ಪಾಲಕ್ಕಾಡ್‌ಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಭೇಟಿ ಮಾಡಿ ಚುನಾವಣಾ ಸಿದ್ಧತೆಯ ಬಗ್ಗೆ ಕೆಲ ಹೊತ್ತು ವಿಚಾರಿಸಿದರು.
ನರೇಂದ್ರ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ತಮಿಳುನಾಡಿನ ಮಾಜಿ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಉಪಸ್ಥಿತಿ ಇರಲಿಲ್ಲ. ಇದು ಈಗ ತಮಿಳುನಾಡು ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಅಣ್ಣಾಮಲೈ ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ನಿರಾಕರಿಸಿದ ಕಾರಣ ಅವರು ಪಕ್ಷದ ಮೇಲೆ ಅಸಮಾಧಾನ ಹೊಂದಿದ್ದಾರೆ ಎನ್ನುವ ಚರ್ಚೆಗಳಿವೆ. ಹಾಗಾಗಿ ಮೋದಿ ಬಂದಾಗಲೂ ಕೂಡ ಅಣ್ಣಾಮಲೈ ಭೇಟಿ ಮಾಡಲು ಬಂದಿಲ್ಲ ಎನ್ನುವ ವಿಷಯ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ಇದನ್ನೂ ಓದಿ : ಕೋಮು ಸೌಹಾರ್ದದಿಂದ ಕೋಮುದ್ವೇಷಕ್ಕೆ ಬದಲಾಗುತ್ತಿದೆಯೇ ಮಂಡ್ಯ?
ಈ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ವನತಿ ಶ್ರೀನಿವಾಸನ್, “ಮೋದಿ ಅವರು ಬಂದಾಗ ಅವರನ್ನು ಭೇಟಿ ಮಾಡುವುದಕ್ಕೆ ಅಣ್ಣಾಮಲೈ ಅವರಿಗೂ ಆಹ್ವಾನವಿತ್ತು. ಆದರೆ ಅವರು ಬರಲಿಲ್ಲ. ಅಣ್ಣಾಮಲೈ ನಮ್ಮ ಪ್ರೀತಿಯ ಕಿರಿಯ ಸಹೋದರ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು ಪಕ್ಷದ ನಾಯಕತ್ವಕ್ಕೆ ತಿಳಿದಿದೆ. ಅವರು ಪಕ್ಷದ ಮೇಲೆ ಅಸಮಾಧಾನ ಹೊಂದಿರುವ ಬಗ್ಗೆ ನನಗೆ ತಿಳಿದಲ್ಲ” ಎಂದು ಹೇಳಿದ್ದಾರೆ.
ಇನ್ನು, ಅಣ್ಣಾಮಲೈ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯೊಂದನ್ನು ಕರೆದು ಪರೊಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ‘ಯಾರಿಗೂ ಕೂಡ ತಲೆಯ ಮೇಲೆ ಬಂದೂಕು ಇಟ್ಟು, ಬಲವಂತವಾಗಿ ಪಕ್ಷದಲ್ಲಿ ಇರುವಂತೆ ಹೇಳಲು ಸಾಧ್ಯವಿಲ್ಲ’ ಎಂದು ಕೂಡ ಹೇಳಿದ್ದರು. ತಮಿಳುನಾಡು ಚುನಾವಣೆಗಾಗಿ ಪಕ್ಷ ನೀಡಿದ್ದ ಪ್ರಚಾರದ ಜವಾಬ್ದಾರಿಯನ್ನೂ ಕೂಡ ಅಣ್ಣಾಮಲೈ ತಿರಸ್ಕರಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖನೀಯ.




