ನಟ ಹಾಗೂ ರಾಜಕಾರಣಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷವು ಬಹುಮತಕ್ಕೆ ಸಮೀಪ ಬಂದು ವಿಫಲವಾಗಿರುವ ಬೆನ್ನಲ್ಲೇ, ಮೈತ್ರಿ ಸರ್ಕಾರ ರಚನೆಯ ಕಸರತ್ತು ಮುಂದುವರಿದಿದೆ. ಈ ಮಧ್ಯೆ ಎಐಎಡಿಎಂಕೆ ಪಕ್ಷದ ಉಪ-ಸಂಚಾಲಕರಾದ ಕೆ. ಪಿ. ಮುನುಸ್ವಾಮಿ ಅವರು, “ಪರಿಸ್ಥಿತಿ ಎಂಥದ್ದೇ ಇದ್ದರೂ ನಾವು ಟಿವಿಕೆ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ” ಎಂದು ತಿಳಿಸಿದ್ದಾರೆ.
ಬಹುಮತ ಸಂಖ್ಯೆ 118 ಶಾಸಕರ ಬಲವನ್ನು ಹೊಂದಲು ಟಿವಿಕೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಚನೆಗಾಗಿ ಅನ್ಯ ಪಕ್ಷಗಳ ಬೆಂಬಲ ಅತ್ಯಾವಶ್ಯಕವಾಗಿದೆ. ಕಾಂಗ್ರೆಸ್ ತನ್ನ 5 ಸದಸ್ಯರ ಬೆಂಬಲ ಘೋಷಿಸಿದ್ದು, ಇದರಿಂದ ಟಿವಿಕೆ ಸಂಖ್ಯಾಬಲ 113 ಕ್ಕೆ ಏರಿಕೆಯಾಗಿದೆ. ಇನ್ನು ಬಹುಮತ ಸಂಖ್ಯೆ ತಲುಪಲು 5 ಸಂಖ್ಯೆಗಳ ಕೊರತೆಯಿದೆ. ಈ ನಿಟ್ಟಿನಲ್ಲಿ ಟಿವಿಕೆ ಪಕ್ಷವು ಸಿಪಿಐ, ಸಿಪಿಐ(ಎಂ) ಹಾಗೂ ವಿಸಿಎಕೆ ಪಕ್ಷಗಳಿಗೆ ಬೆಂಬಲ ಕೋರಿ ಪತ್ರ ಬರೆದಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಎರಡೂವರೆ ಲಕ್ಷ ಅರೆಸೇನಾ ಪಡೆಗಳಿದ್ದೂ ಹಿಂಸಾಚಾರ ಭುಗಿಲೆದ್ದರೆ ಅದರ ಜವಾಬ್ದಾರಿ ಹೊರುವವರು ಯಾರು?
ಇನ್ನೊಂದು ಕಡೆ, ಸರ್ಕಾರ ರಚನೆಯ ಹಕ್ಕು ಮಂಡಿಸಲು ಟಿವಿಕೆ ಮುಖ್ಯಸ್ಥ ವಿಜಯ್ ಅವರು ಈಗಾಗಲೇ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಆದರೆ ಸ್ಪಷ್ಟ ಬಹುಮತ ಇಲ್ಲದ ಕಾರಣ, ಬಹುಮತ ಸಂಖ್ಯೆಯೊಂದಿಗೆ ಬನ್ನಿ ಎಂದು ರಾಜ್ಯಪಾಲರು ಜೋಸೆಫ್ ವಿಜಯ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಳಂಬವಾಗುವ ಸಾಧ್ಯತೆಗಳಿವೆ. ಮೇ 5 ರಂದು ತಮಿಳುನಾಡು ರಾಜ್ಯಪಾಲರು 16ನೇ ವಿಧಾನಸಭೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.




