ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಕಣ್ಣೂರು ಸೇರಿದಂತೆ ಗಡಿ ಭಾಗದ ಗ್ರಾಮಗಳಿಗೆ ತಕ್ಷಣ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕಣ್ಣೂರು ಗ್ರಾಮಸ್ಥರು ವಿಜಯಪುರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ಗ್ರಾಮಸ್ಥರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
“ರೈತರ ಹಿತದೃಷ್ಟಿಯಿಂದ ಕಣ್ಣೂರು ಗ್ರಾಮವನ್ನು ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲೇ ಸೇರ್ಪಡೆಗೊಳಿಸಿ, ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಳಪ್ಪ ಬೆಳ್ಳುಂಡಗಿ, “ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ಹತ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತದಲ್ಲಿ ಸೇರ್ಪಡೆಗೊಳಿಸಬೇಕು. ಈ ಕುರಿತು ಕೂಡಲೇ ಯೋಜನಾ ವರದಿ ಹಾಗೂ ಅಂದಾಜು ಪತ್ರಿಕೆ ಸಿದ್ಧಪಡಿಸಿ, ಯಾವುದೇ ವಿಳಂಬ ಮಾಡದೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಎಂ ಎಚ್ ಪಠಾಣ್ ಮಾತನಾಡಿ, “ಕಣ್ಣೂರು ಗ್ರಾಮ ಗಡಿ ಪ್ರದೇಶದಲ್ಲಿರುವುದರಿಂದ ನೀರಾವರಿ ಸೌಲಭ್ಯ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿರುವ ಇಲ್ಲಿನ ರೈತರು ಪ್ರತಿವರ್ಷ ಅನಿಶ್ಚಿತ ಮಳೆ ಹಾಗೂ ಬರದ ಪರಿಸ್ಥಿತಿಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ನೀರಾವರಿ ಸೌಲಭ್ಯ ದೊರೆತರೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜತೆಗೆ ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಲಿದೆ” ಎಂದು ಹೇಳಿದರು.
ಕನ್ನೂರು ಗ್ರಾಮ ಹತ್ತಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ವಂಚಿತವಾಗಿರುವುದು ರೈತರಿಗೆ ಆಗಿರುವ ದೊಡ್ಡ ಅನ್ಯಾಯ. ನೀರಾವರಿ ಇಲ್ಲದೆ ರೈತರ ಬದುಕು ಹಸನಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಉದ್ದೇಶವೇ ಕೃಷಿ ಪ್ರದೇಶಗಳಿಗೆ ನೀರು ಒದಗಿಸುವುದಾಗಿದ್ದು, ಯೋಜನೆಯ ವ್ಯಾಪ್ತಿಯಲ್ಲಿರುವ ಕಣ್ಣೂರು ಗ್ರಾಮವನ್ನು ಹೊರಗಿಡುವುದು ಸರಿಯಲ್ಲ. ಆದ್ದರಿಂದ ಮೊದಲ ಹಂತದ ಯೋಜನೆಯಲ್ಲೇ ಕಣ್ಣೂರು ಗ್ರಾಮವನ್ನು ಸೇರ್ಪಡೆಗೊಳಿಸಿ, ಅಗತ್ಯ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಎ ಎಸ್ ಅಥಣಿ ಮಾತನಾಡಿ, “ಕಣ್ಣೂರು ಸೇರಿದಂತೆ ನೀರಾವರಿ ವಂಚಿತ ಗ್ರಾಮಗಳಿಗೆ ನೀರು ಹರಿಸುವುದು ಕೇವಲ ರೈತರ ಬೇಡಿಕೆಯಲ್ಲ, ಈ ಭಾಗದ ಕೃಷಿ ಅಭಿವೃದ್ಧಿಯ ಅಗತ್ಯವೂ ಆಗಿದೆ. ವರ್ಷಗಳಿಂದ ನೀರಾವರಿ ಸೌಲಭ್ಯಕ್ಕಾಗಿ ಮನವಿ ಮಾಡುತ್ತಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಇದೀಗ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ರೈತರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ನೀರಾವರಿ ಸೌಲಭ್ಯ ಕಲ್ಪಿಸುವುದರಿಂದ ಕಣ್ಣೂರು ಭಾಗದಲ್ಲಿ ಕೃಷಿ ಉತ್ಪಾದನೆ ಹೆಚ್ಚಳವಾಗುವುದರೊಂದಿಗೆ ರೈತರ ವಲಸೆ ತಡೆಯಲು ಸಹಕಾರಿಯಾಗಲಿದೆ. ನೀರಿನ ಲಭ್ಯತೆ ಹೆಚ್ಚಿದರೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಯೋಜನೆಯ ಮೊದಲ ಹಂತದಲ್ಲಿಯೇ ಕಣ್ಣೂರು ಗ್ರಾಮವನ್ನು ಸೇರ್ಪಡೆಗೊಳಿಸಿ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶಂಕರಗೌಡ ಪಾಟೀಲ, ಹನುಮಂತರಾಯಗೌಡ ಪಾಟೀಲ, ಯಲ್ಗೊಂಡಗೌಡ ಬಿರಾದಾರ್, ಕಲ್ಲಪ್ಪ ಬೆಳ್ಳುಂಡಗಿ, ಸಂತೋಷ ತಳವಾರ, ರವಿ ಗಲಗಲಿ, ಮಲ್ಲಯ್ಯ ಹಿರೇಮಠ, ಸತೀಶ ಪಾಟೀಲ, ಬಸುಗೌಡ ಪಾಟೀಲ, ಸಂಪತಗೌಡ ಪಾಟೀಲ, ಸಂಜೀವ ಯಾದವಾಡ, ರಾಜು ಡೊಳ್ಳಿ, ಗುರಪ್ಪ ಉಪ್ಪಾರ, ಅಪ್ಪಾಸಾಬ್ ಬಂಡಿ, ಭೀಮು ಸಿಂಧೆ, ಅಶೋಕ್ ಪಾಟೀಲ, ರಾಜುಗೌಡ ಪಾಟೀಲ, ಸುಭಾಸಗೌಡ ಪಾಟೀಲ, ರಫೀಕ್ ಮುಲ್ಲಾ, ಬಸು ಸೊಡ್ಡಿ, ದೇವೇಂದ್ರ ವಡೆಯರ, ಮಾಸಿದ್ದ ಪೂಜಾರಿ, ಅಪ್ಪಾಸಾಬ್ ಕಾಂಬಳೆ, ತುಕಾರಾಮ ಘೋರ್ಪಡೆ, ರಾವಣ್ಣ ಘೋರ್ಪಡೆ, ಜಕ್ಕಪ್ಪ ಬೆನೂರ, ಭೀಮಣ್ಣ ದರ್ಗಾ, ಪಾಂಡುಸರ್ ದಾತೆ, ಅನಿಲ್ ನಾಗಠಾಣ, ವಿಠ್ಠಲ ಭಜಂತ್ರಿ, ರಮೇಶ ಮೈಲಾರ, ಲೋಕು ಹೊಸೂರ, ಮಹಾದೇವ ನಾಗಠಾಣ, ದೇವಾನಂದ ರಾಠೋಡ್, ವಿಜು ರಾಠೋಡ್, ಕಿಸನ್ ರಾಠೋಡ್, ಪುಂಡಲೀಕ ರಾಠೋಡ್, ಮಾದೇವ ತಾಂಬೆ, ಶಕೀಲ ಮದಭಾವಿ, ಮಶಾಕ ಚೌದರಿ, ಭುಟ್ಟು ಮುತವಲ್ಲಿ, ಶಮ್ಮು ಜಮಾದಾರ್, ಮಲ್ಲು ಚಲವಾದಿ ಸೇರಿದಂತೆ ಕಣ್ಣೂರು ಗ್ರಾಮಸ್ಥರು ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.




