನ ಫಲಿತಾಂಶ ಬಗ್ಗೆ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, “ಪಿಯು ಫಲಿತಾಂಶದಲ್ಲಿ ಸಾಧನೆ ಮಾಡಿದ ಕಾಲೇಜುಗಳಲ್ಲಿ ಎನೆಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ಪ್ರಯೋಗಾತ್ಮಕ ಅಂಶಗಳನ್ನು ಪರಿಶೀಲಿಸಿ, ಕಳಪೆ ಸಾಧನೆ ಮಾಡಿದ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಪಿಯು ಕಾಲೇಜಿನಲ್ಲಿ ಖಾಲಿ ಹುದ್ದೆಗಳನ್ನು ಅತಿಥಿ ಶಿಕ್ಷಕರನ್ನು ನೇಮಿಸಿ ಭರ್ತಿ ಮಾಡಿಕೊಳ್ಳಬೇಕು” ಎಂದು ಸೂಚಿಸಿದರು.
ಗಂಗಾ ಕಲ್ಯಾಣ ಯೋಜನೆ : ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಹಾಕಿಸಿಕೊಂಡ ಫಲಾನುಭವಿಗಳಿಗೆ ಟಿಸಿ ಹಾಕುವುದಿಲ್ಲ. ಆದರೆ, ಖಾಸಗಿ ವ್ಯಕ್ತಿಗಳು, ಯೋಜನೆಯೇತರರು ಕೊಳವೆ ಬಾವಿ ಹಾಕಿಸಿಕೊಳ್ಳುವರಿಗೆ ಟಿಸಿ ಅಳವಡಿಸಲು ತುರ್ತಾಗಿ ಅಂದಾಜು ಪಟ್ಟಿ ತಯಾರಿಸಿ ಟಿಸಿ ಹಾಕಿ ಕೊಡುತ್ತೀರಿ ಎಂದು ಶಾಸಕ ಚಂದ್ರು ಲಮಾಣಿ ಆರೋಪಿಸಿದರು. ಈ ವೇಳೆ ಶಾಸಕ ಎಚ್.ಕೆ. ಪಾಟೀಲ ಮಧ್ಯಪ್ರವೇಶಸಿ, ಗಂಗಾ ಕಲ್ಯಾಣ ಯೋಜನೆ ಯಶಸ್ವಿ ಯೋಜನೆ ಆಗಿದೆ. ಈ ಫಲಾನುಭವಿಗಳಿಗೆ ಅನ್ಯಾಯ ಆಗಬಾರದು. ಎರಡು ಮೂರು ದಿನಗಳ ಒಳಗಾಗಿ ಎಲ್ಲರಿಗೂ ಟಿಸಿ ಹಾಕಿಸಿಕೊಡಬೇಕು ಎಂದು ನಿರ್ದೇಶನ ನೀಡಿದರು.
ಗದಗ ನಗರದ ನೀರಿನ ಸಮಸ್ಯೆ ಬಗೆ ಹರಿಸಿ: ಗದಗ ನಗರಕ್ಕೆ ನೀರು ಪೂರೈಕೆ ಸಮಸ್ಯೆ ಕುರಿತು ಚರ್ಚೆ ಆಯಿತು. 8 ರಿಂದ 10 ದಿನಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತರು ಮಾಹಿತಿ ನೀಡಿದರು. ಪ್ರತಿ ವಾರ್ಡಗಳಿಗೆ 15 ದಿನಕ್ಕಿಂತಲೂ ಅಧಿಕ ದಿನಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದು ಎಸ್. ವಿ. ಸಂಕನೂರು ಪ್ರತಿಕ್ರಿಯಿಸಿದರು. ಸಿಂಗಟಾಲೂರು ಬ್ಯಾರೇಜ್ ನಲ್ಲಿ ಪ್ರಸ್ತುತ 1.98 ಟಿಎಂಸಿ ನೀರಿದೆ. ಭದ್ರ ಡ್ಯಾಂ ನಿಂದ ಸಿಂಗಟಾಲೂರು ಬ್ಯಾರೇಜ್ ಗೆ ನೀರು ಬಿಡುಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ನೀರಿನ ಟ್ಯಾಂಕ್ ಪೂರೈಕೆ ಮಾಡಬೇಕು” ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಸಭೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ, ಎಸ್ ವಿ ಸಂಕನೂರ, ಬಿಬಿ ಅಸೂಟಿ, ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಪಂ ಸಿಇಓ ಮುಕುಲ್ ಜೈನ್, ಎಸ್ಪಿ ಮಿಥುನ್ ಎಚ್ ಎನ್, ಡಿಸಿಎಪ್ ಸಂತೋಷ ಕುಮಾರ, ಎಡಿಸಿ ಡಾ. ದುರುಗೇಶ್ ಕೆ ಆರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.




