ನಿಟ್ಟೆ ಸಂತೋಷ್ ಹೆಗ್ಡೆಯವರ ಅಣ್ಣ ನಿಟ್ಟೆ ವಿನಯ ಹೆಗ್ಡೆಯವರು ಕರಾವಳಿಯ ದೊಡ್ಡ ಶಿಕ್ಷಣೋದ್ಯಮಿ. ಇವರ ಶಿಕ್ಷಣ ಸಂಸ್ಥೆಗಳೆಲ್ಲವೂ ಲಾಭ ಪಡೆದಿದ್ದು ‘ಭಾಷಾ ಅಲ್ಪಸಂಖ್ಯಾತ ಮೀಸಲಾತಿ’ ಕೋಟದಲ್ಲಿ! ತುಳು ಭಾಷಾ ಅಲ್ಪಸಂಖ್ಯಾತ ಮೀಸಲಾತಿ ಕೋಟದಲ್ಲಿ ಸಂತೋಷ್ ಹೆಗ್ಡೆಯವರ ಕುಟುಂಬ ಕರಾವಳಿಯಲ್ಲಿ ಶಿಕ್ಷಣ ಸಾಮ್ರಾಜ್ಯವನ್ನೇ ಸ್ಥಾಪಿಸಿದೆ. ಮೀಸಲಾತಿಯ ಲಾಭ ಪಡೆದು ಸಾವಿರಾರು ಕೋಟಿಯ ಉದ್ಯಮ ನಡೆಸಬೇಡಿ ಎಂದು ಜಸ್ಟಿಸ್ ಸಂತೋಷ್ ಹೆಗ್ಡೆಯವರು ತನ್ನ ಒಡಹುಟ್ಟಿದ ಸಹೋದರರಿಗೆ ಹೇಳಿದ್ದಾರೆಯೇ?
“ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾದದ್ದು. ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾಗಿರುವ ಮೀಸಲಾತಿ ವ್ಯವಸ್ಥೆ ಮುಂದುವರಿಯಬಾರದು” ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯೂ ಆದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಇನ್ನೂ ಮುಂದುವರೆದು, “ಒಳಮೀಸಲಾತಿ ಸಮಾಜವನ್ನು ತುಂಡರಿಸುತ್ತದೆ, ಚುನಾವಣೆಯಲ್ಲಿ ಮಹಿಳಾ ಮೀಸಲಾತಿಯೂ ಅಗತ್ಯವಿಲ್ಲ” ಎಂದು ಅಮಾನವೀಯವಾಗಿ ಪ್ರತಿಪಾದಿಸಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ಮೀಸಲಾತಿ ವಿರೋಧಿ ನಿಲುವು ದಲಿತರನ್ನು ಗುರಿಯಾಗಿಸಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದಕ್ಕವರು ನೀಡಿದ ಉದಾಹರಣೆಯೂ ದಲಿತ ನ್ಯಾಯಾಧೀಶ/ನ್ಯಾಯಮೂರ್ತಿಗಳ ಉದಾಹರಣೆಯೇ ಆಗಿತ್ತು. “ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಾಧೀಶರ ಮಕ್ಕಳಿಗೆ ಮೀಸಲಾತಿ ಅಗತ್ಯವಿದೆಯೆ?” ಎಂದು ಅವರು ಪ್ರಶ್ನಿಸುತ್ತಾರೆ. ಸುಪ್ರಿಂ ಕೋರ್ಟ್ ಅಥವಾ ಹೈಕೋರ್ಟ್‌ನ ಎಷ್ಟು ದಲಿತ ಜಡ್ಜ್ ಗಳ ಮಕ್ಕಳು ಅಡ್ವಕೇಟ್ ಜನರಲ್ ಆಗಿಯೋ, ಸಾಲಿಸಿಟರ್ ಜನರಲ್ ಆಗಿಯೋ ನೇಮಕಗೊಂಡು ಆ ಬಳಿಕ ಹೈಕೋರ್ಟ್/ ಸುಪ್ರಿಂ ಕೋರ್ಟ್ ಜಡ್ಜ್ ಗಳಾದರು ಎಂಬ ಲೆಕ್ಕವನ್ನು ಸಂತೋಷ್ ಹೆಗ್ಡೆಯವರು ನೀಡಬೇಕು. ಸಂತೋಷ್ ಹೆಗ್ಡೆಯವರ ತಂದೆ ಸುಪ್ರಿಂ ಕೋರ್ಟ್ ಜಡ್ಜ್ ಆಗಿದ್ದರು. ಆಗ ಸುಪ್ರಿಂ ಕೋರ್ಟ್ ಜಡ್ಜ್ ಮಗ ಸಂತೋಷ್ ಹೆಗ್ಡೆಯವರು ಕರ್ನಾಟಕದ ಅಡ್ವಕೇಟ್ ಜನರಲ್ ಆಗಿ, ಭಾರತದ ಸಾಲಿಸಿಟರ್ ಜನರಲ್ ಆಗಿ ನೇಮಕಗೊಳ್ಳುತ್ತಾರೆ. ಆ ಬಳಿಕ ಸುಪ್ರಿಂ ಕೋರ್ಟ್ ಜಡ್ಜ್ ಮಗ ಸಂತೋಷ್ ಹೆಗ್ಡೆ ಸುಪ್ರಿಂ ಕೋರ್ಟ್ ಜಡ್ಜ್ ಆಗಿ ನೇಮಕಗೊಳ್ಳುತ್ತಾರೆ. ಈ ಅವಕಾಶ ಪಡೆದಿರುವ ದಲಿತ ಜಡ್ಜ್ ಗಳ ಮಕ್ಕಳೆಷ್ಟು? ಈ ಅವಕಾಶ ದಲಿತ ಜಡ್ಜ್ ಗಳ ಮಕ್ಕಳಿಗೆ ಯಾಕೆ ಸಿಗಲ್ಲ ಎನ್ನುವುದಕ್ಕೆ ಸಂತೋಷ್ ಹೆಗ್ಡೆಯವರು ಭಾರತದ ಸಮಾಜೋ ರಾಜಕೀಯ ಸ್ಥಿತಿಗತಿ ಅಧ್ಯಯನ ಮಾಡಬೇಕು.
ನಿಟ್ಟೆ ಸಂತೋಷ್ ಹೆಗ್ಡೆಯವರ ಅಣ್ಣ ನಿಟ್ಟೆ ವಿನಯ ಹೆಗ್ಡೆಯವರು ಕರಾವಳಿಯ ದೊಡ್ಡ ಶಿಕ್ಷಣೋದ್ಯಮಿ. ಇವರ ಶಿಕ್ಷಣ ಸಂಸ್ಥೆಗಳೆಲ್ಲವೂ ಲಾಭ ಪಡೆದಿದ್ದು ‘ಭಾಷಾ ಅಲ್ಪಸಂಖ್ಯಾತ ಮೀಸಲಾತಿ’ ಕೋಟದಲ್ಲಿ! ತುಳು ಭಾಷಾ ಅಲ್ಪಸಂಖ್ಯಾತ ಮೀಸಲಾತಿ ಕೋಟದಲ್ಲಿ ಸಂತೋಷ್ ಹೆಗ್ಡೆಯವರ ಕುಟುಂಬ ಕರಾವಳಿಯಲ್ಲಿ ಶಿಕ್ಷಣ ಸಾಮ್ರಾಜ್ಯವನ್ನೇ ಸ್ಥಾಪಿಸಿದೆ. ಮೀಸಲಾತಿಯ ಲಾಭ ಪಡೆದು ಸಾವಿರಾರು ಕೋಟಿಯ ಉದ್ಯಮ ನಡೆಸಬೇಡಿ ಎಂದು ಜಸ್ಟಿಸ್ ಸಂತೋಷ್ ಹೆಗ್ಡೆಯವರು ತನ್ನ ಒಡಹುಟ್ಟಿದ ಸಹೋದರರಿಗೆ ಹೇಳಿದ್ದಾರೆಯೇ ?

ಸಂತೋಷ್ ಹೆಗ್ಡೆಯ ಮೀಸಲಾತಿ ವಿರೋಧಿ ಹೇಳಿಕೆಗೆ ರಾಜ್ಯದಲ್ಲಿ ದೊಡ್ಡ ಪ್ರತಿರೋಧ ಎದುರಾಗಬೇಕಿತ್ತು. ಅದು ನ್ಯಾಯಾಂಗದೊಳಗೆ ಚರ್ಚೆಗೆ, ಅವಲೋಕನಕ್ಕೆ ದಾರಿಯಾಗಬೇಕಿತ್ತು. ಸಂತೋಷ್ ಹೆಗ್ಡೆ ನಿವೃತ್ತರಾಗಿದ್ದರೂ ಅವರ ಮಾತುಗಳು ನ್ಯಾಯಾಂಗ ಇಲಾಖೆಯೊಳಗೆ ಅದೃಶ್ಯ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿರೋಧದ ಮೂಲಕ ಆ ಪರಿಣಾಮಕ್ಕೊಂದು ತಡೆ ನೀಡಬೇಕಿತ್ತು. ಆದರೆ, ಕೆಲವೇ ಕೆಲವು ಯುವ ದಲಿತ ಚಿಂತಕರು, ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು ಬಿಟ್ಟರೆ, ಬೌದ್ಧಿಕ ವಲಯವು ಚಳವಳಿಯಾಗಿ ಎದುರೇಟು ನೀಡಲಿಲ್ಲ.
ಇಷ್ಟಕ್ಕೂ ಜಸ್ಟಿಸ್ ಸಂತೋಷ್ ಹೆಗ್ಡೆಯವರ ಮೀಸಲಾತಿ ವಿರೋಧಿ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯೆ ನೀಡುವ ಜವಾಬ್ದಾರಿ ‘ಬಂಟ’ ಸಮುದಾಯದ್ದು ಕೂಡಾ ಆಗಿತ್ತು. ಸಂತೋಷ್ ಹೆಗ್ಡೆಯವರ ಸ್ವಜಾತಿ ‘ಬಂಟ’ರು ಮೀಸಲಾತಿಯ ಫಲಾನುಭವಿಗಳಲ್ಲವೇ ? ನ್ಯಾಯವಾದಿಯಾಗಿ, ಅಡ್ವಕೇಟ್ ಜನರಲ್ ಆಗಿ, ಸಾಲಿಸಿಟರ್ ಜನರಲ್ ಆಗಿ, ನ್ಯಾಯಮೂರ್ತಿಯಾಗಿ ಸಂತೋಷ್ ಹೆಗ್ಡೆಯವರು ‘ಬಂಟ ಮೀಸಲಾತಿ’ ಬಗ್ಗೆ ಪ್ರಕರಣವನ್ನೇ ನಿಭಾಯಿಸಿಲ್ಲವೇ ?
ಪ್ರವರ್ಗ 3B ಅಡಿಯಲ್ಲಿ ಸಂತೋಷ್ ಹೆಗ್ಡೆಯ ಜಾತಿಯ ಬಂಟರಿಗೆ 5% ಮೀಸಲಾತಿ ಸೌಲಭ್ಯ ಇದೆ. ಕರಾವಳಿಯ ಬಡ ಬಂಟರು ಈ ಮೀಸಲಾತಿಯ ಲಾಭವನ್ನು ಪಡೆದುಕೊಳ್ಳುತ್ತಾರೆ. ಬಂಟರು ಎಂದರೆ ಎಲ್ಲರೂ ಐಶ್ವರ್ಯ ರೈ, ಶಿಲ್ಪಾ ಶೆಟ್ಟಿಯೂ ಅಲ್ಲ, ಮುತ್ತಪ್ಪ ರೈಯೂ ಅಲ್ಲ, ಸಂತೋಷ್ ಹೆಗ್ಡೆಯೂ ಅಲ್ಲ. ಅಲ್ಲೂ ಬಡವರಿದ್ದಾರೆ, ಸಣ್ಣ ಕೃಷಿಕರಿದ್ದಾರೆ. ಅವರಿಗೆ ಮೀಸಲಾತಿ ಅಗತ್ಯವಿದೆ.
ಈ 5% ಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರದ ಸರ್ಕಾರಿ ಉದ್ಯೋಗಗಳಲ್ಲಿ ಹುದ್ದೆ ಪಡೆದ ಬಂಟರು ಇದ್ದಾರೆ. ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ರಾಜ್ಯದ ಮೀಸಲಾತಿ ನಿಯಮ ಅನ್ವಯಿಸುವ ಶಿಕ್ಷಣ ಪ್ರವೇಶಗಳಲ್ಲಿ 3B ಕೋಟಾದ ಪ್ರಯೋಜನ ಪಡೆದ ಬಂಟರಿದ್ದಾರೆ. ರಾಜ್ಯ ಕೋಟಾದಡಿ 3B ಮೀಸಲಾತಿ ಅನ್ವಯಿಸುವ ಕೋರ್ಸ್‌ಗಳಲ್ಲಿ ಬಂಟ ಅಭ್ಯರ್ಥಿಗಳು KCET/ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ 3B ವರ್ಗದ ಅಡಿಯಲ್ಲಿ ಪರಿಗಣಿಸಲ್ಪಡಬಹುದು.
KPSC ಮುಂತಾದ ರಾಜ್ಯ ನೇಮಕಾತಿಗಳಲ್ಲಿ 3B ವರ್ಗಕ್ಕೆ ಮೀಸಲಾಗಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಬಂಟರು ಪಡೆದಿದ್ದಾರೆ. ಮೀಸಲಾತಿ ಇರುವುದರಿಂದಲೇ ಬಂಟ 3B ಅಭ್ಯರ್ಥಿಗಳಿಗೆ General Merit ಗಿಂತ ಪ್ರತ್ಯೇಕ ವರ್ಗದ ಮೆರಿಟ್/ಕಟ್‌ಆಫ್ ಅನ್ವಯಿಸಬಹುದು. ಈಗ ಬಂಟರು 3b ಯಿಂದ ಪ್ರವರ್ಗ 2a ಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಬೇಕು ಎಂದು ಚಳವಳಿ ನಡೆಸುತ್ತಿದ್ದಾರೆ. ಮೀಸಲಾತಿಗಾಗಿ ಹೋರಾಟ ಮಾಡಬೇಡಿ ಎಂದು ಸಂತೋಷ್ ಹೆಗ್ಡೆಯವರು ತನ್ನ ಸ್ವಜಾತಿ ಸಮುದಾಯಕ್ಕೆ ಹೇಳುತ್ತಾರೆಯೇ ?
ಸಂತೋಷ್ ಹೆಗ್ಡೆಯವರು ಕರಾವಳಿ, ಮುಂಬೈ ಹಾಗೂ ವಿದೇಶಗಳಲ್ಲಿರುವ ವಿವಿಧ ‘ಬಂಟರ ಸಂಘ’ಗಳ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ ದೇಶದ ಅತ್ಯುನ್ನತ ಸರ್ಕಾರಿ ಹುದ್ದೆಗಳಿಗೆ ಏರಿದ ಬಂಟರನ್ನು ಅವರು ಹೆಮ್ಮೆಯಿಂದ ನೆನಪಿಸಿಕೊಂಡಿದ್ದಾರೆ. ಆದರೆ ಇಲ್ಲೊಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ. ಆ ಸಾಧನೆಗಳೆಲ್ಲವೂ ಕೇವಲ ವೈಯಕ್ತಿಕ ‘ಪ್ರತಿಭೆ’ ಮತ್ತು ಪರಿಶ್ರಮದ ಫಲವೇ? ವ್ಯಕ್ತಿಯ ಸಾಮಾಜಿಕ ಹಿನ್ನೆಲೆ, ಜಾತಿ, ಕುಟುಂಬದ ಆರ್ಥಿಕ-ಸಾಮಾಜಿಕ ಬಂಡವಾಳ, ದೊರೆತ ಅವಕಾಶಗಳು ಇವುಗಳ ಪಾತ್ರವೇನೂ ಇರಲಿಲ್ಲವೇ? ಅದೇ ಸಂದರ್ಭದಲ್ಲಿ, ಮೀಸಲಾತಿಯ ಮೂಲಕ ಹಿಂದುಳಿದ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಅಗತ್ಯವನ್ನು ಪ್ರಶ್ನಿಸುವುದು ಎಷ್ಟು ಸರಿ?
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಂತರವೂ ಸಂತೋಷ್ ಹೆಗ್ಡೆಯವರು ತಮ್ಮ ಜಾತಿಯ ಸಂಘಟನೆಗಳ ವೇದಿಕೆಗಳಲ್ಲಿ ಭಾಗವಹಿಸಿ, ಆ ಸಮುದಾಯದ ಸಾಧಕರನ್ನು ಜಾತಿಯ ಹೆಮ್ಮೆಯ ಸಂಕೇತಗಳಾಗಿ ಮುಂದಿಡುವುದು ಒಂದು ಮಹತ್ವದ ಸಾಮಾಜಿಕ ಸತ್ಯವನ್ನು ತೋರಿಸುತ್ತದೆ. ತಮ್ಮ ಸಮುದಾಯದ ಸಾಮಾಜಿಕ ಬಂಡವಾಳ ಮತ್ತು ಸಾಮೂಹಿಕ ಗುರುತನ್ನು ಹೆಮ್ಮೆಯಿಂದ ಪ್ರದರ್ಶಿಸುವುದರಲ್ಲಿ ತಪ್ಪಿಲ್ಲವೆಂದಾದರೆ, ಇತಿಹಾಸದಲ್ಲಿ ಅವಕಾಶಗಳಿಂದ ವಂಚಿತವಾಗಿರುವ ಸಮುದಾಯಗಳು ಶಿಕ್ಷಣ, ಉದ್ಯೋಗ ಮತ್ತು ಅಧಿಕಾರದಲ್ಲಿ ತಮ್ಮ ಪಾಲನ್ನು ಕೇಳುವುದನ್ನು ಮಾತ್ರ ‘ಜಾತಿವಾದ’ ಅಥವಾ ‘ಮೀಸಲಾತಿಯ ಅವಲಂಬನೆ’ ಎಂದು ನೋಡುವುದು ಹೇಗೆ ನ್ಯಾಯಸಮ್ಮತ?
ವಾಸ್ತವವಾಗಿ, ಜಾತಿಯ ಸಾಮಾಜಿಕ ಬಂಡವಾಳವು ಒಂದು ಸಮುದಾಯದ ಸಾಧನೆಗಳಿಗೆ ಬೆಂಬಲವಾಗಿ ಕೆಲಸ ಮಾಡುತ್ತದೆ ಎಂಬುದನ್ನು ಒಪ್ಪಿಕೊಂಡಾಗಲೇ ಮೀಸಲಾತಿಯ ಅಗತ್ಯವೂ ಹೆಚ್ಚು ಸ್ಪಷ್ಟವಾಗುತ್ತದೆ. ಹೀಗಾಗಿ, ‘ಮೀಸಲಾತಿ ಬೇಡ, ಪ್ರತಿಭೆಯೇ ಸಾಕು’ ಎಂಬ ವಾದಕ್ಕೆ ಸಂತೋಷ್ ಹೆಗ್ಡೆಯವರಂತಹ ಮಾಜಿ ನ್ಯಾಯಮೂರ್ತಿಗಳು ಜಾತಿ ಸಂಘಟನೆಗಳ ವೇದಿಕೆಗಳಲ್ಲಿ ತಮ್ಮ ಸಮುದಾಯದ ಸಾಧನೆಗಳನ್ನು ಹೆಮ್ಮೆಯಿಂದ ಹೇಳುವ ದೃಶ್ಯವೇ ಒಂದು ಮೂಲಭೂತ ಪ್ರತಿಪ್ರಶ್ನೆಯಾಗಿದೆ.
ಡಾ ಬಿ ಆರ್ ಅಂಬೇಡ್ಕರ್ ಚಿಂತನೆಗಳು, ಸಂವಿಧಾನ, ಮೀಸಲಾತಿ ಎಂದ ತಕ್ಷಣ “ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ” ಎಂಬುದು ಎಲ್ಲರ ಮನಸ್ಸಿನಲ್ಲಿ ಸುಳಿದಾಡುತ್ತದೆ. ಅಂಬೇಡ್ಕರ್ ಚಿಂತನೆಗಳು, ಮೀಸಲಾತಿಯ ಲಾಭವನ್ನು ದಲಿತರಿಗಿಂತ ಹೆಚ್ಚು ಪಡೆದವರು ಇನ್ನಿತರ ಸಮುದಾಯಗಳು.
ಕರ್ನಾಟಕದಲ್ಲೇ ಸಂವಿಧಾನದ ಆರ್ಟಿಕಲ್ ಆರ್ಟಿಕಲ್ 30, 30(1), 30(1A), 30(2) ಪ್ರಕಾರ ಧರ್ಮಸ್ಥಳದ ಎಸ್ ಡಿಎಂ, ಬಾಹುಬಲಿ ಎಜುಕೇಶನ್ ಟ್ರಸ್ಟ್ ಸೇರಿದಂತೆ ಜೈನರ ಎಷ್ಟು ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಕೋಟಾದಲ್ಲಿ ಮೀಸಲಾತಿ ಪ್ರಯೋಜನ ಪಡೆಯುತ್ತಿದೆ ಗೊತ್ತಾ ? ಟಿಎಂಎ ಪೈ ಪಾಲಿಟೆಕ್ನಿಕ್ ಎಂಬ ಜಿಎಸ್ ಬಿ ಬ್ರಾಹ್ಮಣರ ಆಡಳಿತದ ಕಾಲೇಜು ಕೂಡಾ ಭಾಷಾ ಅಲ್ಪಸಂಖ್ಯಾತ ಕೋಟದ ಮೀಸಲಾತಿಗಾಗಿ ಹಲವು ಕಾಲೇಜುಗಳನ್ನು ರಿಜಿಸ್ಟರ್ ಮಾಡಿಕೊಂಡಿದೆ. ಹಲವು ಹಿಂದೂ ಸಮಾಜೋತ್ಸವಗಳ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿನಯ್ ಹೆಗ್ಡೆಯ (ಸಂತೋಷ್ ಹೆಗ್ಡೆಯ ಅಣ್ಣ) ನಿಟ್ಟೆ ಸೇರಿದಂತೆ ಹತ್ತಾರು ಕಾಲೇಜುಗಳು ತುಳು ಭಾಷಾ ಅಲ್ಪಸಂಖ್ಯಾತ ಕೋಟಾದಲ್ಲಿ ಮೀಸಲಾತಿ ಲಾಭ ಪಡೆಯಲು ರಿಜಿಸ್ಟರ್ ಆಗಿ ಭರಪೂರ ಲಾಭ ಪಡೆಯುತ್ತಿದೆ.
ಬ್ರಾಹ್ಮಣರೂ ಕೂಡಾ ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರಿ ಸೌಲಭ್ಯಗಳ ಫಲಾನುಭವಿಗಳೇ. ಕರ್ನಾಟಕದಲ್ಲಿ ಬ್ರಾಹ್ಮಣ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ಹಲವು ಯೋಜನೆಗಳು ಜಾರಿಯಲ್ಲಿವೆ.
‘ಸುಭದ್ರ’ ಯೋಜನೆಯಡಿ ನಿರಾಶ್ರಿತ, ವಿಧವೆ, ಅಂಗವಿಕಲ ಹಾಗೂ ಹಿರಿಯ ಬ್ರಾಹ್ಮಣರಿಗೆ ಪಿಂಚಣಿ; ‘ಸೌಖ್ಯ’ ಯೋಜನೆಯಡಿ ವೃದ್ಧಾಶ್ರಮ, ವೈದ್ಯಕೀಯ ನೆರವು ಮತ್ತು ವೆಚ್ಚ ಮರುಪಾವತಿ; ‘ಕಲ್ಯಾಣ’ ಯೋಜನೆಯಡಿ ಅರ್ಹ ಬಿಪಿಎಲ್ ಬ್ರಾಹ್ಮಣ ಕುಟುಂಬಗಳ ಕೃಷಿಕರು, ಅಡುಗೆಯವರು ಹಾಗೂ ಪುರೋಹಿತರನ್ನು ಮದುವೆಯಾಗುವ ವಧುವಿನ ಹೆಸರಲ್ಲಿ 3 ಲಕ್ಷದ ವಿತ್ತಬಾಂಡ್ ನೀಡಲಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ‘ಸಾಂದೀಪನಿ ಶಿಷ್ಯವೇತನ’, ‘ಆಚಾರ್ಯತ್ರಯ ವೇದ ಶಿಷ್ಯವೇತನ’, ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ’, ‘ಸನ್ನಿಧಿ’ ಹಾಗೂ ‘ಚಾಣಕ್ಯ ಆಡಳಿತ ತರಬೇತಿ’ ಯೋಜನೆಗಳ ಮೂಲಕ ವಿದ್ಯಾರ್ಥಿವೇತನ, ಹಾಸ್ಟೆಲ್, ಪ್ರತಿಭಾ ಪುರಸ್ಕಾರ ಮತ್ತು IAS/IPS/KAS ಸೇರಿದಂತೆ ಬ್ರಾಹ್ಮಣರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲಾಗುತ್ತದೆ.
ಉದ್ಯೋಗ, ಕೌಶಲ್ಯ ಮತ್ತು ಉದ್ಯಮಕ್ಕೆ ‘ಸರ್ ಎಂ. ವಿಶ್ವೇಶ್ವರಯ್ಯ ಕೌಶಲ್ಯಾಭಿವೃದ್ಧಿ’ ಹಾಗೂ ‘ಪುರುಷೋತ್ತಮ’ ಯೋಜನೆಗಳಡಿ ತರಬೇತಿ, ಸ್ವಯಂ ಉದ್ಯೋಗ, ಸ್ಟಾರ್ಟ್‌ಅಪ್‌ಗಳಿಗೆ ನೆರವು ಮತ್ತು ಉದ್ಯಮಶೀಲತಾ ಸೌಲಭ್ಯಗಳಿವೆ. ‘ಕಿರುಸಾಲ’ ಯೋಜನೆಯಡಿ ರೂ 50,000 ಸಾಲದೊಂದಿಗೆ ರೂ10,000 ಸಹಾಯಧನವೂ ಇದೆ. ಕೃಷಿ ಕ್ಷೇತ್ರದಲ್ಲಿ ‘ಅನ್ನದಾತ’ ಯೋಜನೆಯಡಿ ಕಡಿಮೆ ಬಡ್ಡಿ ಸಾಲ, ಬಾವಿ/ಬೋರ್‌ವೆಲ್ ಹಾಗೂ ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುತ್ತದೆ. ‘ಚೈತನ್ಯ ಉತ್ಸವ’ ದಡಿ ಕ್ರೀಡಾ ಸಾಧಕರಿಗೂ ನೆರವು ನೀಡಲಾಗುತ್ತದೆ.
ಅಂದರೆ, ಇವು ಸಾಮಾನ್ಯವಾಗಿ ಎಲ್ಲ ಹಿಂದೂಗಳಿಗೂ ಇರುವ ಯೋಜನೆಗಳಲ್ಲ. ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡಿರುವ ಪ್ರತ್ಯೇಕ ಸರ್ಕಾರಿ ಸೌಲಭ್ಯಗಳು. ಇಂತಹ ಹಲವು ಸೌಲಭ್ಯಗಳ ಫಲಾನುಭವಿಗಳಾಗಿಯೂ ‘ಮೀಸಲಾತಿಯಿಂದ ಪ್ರತಿಭೆ ನಷ್ಟವಾಗುತ್ತಿದೆ’ ಎಂದು ಹೇಳುವುದು ಆತ್ಮವಂಚನೆಯಲ್ಲವೇ?
‘ಒಳಮೀಸಲಾತಿ ಸಮಾಜ ಒಡೆಯುತ್ತದೆ’ ಎನ್ನುವುದು ಸಂತೋಷ್ ಹೆಗ್ಡೆಯವರ ಕ್ರೂರತನದ ಮಾತುಗಳು. ಮೀಸಲಾತಿಯ ಲಾಭ ಸಮಾನವಾಗಿ ಹಂಚಿಕೆಯಾಗಬೇಕಾದರೆ ಒಳಮೀಸಲಾತಿ ಅನಿವಾರ್ಯ. ಈ ಮೀಸಲಾತಿಯು ಸಮಾಜನ್ನು ಒಡೆಯುವುದಲ್ಲ, ಮೀಸಲಾತಿಯೊಳಗಿನ ಅನ್ಯಾಯವನ್ನು ಒಡೆಯುವುದು ಎಂಬ ಕನಿಷ್ಠ ಜ್ಞಾನವಿಲ್ಲದವರು ಹೇಗೆ ಇಷ್ಟು ವರ್ಷಗಳ ಕಾಲ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದರು ?
ಜಸ್ಟಿಸ್(ನಿ) ಸಂತೋಷ್ ಹೆಗ್ಡೆಯವರು ಈ ಹಿಂದೆ ಭೂಸುಧಾರಣಾ ಕಾಯ್ದೆಯನ್ನೂ ವಿರೋಧಿಸಿದ್ದರು. ಹಿಂದುಳಿದ ವರ್ಗಗಳು ಬಂಟರ ಭೂಮಿಯನ್ನು ಪಡೆದುಕೊಂಡರು ಎಂಬುದು ಸಂತೋಷ್ ಹೆಗ್ಡೆಯ ಅಳಲು. ಇದೊಂದು ಅತ್ಯಂತ ದೊಡ್ಡ ಸುಳ್ಳು. ಹಿಂದುಳಿದ ವರ್ಗದ ಚಿಂತಕರೂ ಕೂಡಾ ಈ ಸುಳ್ಳನ್ನು ನಂಬಿದ್ದಾರೆ. “ಭೂಮಿ ಕಳೆದುಕೊಂಡ ಬಂಟರು ಮುಂಬೈಗೆ ಹೋಗಿ ಹೊಟೇಲ್ ನಲ್ಲಿ ಕೆಲಸ ಮಾಡಿ ಮತ್ತೆ ಜಮೀನ್ದಾರರಾದರೆ, ಭೂಮಿ ಪಡೆದುಕೊಂಡ ಬಿಲ್ಲವ ಮತ್ತಿತರ ಸಮುದಾಯಗಳು ಎಲ್ಲಿದ್ದಾವೆ ?” ಎಂದು ಭಾವನಾತ್ಮಕವಾಗಿ ಬಿಲ್ಲವ ಚಿಂತಕರೇ ಪ್ರಶ್ನಿಸುತ್ತಾರೆ. ಇದೊಂದು ಸುಳ್ಳು ನರೇಟಿವ್. ಹತ್ತು ಪರ್ಸಂಟ್ ಬಂಟರು ಮಾತ್ರ ದೊಡ್ಡ ಜಮೀನುದಾರರಾಗಿದ್ದರು. ಉಳಿದ 90 ಶೇಕಡಾ ಬಂಟರು ಒಂದು ಸಣ್ಣ ಕೃಷಿಕರು, ಗೇಣಿದಾರರು ಅಥವಾ ಭೂ ರಹಿತರೇ ಆಗಿದ್ದರು. ಅಂತಹ 90 ಶೇಕಡಾ ಕರಾವಳಿಯ ಬಂಟರು ಭೂಸುಧಾರಣಾ ಕಾಯ್ದೆಯ ಫಲಾನುಭವಿಗಳು. ಇದನ್ನು ದಾಖಲೆ ಸಮೇತ ಸಾಬೀತುಪಡಿಸಬಹುದು.
ಹಾಗಾಗಿ, ಸಂತೋಷ್ ಹೆಗ್ಡೆ ‘ತಾನು ಬಂಟ’ ಎಂದು ಹೆಮ್ಮೆಯಿಂದ ಹೇಳುವ ಬಂಟ ಸಮುದಾಯವು ಮೀಸಲಾತಿ ಮತ್ತು ಭೂಸುಧಾರಣಾ ಕಾಯ್ದೆಯ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಂಡಿದೆ. ಸಂತೋಷ್ ಹೆಗ್ಡೆಯವರಿಗೆ ಅರ್ಥವಾಗುವ ಕ್ಷೇತ್ರದ ಮೂಲಕವೇ ಉದಾಹರಣೆ ಕೊಡುವುದಾದರೆ ‘ಪ್ರವರ್ಗ 3ಬಿ ಮೀಸಲಾತಿಯ ಲಾಭಕ್ಕಾಗಿ ಹಲವು ಬಂಟರು ಕೋರ್ಟ್ ಮೆಟ್ಟಿಲೇರಿದ್ದಾರೆ. ಅದರ ಅರ್ಜಿಗಳು, ಆದೇಶಗಳು, ಕೋರ್ಟ್ ಪ್ರೊಸಿಂಡಿಂಗ್ಸ್ ಗಳನ್ನು ಓದಿಕೊಂಡರೆ ಬಂಟರು ಪಡೆದ ಮೀಸಲಾತಿ ಲಾಭ’ ಅರ್ಥವಾಗುತ್ತದೆ.
ಇದನ್ನೂ ಓದಿ ನನ್ನ ವೋಟರ್ ಐಡಿ ಡಿಲೀಟ್ ಮಾಡಲು ನಾಟಕ: ಚುನಾವಣಾ ಆಯೋಗ, ಮಾಧ್ಯಮಗಳ ವಿರುದ್ಧ ಪ್ರಕಾಶ್ ರಾಜ್ ಆಕ್ರೋಶ
ಹಾಗಾಗಿ ಸಂತೋಷ್ ಹೆಗ್ಡೆಯವರು ಪ್ರತಿನಿದಿಸುವ ಬಂಟ ಸಮುದಾಯವು ಈಗ ಮೀಸಲಾತಿ ಬಗ್ಗೆ ಮಾತನಾಡಬೇಕಿದೆ. ಬಂಟ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತುತ ಇರುವ 3ಎ ಮೀಸಲಾತಿಯಿಂದ 2ಎ (2A) ಪ್ರವರ್ಗಕ್ಕೆ ಬದಲಾಯಿಸಬೇಕು ಎಂದು ಬಂಟರ ಸಂಘಗಳು ಸರ್ಕಾರವನ್ನು ಆಗ್ರಹಿಸಿ ಒತ್ತಾಯಿಸುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ಬಂಟರು ಒಂದೋ ಸಂತೋಷ್ ಹೆಗ್ಡೆ ಹೇಳಿದಂತೆ ‘ಬಂಟರಿಗೆ ಮೀಸಲಾತಿ ಅಗತ್ಯವಿಲ್ಲ’ ಎಂದು ಅನುಮೋದಿಸಬೇಕಿದೆ. ಅಥವಾ ‘ಬಂಟರಿಗೆ 3ಬಿ ಅಡಿ ಮೀಸಲಾತಿಯನ್ನು 2ಎ ಆಗಿ ಬದಲಿಸಬೇಕಾಗಿದೆ ಮತ್ತು ಅದನ್ನು ಕೇಂದ್ರಕ್ಕೂ ವಿಸ್ತರಿಸಬೇಕಿದೆ’ ಎಂದು ಬಂಟರ ಸಂಘ ಹೇಳಬೇಕಿದೆ. ಎರಡನೆಯದ್ದನ್ನು ಆಯ್ಕೆ ಮಾಡುವ ಮುನ್ನ ಬಂಟರ ಸಂಘಗಳು ಜಸ್ಟಿಸ್ ಸಂತೋಷ್ ಹೆಗ್ಡೆಯ ಮೀಸಲಾತಿ ವಿರೋಧಿ ಹೇಳಿಕೆಯನ್ನು ಖಂಡಿಸಬೇಕಿದೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ



