ಕಳೆದ ಎರಡು ದಶಕಗಳಿಂದ ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಉಚಿತವಾಗಿ ಸಾಮಾಜಿಕ ಜಾಲತಾಣದ ಸವಲತ್ತು ನೀಡಿದ್ದ ‘ಮೆಟಾ’ (Meta) ಸಂಸ್ಥೆ, ಈಗ ಡಿಜಿಟಲ್ ಲೋಕದಲ್ಲಿ ಅತ್ಯಂತ ದೊಡ್ಡ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ತನ್ನ ಆದಾಯದ ಮೂಲವನ್ನು ವಿಸ್ತರಿಸಲು ಮುಂದಾಗಿರುವ ಮೆಟಾ, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ವಾಟ್ಸಾಪ್ ಬಳಕೆದಾರರಿಗಾಗಿ ಜಾಗತಿಕ ಮಟ್ಟದಲ್ಲಿ ‘ಮೆಟಾ ಒನ್’ (Meta One) ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ಹಣ ಪಾವತಿಸಿ ಬಳಸುವ ‘ಪ್ಲಸ್’ (Plus) ಸಬ್ಸ್ಕ್ರಿಪ್ಷನ್ ಯೋಜನೆಗಳನ್ನು ಅಧಿಕೃತವಾಗಿ ಲಾಂಚ್ ಮಾಡಿದೆ.
ಯಾವ ಆಪ್ಗೆ ಎಷ್ಟು ಚಾರ್ಜ್?
ಮೆಟಾ ಬಿಡುಗಡೆ ಮಾಡಿರುವ ಈ ಗ್ರಾಹಕಸ್ನೇಹಿ ಪ್ಲಾನ್ಗಳಲ್ಲಿ ಇನ್ಸ್ಟಾಗ್ರಾಮ್ ಪ್ಲಸ್ (Instagram Plus) ತಿಂಗಳಿಗೆ $3.99 (ಸುಮಾರು ₹330), ಫೇಸ್ಬುಕ್ ಪ್ಲಸ್ (Facebook Plus) ತಿಂಗಳಿಗೆ $3.99 (ಸುಮಾರು ₹330) ಹಾಗೂ ವಾಟ್ಸಾಪ್ ಪ್ಲಸ್ (WhatsApp Plus) ತಿಂಗಳಿಗೆ $2.99 (ಸುಮಾರು ₹250) ದರವನ್ನು ಹೊಂದಿವೆ. ಈ ಹೊಸ ಪ್ಲಾನ್ಗಳು ಸದ್ಯ ಚಾಲ್ತಿಯಲ್ಲಿರುವ ಬ್ಲೂ ಟಿಕ್ (Meta Verified) ಸೌಲಭ್ಯವನ್ನು ಬದಲಾಯಿಸುವುದಿಲ್ಲ; ಬದಲಿಗೆ ಸೆಕ್ಯೂರಿಟಿ ಮತ್ತು ಸಪೋರ್ಟ್ ನೀಡುವ ಮೆಟಾ ವೆರಿಫೈಡ್ ಇದರ ಜೊತೆಜೊತೆಗೇ ಮುಂದುವರಿಯಲಿದೆ ಎಂದು ಮೆಟಾ ಸ್ಪಷ್ಟಪಡಿಸಿದೆ.
ಹಣ ನೀಡಿದರೆ ಸಿಗುವ ವಿಶೇಷ ಫೀಚರ್ಗಳೇನು?
ಸಾಮಾನ್ಯ ಬಳಕೆದಾರರಿಗಿಂತ ಸಬ್ಸ್ಕ್ರೈಬ್ ಆದವರಿಗೆ ಕೆಲವು ವಿಶಿಷ್ಟ ಫೀಚರ್ಗಳನ್ನು ಮೆಟಾದ ಪ್ರಾಡಕ್ಟ್ ಹೆಡ್ ನಾಒಮಿ ಗ್ಲೈಟ್ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ ಪ್ಲಸ್ ಮತ್ತು ಫೇಸ್ಬುಕ್ ಪ್ಲಸ್ ಆವೃತ್ತಿಗಳಲ್ಲಿ ನಿಮ್ಮ ಸ್ಟೋರಿಯನ್ನು ಎಷ್ಟು ಜನ ಮತ್ತು ಯಾರು ಯಾರು ‘ರೀ-ವಾಚ್’ ಮಾಡಿದ್ದಾರೆ ಎಂಬ ಒಟ್ಟು ದತ್ತಾಂಶ ಸಿಗಲಿದೆ. ಇದರೊಂದಿಗೆ ಬೇರೆಯವರ ಸ್ಟೋರಿಯನ್ನು ಅವರಿಗೆ ತಿಳಿಯದಂತೆ (Viewed ಪಟ್ಟಿಯಲ್ಲಿ ನಿಮ್ಮ ಹೆಸರು ಬರದಂತೆ) ನೋಡಬಹುದು, ವಾರಕ್ಕೊಮ್ಮೆ ನಿಮ್ಮ ಒಂದು ಸ್ಟೋರಿಯನ್ನು ಹೆಚ್ಚಿನ ವೀಕ್ಷಣೆಗಾಗಿ ಸ್ಪಾಟ್ಲೈಟ್ ಮಾಡಬಹುದು ಹಾಗೂ 24 ಗಂಟೆಗಿಂತ ಹೆಚ್ಚು ಕಾಲ ಇಡಬಹುದು. ಅಲ್ಲದೆ, ನಿಮ್ಮ ಫಾಲೋವರ್ಸ್ಗಳ ಫೀಡ್ನಲ್ಲಿ ಕಾಣಿಸಿಕೊಳ್ಳದಂತೆ ನೇರವಾಗಿ ಪ್ರೊಫೈಲ್ ಮತ್ತು ಹೈಲೈಟ್ಸ್ಗೆ ಪೋಸ್ಟ್ ಮಾಡಬಹುದಾದ ಸೌಲಭ್ಯದ ಜೊತೆಗೆ ಬಯೋಗೆ ಹೊಸ ಫಾಂಟ್ಗಳು, ಕಸ್ಟಮ್ ಆಪ್ ಐಕಾನ್ಗಳು ಮತ್ತು ಸೂಪರ್ ಹಾರ್ಟ್ ಅನಿಮೇಟೆಡ್ ರಿಯಾಕ್ಷನ್ಗಳು ಲಭ್ಯವಾಗಲಿವೆ.

ಮತ್ತೊಂದೆಡೆ, ವಾಟ್ಸಾಪ್ ಪ್ಲಸ್ ಸಂಪೂರ್ಣ ವೈಯಕ್ತೀಕರಣಕ್ಕೆ (Personalisation) ಒತ್ತು ನೀಡಿದ್ದು, ಪ್ರೀಮಿಯಂ ಸ್ಟಿಕ್ಕರ್ಗಳು, ಹೆಚ್ಚುವರಿ ಚಾಟ್ಗಳನ್ನು ಪಿನ್ ಮಾಡುವ ಸೌಲಭ್ಯ, ಕಸ್ಟಮ್ ರಿಂಗ್ಟೋನ್ಗಳು ಮತ್ತು ಆಪ್ ಥೀಮ್ಗಳನ್ನು ಒಳಗೊಂಡಿರುತ್ತದೆ. ಇದು ಮೆಸೇಜಿಂಗ್ ಅನುಭವವನ್ನು ಮತ್ತಷ್ಟು ಆಕರ್ಷಕವಾಗಿಸಲಿದೆ.
ಟೆಸ್ಟಿಂಗ್ ಹಂತದಲ್ಲಿದೆ ಪ್ರೀಮಿಯಂ ಪ್ಲಾನ್!
ಕೇವಲ ಸಾಮಾನ್ಯ ಫೀಚರ್ ಮಾತ್ರವಲ್ಲದೆ, ಮುಂದಿನ ತಿಂಗಳು ಸಿಂಗಾಪುರ, ಗ್ವಾಟೆಮಾಲಾ ಮತ್ತು ಬೊಲಿವಿಯಾದಲ್ಲಿ AI ಆಧಾರಿತ ಸಬ್ಸ್ಕ್ರಿಪ್ಷನ್ಗಳನ್ನು ಮೆಟಾ ಪರೀಕ್ಷಿಸಲಿದೆ. ಇದರಲ್ಲಿ ‘ಮೆಟಾ ಒನ್ ಪ್ಲಸ್’ ತಿಂಗಳಿಗೆ $7.99 (₹759.13) ಹಾಗೂ ‘ಮೆಟಾ ಒನ್ ಪ್ರೀಮಿಯಂ’ ತಿಂಗಳಿಗೆ $19.99 (₹1,899.26) ದರ ಹೊಂದಿರಲಿವೆ. ಈ ಪ್ರೀಮಿಯಂ ಪ್ಲಾನ್ ಸಂಕೀರ್ಣ ಪ್ರಶ್ನೆಗಳಿಗೆ ಆಳವಾದ ತಾರ್ಕಿಕ ಉತ್ತರ (Deeper Reasoning) ಮತ್ತು ಅತ್ಯಾಧುನಿಕ ವಿಡಿಯೋ-ಇಮೇಜ್ ಜನರೇಷನ್ ಸಾಮರ್ಥ್ಯ ನೀಡುತ್ತದೆ. ವಿಶೇಷವೆಂದರೆ, ಮೆಟಾದ ಸ್ಮಾರ್ಟ್ ಗ್ಲಾಸಸ್ (AI Glasses) ಬಳಸುವವರಿಗೂ ಶೀಘ್ರದಲ್ಲೇ ಈ ಯೋಜನೆಯ ಲಾಭ ಸಿಗಲಿದ್ದು, ಸಾಮಾನ್ಯ ಬಳಕೆದಾರರಿಗೆ ಮೆಟಾ AI ಉಚಿತವಾಗಿಯೇ ಇರಲಿದೆ.
ಕ್ರಿಯೇಟರ್ಸ್ ಮತ್ತು ಬಿಸಿನೆಸ್ಗಳಿಗೆ ಬಿಗ್ ಬೂಸ್ಟ್
ಥೈಲ್ಯಾಂಡ್, ಸೌದಿ ಅರೇಬಿಯಾ, ಮೊರಾಕೊ ಮತ್ತು ಬಾಂಗ್ಲಾದೇಶಗಳಲ್ಲಿ ಮೆಟಾ ಉದ್ಯಮಿಗಳು ಹಾಗೂ ಕಂಟೆಂಟ್ ಕ್ರಿಯೇಟರ್ಸ್ಗಳಿಗಾಗಿ ಎರಡು ದೊಡ್ಡ ಪ್ಲಾನ್ಗಳನ್ನು ಈ ವಾರವೇ ಟೆಸ್ಟ್ ಮಾಡುತ್ತಿದೆ. ಮೊದಲನೆಯದಾದ ‘ಮೆಟಾ ಒನ್ ಎಸೆನ್ಷಿಯಲ್’ (₹1,424/ತಿಂಗಳಿಗೆ) ವೆರಿಫೈಡ್ ಬ್ಯಾಡ್ಜ್, ನಕಲಿ ಖಾತೆಗಳಿಂದ ರಕ್ಷಣೆ ಮತ್ತು ಲಿಂಕ್ ಶೀಟ್ ಸೌಲಭ್ಯವನ್ನು ನೀಡುತ್ತದೆ. ಎರಡನೆಯದಾದ ‘ಮೆಟಾ ಒನ್ ಅಡ್ವಾನ್ಸ್ಡ್’ (₹4,749 ತಿಂಗಳಿಗೆ) ಅತ್ಯಂತ ಶಕ್ತಿಶಾಲಿ ಪ್ಲಾನ್ ಆಗಿದ್ದು, ಫೇಸ್ಬುಕ್ ಫೀಡ್ ಮತ್ತು ಇನ್ಸ್ಟಾಗ್ರಾಮ್ ಸರ್ಚ್ ರಿಸಲ್ಟ್ಗಳಲ್ಲಿ ನಿಮ್ಮ ಖಾತೆಗೆ ಹೈ ರ್ಯಾಂಕಿಂಗ್ ನೀಡುತ್ತದೆ. ಜತೆಗೆ ರೀಲ್ಸ್ಗಳ ಮೇಲೆ ಎದ್ದು ಕಾಣುವ ‘Follow’ ಬಟನ್ ಬರುತ್ತದೆ, ಇನ್ಸ್ಟಾಗ್ರಾಮ್ ಪೋಸ್ಟ್ಗಳಲ್ಲೇ ನೇರ ಲಿಂಕ್ ಹಾಕಬಹುದು ಮತ್ತು ಕಾಂಪಿಟೇಟರ್ ಅನಲಿಟಿಕ್ಸ್ ಸಿಗಲಿದೆ.
ಮೆಟಾ ಈ ಹಾದಿ ಹಿಡಿದಿದ್ದೇಕೆ?
ಇಲ್ಲಿಯವರೆಗೆ ಮೆಟಾ ಸಂಸ್ಥೆಯ ಶೇ. 90ಕ್ಕಿಂತ ಹೆಚ್ಚಿನ ಆದಾಯ ಕೇವಲ ಜಾಹೀರಾತುಗಳಿಂದಲೇ ಬರುತ್ತಿತ್ತು. ಆದರೆ ಆಪಲ್ನ ಪ್ರೈವಸಿ ಪಾಲಿಸಿಗಳು ಮತ್ತು ಜಾಗತಿಕ ಜಾಹೀರಾತು ಮಾರುಕಟ್ಟೆಯ ಏರಿಳಿತಗಳಿಂದಾಗಿ ಕೇವಲ ಜಾಹೀರಾತನ್ನೇ ನಂಬಿ ಕೂರಲು ಸಾಧ್ಯವಿಲ್ಲ ಎಂಬುದನ್ನು ಮೆಟಾ ಅರಿತಿದೆ. ನೆಟ್ಫ್ಲಿಕ್ಸ್, ಸ್ಪಾಟಿಫೈ ಮಾದರಿಯಲ್ಲಿ ‘ಚಂದಾದಾರಿಕೆ’ ಮೂಲಕ ನಿರಂತರ ಮತ್ತು ಸ್ಥಿರವಾದ ಆದಾಯ ಗಳಿಸುವುದು ಇದರ ಮೂಲ ಉದ್ದೇಶವಾಗಿದೆ.
ಇದನ್ನೂ ಓದಿ: ಬಟ್ಟೆ ಹೊಲಿಯೋಕೂ ರೋಬೋಟ್; ಗಾರ್ಮೆಂಟ್ಸ್ ಶ್ರಮಿಕರ ಬೆವರಿನ ಮೇಲೆ AI ಕಣ್ಣು!
ವಿಶ್ವದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಈಗಾಗಲೇ ಫೇಸ್ಬುಕ್, ಇನ್ಸ್ಟಾಗ್ರಾಮ್ ಬಳಸುತ್ತಿದೆ. ಅಂದರೆ, ಹೊಸ ಬಳಕೆದಾರರನ್ನು ಸೆಳೆಯುವ ಅವಕಾಶ ಮೆಟಾ ಪಾಲಿಗೆ ಬಹುತೇಕ ಮುಗಿದಿದೆ. ಹಾಗಾಗಿ, ಇರುವ ಬಳಕೆದಾರರಿಂದಲೇ ಹೆಚ್ಚಿನ ಆದಾಯವನ್ನು ಹೇಗೆ ಗಳಿಸಬೇಕು ಎಂಬುದಕ್ಕೆ ಈ ‘ಮೆಟಾ ಒನ್’ ಅತ್ಯುತ್ತಮ ಉದಾಹರಣೆ.
ಮೆಟಾದ 2026ರ ಮೊದಲ ತ್ರೈಮಾಸಿಕ ವರದಿಯ ಪ್ರಕಾರ, ಅದರ ಆಪ್ಗಳ ಆದಾಯವು ವಾರ್ಷಿಕವಾಗಿ ಶೇ. 54 ರಷ್ಟು ವೃದ್ಧಿಸಿ $801 (₹76,103.41) ಮಿಲಿಯನ್ಗೆ ತಲುಪಿದೆ. ಇದಕ್ಕೆ ಪ್ರಮುಖ ಕಾರಣ ವಾಟ್ಸಾಪ್ ಬಿಸಿನೆಸ್ ಮೆಸೇಜಿಂಗ್ ಕಾರ್ಯಾಚರಣೆಗಳು. ಇದೇ ಆರ್ಥಿಕ ವೇಗವನ್ನು ಬಳಸಿಕೊಂಡು ವಾಟ್ಸಾಪ್ ಅನ್ನು ಸಂಪೂರ್ಣ ಕಮರ್ಷಿಯಲ್ ಮಾಡಲು ಮೆಟಾ ಮುಂದಾಗಿದೆ. ಸದ್ಯ ಈಗಿರುವ ಸೋಷಿಯಲ್ ಮೀಡಿಯಾ ಅಕೌಂಟ್ಗಳು ಎಂದಿನಂತೆ ಉಚಿತವಾಗಿಯೇ ಕಾರ್ಯನಿರ್ವಹಿಸಲಿವೆ. ಆದರೆ, ʼಪ್ಲಸ್ʼ ಚಂದಾದಾರರಿಗೆ ವಿಶೇಷ ಫೀಚರ್ ಸೌಲಭ್ಯ ಕಲ್ಪಿಸಲಾಗಿದೆ.




