ವಿಶ್ಲೇಷಣೆ |ಕರ್ನಾಟಕದ ಜನ ರಾಜಕೀಯ ಅಪ್ರಬುದ್ಧರಲ್ಲ ಎಂದು ತೋರಿಸಿಕೊಟ್ಟಿದ್ದಾರೆ

Date:

ರಾಹುಲ್ ಗಾಂಧಿ ಸಾಮಾನ್ಯರಂತೆ ಜನರೊಂದಿಗೆ ಬೆರೆತು ಪ್ರಚಾರ ಮಾಡಿದ್ದು, ಜೊತೆಗೆ ರಾಜ್ಯದ ಪ್ರಗತಿಪರ ಸಂಘಟನೆಗಳು, ಬುದ್ಧಿಜೀವಿಗಳು, ರೈತ ಸಂಘಗಳು, ಕಾರ್ಮಿಕ ಸಂಘಟನೆಗಳು, ಎಡಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಬೆಂಬಲಿಸಿದ್ದು ಕೂಡ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿವೆ.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಹತ್ವದ ಗೆಲುವು ಸಾಧಿಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮಹತ್ವದ ಗೆಲುವಲ್ಲ; ರಾಜ್ಯಕ್ಕೆ, ದೇಶಕ್ಕೆ ಮತ್ತು ಮುಕ್ತ ವಾತಾವರಣ ಬಯಸುವ ಎಲ್ಲರಿಗೂ ಇದು ಮಹತ್ವದ ಗೆಲುವು.

ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇದ್ದರೂ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಸಂಪನ್ಮೂಲ ಬರಲಿಲ್ಲ. ಜಿಎಸ್‍ಟಿ ಪರಿಹಾರ ಕೊಡದಿರುವಾಗ, 15ನೇ ಹಣಕಾಸು ಸಮಿತಿ ಶಿಫಾರಸ್ಸು ಮಾಡಿದ ಹೆಚ್ಚುವರಿ ಅನುದಾನ ಕೊಡದಿರುವಾಗ ಬಿಜೆಪಿ ಎಂಪಿಗಳು ಪ್ರಶ್ನಿಸಲಿಲ್ಲ. ನಂದಿನಿಯನ್ನು ಅಮುಲ್ ಜೊತೆ ಮರ್ಜ್ ಮಾಡುವ ಕೇಂದ್ರದ ಯೋಜನೆಗೂ ಬಿಜೆಪಿ ಪ್ರತಿನಿಧಿಗಳು ವಿರೋಧ ವ್ಯಕ್ತ ಪಡಿಸಿಲ್ಲ. ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಹಿಂದಿ ಮಾಧ್ಯಮ ಇರಬೇಕು, ಕೇಂದ್ರ ಸರಕಾರದ ಇಲಾಖೆಗಳಲ್ಲಿ ನೇಮಕಾತಿಗೆ ನಡೆಸುವ ಪ್ರವೇಶ ಪರೀಕ್ಷೆಗಳನ್ನು ಹಿಂದಿಯಲ್ಲೇ ನಡೆಸಬೇಕು ಎನ್ನುವ ಅಧಿಕೃತ ಭಾಷೆ ಮೇಲಿನ ವರದಿಯನ್ನೂ ಬಿಜೆಪಿ ಪ್ರತಿನಿಧಿಗಳು ಪ್ರತಿಭಟಿಸಲಿಲ್ಲ. ಮೇಲಿನ ಎಲ್ಲವೂ ರಾಜ್ಯದ ಸ್ವಾಯತ್ತತೆಯನ್ನು ಪ್ರಶ್ನಿಸುವ ಕ್ರಮಗಳು. ಇಂದಿನ ರಾಜಕಾರಣಿಗಳಿಗೆ ಮುಂದಿನ ಜನಾಂಗದ ಭವಿಷ್ಯಕ್ಕಿಂತ ಹೆಚ್ಚು ಮುಂದಿನ ಚುನಾವಣೆಯಲ್ಲಿ ತಮ್ಮ ಭವಿಷ್ಯವೇ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ತಮ್ಮ ಚುನಾವಣ ಭವಿಷ್ಯ ಇದೇ ರಾಜ್ಯದ ಜನರ ಮೇಲೆ ನಿಂತಿದ ಎನ್ನುವ ಕನಿಷ್ಠ ಅರಿವು ಕೂಡ ಇಲ್ಲದಿರುವುದು ವಿಚಿತ್ರ ಆದರೂ ನಿಜ.

ಇಂತಹ ಸ್ಥಿತಿಗೆ ಬಹುಮುಖ್ಯ ಕಾರಣ ಎಪ್ಪತ್ತು, ಎಂಬತ್ತರ ದಶಕದಲ್ಲಿ ಕಾಂಗ್ರೆಸ್ ಪಕ್ಷ ನಡೆದ ದಾರಿಯಲ್ಲಿ ಬಿಜೆಪಿ ನಡೆಯತ್ತಿರುವುದು. ಕಾಂಗ್ರೆಸ ಪ್ರಬಲ ಪಕ್ಷವಾಗಿದ್ದ ಸಂದರ್ಭದಲ್ಲಿ ʼಕೇಂದ್ರದ ನಾಯಕರು ಬಂದು ಪ್ರಚಾರ ಮಾಡಿದರೆ ವಿದ್ಯುತ್ ಕಂಬ ನಿಲ್ಲಿಸಿದರೂ ಗೆಲ್ಲುತ್ತಾರೆʼ ಎನ್ನುವ ನಂಬಿಕೆ ಇತ್ತು. ಹೆಚ್ಚು ಕಡಿಮೆ ಅದೇ ಸ್ಥಿತಿಗೆ ಬಿಜೆಪಿ ಪಕ್ಷ ಕೂಡ ತಲುಪಿದೆ. ಬಿಜೆಪಿ ಅಧಿಕಾರದಲ್ಲಿದ್ದ ನಾಲ್ಕು ವರ್ಷಗಳಲ್ಲಿ ಮಾಡಿದ ಬಹುದೊಡ್ಡ ಸಾಧನೆ ಎಂದರೆ ಮೀತಿ ಮೀರಿದ ಭ್ರಷ್ಟಾಚಾರ, ಹಿಜಾಬ್, ಆಜಾನ್, ಹಲಾಲ್ ಹೆಸರಲ್ಲಿ ನಡೆಸಿದ ಕೋಮುಗಲಭೆಗಳು, ಪಠ್ಯ ಪರಿಷ್ಕರಣೆ ಹೆಸರಲ್ಲಿ ತಮ್ಮ ಪಕ್ಷದ ಅಜೆಂಡಾವನ್ನು ತುರುಕಿಸಲು ಪ್ರಯತ್ನಿಸಿದ್ದು, ಮತಾಂತರ ನಿಷೇಧ ಕಾಯಿದೆ, ಗೋಹತ್ಯೆ ನಿಷೇಧ ಕಾಯಿದೆಗಳನ್ನು ಜಾರಿಗೆ ತಂದು ತಳಸ್ತರದ ಜನರ ಬದುಕಿನ ಹಕ್ಕನ್ನೇ ಕಿತ್ತುಕೊಂಡದ್ದು ಇವೆಲ್ಲ ಇವರ ಸಾಧನೆಗಳು.

ತಮ್ಮ ದುರಾಡಳಿತದಿಂದ ಸೋಲು ಖಚಿತ ಎನ್ನುವುದು ಖಾತ್ರಿ ಆದ ನಂತರ ಕೇಂದ್ರದ ನಾಯಕರನ್ನು ವಾರಗಟ್ಟಲೆ ಗಲ್ಲಿಗಲ್ಲಿಗಳಲ್ಲಿ ಮೆರವಣಿಗೆ ಮಾಡಿದರು. ಕರ್ನಾಟಕದ ಜನರು ಕೇರಳ ಅಥವಾ ತಮಿಳುನಾಡಿನ ಜನರಂತೆ ಯಾವುದೋ ಒಂದು ಐಡಿಯಲಾಜಿಗೆ ಕಮಿಟ್ ಆಗಿಲ್ಲ. ಹಾಗೆಂದು ಅವರು ರಾಜಕೀಯ ಅಪ್ರಬುದ್ಧರಲ್ಲ. ಬಹುಮುಖ್ಯವಾಗಿ ಕರ್ನಾಟಕದ ಬಹುತೇಕ ಜನರು ಕೋಮುವಾದಿಗಳಲ್ಲ. ತಮ್ಮ ಬದುಕು ಕಟ್ಟಿಕೊಳ್ಳಲು ಮತ್ತೊಬ್ಬರ ಬದುಕನ್ನು ನಾಶ ಮಾಡುವುದನ್ನು ಇಷ್ಟಪಡುವವರಲ್ಲ. ಕರ್ನಾಟಕದ ಜನರ ಇವೇ ಗುಣಗಳು ಕೋಮುವಾದಿ ರಾಜಕೀಯನ್ನು ತಿರಸ್ಕರಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಹೋರಾಟದ ಕೊಡುಗೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಇಡೀ ಚುನಾವಣೆಯನ್ನು ಒಬ್ಬಿಬ್ಬರು ನಾಯಕರ ಸುತ್ತ ಕಟ್ಟುವ ಬದಲು ಕಲೆಕ್ಟಿವ್ ಹೋರಾಟ ಮಾಡಿದ್ದು, ಕೇಂದ್ರದ ನಾಯಕರು, ಪಕ್ಷದ ಅಧ್ಯಕ್ಷರು, ರಾಜ್ಯದ ನಾಯಕರು ಎಲ್ಲರೂ ಲೋಪ್ರೊಫೈಲ್ ಪ್ರಚಾರ ಮಾಡಿದ್ದು, ರಾಹುಲ್ ಗಾಂಧಿ ಸಾಮಾನ್ಯರಂತೆ ಜನರೊಂದಿಗೆ ಬೆರೆತು ಪ್ರಚಾರ ಮಾಡಿದ್ದು, ಇವೆಲ್ಲವೂ ಕಾಂಗ್ರೆಸ್ ಗೆಲುವಿನಲ್ಲಿ ಪಾತ್ರ ವಹಿಸಿವೆ. ಇವುಗಳೊಂದಿಗೆ ರಾಜ್ಯದ ಪ್ರಗತಿಪರ ಸಂಘಟನೆಗಳು, ಬುದ್ಧಿಜೀವಿಗಳು, ರೈತ ಸಂಘಗಳು, ಕಾರ್ಮಿಕ ಸಂಘಟನೆಗಳು, ಎಡಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಬೆಂಬಲಿಸಿದ್ದು ಕೂಡ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿವೆ.

ಹಿಂದೆ ಸೋಶೀಯಲ್ ಮೀಡಿಯಾ ಬಳಸುವಲ್ಲಿ ಕಾಂಗ್ರೆಸ್ ಪಕ್ಷ ಹಿಂದೆ ಇತ್ತು. ಆದರೆ ಈ ಬಾರಿ ಬಿಜೆಪಿಯನ್ನು ಮೀರುವಷ್ಟು ಪರಿಣಾಮಕಾರಿಯಾಗಿ ಪಕ್ಷ ಸೋಶೀಯಲ್ ಮೀಡಿಯಾವನ್ನು ಬಳಸಿದೆ. ಮೀಡಿಯಾ ಮತ್ತು ಕಾರ್ಯಕರ್ತರ ಮೂಲಕ ತನ್ನ ಗ್ಯಾರಂಟಿಗಳನ್ನು ಮನೆಮನೆಗೂ ತಲುಪಿಸುವಲ್ಲಿ ಅದು ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷದ ಓಟ್‌ ಶೇರ್ ಮತ್ತು ಗೆದ್ದ ಸೀಟುಗಳ ಸಂಖ್ಯೆ ನೋಡಿದರೆ ಪಕ್ಷದ 5 ಗ್ಯಾರಂಟಿಗಳು ಮಹಿಳೆಯರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಲೇಬೇಕು.

ಕಾಂಗ್ರೆಸ್ ಪಕ್ಷದ ವಿಧಾನಸಭೆ ಗೆಲುವು 2024ರ ಲೋಕಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿವೆ. ರಾಜ್ಯದ ಎಂಪಿ ಸೀಟುಗಳಿಗೆ ಸೀಮಿತವಾಗಿ ನೋಡುವುದಾದರೆ ಈ ಒಂದು ವರ್ಷದಲ್ಲಿ ಪಕ್ಷ ತನ್ನ 5 ಗ್ಯಾರಂಟಿಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಗೊಳಸಿದರೆ ಬಿಜೆಪಿ ಹಿಂದೆ ಗೆದ್ದ ಸೀಟುಗಳ ಅರ್ಧದಷ್ಟು ಎಂಪಿ ಸೀಟುಗಳನ್ನು ಗೆಲ್ಲುವುದು ಕಷ್ಟ. ಇನ್ನು ದೇಶವ್ಯಾಪಿ ಈ ಚುನಾವಣೆ ಪರಿಣಾಮದ ಬಗ್ಗೆ ಹೇಳುವುದಾದರೆ ಕರ್ನಾಟಕದಲ್ಲಿ ಅನುಸರಿಸಿದ ಲೋಪ್ರೊಫೈಲ್ ಪ್ರಚಾರವನ್ನು ದೇಶವ್ಯಾಪಿ ಅನುಸರಿಸಬೇಕು. ಇಲ್ಲಿ ಹೇಗೆ ರಾಹುಲ್ ಗಾಂಧಿ ಮತ್ತು ಅವರ ಅನರ್ಹತೆಯನ್ನು ಬದಿಗಿಟ್ಟು ಲೋಕಲ್ ಇಶ್ಯೂಸ್ ಮೇಲೆ ಪ್ರಚಾರವನ್ನು ಕೇಂದ್ರೀಕರಿಸಲಾಗಿತ್ತೋ, ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧೀಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದೆ ಕಾಂಗ್ರೆಸ್ ಇತರ ವಿರೋಧ ಪಕ್ಷಗಳನ್ನು ಸಂಘಟಿಸಲು ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ವಿವಿಧ ರಾಜ್ಯಗಳಲ್ಲಿರುವ ರಾಜ್ಯ ನಾಯಕರು ಲೋಕಸಭೆ ಚುನಾವಣೆಯಲ್ಲಿ ಮುಖ್ಯ ಮುಖಗಳಾಗಿ ಬಿಂಬಿತವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ ಎಲ್ಲರನ್ನು ಒಟ್ಟು ತಂದು ಒಂದು ಕಲೆಕ್ಟಿವ್ ನಾಯಕತ್ವ ನೀಡುವುದಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಗ್ಯಾರಂಟಿಗಳ ಪಾತ್ರ ಲೋಕಸಭೆ ಚುನಾವಣೆಯಲ್ಲೂ ಇದೆ. ಆದರೆ ಇವುಗಳೊಂದಿಗೆ ಹಲವು ದೂರಗಾಮಿ ಅಜೆಂಡಾಗಳನ್ನು ಪಕ್ಷ ಮುಂದಿಡುವ ಅವಶ್ಯಕತೆ ಇದೆ. ದೇಶದಲ್ಲಿ ಸಂವಿಧಾನಿಕ ಆಡಳಿತ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ಪಕ್ಷ ಮುಂದಿಡಬೇಕು. ಮಾಧ್ಯಮಗಳನ್ನು ಉದ್ದಿಮೆಗಳ ಹಿಡಿತದಿಂದ ಮುಕ್ತಗೊಳಿಸಿ ಸಾರ್ವಜನಿಕ ನಿಗಾಕ್ಕೆ ವಹಿಸುವುದು, ಎಲ್ಲ ಸೆಂಟ್ರಲ್ ಏಜನ್ಸಿಗಳನ್ನು ಸ್ವಾಯತ್ತಗೊಳಿಸುವುದು, ಆಡಳಿತವನ್ನು ವಿಕೇಂದ್ರೀಕರಣಗೊಳಿಸುವುದು, ನ್ಯಾಯಾಂಗವನ್ನು ಸುಧಾರಿಸುವುದು ಇತ್ಯಾದಿ ದೂರಗಾಮಿ ಕಾರ್ಯಕ್ರಮಗಳು ಪಕ್ಷದ ಹೋರಾಟ ಆಡಳಿತದಲ್ಲಿರುವ ಪಕ್ಷವನ್ನು ಇಳಿಸಿ ಅಧಿಕಾರ ಪಡೆಯುವುದಕ್ಕೆ ಸೀಮಿತವಾಗಿಲ್ಲ ಎನ್ನುವುದನ್ನು ತೋರಿಸುತ್ತವೆ.

ಇದನ್ನು ಓದಿ ವಿಶ್ಲೇಷಣೆ | ಬೇರು ಕಳೆದುಕೊಂಡ ರಾಜಕೀಯದ ಪಡಿಪಾಟಲು

ಬಿಜೆಪಿಯ ಹಿಂದುತ್ವವನ್ನು ಒಪ್ಪದ ಚಿಂತಕರ ದೃಷ್ಟಿಯಿಂದ ನೋಡಿದರೆ ಬಿಜೆಪಿ ಸೋಲು ಗ್ರಹಣದಿಂದ ಬಿಡುಗಡೆಗೊಂಡ ಅನುಭವ ನೀಡುತ್ತದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ತನಕ ನಾವು (ಜನರು) ಸಂವಿಧಾನವನ್ನು ಅನುಷ್ಟಾನಗೊಳಿಸಲು ಪಕ್ಷಗಳಿಗೆ 5 ವರ್ಷಗಳ ಅವಕಾಶ ನೀಡುತ್ತೇವೆ ಎನ್ನುವ ನಂಬಿಕೆ ಇತ್ತು. ಈ ನಂಬಿಕೆಯಿಂದಲೇ ನಾವು ಸರಕಾರಗಳ ನಿಲುವುಗಳನ್ನು, ಪಾಲಿಸಿಗಳನ್ನು ನಿರ್ಭಿತಿಯಿಂದ ವಿಮರ್ಶೆ ಮಾಡುತ್ತಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಕಲ್ಪನೆಯೇ ಅಡಿಮೇಲಾಯಿತು. ಪಕ್ಷ ಮತ್ತು ಅದು ನಡೆಸುವ ಸರಕಾರವೇ ದೇಶವಾಯಿತು. ಪಕ್ಷ ಅಥವಾ ಸರಕಾರದ ನೀತಿಗಳನ್ನು ವಿಮರ್ಶಿಸುವುದು ದೇಶದ್ರೋಹಿ ಕ್ರಮವಾಯಿತು. ಇವೆಲ್ಲವೂ ಉಸಿರುಗಟ್ಟಿಸುವ ಪರಿಸರ ಸೃಷ್ಟಿದ್ದವು. ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸೋಲು ಒಂದು ತಾತ್ಕಾಲಿಕ ಬಿಡುಗಡೆಯ ಅನುಭವವನ್ನು ನೀಡಿದೆ. ಇದು ತಾತ್ಕಾಲಿಕ ಏಕೆಂದರೆ ಬಿಜೆಪಿಯ ಸೋಲು ಬಿಜೆಪಿ ಪಕ್ಷದ ಐಡಿಯಲಾಜಿ ಸೋಲೆನ್ನೆಲು ಸಾಧ್ಯವಿಲ್ಲ. ಈ ಐಡಿಯಲಾಜಿ ಜನರ ನಕರಾತ್ಮಕ ಗುಣಗಳನ್ನು (ಸಣ್ಣತನ, ದ್ವೇಷ, ಸಿಟ್ಟು, ಆಹಂಕಾರಗಳನ್ನು) ಬಳಸಿಕೊಂಡು ಬೆಳೆಯುತ್ತಿದೆ. ಇವುಗಳಿಂದ ಸುಲಭ ಬಿಡುಗಡೆ ಇಲ್ಲ.

ಪ್ರೊ ಚಂದ್ರ ಪೂಜಾರಿ
+ posts

ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಚಂದ್ರ ಪೂಜಾರಿ
ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತೆಲಂಗಾಣ ಫಲಿತಾಂಶ: ಕೆಸಿಆರ್ ಸರ್ವಾಧಿಕಾರಕ್ಕೆ ಏಟು; ಕಾಂಗ್ರೆಸ್ ಗ್ಯಾರಂಟಿಗಳಿಗೆ ಓಟು

2014ರಿಂದಲೂ ಕಾಂಗ್ರೆಸ್ ತೆಲಂಗಾಣದ ಗದ್ದುಗೆ ಮೇಲೆ ಕಣ್ಣಿಟ್ಟಿತ್ತು. ಈ ಬಾರಿ ಕರ್ನಾಟಕದಲ್ಲಿ...

ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ...

ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರಾಜಸ್ಥಾನ ರಾಜ್ಯದ 199 ವಿಧಾನಸಭಾ ಕ್ಷೇತ್ರಗಳ ಪೈಕಿ ಮಧ್ಯಾಹ್ನ 12 ಗಂಟೆ...

ಛತ್ತೀಸ್‌ಗಢ ಮತ ಎಣಿಕೆ: ಕ್ಷಣದಿಂದ ಕ್ಷಣಕ್ಕೆ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕುತೂಹಲದಿಂದ ಕೂಡಿದ್ದು ಕಾಂಗ್ರೆಸ್ ಹಾಗೂ...