ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು 14 ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನವೆಂಬರ್ 14ರಿಂದ 17ರವರೆಗೆ ನಡೆದ 5ನೇ ರಾಜ್ಯಮಟ್ಟದ ಮಿನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಾಗಲಕೋಟೆ ಜಿಲ್ಲಾ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಸೈಕ್ಲಿಂಗ್ ಹಾಗೂ ಕುಸ್ತಿ ಸ್ಪರ್ಧೆಗಳಲ್ಲಿ ಒಟ್ಟು 14 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಮೂಡಿಸಿದ್ದಾರೆ. ಸೈಕ್ಲಿಂಗ್ ವಿಭಾಗದಲ್ಲಿ ವಿದ್ಯಾ ಲಮಾಣಿ 10 ಕಿ.ಮೀ. ಟೈಮ್ ಟ್ರಯಲ್ ಹಾಗೂ 20 ಕಿ.ಮೀ. ಮಾಸ್ ಸ್ಟಾರ್ಟ್ ಎರಡೂ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ ಸಹನಾ ಮುತ್ತಾಳ ಎರಡು ಬೆಳ್ಳಿ ಪದಕಗಳು ಹಾಗೂ ಯಲ್ಲವ್ವ ಮದಭಾವಿ 20 ಕಿ.ಮೀ ಮಾಸ್ ಸ್ಟಾರ್ಟ್‌ನಲ್ಲಿ, ವೈಷ್ಣವಿ ಬಾದವಾಡಗಿ 10 ಕಿ.ಮೀ ಟೈಮ್ ಟ್ರಯಲ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
ಕುಸ್ತಿ ವಿಭಾಗದಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದಿದ್ದಾರೆ. ರಾಜವರ್ಧನ ಗಾಯಕವಾಡ (85 ಕೆ.ಜಿ) ಹಾಗೂ ಸಂಜೋತಾ ಸಂದಿಮನಿ (54 ಕೆ.ಜಿ) ತಮ್ಮ ಎದುರಾಳಿಗಳನ್ನು ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ನೇಹಾ ವಾಘೋಜಿ (39 ಕೆ.ಜಿ) ದ್ವೀತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದಿದ್ದಾರೆ. ಪ್ರೇಮಕುಮಾರ ಮುನ್ನೋಳ್ಳಿ (52 ಕೆ.ಜಿ), ಸುದರ್ಶನ ಚವ್ಹಾಣ (57 ಕೆ.ಜಿ), ಮಹೇಶ ಅಡಿಹುಡಿ (62 ಕೆ.ಜಿ), ಮಲ್ಲಿಕಾರ್ಜುನ ಚಿಂಚಲಿ (48 ಕೆ.ಜಿ) ಹಾಗೂ ಪ್ರೀತಿ ಚೌರಿ (54 ಕೆ.ಜಿ) ತೃತೀಯ ಸ್ಥಾನ ಪಡೆದು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೈಕ್ಲಿಂಗ್ ಹಾಗೂ ಕುಸ್ತಿ ಎರಡೂ ವಿಭಾಗಗಳಲ್ಲಿ ಕ್ರೀಡಾ ವಸತಿ ನಿಯದ ಬಾಲಕ ಹಾಗೂ ಬಾಲಕಿಯರು ತೋರಿದ ಸಾಮೂಹಿಕ ಸಾಧನೆ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಕ್ರೀಡಾಪಟುಗಳ ನಿರಂತರ ಅಭ್ಯಾಸ, ಶಿಸ್ತು, ಪರಿಶ್ರಮ ಹಾಗೂ ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ.
ಕ್ರೀಡಾಪಟುಗಳ ಸಾಧನೆಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.



