ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಹಾಗೂ ಕನಿಷ್ಠ ಮಾಸಿಕ ವೇತನ 15 ಸಾವಿರ ರೂ. ನಿಗದಿಪಡಿಸಬೇಕು ಎಂದು ಆಗ್ರಹಿಸಿ AIDSO ನೇತೃತ್ವದಲ್ಲಿ ಇಂದು ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ AIDSO ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ, ಕಳೆದ 12 ದಿನಗಳಿಂದ ಮಳೆ, ಚಳಿ, ಬಿಸಿಲನ್ನೂ ಲೆಕ್ಕಿಸದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದಾರೆ. ಮಕ್ಕಳೊಂದಿಗೆ ಹೋರಾಟದಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರ ಧೈರ್ಯ ಮತ್ತು ಹೋರಾಟದ ಮನೋಭಾವ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಮಹಿಳೆಯರು ಹಾಗೂ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಸ್ಮರಣೆಯ ಸಂದರ್ಭದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ AIDSO ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
4.5 ಲಕ್ಷ ಕೋಟಿ ರೂ. ಬಜೆಟ್ ಹೊಂದಿರುವ ಸರ್ಕಾರ ಆಶಾ ಕಾರ್ಯಕರ್ತೆಯರ ಕನಿಷ್ಠ 15 ಸಾವಿರ ರೂ. ವೇತನದ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಿಲ್ಲ. ಬದಲಾಗಿ ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಕೋಟಿ ರೂ. ತೆರಿಗೆ ವಿನಾಯಿತಿ ನೀಡುವ ಸರ್ಕಾರ, ಜನರ ಆರೋಗ್ಯ ಸೇವೆಯಲ್ಲಿ ಹಗಲಿರುಳು ಶ್ರಮಿಸುವ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡದಿರುವುದು ಕಾರ್ಮಿಕ ವಿರೋಧಿ ಧೋರಣೆಯಾಗಿದೆ. ಸಂವಿಧಾನದ ರಕ್ಷಣೆಯ ಮಾತನಾಡುವ ಸರ್ಕಾರವೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
ಸಾಹಿತಿ ನಾ. ದಿವಾಕರ್ ಮಾತನಾಡಿ, ದುಡಿಯುವ ವರ್ಗ ತಮ್ಮ ನ್ಯಾಯಯುತ ವೇತನಕ್ಕಾಗಿ ಹೋರಾಟ ನಡೆಸಿದಾಗ ಅದನ್ನು ಬ್ಲಾಕ್‌ಮೇಲ್ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯ ಹೇಳಿಕೆಯಾಗಿದೆ. ದಿನದ 8ರಿಂದ 10 ಗಂಟೆಗಳ ಕಾಲ ಮನೆಮನೆಗೆ ತೆರಳಿ ಮಾನವೀಯ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ಇಂತಹ ಹೇಳಿಕೆಗಳು ಮಾಡುವ ಅವಮಾನವಾಗಿದೆ. ಸರ್ಕಾರ ಕೂಡಲೇ ವೈಜ್ಞಾನಿಕ ಮಾಸಿಕ ವೇತನ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಂಶುಪಾಲ ಪ್ರೊ. ಕಾಳಚೆನ್ನೇಗೌಡ ಮಾತನಾಡಿ, ಆಶಾ ಕಾರ್ಯಕರ್ತೆಯರು ಏಕಾಏಕಿ ಮುಷ್ಕರ ಆರಂಭಿಸಿಲ್ಲ. ಹಲವು ಬಾರಿ ಶಾಂತಿಯುತವಾಗಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸಿಲ್ಲ. ಹಿಂದಿನ ಸಂದರ್ಭದಲ್ಲಿ ನೀಡಿದ ಭರವಸೆಯನ್ನೂ ಈಡೇರಿಸಿಲ್ಲ. ಆಶಾ ಕಾರ್ಯಕರ್ತೆಯರ ಸೇವೆಯಿಂದ ಸರ್ಕಾರ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರೂ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ತಾಯಿಹೃದಯವಿಲ್ಲದಂತಾಗಿದೆ. ಅವರ ಶ್ರಮಕ್ಕೆ ತಕ್ಕಂತೆ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಕಾಡಿನ ಮಕ್ಕಳೇ ವನ್ಯಜೀವಿಗಳ ನಿಜವಾದ ಬಂಧುಗಳು: ಆದಿವಾಸಿಗಳ ಜ್ಞಾನ, ಸಹಬಾಳ್ವೆ-ಅರಣ್ಯ ಸಂರಕ್ಷಣೆಯ ಭವಿಷ್ಯ
ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಡಾ. ಇ. ರತಿ ರಾವ್ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಬೀದಿಬೀದಿಗೆ ತೆರಳಿ ಜನರ ಪ್ರಾಣ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಸೇವೆ ಮತ್ತು ತ್ಯಾಗವನ್ನು ಸರ್ಕಾರ ಮರೆಯಬಾರದು. ಅವರು ಕೇಳುತ್ತಿರುವ 15 ಸಾವಿರ ರೂ. ವೇತನವೂ ಕಡಿಮೆಯಾಗಿದ್ದು, ಅವರ ಶ್ರಮಕ್ಕೆ ತಕ್ಕಂತೆ ಕನಿಷ್ಠ 40 ಸಾವಿರ ರೂ. ಮಾಸಿಕ ವೇತನ ನಿಗದಿಪಡಿಸಬೇಕು. ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಈ ವಿಶೇಷ ವರದಿ ಓದಿದ್ದೀರಾ? ವನ್ಯಜೀವಿ ಸಂಘರ್ಷದ ಸುಳಿಯಲ್ಲಿ ಅರಣ್ಯದ ಭವಿಷ್ಯ: ಸಂರಕ್ಷಣೆಯ ಹೆಸರಿನಲ್ಲಿ ಹೊಸ ಹಿತಾಸಕ್ತಿಗಳಿಗೆ ಅವಕಾಶವೇ?
ಮಹಿಳಾ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಹೇಮಲತಾ ಎಚ್.ಎಂ. ಮಾತನಾಡಿ, ದುಡಿಮೆಗೆ ತಕ್ಕ ವೇತನ ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಆಶಾ ಕಾರ್ಯಕರ್ತೆಯರ ಕನಿಷ್ಠ ಬೇಡಿಕೆಯನ್ನೂ ಈಡೇರಿಸದೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಅವರ ಹಕ್ಕುಗಳನ್ನು ಗೌರವಿಸಿ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ಲೇಖನ ಓದಿದ್ದೀರಾ? ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ ಐಕ್ಯತೆ ಬಲವಾಗಲಿ
ಪ್ರತಿಭಟನೆಯಲ್ಲಿ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಲತಾ ಬಿದ್ದಪ್ಪ, ಶ್ರೀದೇವಿ, ಶಾರದಾ ವಿಲಾಸ್ ಬಿ.ಎಡ್. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ರೂಪಾ ರಾವ್, ರಂಗನಿರ್ದೇಶಕಿ ಸುಮತಿ ಕೆ.ಆರ್., ಸಾಮಾಜಿಕ ಹೋರಾಟಗಾರ ನಂದ ಹಳೆಮನೆ, AIDSO ವಿದ್ಯಾರ್ಥಿ ಸಂಘಟನೆಯ ನಿತಿನ್, ತುಳಜಾ ರಾಮ್, ಪ್ರೀತಿ, ಪದಾಧಿಕಾರಿಗಳಾದ ಸ್ವಾತಿ, ಹೇಮಲತಾ, ಚಂದ್ರಿಕಾ, ಅಂಜಲಿ, ನಂದೀಶ್, ದೀಕ್ಷಾ, ಜ್ಞಾನೇಶ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.



