ಚುನಾವಣೆ 2023 | ಸುದೀಪ್ ರಾಜಕೀಯವಾಗಿ ಚಾಣಾಕ್ಷ, ಬಿಸಿನೆಸ್‌ನಲ್ಲಿ ಬುದ್ಧಿವಂತ

Date:

ಸಿನಿಮಾ ನಟರು ಅಧಿಕಾರದಲ್ಲಿರುವ ಪಕ್ಷಕ್ಕೆ ಬಹಿರಂಗ ಬೆಂಬಲ ಘೋಷಿಸುವುದಕ್ಕೆ ಬಹುತೇಕ ಆರ್ಥಿಕ ಕಾರಣಗಳೇ ಇರುತ್ತವೆ ಎನ್ನುವುದು ಅನುಭವವೇದ್ಯ. ಸುದೀಪ್ ಮೇಲೂ ಐಟಿ ದಾಳಿ ನಡೆದಿತ್ತು. ಇನ್ನೊಮ್ಮೆ ದಾಳಿ ನಡೆಯುವ ಸಂಭವವೂ ಈ ನಿರ್ಧಾರಕ್ಕೆ ಕಾರಣ ಆಗಿರಬಹುದು.

ಚಿತ್ರನಟ ಸುದೀಪ್ ಯಾವ ರಾಜಕಾರಣಿಗಳಿಗೂ ಕಡಿಮೆಯಿಲ್ಲ. ನಿನ್ನೆ ಅವರ ಪತ್ರಿಕಾಗೋಷ್ಠಿ ನೋಡಿದವರಿಗೆ ಅದು ಸ್ಪಷ್ಟವಿದೆ. ಆದರೆ ಬೊಮ್ಮಾಯಿ ಮಾಮಾರನ್ನು ಬೆಂಬಲಿಸುವ ಸುದೀಪ್ ನಿರ್ಧಾರದ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಗೋಳೋ ಎಂದು ಅಳುತ್ತಿರುವುದು ತಮಾಷೆಯಾಗಿದೆ.

ಈತ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದರೆ ಇದೇ ಜನ ಇವತ್ತು ಆತನನ್ನು ವಾಚಾಮಗೋಚರವಾಗಿ ಹೊಗಳುತ್ತಿದ್ದರು. ಇನ್ನೊಬ್ಬ ವಾಲ್ಮೀಕಿ ಎಂದು ತಲೆ ಮೇಲೆ ಹೊರುತ್ತಿದ್ದರು. ಹೀಗೆ ಟೀಕಿಸುವವರಲ್ಲಿ ಕೆಲವರಂತೂ “ಈತ ಕಳಪೆ ನಟ, ಅಭಿನಯದ ಗಂಧ ಗಾಳಿ ಇಲ್ಲ” ಎನ್ನುತ್ತಿದ್ದಾರೆ!

ನಾನು ಸಿನಿಮಾ ಪತ್ರಕರ್ತನಾಗಿ ಸುದೀಪ್ ನನ್ನು ಹತ್ತಿರದಿಂದ ನೋಡಿದ್ದೇನೆ. ಮೊದಲ ಸಿನಿಮಾ ಸ್ಪರ್ಶ ದಲ್ಲಿ ಆತ್ಮವಿಶ್ವಾಸವೇ ಇಲ್ಲದ ಎಳಸಿನಂತೆ ಇದ್ದ ಸುದೀಪ್, ಅಭಿನಯಿಸುತ್ತಲೇ ನಟನಾಗಿ ಬೆಳೆದವನು. ಮೊದಲ ಸಲ ಸ್ಪರ್ಶ ಸಿನಿಮಾ ಸೆಟ್ ಗೆ ಭೇಟಿ ನೀಡಿದ ಪತ್ರಕರ್ತರ ತಂಡವನ್ನು ಎದುರಿಸಿದಾಗ ಆತ ನೋವಿನಿಂದ ಆಡಿದ ಮಾತುಗಳು ನನಗಿನ್ನೂ ನೆನಪಿದೆ. ಕಾಲು ಕುಂಟುತ್ತಿದ್ದ ಸುದೀಪ್ ಪತ್ರಕರ್ತರ ಮುಂದೆ ಸ್ವಲ್ಪ ತಡವಾಗಿ ಬಂದಾಗ ನಮ್ಮ ಫೈರ್ ಬ್ರ್ಯಾಂಡ್ ಪತ್ರಕರ್ತ ಬಿಳಿಗಡ್ಡದ ಮೂರ್ತಿಯವರು ಮುಖಮೂತಿ ನೋಡದೆ ಪ್ರಶ್ನೆಗಳನ್ನು ಎಸೆದದ್ದು, ಅದಕ್ಕೆ ಸುದೀಪ್ ತಡವರಿಸಿದ್ದು ಈಗಲೂ ನೆನಪಿದೆ. ಆಮೇಲೆ ಎಷ್ಟೋ ವರ್ಷಗಳ ಬಳಿಕ ಮೂರ್ತಿಯವರು ತಮ್ಮ ‘ಬಿಂಬ’ದ ವೇದಿಕೆಯಲ್ಲಿ ಅದೇ ಸುದೀಪ್‌ನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಶೇಷವಾಗಿ ಹೊಗಳಿದ್ದೂ ನೆನಪಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಳ್ಳೆಯ ಕಮರ್ಷಿಯಲ್ ಪಾತ್ರಗಳನ್ನು ಪಡೆಯುತ್ತಾ ಯಶಸ್ಸು ಕಾಣುತ್ತಾ ಸ್ಟಾರ್ ಆಗಿ ಬೆಳೆದ ಸುದೀಪ್, ಬಹುತೇಕ ಮ್ಯಾನರಿಸಂ ಗಳನ್ನೇ ನಂಬಿ ಮುನ್ನಡೆದ. ಬಹುಶಃ ಕೆಲವು ತಮಿಳು ನಿರ್ದೇಶಕರ ಕೈಗೆ ಸಿಕ್ಕಿದ್ದರೆ ಸುದೀಪ್ ನಟನೆಯಲ್ಲಿ ಇನ್ನಷ್ಟು ಎತ್ತರಕ್ಕೆ ಏರಬಹುದಿತ್ತು ಅಂತ ನನಗೆ ಆಗ ಅನ್ನಿಸುತ್ತಿತ್ತು.

ಇದನ್ನು ಓದಿದ್ದೀರಾ? ಸುದೀಪ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಟಿ ಸುದ್ದಿಗೋಷ್ಠಿಯ ಸಂಪೂರ್ಣ ವಿವರ

ಎಲ್ಲ ನಟರಂತೆ ರಾಗ ದ್ವೇಷಗಳಿರುವ, ನಟನಾ ಸೃಜನಶೀಲತೆಯ ಕುರಿತು ಅಷ್ಟೇನೂ ತಿಳಿವಳಿಕೆ ಹೊಂದಿರದ, ಆದರೆ ಬಿಸಿನಸ್ಸೇ ಮುಖ್ಯವಾಗಿರುವ ಚಿತ್ರರಂಗದಲ್ಲಿ ಹೇಗೆ ಸವಾಲುಗಳನ್ನು ಎದುರಿಸಿ ತಾರಾಪಟ್ಟ ಏರಬೇಕು ಎನ್ನುವುದರ ಕುರಿತು ಆತ ಅಪಾರ ಬುದ್ಧಿವಂತಿಕೆ ಹೊಂದಿದ್ದ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವತ್ತಿನ ಸಿನಿಮಾ ಯಶಸ್ಸು ಆತನ ಸ್ವಯಾರ್ಜಿತ ಗಳಿಕೆ ಎನ್ನುವುದೂ ಸ್ಪಷ್ಟ. ಸುತ್ತ ಮುತ್ತ ಕಾಲೆಳೆಯುವವರೇ ತುಂಬಿರುವ ಚಿತ್ರರಂಗದಲ್ಲಿ ತನ್ನ ಉದ್ದ ಕಾಲುಗಳನ್ನು ರಕ್ಷಿಸಿಕೊಂಡು ಮೇಲೆ ಬಂದ ಆತನ ಬುದ್ಧಿವಂತಿಕೆಯ ಕುರಿತು ಹಲವು ಘಟನೆಗಳಿವೆ.

ಒಂದೊಮ್ಮೆ ಶಿವರಾಜ್ ಕುಮಾರ್ ಅಭಿಮಾನಿಗಳ ಜೊತೆಗೆ ಘರ್ಷಣೆಯ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ಆಗಿನ ವಿವಾದದ ಬೆಂಕಿಗೆ ತುಪ್ಪ ಸುರಿದವರೂ ಇದ್ದರು. ಆದರೆ ಶಿವಣ್ಣ ಮತ್ತು ಕಿಚ್ಚ ಇಬ್ಬರೂ‌ ಬುದ್ಧಿವಂತಿಕೆಯಿಂದ ವರ್ತಿಸಿ, ಪರಸ್ಪರ ಗೆಳೆಯರಾದರು. ತಾರಾ ಕ್ರಿಕೆಟ್‌ಗೂ ಮೆರುಗು ತಂದರು.

ಯಾವ ಸಿನಿಮಾ ಪಾರ್ಟಿ ಎಂದು ನೆನಪಾಗುತ್ತಿಲ್ಲ. ಅವತ್ತು ರಾತ್ರಿ ತಮ್ಮದೇ ಚಿತ್ರದ ಪಾರ್ಟಿಯಲ್ಲಿ ಕುಡಿಯುತ್ತಾ, ಗೋಡಂಬಿ ತಿನ್ನುತ್ತಾ ಕುಳಿತಿದ್ದ ಪತ್ರಕರ್ತರನ್ನು ನೋಡಿ ಸುದೀಪ್ ನನ್ನ ಜೊತೆ ಲಘುವಾದ ಕಾಮೆಂಟ್ ಒಂದನ್ನು ಮಾಡಿದ್ದರು. ತಕ್ಷಣ ನಾನು “ಇದು ಸರಿಯಾದ ಕಾಮೆಂಟ್ ಅಲ್ಲ. ಊಟಕ್ಕೆ ಕರೆದ ನೀವೇ ಈ ತರಹ ಹೇಳುವುದು ಅಸಹ್ಯ” ಎಂದೆ. ತಕ್ಷಣ ತಪ್ಪಿನ ಅರಿವಾದ ಸುದೀಪ್ ಮಾತು ತಿದ್ದಿಕೊಂಡಿದ್ದರು.

ಇನ್ನೊಮ್ಮೆ “ವಿಷ್ಣುವರ್ಧನ” ಚಿತ್ರದ ಮೊದಲ ಷೋ ದಿನ, “ವಿಷ್ಣುವರ್ಧನ್ ಅವರು ಇಲ್ಲವಾದ ತಕ್ಷಣ ಅವರ ಷೂ ಒಳಗೆ ಕಾಲು ತೂರಿಸುವ ಯತ್ನ ಇದಲ್ಲವೇ?” ಎಂಬ ನನ್ನ ಪ್ರಶ್ನೆಗೆ ಸುದೀಪ್ ಗರಂ ಆಗಿದ್ದರು. ಆದರೆ ಅದಾಗಲೇ ಅವರು ಸಿಟ್ಟನ್ನು ನುಂಗಿ ತಾಳ್ಮೆಯಿಂದ ಉತ್ತರಿಸುವುದನ್ನು ಕಲಿತಿದ್ದರು.

ನನ್ನ ಪ್ರಕಾರ ಸುದೀಪ್ ಅತ್ಯುತ್ತಮ ಅಭಿನಯ ಹೊರಬಂದದ್ದು ʼರಣ್ʼ ಎನ್ನುವ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಎದುರಿನ ಒಂದು ದೃಶ್ಯದಲ್ಲಿ. ಅಭಿನಯದ ಮೇರು ಪರ್ವತದಂತಿದ್ದ ಅಮಿತಾಭ್ ಎದುರೇ ಸವಾಲೆಸೆಯುವಂತೆ ನಟಿಸಿದ್ದ ದೃಶ್ಯವದು. ಆ ಬಳಿಕ ನೆನಪಾಗುವುದು ʼಈಗʼ ಎನ್ನುವ ಸಿನಿಮಾದ ಕೆಲವು ದೃಶ್ಯಗಳು. ಇನ್ನೂ ಕೆಲವು ದೃಶ್ಯಗಳನ್ನು ಇನ್ನೊಮ್ಮೆ ನೆನಪಿಸಿಕೊಳ್ಳಬಹುದು.

ಈಗ ಆತ ಬೊಮ್ಮಾಯಿ ಮಾಮಾರಿಗೆ ಚುನಾವಣಾ ಬೆಂಬಲ ಘೋಷಿಸಿದ ಎಂದ ಮಾತ್ರಕ್ಕೆ ಆಗ ಪತ್ರಕರ್ತನಾಗಿ ನೋಡಿ ಬರೆದ ಲೇಖನಗಳಿಗೆ ಅರ್ಥವಿಲ್ಲ ಎಂದರೆ ಅದು ಮೂರ್ಖತನದ ಮಾತಾಗುತ್ತದೆ.

ಹಾಗೆಂದು ಸುದೀಪ್ ಇವತ್ತು ರಾಜಕೀಯವಾಗಿ ತಳೆದ ನಿಲುವು ಸರಿಯೇ… ಎಂದರೆ ʼಖಂಡಿತಾ ಸರಿಯಲ್ಲʼ ಎಂದೇ ಹೇಳಬೇಕಾಗುತ್ತದೆ. ತನಗೆ ಇಷ್ಟ ಬಂದ ಪಕ್ಷಕ್ಕೆ ಬೆಂಬಲ ನೀಡುವ ಸ್ವಾತಂತ್ರ್ಯ, ಹಕ್ಕು ಸುದೀಪ್ ಗೆ ಖಂಡಿತಾ ಇದೆ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದಾಗ, ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರಾದ, ಕೋಮು ವೈಷಮ್ಯವನ್ನೇ ಬಂಡವಾಳ ಮಾಡಿಕೊಂಡ ಪಕ್ಷವೊಂದರ ಅಭ್ಯರ್ಥಿಗಳಿಗೆ ಬಹಿರಂಗ ಬೆಂಬಲ ಘೋಷಿಸಿರುವುದು ಸುದೀಪ್ ಅವರ ರಾಜಕೀಯ ಅಪಕ್ವತೆಗೆ ಸಾಕ್ಷಿಯಂತಿದೆ.

ಸಿನಿಮಾ ನಟರು ಅಧಿಕಾರದಲ್ಲಿರುವ ಪಕ್ಷಕ್ಕೆ ಬಹಿರಂಗ ಬೆಂಬಲ ಘೋಷಿಸುವುದಕ್ಕೆ ಬಹುತೇಕ ಆರ್ಥಿಕ ಕಾರಣಗಳೇ ಇರುತ್ತವೆ ಎನ್ನುವುದು ಅನುಭವವೇದ್ಯ. ಸುದೀಪ್ ಮೇಲೂ ಐಟಿ ದಾಳಿ ನಡೆದಿತ್ತು. ಇನ್ನೊಮ್ಮೆ ದಾಳಿ ನಡೆಯುವ ಸಂಭವವೂ ಈ ನಿರ್ಧಾರಕ್ಕೆ ಕಾರಣ ಆಗಿರಬಹುದು. ಅಥವಾ ಅವರೇ ಹೇಳಿದ “ನಾನು ಕಷ್ಟದಲ್ಲಿ ಇದ್ದಾಗ ಬೊಮ್ಮಾಯಿ ಮಾಮಾ ನನಗೆ ಸಹಾಯ ಮಾಡಿದ್ದಾರೆ” ಎನ್ನುವುದೂ ನಿಜ ಇರಬಹುದು. ಈಗ ಕಷ್ಟದಲ್ಲಿರುವ ಬೊಮ್ಮಾಯಿ ಮಾಮಾ ಅವರಿಗೆ ಸುದೀಪ್ ನೆರವು ಅನಿವಾರ್ಯ ಆಗಿರಬಹುದು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೂ ಸುದೀಪ್ ಅವರ ಮನೆಗೆ ತೆರಳಿ ಮಾತುಕತೆಯಾಡಿ‌ ರಾಜಕೀಯ ರೂಮರ್ ಗಳಿಗೆ ಜೀವ ತುಂಬಿದ್ದುಂಟು. ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟಲ್ಲಿ ಸುದೀಪ್ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆಗ ರೋಮಾಂಚಿತರಾಗಿದ್ದವರೇ ಈಗ ಸುದೀಪ್ ವಿರುದ್ಧ ಜಾಲತಾಣಗಳಲ್ಲಿ ಮುಗಿಬಿದ್ದಿರುವುದು ಕುತೂಹಲಕರ.

ಸುದೀಪ್ ರಾಜಕೀಯವಾಗಿ ಚಾಣಾಕ್ಷ, ಬ್ಯುಸಿನೆಸ್ ನಲ್ಲಿ ಬುದ್ಧಿವಂತ ಎನ್ನುವುದು ಈಗ ಮತ್ತೆ ಸಾಬೀತಾಗಿದೆ. ಅವರು ಬೆಂಬಲಿಸಿದ ಕಾರಣಕ್ಕೆ ಬಿಜೆಪಿಗೆ 15 ಸೀಟುಗಳು ಹೆಚ್ಚಿಗೆ ಬರುತ್ತವೆ, ಅದರಿಂದಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಕೆಲವು ಪತ್ರಕರ್ತರು ರೋಮಾಂಚನಗೊಂಡು ಕುಣಿದಾಡುವುದೂ ನಡೆದಿದೆ.

ಕರ್ನಾಟಕದ ಮತದಾರರನ್ನು under estimate ಮಾಡುವುದು ಕಷ್ಟ. “ಚೆನ್ನೈ ಎಕ್ಸ್‌ ಪ್ರೆಸ್ ” ಸಿನಿಮಾದಲ್ಲಿ ಶಾರೂಕ್ ಖಾನ್ ನ ಜನಪ್ರಿಯ ಡೈಲಾಗ್ ಅನ್ನು ಕಿಚ್ಚ ಸುದೀಪ್ ಈಗ ನೆನಪಿಸಿಕೊಳ್ಳುವುದು ಒಳ್ಳೆಯದು. “Don’t under estimate the power of a common man”. ಇನ್ನೇನು ಕರ್ನಾಟಕದ ರಾಜಕೀಯ ಕ್ಷಿತಿಜದಲ್ಲಿ ಲುಂಗಿ ಡ್ಯಾನ್ಸ್ ಶುರುವಾಗಿದೆ. ಯಾರ ಲುಂಗಿ ಕಳಚಿ ಬೀಳುತ್ತೊ ಕಾದು ನೋಡೋಣ.

ಬಿ ಎಂ ‌ ಹನೀಫ್
+ posts

ಹಿರಿಯ ಪತ್ರಕರ್ತ, ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಬಿ ಎಂ ‌ ಹನೀಫ್
ಬಿ ಎಂ ‌ ಹನೀಫ್
ಹಿರಿಯ ಪತ್ರಕರ್ತ, ಲೇಖಕ

1 COMMENT

  1. ತುಂಬಾ ಅದ್ಬುತವಾದ ಲೇಖನ ಸರ್ ಒಬ್ಬ ನಟನಾಗಿ ರಾಜಕೀಯಕ್ಕೆ ಬರಲೇಬಾರ್ದು.
    ಅವರ ಉದ್ದೇಶ ಬೇರೇನೇ ಇರ್ಬಹುದು ಸರ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ; ಕಿಶೋರ್ ಬರಹ ಇಲ್ಲಿದೆ!

ಪರಿವಾರವಾದ.. ಸ್ವಜನಪಕ್ಷಪಾತ.. ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮೋದಿ...

27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆ್ಯಂಗ್ರಿ ರಾಂಟ್‌ಮ್ಯಾನ್’ ಖ್ಯಾತಿಯ ಯೂಟ್ಯೂಬರ್  ಅಬ್ರದೀಪ್ ಸಾಹ!

ಸೋಷಿಯಲ್ ಮೀಡಿಯಾದಲ್ಲಿ 'ಆ್ಯಂಗ್ರಿ ರಾಂಟ್‌ಮ್ಯಾನ್' ಎಂದೇ ಜನಪ್ರಿಯವಾಗಿದ್ದ ಹಿಂದಿ ಯೂಟ್ಯೂಬರ್ ಅಬ್ರದೀಪ್...

ಬ್ರಾಹ್ಮಣರಿಂದ ಬ್ರಾಹ್ಮಣರಿಗೆ ಮೋಸ: 24 ಲಕ್ಷ ಕಳೆದುಕೊಂಡು ಭಿಕ್ಷೆ ಬೇಡುತ್ತಿರುವ ಹೆಬ್ಬಾರ್

ಹೆಬ್ಬಾರ್ ಒಬ್ಬರೇ ಅಲ್ಲ, ಬೆಂಗಳೂರಿನ ಬಸವನಗುಡಿಯ ಬ್ರಾಹ್ಮಣರೆಲ್ಲರೂ ಗುರುರಾಘವೇಂದ್ರ ಬ್ಯಾಂಕಿನ ಗ್ರಾಹಕರೇ...

ಹೇಮಾ ಮಾಲಿನಿ ವಿರುದ್ಧ ಹೇಳಿಕೆ: ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾಗೆ 2 ದಿನ ಪ್ರಚಾರ ನಿಷೇಧ

ಬಿಜೆಪಿ ಸಂಸದೆ ಹೇಮಾ ಮಾಲಿನಿ ವಿರುದ್ಧ ಗೌರವಕ್ಕೆ ಕುಂದು ತರುವಂತಹ ಹೇಳಿಕೆ...