ಗುಜರಾತ್ ಬಂಡಲ್‌ ಮಾದರಿ; ಮೋದಿ ರಾಜ್ಯದಲ್ಲಿ 35% ಕಟ್ಟಡಗಳು ಅಕ್ರಮ

Date:

ಒಂದೆಡೆ ದೇಶದ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ನಿಯಮ ಉಲ್ಲಂಘನೆ ಅಥವಾ ರಾಜಕೀಯ ಪ್ರೇರಿತ ಕಾರಣಗಳಿಗಾಗಿ ಬಡವರ ಮತ್ತು ಅಲ್ಪಸಂಖ್ಯಾತರ ಮನೆಗಳ ಮೇಲೆ ಬಿಜೆಪಿ ಆಡಳಿತಗಳು ರಾತ್ರೋರಾತ್ರಿ ಬುಲ್ಡೋಜರ್‌ಗಳನ್ನು ಹರಿಸುತ್ತಿವೆ. ತಾವು ಕಾನೂನು ಸುವ್ಯವಸ್ಥೆಯ ಪಾಲಕರೆಂದು ಬೀಗುತ್ತಿವೆ. ಆದರೆ, ದೀರ್ಘಕಾಲದಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಮತ್ತು ದೇಶಕ್ಕೆ ಅಭಿವೃದ್ಧಿಯ ಮಾದರಿ ಎನ್ನಲಾಗಿರುವ ಗುಜರಾತ್‌ನಲ್ಲಿಯೇ ಬೃಹತ್ ಪ್ರಮಾಣದ ಅಕ್ರಮಗಳು ವ್ಯವಸ್ಥಿತವಾಗಿ ರಕ್ಷಿಸಲ್ಪಟ್ಟಿವೆ. ಗುಜರಾತ್‌ನಲ್ಲಿ ಪ್ರಮುಖ ನಗರಗಳಲ್ಲಿರುವ ಸುಮಾರು 35% ಕಟ್ಟಡಗಳು ಅಕ್ರಮವಾಗಿವೆ ಎಂಬ ಸತ್ಯ ಬಹಿರಂಗಗೊಂಡಿದೆ.

- Advertisement -

ಇತ್ತೀಚೆಗೆ, ಗುಜರಾತ್ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ನಡೆಸಿದ ಅಧಿಕೃತ ಮತ್ತು ಸಮಗ್ರ ಸಮೀಕ್ಷೆಯು ರಾಜ್ಯದಲ್ಲಿನ ನಗರಾಭಿವೃದ್ಧಿ ನಿಯಮಗಳ ಹಗಲು ದರೋಡೆಯನ್ನು ಜಗತ್ತಿನೆದುರು ಬಿಚ್ಚಿಟ್ಟಿದೆ. ಆದರೆ, ದೀರ್ಘಕಾಲದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಈ ಬೃಹತ್ ಅಕ್ರಮಗಳ ಮೇಲೆ ಯಾವುದೇ ಬುಲ್ಡೋಜರ್ ಹರಿಸದೆ, ಅವುಗಳನ್ನು ಕಾನೂನಿನ ಚೌಕಟ್ಟಿನಲ್ಲೇ ಸಕ್ರಮಗೊಳಿಸಲು ಹವಣಿಸುತ್ತಿದೆ. ಗುಜರಾತ್‌ ಎಂಬ ಮಾದರಿ ‘ಬಂಡಲ್ ಮಾದರಿ’ ಎಂಬ ವಾಸ್ತವ ಬಟಾಬಯಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷಿಪಣಿ ಬಿಡಿಭಾಗಗಳ ಖರೀದಿಯಲ್ಲಿ ಸ್ವಜನಪಕ್ಷಪಾತ; ಬಿಡಿಎಲ್ ಮಾಜಿ ಮುಖ್ಯಸ್ಥನ...

ಕ್ಷಿಪಣಿಯ ಆಪ್ಟಿಕಲ್ ಸೈಟ್‌ಗಳ ಪೂರೈಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನದೇ ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ (CMD) ಪತ್ನಿಯ ಒಡೆತನದ ಖಾಸಗಿ ಕಂಪನಿಗೆ 'ತುರ್ತು' ನೆಪವೊಡ್ಡಿ 56.8 ಕೋಟಿ...

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಗುಜರಾತ್ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ, ಗಗನಚುಂಬಿ ಕಟ್ಟಡಗಳು ಹಾಗೂ ಆಸ್ಪತ್ರೆಗಳಂತಹ ಅತ್ಯಂತ ಸೂಕ್ಷ್ಮ ವರ್ಗದ ಒಟ್ಟು 8,320 ಕಟ್ಟಡಗಳನ್ನು ಒಳಗೊಂಡ ಸ್ಯಾಂಪಲ್ ಸಮೀಕ್ಷೆಯನ್ನು ನಡೆಸಿದೆ. ಮೂರು ತಿಂಗಳ ಕಾಲ ನಡೆದ ಈ ಸಮೀಕ್ಷೆಯ ಅಂತಿಮ ವರದಿಗಳು ಕೇವಲ ಆಘಾತಕಾರಿ ಮಾತ್ರವಲ್ಲ, ಅಲ್ಲಿನ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿಯನ್ನೂ ಹಿಡಿದಿವೆ.

ಇಲಾಖೆಯ ಅಧಿಕೃತ ತೀರ್ಮಾನದ ಪ್ರಕಾರ, ಸಮೀಕ್ಷೆಗೊಳಪಟ್ಟ ಕಟ್ಟಡಗಳ ಪೈಕಿ ಸುಮಾರು 35%ರಷ್ಟು (ಅಂದರೆ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು) ಕಟ್ಟಡಗಳು ಯಾವುದೇ ಅಧಿಕೃತ ‘ಕಟ್ಟಡ ಬಳಕೆ ಅನುಮತಿ’ (BU Permission) ಇಲ್ಲದೆಯೇ ರಾಜಾರೋಷವಾಗಿ ತಲೆ ಎತ್ತಿವೆ ಮತ್ತು ಬಳಕೆಯಾಗುತ್ತಿವೆ. ನಿಯಮಾವಳಿಗಳ ಅಡಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮಹಡಿಗಳನ್ನು ಅಕ್ರಮವಾಗಿ ನಿರ್ಮಿಸಿರುವುದು, ವಸತಿ ಪ್ರದೇಶಗಳಾಗಿ ಗುರುತಿಸಲ್ಪಟ್ಟ ಜಾಗಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಮಾರ್ಪಡಿಸಿರುವುದು ಹಾಗೂ ವಿಭಿನ್ನ ಆಡಳಿತಾತ್ಮಕ ವ್ಯಾಪ್ತಿಗಳ ಗೊಂದಲಗಳನ್ನು ದುರುಪಯೋಗ ಮಾಡಿಕೊಂಡಿರುವುದು ಈ ಬೃಹತ್ ಅಕ್ರಮಗಳ ಪ್ರಮುಖ ಕಾರಣಗಳಾಗಿವೆ.

ಈ ಮೂರು ತಿಂಗಳ ಸುದೀರ್ಘ ಸಮೀಕ್ಷಾ ಪ್ರಕ್ರಿಯೆಯು ಗುಜರಾತ್‌ನ ಪ್ರಮುಖ ನಗರಗಳಾದ ಅಹಮದಾಬಾದ್, ಸೂರತ್, ರಾಜ್‌ಕೋಟ್ ಹಾಗೂ ವಡೋದರಾಗಳನ್ನು ಕೇಂದ್ರೀಕರಿಸಿ ನಡೆದಿದೆ. ಒಟ್ಟಾರೆಯಾಗಿ ಎಂಟು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 5,600 ಕಟ್ಟಡಗಳನ್ನು, ಪುರಸಭೆಗಳ ವ್ಯಾಪ್ತಿಯಲ್ಲಿ 2,160 ಕಟ್ಟಡಗಳನ್ನು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 560 ಕಟ್ಟಡಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಇವುಗಳ ವ್ಯಾಪ್ತಿಯಲ್ಲಿನ ಕಟ್ಟಡಗಳು ಇರುವ ವಲಯ, ಕಟ್ಟಡದ ಮುಂಭಾಗದಲ್ಲಿರುವ ರಸ್ತೆಯ ಅಗಲ, ಜಾಗವು ಖಾಸಗಿ ಮಾಲೀಕತ್ವಕ್ಕೆ ಸೇರಿದ್ದೇ ಅಥವಾ ಸರ್ಕಾರದಿಂದ ಮಂಜೂರಾಗಿದ್ದೇ ಹಾಗೂ ಅಗ್ನಿಶಾಮಕ ಸುರಕ್ಷತಾ ಕ್ರಮಗಳ ಪಾಲನೆ ಮಾಡಲಾಗಿದೆಯೇ ಎಂಬುದನ್ನು ಸಮೀಕ್ಷೆಯಲ್ಲಿ ಪರಿಶೀಲಿಸಲಾಗಿದೆ. ಜೊತೆಗೆ, ಕಟ್ಟಡದ ಬಳಕೆಯ ಬದಲಾವಣೆ, ಸಾರ್ವಜನಿಕ ಆರೋಗ್ಯಕ್ಕೆ ಅದರಿಂದ ಉಂಟಾಗಬಹುದಾದ ಅಪಾಯಗಳು ಹಾಗೂ ನಾಗರಿಕ ಮೂಲಸೌಕರ್ಯಗಳ ಸ್ಥಿತಿಗತಿಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಈ ತಪಾಸಣೆಯ ವೇಳೆ ಅಹಮದಾಬಾದ್ ಒಂದರಲ್ಲೇ ಸಮೀಕ್ಷೆಗೆ ಒಳಪಟ್ಟ 1,050 ಕಟ್ಟಡಗಳ ಪೈಕಿ 32%ರಷ್ಟು ಕಟ್ಟಡಗಳಿಗೆ ಯಾವುದೇ ಬಿಯು ಅನುಮತಿ ಇರಲಿಲ್ಲ ಎಂಬುದು ಸಾಬೀತಾಗಿದೆ.

ಈ ಇಡೀ ಅಕ್ರಮ ಜಾಲದಲ್ಲಿ ಕೇವಲ ಖಾಸಗಿ ವ್ಯಕ್ತಿಗಳಷ್ಟೇ ಅಲ್ಲದೆ, ಸರ್ಕಾರದ ಅಂಗಸಂಸ್ಥೆಗಳೂ ಶಾಮೀಲಾಗಿರುವುದು ಅಧಿಕಾರಿಗಳ ಹೇಳಿಕೆಗಳಿಂದ ಬಹಿರಂಗವಾಗಿದೆ. ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರವು (AUDA) ಅನೇಕ ಕಟ್ಟಡಗಳಿಂದ ‘ಅನಧಿಕೃತ ಅಭಿವೃದ್ಧಿ ಶುಲ್ಕ’ವನ್ನು ನಿಯಮಿತವಾಗಿ ವಸೂಲಿ ಮಾಡುತ್ತಿದ್ದರೂ, ಅವುಗಳಿಗೆ ಅಧಿಕೃತವಾಗಿ ‘ಬಿಲ್ಡಿಂಗ್ ಯೂಸ್’ (BU) ಅನುಮತಿಯನ್ನು ನೀಡಿರಲಿಲ್ಲ. ಆದ್ದರಿಂದಲೇ, ಬಿಯು ಅನುಮತಿಯೇ ಇಲ್ಲದ ಹೆಚ್ಚುವರಿ ಮಹಡಿಗಳು ತಲೆಯೆತ್ತಿ ನಿಂತಿವೆ.

ಇದರ ಜೊತೆಗೆ ಕೇಂದ್ರ ಸರ್ಕಾರದ ಪ್ರಮುಖ ಕಾಯ್ದೆಯಾದ ‘ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ಸ್ ಆಕ್ಟ್ 2010’ರ ನಿಯಮಗಳ ಅನುಷ್ಠಾನದಲ್ಲೂ ದೊಡ್ಡ ಮಟ್ಟದ ಉಲ್ಲಂಘನೆ ಆಗಿರುವುದು ಪತ್ತೆಯಾಗಿದೆ. ಅಂದರೆ, ರೋಗಿಗಳು ಚಿಕಿತ್ಸೆ ಪಡೆಯುವ ಆಸ್ಪತ್ರೆಗಳೂ ಸಹ ಕನಿಷ್ಠ ಸುರಕ್ಷತಾ ಮತ್ತು ಕಾನೂನು ಮಾನದಂಡಗಳಿಲ್ಲದೆ ಕಾರ್ಯನಿರ್ವಹಿಸುತ್ತಿವೆ.

ಈ ಲೇಖನ ಓದಿದ್ದೀರಾ?: ಕನ್ನಡಿಗರೇ ಗಮನಿಸಿ: ನಿಮ್ಮ ಗ್ಯಾರಂಟಿ ಯೋಜನೆ, ಸರ್ಕಾರಿ ಸೌಲಭ್ಯಗಳನ್ನೂ ಕಸಿದುಕೊಳ್ಳುತ್ತದೆ ‘ಎಸ್‌ಐಆರ್’

ಆದರೆ, ಅತಿ ದೊಡ್ಡ ಪ್ರಶ್ನೆಯೆಂದರೆ, ಕಾನೂನು ಜಾರಿಯ ತಾರತಮ್ಯ ನೀತಿ. ಸಾಮಾನ್ಯವಾಗಿ ದೇಶದ ಇತರೆಡೆಗಳಲ್ಲಿ ಸಣ್ಣಪುಟ್ಟ ಒತ್ತುವರಿಗಳಿಗೂ ಬುಲ್ಡೋಜರ್ ಸಂಸ್ಕೃತಿಯನ್ನು ಪ್ರದರ್ಶಿಸುವ ಬಿಜೆಪಿ, ತನ್ನದೇ ನೇರ ಆಡಳಿತವಿರುವ ಗುಜರಾತ್‌ನಲ್ಲಿ 35% ರಷ್ಟು ಬೃಹತ್ ಕಟ್ಟಡಗಳು ಅಕ್ರಮ ಎಂದು ಸಾಬೀತಾಗಿದ್ದರೂ ಮೌನಕ್ಕೆ ಶರಣಾಗಿದೆ. ಸ್ಯಾಂಪಲ್ ಸರ್ವೆಯಲ್ಲಿಯೇ 35% ಕಟ್ಟಡಗಳು ಅಕ್ರಮವಾಗಿವೆ ಎಂಬುದು ಕಂಡುಬಂದಿರುವಾಗ, ಪೂರ್ಣ ಪ್ರಮಾಣದ ಸರ್ವೆ ನಡೆದರೆ, ಈ ಪ್ರಮಾಣ ಮತ್ತು ಸಂಖ್ಯೆ ಎಷ್ಟಾಗಬಹುದು. ನಗರಾಭಿವೃದ್ಧಿ ಇಲಾಖೆಯ ಪ್ರಕಾರ, ಬಿಯು ಅನುಮತಿ ಇಲ್ಲದ ಈ ಎಲ್ಲ ಕಟ್ಟಡಗಳ ವಿರುದ್ಧ ಕಠಿಣ ಕಾನೂನು ಕ್ರಮ ಅಥವಾ ದಂಡನಾ ಪ್ರಕ್ರಿಯೆಯನ್ನು ಜರಗಿಸಿದರೆ ರಾಜ್ಯಾದ್ಯಂತ ಲಕ್ಷಾಂತರ ಕಟ್ಟಡಗಳನ್ನು ಉರುಳಿಸಬೇಕಾಗುತ್ತದೆ.

ಆದರೆ, ಈ ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕಾಗಲೀ ಅಥವಾ ಹಾಲಿ ಇರುವ ಬಿಜೆಪಿ ಸರ್ಕಾರಕ್ಕಾಗಲೀ ಕ್ರಮ ತೆಗೆದುಕೊಳ್ಳುವ ಇರಾದೆಯೇ ಇಲ್ಲ ಎಂಬುದು ಸ್ಪಷ್ಟ. ಬದಲಾಗಿ, ಸರ್ಕಾರವು ಈ ಕಾನೂನು ಸಂಕಷ್ಟದಿಂದ ಕಟ್ಟಡಗಳ ಮಾಲೀಕರನ್ನು ಪಾರು ಮಾಡಲು ಮತ್ತು ಅಕ್ರಮವನ್ನು ಅಧಿಕೃತವಾಗಿ ಮುಚ್ಚಿಹಾಕಲು ವಿಶೇಷ ‘ಷರತ್ತುಬದ್ಧ ಸುಗ್ರೀವಾಜ್ಞೆ’ಯನ್ನು ತರಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

ಬಡವರ ಗುಡಿಸಲುಗಳ ಮೇಲೆ ತಕ್ಷಣವೇ ಹರಿಯುವ ಬಿಜೆಪಿಯ ಬುಲ್ಡೋಜರ್, ಪ್ರಭಾವಿ ವಾಣಿಜ್ಯೋದ್ಯಮಿಗಳು ಮತ್ತು ಗಗನಚುಂಬಿ ಕಟ್ಟಡಗಳ ಮಾಲೀಕರ ಅಕ್ರಮಗಳ ಎದುರು ಸಂಪೂರ್ಣವಾಗಿ ಸ್ತಬ್ಧವಾಗುತ್ತವೆ.  ಮಾತ್ರವಲ್ಲ, ಅವರನ್ನು ರಕ್ಷಿಸಲು ಸರ್ಕಾರವೇ ಸುಗ್ರೀವಾಜ್ಞೆಯ ಮೊರೆ ಹೋಗುತ್ತಿದೆ. ಇದು ಬಿಜೆಪಿ ಸರ್ಕಾರದ ಆಡಳಿತಾತ್ಮಕ ವ್ಯಂಗ್ಯ!

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2 ರೂ.ಗಾಗಿ ಆಸೆಪಟ್ಟ ಹೋಟೆಲ್‌ಗೆ 1 ಲಕ್ಷ ರೂ. ದಂಡ!

ಮುದ್ರಿತ ‘ಗರಿಷ್ಠ ಚಿಲ್ಲರೆ ಬೆಲೆ’ಗಿಂತ (MRP) 2 ರೂಪಾಯಿ ಹೆಚ್ಚುವರಿ ವಸೂಲಿ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...

ಸಮಯೋಚಿತ ಕ್ರಮದಿಂದ ದೊಡ್ಡ ಮಟ್ಟದ ಅಶಾಂತಿ ತಪ್ಪಿತು: ಸುಪ್ರೀಂಗೆ ದೆಹಲಿ ಪೊಲೀಸ್ ಆಯುಕ್ತರ ಹೇಳಿಕೆ

ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಗಳ ವೇಳೆ ಪೊಲೀಸರು ಕೈಗೊಂಡ ಸಮಯೋಚಿತ,...