ದಾರ ತುಂಡಾಗದಂತೆ ಮಗ್ಗದ ಲಿವರ್ ಅನ್ನು ಎಷ್ಟು ನಾಜೂಕಾಗಿ ಒತ್ತಬೇಕು, ಜ್ಯಾಮ್ ಆಗಿರುವ ಯಂತ್ರದ ಭಾಗವನ್ನು ಬೆರಳುಗಳಿಂದ ಹೇಗೆ ಸವರಿ ಸರಿಪಡಿಸಬೇಕು ಎಂಬ ಟೇಲರ್‌ಗಳ ವರ್ಷಗಳ ಅನುಭವದ ಜಾಣ್ಮೆ ಇಂಚಿಂಚೂ ಆ ವೀಡಿಯೊದಲ್ಲಿ ಸೆರೆಯಾಗುತ್ತದೆ. ಊಟಕ್ಕೆ ಮತ್ತು ಶೌಚಾಲಯಕ್ಕೆ ಹೋಗುವಾಗ ಮಾತ್ರ ಆ ಕ್ಯಾಮೆರಾ ಬಿಚ್ಚಲು ಅವರಿಗೆ ಅನುಮತಿ ಇದೆ!
ಪ್ರತಿದಿನ ಮುಂಜಾನೆ ಮತ್ತು ಸಂಜೆ ರಸ್ತೆಗಳಲ್ಲಿ, ಕಿಕ್ಕಿರಿದ ಬಸ್ಸುಗಳಲ್ಲಿ ಅಥವಾ ಸಾಲು ಸಾಲು ಆಟೋಗಳಲ್ಲಿ ಧಾವಂತದಿಂದ ಓಡಾಡುವ ಮಹಿಳೆಯರನ್ನು ನೋಡುತ್ತಿರುತ್ತೇವೆ. ಅವರ ಕೊರಳಿನಲ್ಲಿ ತೂಗುವ ಗುರುತಿನ ಚೀಟಿ, ಬುತ್ತಿಯ ಬ್ಯಾಗ್ ಹಾಗೂ ಮುಖದಲ್ಲಿನ ಅವಸರ ನೋಡಿದರೆ ಸಾಕು, ಅವರು ಗಾರ್ಮೆಂಟ್ಸ್ ಫ್ಯಾಕ್ಟರಿಯ ನೌಕರರೆಂದು ಗುರುತಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಹೊರಗಿನ ಈ ಚಿತ್ರಣ ನಮಗೆಲ್ಲರಿಗೂ ಪರಿಚಿತ. ಆದರೆ, ಅವರು ಕೆಲಸ ನಿರ್ವಹಿಸುವ ಬೃಹತ್ ಫ್ಯಾಕ್ಟರಿಗಳ ಒಳಗೆ ಕೆಲಸದ ವೈಖರಿ ಹೇಗಿರಬಹುದೆಂದು ನೋಡಿರಲು ಸಾಧ್ಯವಿಲ್ಲ. ತಮ್ಮ ಮುಂದಿನ ಭವಿಷ್ಯ ಏನಾಗಬಹುದೆಂಬ ಅರಿವಿದ್ದೋ, ಇಲ್ಲದೆಯೋ ತಮ್ಮ ಕೆಲಸವನ್ನ ತಾವೇ ಮಷಿನ್‌ಗಳಿಗೊಪ್ಪಿಸಲು ದುಡಿಯುತ್ತಿರುವ ಗಾರ್ಮೆಂಟ್ಸ್ ನೌಕರರ ಕಥೆ ನಿಜಕ್ಕೂ ಕರುಳು ಹಿಂಡುತ್ತದೆ.
ಅಲ್ಲಿ ಕೆಲಸ ಮಾಡುವ ಬಹುತೇಕರು ಮುಗ್ಧರು. ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಅಲ್ಪಸ್ವಲ್ಪ ಓದಿದವರು. ಕೇವಲ ತಮ್ಮ ಕಠಿಣ ಪರಿಶ್ರಮ ಮತ್ತು ಕೈಚಳಕ ನಂಬಿ ಬದುಕುತ್ತಿರುವ ಈ ಮುಗ್ಧ ಜೀವಗಳಿಗೆ ತಮಗೆ ಎದುರಾಗಲಿರುವ ಕರಾಳ ಭವಿಷ್ಯದ ಅರಿವೇ ಇಲ್ಲ. ಪ್ರಸ್ತುತ ಅಲ್ಲಿನ ಕಾರ್ಮಿಕರ ಹಣೆಗೊಂದು ಪುಟ್ಟ ಕ್ಯಾಮೆರಾ ಕಟ್ಟಿ ಯಂತ್ರಗಳ ಮುಂದೆ ನಿಲ್ಲಿಸಲಾಗುತ್ತಿದೆ. ತಾವು ಮಾಡುತ್ತಿರುವ ಪ್ರತಿಯೊಂದು ಸೂಕ್ಷ್ಮ ಕೆಲಸವನ್ನೂ ಆ ಕ್ಯಾಮೆರಾದ ಮೂಲಕ ಕೃತಕ ಬುದ್ಧಿಮತ್ತೆ (AI) ಮತ್ತು ರೊಬೋಟ್‌ಗಳಿಗೆ ತಾವೇ ಸ್ವತಃ ತರಬೇತಿ ನೀಡುತ್ತಿದ್ದಾರೆ. ಈ ಆಷಾಢ ಹೋಗಿ, ನವರಾತ್ರಿ ಬರುವ ಹೊತ್ತಿಗೆ ತಮ್ಮದೇ ಹೊಟ್ಟೆಪಾಡಿನ ಕೆಲಸವನ್ನ ಈ ರೊಬೋಟ್‌ಗಳ ಕೈಗಿಟ್ಟು ತಾವೇ ಬೀದಿಗೆ ಬೀಳಲಿದ್ದೇವೆ ಎಂಬ ಸತ್ಯದ ಅರಿವಿಲ್ಲದೆ, ತಂತ್ರಜ್ಞಾನದ ಹುನ್ನಾರಕ್ಕೆ ದಾಳವಾಗುತ್ತಿದ್ದಾರೆ.
ಪ್ರತಿದಿನ ಬೆಳಗ್ಗೆ ಶಿಫ್ಟ್ ಶುರುವಾಗುವ ಮುನ್ನ ಪ್ರತಿಯೊಬ್ಬರೂ ಹಣೆಗೊಂದು ರೆಕಾರ್ಡಿಂಗ್ ಡಿವೈಸ್ ಕಟ್ಟಿಕೊಳ್ಳಬೇಕು. ಅಲ್ಲಿಂದ ಮುಂದಿನ 8 ಗಂಟೆಗಳ ಕಾಲ ಅವರ ಕಣ್ಣುಗಳು ಏನನ್ನು ನೋಡುತ್ತವೋ, ಅವರ ಕೈಗಳು ಯಾವ ರೀತಿ ಚಲಿಸುತ್ತವೋ ಅದೆಲ್ಲವೂ ಆ ಕ್ಯಾಮೆರಾದಲ್ಲಿ ತಂತಾನೇ ದಾಖಲಾಗುತ್ತದೆ. ದಾರ ತುಂಡಾಗದಂತೆ ಮಗ್ಗದ ಲಿವರ್ ಅನ್ನು ಎಷ್ಟು ನಾಜೂಕಾಗಿ ಒತ್ತಬೇಕು, ಜ್ಯಾಮ್ ಆಗಿರುವ ಯಂತ್ರದ ಭಾಗವನ್ನು ಬೆರಳುಗಳಿಂದ ಹೇಗೆ ಸವರಿ ಸರಿಪಡಿಸಬೇಕು ಎಂಬ ಟೇಲರ್‌ಗಳ ‘ಸ್ನಾಯು ನೆನಪು’ (Muscle Memory) ಮತ್ತು ವರ್ಷಗಳ ಅನುಭವದ ಜಾಣ್ಮೆ ಇಂಚಿಂಚೂ ಆ ವೀಡಿಯೊದಲ್ಲಿ ಸೆರೆಯಾಗುತ್ತದೆ. ಊಟಕ್ಕೆ ಮತ್ತು ಶೌಚಾಲಯಕ್ಕೆ ಹೋಗುವಾಗ ಮಾತ್ರ ಆ ಕ್ಯಾಮೆರಾ ಬಿಚ್ಚಲು ಅವರಿಗೆ ಅನುಮತಿ ಇದೆ!

ಇದನ್ನ ತಾಂತ್ರಿಕ ಭಾಷೆಯಲ್ಲಿ ‘ಇಗೋಸೆಂಟ್ರಿಕ್ ಡೇಟಾ’ ಎನ್ನುತ್ತಾರೆ. ಜಗತ್ತಿನ ದೊಡ್ಡ ದೊಡ್ಡ AI ಮತ್ತು ರೋಬೋಟಿಕ್ಸ್ ಕಂಪನಿಗಳಿಗೆ ಈಗ ಇಂತಹ ಕೋಟ್ಯಂತರ ಗಂಟೆಗಳ ವೀಡಿಯೊಗಳು ಬೇಕಾಗಬಹುದು. ಮನುಷ್ಯರಂತೆ ಯೋಚಿಸುವ, ಕೆಲಸ ಮಾಡುವ ‘ಹ್ಯೂಮನಾಯ್ಡ್’ ರೋಬೋಟ್‌ಗಳಿಗೆ ಮನುಷ್ಯನ ಕೈಚಳಕವನ್ನು ಕಲಿಸಿಕೊಡಲು ಸದ್ಯ ಭಾರತದ ಕಾರ್ಮಿಕರನ್ನೇ ಬಳಸಿಕೊಳ್ಳಲಾಗುತ್ತಿದೆ.
“ನನಗೆ ಇದು ಹೆಂಗೆ ಅನ್ಸುತ್ತೆ ಅಂದ್ರೆ, ನಾನೇ ಕೂತು ನನ್ನ ಶವಪೆಟ್ಟಿಗೆಯನ್ನು ಸಿದ್ಧಪಡಿಸುತ್ತಾ, ನನ್ನದೇ ಸಮಾಧಿಯೊಳಗೆ ಕೆಲಸ ಮಾಡುತ್ತಿರುವ ಹಾಗೆ ಭಾಸವಾಗುತ್ತದೆ!”.. ಇದು TIE ವರದಿ ಮಾಡಿರುವ ನಾಗ್‌ಪುರದ ಆಶಿಶ್ ಎಂಬ ಗಾರ್ಮೆಂಟ್ ನೌಕರನ ಮಾತು.
ಇದು ಕೇವಲ ನಾಗಪುರದ ಆಶಿಶ್ ಕಥೆಯಷ್ಟೇ ಅಲ್ಲ. ನಮ್ಮ ಸುತ್ತಮುತ್ತಲಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲೂ ಇಂತಹದ್ದೇ ಒಂದು ಕೌಶಲ್ಯದ ಕಳ್ಳತನ, ಮುಗ್ಧತೆಯ ಮೇಲಿನ ದಾಳಿ ನಡೆಯುತ್ತಿದೆ. ತಮಿಳುನಾಡಿನ (ವಿಶೇಷವಾಗಿ ತಿರುಪುರ್ ಮತ್ತು ಕೊಯಮತ್ತೂರು ಭಾಗ) ಜವಳಿ ಕಾರ್ಖಾನೆಗಳಲ್ಲಿ ಹೆಣ್ಣುಮಕ್ಕಳು ಕಣ್ಣಿಗೆ ‘ಸ್ಮಾರ್ಟ್ ಗ್ಲಾಸ್’ ಧರಿಸಿ ಬಟ್ಟೆ ಪ್ಯಾಕ್ ಮಾಡುತ್ತಿದ್ದಾರೆ. ಅತ್ತ ಅಮೆರಿಕದ ಕಂಪನಿಗಳು ಇವರ ಕೈಚಳಕದ ವೀಡಿಯೊಗಳನ್ನು ಗಂಟೆಗೆ 250 ರಿಂದ 350 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಕೊಟ್ಟು ಕೊಂಡುಕೊಳ್ಳುತ್ತಿವೆ.
ಈ ಸ್ಮಾರ್ಟ್ ಕನ್ನಡಕಗಳಲ್ಲಿ ಸಣ್ಣ ಕ್ಯಾಮೆರಾ ಮತ್ತು ಸೆನ್ಸಾರ್‌ಗಳಿರುತ್ತವೆ. ಮಹಿಳೆಯರು ಬಟ್ಟೆಯನ್ನು ಹೇಗೆ ಮಡಚುತ್ತಾರೆ?, ಅದರ ಗುಣಮಟ್ಟವನ್ನು ಹೇಗೆ ತಪಾಸಣೆ ಮಾಡುತ್ತಾರೆ?, ಎಷ್ಟು ವೇಗದಲ್ಲಿ ಪ್ಯಾಕ್ ಮಾಡುತ್ತಾರೆ? ಎಂಬ ಇಡೀ ಪ್ರಕ್ರಿಯೆಯನ್ನು ಈ ಕನ್ನಡಕಗಳು ವೀಡಿಯೊ ರೆಕಾರ್ಡ್ ಮಾಡುತ್ತವೆ. ವಿದೇಶಿ ಕಂಪನಿಗಳು ಈ ವೀಡಿಯೊಗಳನ್ನು ಗಂಟೆಯ ಆಧಾರದ ಮೇಲೆ ಹಣ ನೀಡಿ ಖರೀದಿಸುತ್ತಿವೆ. ಭಾರತದಲ್ಲಿ ಮಾನವ ಶ್ರಮದ ವೆಚ್ಚ ಕಡಿಮೆ ಇರುವುದರಿಂದ, ಇಲ್ಲಿನ ಕಾರ್ಮಿಕರ ಮೂಲಕ ಅತ್ಯಂತ ನಿಖರವಾದ ವೀಡಿಯೊ ಡೇಟಾವನ್ನು ಪಡೆದು ತಮ್ಮ AI ಮಾದರಿಗಳನ್ನು ವಿದೇಶಿ ಕಂಪನಿಗಳು ಬಲಪಡಿಸಿಕೊಳ್ಳುತ್ತಿವೆ ಎಂಬುದು ಇನ್ನೊಂದು ಶೋಷಣೆ!
ಒಂದು ವೇಳೆ ಪ್ರಶ್ನೆ ಮಾಡಿದರೆ, ಕಾರ್ಖಾನೆಯ ಮ್ಯಾನೇಜ್‌ಮೆಂಟ್‌ಗಳು “ಕಂಪನಿಯ ಆಪರೇಷನ್ ಸುಧಾರಿಸಲು ಈ ವೀಡಿಯೊ ಮಾಡ್ತಿದ್ದೀವಿ” ಎಂದು ಸುಳ್ಳು ಹೇಳಿ ಸಹಿ ಹಾಕಿಸಿಕೊಳ್ಳುತ್ತವೆಯೇ ಹೊರತು, ಈ ವೀಡಿಯೊಗಳು ಎಲ್ಲಿಗೆ ಹೋಗುತ್ತವೆ ಎಂಬ ಅಸಲಿ ವಿಷಯವನ್ನು ಬಡ ಕಾರ್ಮಿಕರಿಗೆ ಹೇಳೋಕೂ ಹೋಗಲ್ಲ. ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಕಾರ್ಮಿಕರಿಗೆ “ನಾನು ಕ್ಯಾಮೆರಾ ಹಾಕಲ್ಲ” ಎಂದು ನಿರಾಕರಿಸುವ ಹಕ್ಕು ಕೂಡ ಇಲ್ಲಿಲ್ಲ!
ತುಮಕೂರಿನ ʼಶಾಹಿ ಗಾರ್ಮೆಂಟ್ಸ್ʼನಲ್ಲಿ ಕೆಲಸ ಮಾಡುವ ಪ್ರೇಮಾ ಹೀಗೆನ್ನುತ್ತಾರೆ.. “ಸುಮಾರು 15-16 ವರ್ಷದಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದೀನಿ. ಬಿಡುವೇ ಇಲ್ಲದಂಗೆ ಕೆಲಸ ಮಾಡ್ತಾನೇ ಇರ್ಬೇಕು ಅನ್ನೋದೊಂದ್ ಬಿಟ್ರೆ, ಟೈಮಿಗೆ ಸರಿಯಾಗಿ ಸಂಬಳ ಕೊಡ್ತಾರೆ, ಪಿಎಫ್ ಬರುತ್ತೆ, ಹೆಂಗೋ ನಡಿಯುತ್ತೆ. ನಮಗೆ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮನೆಗೆ ಹೋಗೋವರ್ಗೂ ಈ ಬದುಕಿನ ಜಂಜಾಟದ್ದೇ ಅವಸರ. ಈ ಕೆಲ್ಸ ನಂಬಿಕೊಂಡೇ ನಮ್ಮ ಹೊಟ್ಟೆಪಾಡು, ಮಕ್ಕಳ ಓದು ನಡೀತಿದೆ. ಇತ್ತೀಚೆಗೆ ಫ್ಯಾಕ್ಟರಿಯಲ್ಲಿ ಬೆಳಗ್ಗೆ ಹೋದಾಗ್ಲೇ ಹಣೆಗೊಂದು ಕ್ಯಾಮೆರಾ ತರದ್ದು ಪಟ್ಟಿ ಕಟ್ತಾರೆ. ನಾವು ಸೂಜಿಲಿ ದಾರ ಪೋಣಿಸೋದು, ಮಷಿನ್ ನಿಂದ ಹೊಲಿಯೋದು, ಬಟ್ಟೆ ಮಡಚೋದು, ಪ್ಯಾಕ್ ಮಾಡೋದು ಎಲ್ಲವನ್ನೂ ಅದು ರೆಕಾರ್ಡ್ ಮಾಡಿಕೊಳ್ಳುತ್ತಂತೆ. ಯಾಕೆ ಅಂತ ಕೇಳಿದ್ರೆ, ʼದೊಡ್ಡ ಸಾಹೇಬ್ರು ನೋಡ್ತಾರೆ, ಕೆಲಸ ಸರಿ ಆಗ್ಬೇಕಲ್ಲಾʼ ಅಂತಾರೆ ಮ್ಯಾನೇಜರ್. ಆದ್ರೆ, ಈಗೀಗ ಅಲ್ಲಿ ಇಲ್ಲಿ ಕೇಳೋ ಮಾತುಗಳನ್ನು ಕೇಳಿದ್ರೆ ಎದೆ ನಡುಗುತ್ತೆ. ನಮ್ಮ ಕೈಚಳಕ, ನಮ್ಮ ವರ್ಷಗಳ ಅನುಭವದ ಕಷ್ಟನೆಲ್ಲಾ ಈ ಕ್ಯಾಮೆರಾಗಳು ನುಂಗಿ, ಮುಂದೆ ನಮ್ಮ ಜಾಗಕ್ಕೆ ಯಾವ್ದೋ ರೋಬೋಟ್‌ಗಳನ್ನ ತಂದು ನಿಲ್ಲಿಸ್ತಾರಂತೆ! ನಾವೇ ಹೊಲಿದು ಕಳಿಸೋ ಬಟ್ಟೆಗಳು ನಾಳೆ ನಮ್ಮನ್ನೇ ಬೀದಿಗೆ ತಳ್ತಾವಾ ಅನ್ಸುತ್ತೆ. ನಮಗೆ ತಂತ್ರಜ್ಞಾನದ ದೊಡ್ಡ ದೊಡ್ಡ ಮಾತುಗಳು ಅರ್ಥವಾಗಲ್ಲ ಮೇಡಂ… ಆದ್ರೆ ನಾಳೆ ಈ ಮಷಿನ್‌ಗಳು ನಮ್ಮ ಹೊಟ್ಟೆಯನ್ನೇ ಹೊಡೆದ್ರೆ, ನಮ್ಮಂತ ಬಡ ಹೆಣ್ಣುಮಕ್ಕಳು ಎಲ್ಲಿಗೆ ಹೋಗ್ಬೇಕು? ಬೇಡ ಅನ್ನೋಕೂ ಆಗಲ್ಲ, ಅಂದ್ರೆ ಕೆಲಸದಿಂದ ತೆಗೀತಾರೆ. ನಮ್ಮ ಕೈಯಾರ ನಮ್ಮ ಭವಿಷ್ಯ ನಮ್ಮ ಕೈಯಿಂದ ಜಾರೋಗ್ತಿದ್ಯೇನೋ ಅನ್ನೋ ಶುರುವಾಗದೆ”
“ನನ್ನ ಪರಿಸ್ಥಿತಿ ಹೆಂಗಾಗಿದೆ ಅಂದ್ರೆ, ಇತ್ತ ಮ್ಯಾನೇಜ್‌ಮೆಂಟ್‌ಗೆ ಉತ್ತರ ಕೊಡಬೇಕು, ಅತ್ತ ದಿನಾ ಕಣ್ಣೆದುರು ದುಡಿಯೋ ನೌಕರರ ಮುಖನೂ ನೋಡಬೇಕು. ಮೇಲಿಂದ ಆರ್ಡರ್ ಬಂದಿದೆ.. ʼಪ್ರತಿಯೊಬ್ಬ ಲೇಬರ್ ತಲೆಗೂ ಈ ಡಿವೈಸ್ ಕಟ್ಟಬೇಕು, ಒಂದು ನಿಮಿಷನೂ ರೆಕಾರ್ಡಿಂಗ್ ನಿಲ್ಲಬಾರದು ಅಂತ. ಲೇಬರ್ಸ್ ಅಮಾಯಕರು, ‘ಯಾಕೆ ಸಾರ್ ಇದೆಲ್ಲ?’ ಅಂತ ಮುಗ್ಧವಾಗಿ ಕೇಳ್ತಾರೆ. ಅವರಿಗೆ ‘ಕಂಪನಿ ಪ್ರೊಡಕ್ಷನ್ ಚೆಕ್ ಮಾಡೋಕೆ, ಕ್ವಾಲಿಟಿ ನೋಡೋಕೆ’ ಅಂತ ಹೇಳ್ತೀನಿ. ಆದ್ರೆ ಒಳಗಿನ ಸತ್ಯ ನನಗೂ ಗೊತ್ತು. ಈ ಹುಡುಗಿಯರು ವರ್ಷಗಟ್ಟಲೆ ಕಷ್ಟಪಟ್ಟು ಕಲ್ತಿರೋ ಆ ಕೆಲಸ, ಇಂಚಿಂಚೂ ರೆಕಾರ್ಡ್ ಆಗುತ್ತೆ. ಆ ವೀಡಿಯೊಗಳನ್ನ ವಿದೇಶಿ ಕಂಪನಿಗಳಿಗೆ ಕಳಿಸಲಾಗತ್ತೆ. ಮನುಷ್ಯರ ಜಾಗಕ್ಕೆ ರೋಬೋಟ್‌ಗಳನ್ನ ತರೋಕೆ ನಮ್ಮದೇ ಕಾರ್ಮಿಕರನ್ನ ಬಳಸಿಕೊಳ್ಳಲಾಗ್ತಿದೆ ಅಂತ ಗೊತ್ತಾದಾಗ ಬೇಸರಾಗುತ್ತೆ. ಆದ್ರೆ ನಾನೇನು ಮಾಡಲಿ? ನಾನು ಧ್ವನಿ ಎತ್ತಿದ್ರೆ ನಾಳೆ ನನ್ನ ಕೆಲಸನೂ ಇರಲ್ಲ. ಹೊಟ್ಟೆಪಾಡಿಗೆ ಮ್ಯಾನೇಜ್‌ಮೆಂಟ್ ಹೇಳಿದ ಹಾಗೆ ಕೇಳುತ್ತಾ ಈ ಕೆಲಸಕ್ಕೆ ನಾವೂ ಸಾಥ್ ಕೊಡಬೇಕಾಗಿ ಬಂದಿದೆಯಲ್ಲ ಅನ್ನೋ ಅಪರಾಧ ಪ್ರಜ್ಞೆ ನನ್ನನ್ನು ದಿನಾ ಕಾಡ್ತಿದೆ. ನೋಡೋಣ, ಇದಕ್ಕೆ ಏನಾದ್ರೂ ಪರಿಹಾರ ಬರುತ್ತೇನೋ” ಎನ್ನುತ್ತಾರೆ ಇನ್ ಲೆದರ್ ಫ್ಯಾಕ್ಟರಿಯಲ್ಲಿ ದುಡಿಯುವ ಸೂಪರ್‌ವೈಸರ್ ಸಿದ್ದರಾಜು.
ಡೇಟಾ ಕಂಪನಿಗಳ ಮಾಲೀಕರು ಮಾತ್ರ ಇದಕ್ಕೆ ಬೇರೆಯದೇ ಸಮರ್ಥನೆ ನೀಡುತ್ತಾರೆ. “ಮನುಷ್ಯರು ಮಾಡಲು ಇಷ್ಟಪಡದ ಕೊಳಕು ಶೌಚಾಲಯಗಳನ್ನು ತೊಳೆಯಲು ಅಥವಾ ಅಪಾಯಕಾರಿ ಜಾಗಗಳಲ್ಲಿ ಕೆಲಸ ಮಾಡಲು ಇಂತಹ ರೋಬೋಟ್‌ಗಳು ಹೆಲ್ಪ್ ಆಗುತ್ತವೆ. ಕಾರ್ಮಿಕರು ಇನ್ನು ಉತ್ತಮ ಕೆಲಸ ಹುಡುಕಿಕೊಳ್ಳಬಹುದು” ಎನ್ನುತ್ತಾರೆ ಅಬ್ಜೆಕ್ಟ್‌ವೇಸ್ ಕಂಪನಿಯ ಮುಖ್ಯಸ್ಥ ರವಿಶಂಕರ್. ಬೆಂಗಳೂರಿನ ಹ್ಯೂಮಿನ್ ಲ್ಯಾಬ್ಸ್‌ನಂತಹ ಸಂಸ್ಥೆಗಳು ಇಂತಹ ವೀಡಿಯೊಗಳನ್ನು ಖರೀದಿಸಲು ಕೋಟ್ಯಂತರ ರೂಪಾಯಿ ಬಂಡವಾಳ ಹೂಡುತ್ತಿವೆ.
ಆದರೆ, ಭವಿಷ್ಯದಲ್ಲಿ ರೋಬೋಟ್‌ಗಳು ಬಂದರೆ ಇವರಿಗೆ ಪರ್ಯಾಯ ಕೆಲಸ ಕೊಡುವವರು ಯಾರು ಎಂಬ ಪ್ರಶ್ನೆಗೆ ಮಾತ್ರ ಯಾರ ಬಳಿಯೂ ಉತ್ತರವಿಲ್ಲ. ತಂತ್ರಜ್ಞಾನದ ಈ ನಾಗಾಲೋಟದ ಮಧ್ಯೆ, ಕಾರ್ಮಿಕರ ಒಡಲಾಳದ ಮಾತುಗಳು ಜಗತ್ತಿನ ಕಣ್ಣು ತೆರೆಸಲಿ.
ಇದನ್ನೂ ಓದಿ: ಲಿವಿಂಗ್ ರೂಮಿನಲ್ಲಿ ಗೂಢಚಾರ, ಗ್ಯಾರೇಜಿನಲ್ಲಿ ಡೇಟಾ ಕಳ್ಳ: ಯಾರೀ ʼಡಿಜಿಟಲ್ ಸ್ಪೈʼಗಳು?
ಕಾರ್ಮಿಕರ ಕೈಚಳಕವನ್ನೇ ಬಂಡವಾಳವಾಗಿಸಿಕೊಂಡು, ಅವರದೇ ಹೊಟ್ಟೆಯ ಮೇಲೆ ಹೊಡೆಯುವ ತಂತ್ರಜ್ಞಾನದ ಹುನ್ನಾರ ನಿಜಕ್ಕೂ ಆತಂಕಕಾರಿ. ಅಪಾಯಕಾರಿ ಜಾಗಗಳಲ್ಲಿ ರೋಬೋಟ್‌ಗಳು ನೆರವಾಗುತ್ತವೆ ಎಂಬ ಕಾರ್ಪೊರೇಟ್ ಕಂಪನಿಗಳ ಸಮರ್ಥನೆ ಕೇಳಲು ಚಂದವಿದೆ. ಆದರೆ, ಅಲ್ಪಸ್ವಲ್ಪ ಓದಿ, ಕಠಿಣ ಪರಿಶ್ರಮವನ್ನೇ ನಂಬಿ ಬದುಕುತ್ತಿರುವ ಕೋಟ್ಯಂತರ ಮಹಿಳೆಯರಿಗೆ ಪರ್ಯಾಯ ಉದ್ಯೋಗ ಒದಗಿಸುವ ಗ್ಯಾರಂಟಿ ಯಾರು ನೀಡುತ್ತಾರೆ? ʼನಾವು ಮಾಡುವ ಕೆಲಸವನ್ನೇ ರೋಬೋಟ್‌ಗಳು ಕಲಿತರೆ ನಮ್ಮ ಕಥೆ ಏನು?ʼ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು? ಸರ್ಕಾರಗಳು ಮತ್ತು ಕಾರ್ಮಿಕ ಸಂಘಟನೆಗಳು ತಕ್ಷಣವೇ ಎಚ್ಚೆತ್ತುಕೊಂಡು, ಕಾರ್ಮಿಕರ ಈ ‘ಇಗೋಸೆಂಟ್ರಿಕ್ ಡೇಟಾ’ ಮತ್ತು ‘ಪ್ರೈವಸಿ’ ಹಕ್ಕುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕಾನೂನು ತರಬೇಕಿದೆ. ತಂತ್ರಜ್ಞಾನದ ಹೆಸರಿನಲ್ಲಿ ಮನುಷ್ಯತ್ವವನ್ನೇ ಯಂತ್ರಗಳಿಗೆ ಅಡವಿಡುವ ಈ ಅಮಾನವೀಯ ಆಟ ಖಂಡಿತ ನಿಲ್ಲಬೇಕಿದೆ.




