ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ (PoK) ಶಾಸನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಭಾನುವಾರ ನಡೆಯುತ್ತಿದೆ. ಕೆಳದ ಕೆಲವು ದಿನಗಳಿಂದ ಪಿಒಕೆಯಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಶನಿವಾರ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಪರಿಣಾಮ, ಮುಜಫರಾಬಾದ್‌ನ ಹಲವು ಭಾಗಗಳಲ್ಲಿ ಸುಟ್ಟ ವಾಹನಗಳು, ಕಲ್ಲುಗಳಿಂದ ಮುಚ್ಚಿದ ರಸ್ತೆಗಳು ಹಾಗೂ ಬಿಗಿ ಭದ್ರತೆ ಕಂಡುಬಂದಿವೆ. ಈಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆಯೂ ಭಾನುವಾರ ಮತದಾನ ನಡೆಯುತ್ತಿದೆ.
ಪಿಒಕೆ ಪ್ರತ್ಯೇಕ ಶಾಸನ ಸಭೆಯನ್ನು ಹೊಂದಿದ್ದರು. ಈ ಸೀಮೆಯ ಹತೋಟಿ ಪಾಕ್ ಸರ್ಕಾರ ಮತ್ತು ಪಾಕ್ ಸೇನೆಯೇ ಹಿಡಿತದಲ್ಲಿದೆ. ಸದ್ಯ, ಪಿಒಕೆಗೆ ಒಟ್ಟು 53 ಸ್ಥಾನಗಳ ಶಾಸನ ಸಭೆ ಇದ್ದು, ಈ ಪೈಕಿ 45 ಕ್ಷೇತ್ರಗಳು ನೇರ ಮತದಾನಕ್ಕೆ ಒಳಪಡುತ್ತವೆ. ಈ 45 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.ಮೊದಲ ಹಂತದ ಚುನಾವಣೆ ಈಗಾಗಲೇ ಮುಗಿದಿದ್ದು, ಪ್ರಸ್ತುತ ಎರಡನೇ ಹಂತದ ಮತದಾನ ನಡೆಯುತ್ತಿದೆ. ರಸ್ತೆಗಳಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ಭಾರಿ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.
ಗಮನಾರ್ಹವಾಗಿ, PoK ಯಲ್ಲಿ ಗೋಧಿ ಮೇಲಿನ ಸಬ್ಸಿಡಿ ಕಡಿತ, ಭಾರಿ ವಿದ್ಯುತ್ ದರ ಏರಿಕೆ ಹಾಗೂ ಆರ್ಥಿಕ ಸಂಕಷ್ಟದ ವಿರುದ್ಧ ‘ಜಾಯಿಂಟ್ ಅವಾಮಿ ಆಕ್ಷನ್ ಕಮಿಟಿ’ (JAAC) ನೇತೃತ್ವದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರೀ ಜನಪ್ರತಿಭಟನೆಗಳು ನಡೆಯುತ್ತಿವೆ.
ಈ ಪ್ರತಿಭಟನೆಗಳನ್ನು ಹತೋಟಿಗೆ ತರಲು ಪಾಕಿಸ್ತಾನಿ ಪಡೆಗಳು ಬಲಪ್ರಯೋಗ ಮತ್ತು ಭದ್ರತಾ ಬಿಗಿಕ್ರಮ ಕೈಗೊಂಡಿದ್ದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಇದರ ನಡುವೆಯೇ ನಡೆಯುತ್ತಿರುವ ಚುನಾವಣೆಯಲ್ಲಿ ಪಾಕಿಸ್ತಾನದ ಕೇಂದ್ರ ಸರ್ಕಾರ ಹಾಗೂ ಸೇನೆಯು ತನಗೆ ಬೇಕಾದ ಅಭ್ಯರ್ಥಿಗಳನ್ನು ಗೆಲ್ಲಿಸಲು ಅಕ್ರಮ ಎಸಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಸ್ಥಳೀಯರು ಮತ್ತು ವಿಪಕ್ಷಗಳು ಮಾಡುತ್ತಿವೆ.
ಇಂತಹ ಅಕ್ರಮಗಳು ಮತ್ತು ಸೇನಾ ಹಸ್ತಕ್ಷೇಪವನ್ನು ವಿರೋಧಿಸಿ ಇಮ್ರಾನ್ ಖಾನ್ ಅವರ ಪಿಟಿಐ ಸೇರಿದಂತೆ ಕೆಲವು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿವೆ.



