ಈ ದಿನ ಸಂಪಾದಕೀಯ | ಸೋಲಿನ ಭಯದಿಂದ ಸಿನಿಮಾ ತಾರೆಯರ ಹಿಂದೆ ಬಿದ್ದಿದೆಯೇ ಬಿಜೆಪಿ?

Date:

ನಟ, ಕ್ರೀಡಾಕಾರ, ರಾಜಕಾರಣಿ ಯಾರೇ ಆಗಿರಲಿ; ಸಾರ್ವಜನಿಕ ಜೀವನದಲ್ಲಿ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಷ್ಠುರ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ನಡೆಗಳ ನಡುವೆ ಸ್ಪಷ್ಟ ಹಾಗೂ ಖಚಿತ ಗೆರೆ ಇರಬೇಕಾಗುತ್ತದೆ.

‘ಕಿಚ್ಚ’ ಎಂದು ಚಿತ್ರ ಪ್ರೇಮಿಗಳ ನಡುವೆ ಖ್ಯಾತರಾಗಿರುವ ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ. ‘ನನ್ನ ಬೆಂಬಲ ಪಕ್ಷಕ್ಕಲ್ಲ, ವ್ಯಕ್ತಿಗೆ’ ಎಂದು ಸುದೀಪ್ ವಿಚಿತ್ರ ಸಮಜಾಯಿಷಿ ನೀಡಿದರೆ, ‘ನಾನು ಹೇಳಿದ ಕಡೆ ಸುದೀಪ್ ಪ್ರಚಾರ ಮಾಡುತ್ತಾರೆ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಾಲ್ಮೀಕಿ ಸಮುದಾಯದವರಾದ ಸುದೀಪ್ ಮೂಲಕ ಆ ಸಮುದಾಯದ ಮತ ಗಳಿಸುವ ತಂತ್ರ ಬಿಜೆಪಿಯ ನಡೆಯ ಹಿಂದಿದೆ. ಹಾಗೆಯೇ ತಮ್ಮ ಸಿನಿಮಾಗಳ ಮೂಲಕ ಅವರು ಗಳಿಸಿರುವ ಅಭಿಮಾನಿಗಳನ್ನು ತಮ್ಮ ಪಕ್ಷದೆಡೆಗೆ ಸೆಳೆದುಕೊಳ್ಳುವುದು ಕೇಸರಿ ಪಕ್ಷದ ಕಾರ್ಯತಂತ್ರವಾಗಿದೆ.

‘ನನಗೆ ಹಿಂದೆ ಬೊಮ್ಮಾಯಿ ಅವರು ಸಹಾಯ ಮಾಡಿದ್ದಾರೆ. ಹಾಗಾಗಿ ನಾನು ಇಂದು ಅವರ ಪರ ನಿಂತಿದ್ದೇನೆ’ ಎಂದು ಬಿಜೆಪಿ ತಾರಾ ಪ್ರಚಾರಕರಾದ ಸುದೀಪ್ ಹೇಳಿದ್ದಾರೆ. ಸುದೀಪ್ ಅವರಿಗೆ ಬೊಮ್ಮಾಯಿ ಅವರು ಮಾಡಿರುವ ಸಹಾಯ ವೈಯಕ್ತಿಕವಾದದ್ದು. ಆದರೆ, ಸುದೀಪ್ ಚುನಾವಣಾ ಪ್ರಚಾರ ಮಾಡಲು ಹೊರಟಿರುವುದು ಕೇವಲ ಬೊಮ್ಮಾಯಿ ಪರ ಅಲ್ಲ; ಅವರ ಬಿಜೆಪಿ ಪರ. ಅದು ಬೊಮ್ಮಾಯಿ ಅವರ ವೈಯಕ್ತಿಕ ವಿಚಾರವಾಗಿ ಉಳಿಯುವುದಿಲ್ಲ. ಅದು ಒಂದು ನಾಡಿನ ಭವಿಷ್ಯದ ಪ್ರಶ್ನೆ. ಐದು ವರ್ಷಗಳ ಕಾಲ ಯಾರು ಆಡಳಿತ ನಡೆಸಬೇಕು ಎಂಬುದನ್ನು ನಿರ್ಧರಿಸುವ; ನೀತಿ ನಿರೂಪಣೆ, ಅಭಿವೃದ್ಧಿ ಕೆಲಸಗಳ ಮೂಲಕ ಜನರ ಬದುಕನ್ನು ಹಸನುಗೊಳಿಸುವ ಮಹತ್ತರ ಜವಾಬ್ದಾರಿ ಹೊರಬೇಕಾದವರನ್ನು ಆರಿಸುವ ಪ್ರಕ್ರಿಯೆ.

ನಟ, ಕ್ರೀಡಾಕಾರ, ರಾಜಕಾರಣಿ ಯಾರೇ ಆಗಿರಲಿ; ಸಾರ್ವಜನಿಕ ಜೀವನದಲ್ಲಿ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲವು ನಿಷ್ಠುರ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರ ವೈಯಕ್ತಿಕ ಬದುಕು ಮತ್ತು ರಾಜಕೀಯ ನಡೆಗಳ ನಡುವೆ ಸ್ಪಷ್ಟ ಹಾಗೂ ಖಚಿತ ಗೆರೆ ಇರಬೇಕಾಗುತ್ತದೆ. ಬುದ್ಧಿವಂತರಂತೆ ಮಾತನಾಡುವ ಸುದೀಪ್‌ಗೆ ಇದು ತಿಳಿಯದಿರುವುದು ವಿಚಿತ್ರವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವರನಟ ರಾಜ್‌ಕುಮಾರ್ ಅವರಿಗೆ ಸಾರೇಕೊಪ್ಪ ಬಂಗಾರಪ್ಪ ಬೀಗರಾಗಿದ್ದರು. ಆದರೆ, ರಾಜ್‌ಕುಮಾರ್ ಎಂದೂ ಸಂಬಂಧದ ನೆಪ ಹೇಳಿಕೊಂಡು ಬಂಗಾರಪ್ಪ ಅವರ ಪರವಾಗಲಿ, ಅವರ ಪಕ್ಷದ ಪರವಾಗಲಿ ಚುನಾವಣಾ ಪ್ರಚಾರಕ್ಕೆ ಬರಲಿಲ್ಲ. ನಾಳೆ ಅವರ ಪಕ್ಷ ಏನೇ ತಪ್ಪು ಮಾಡಿದರೂ ಅದಕ್ಕೆ ತಾನೂ ಜವಾಬ್ದಾರನಾಗಬೇಕಾಗುತ್ತದೆ ಎನ್ನುವ ನೈತಿಕ ಎಚ್ಚರ ರಾಜ್‌ಕುಮಾರ್ ಅವರಲ್ಲಿತ್ತು. ಅದೇ ಅವರನ್ನು ರಾಜಕಾರಣಕ್ಕೆ ಬರದಂತೆ ತಡೆದಿತ್ತು. ಅದರ ಬಗ್ಗೆ ರಾಜ್‌ಕುಮಾರ್ ತಮ್ಮ ಎಂದಿನ ವಿನಯದಿಂದ ‘ರಾಜಕಾರಣ ನನಗೆ ಅರ್ಥವಾಗುವುದಿಲ್ಲ; ಅದು ನನ್ನ ಕ್ಷೇತ್ರವಲ್ಲ’ ಎಂದಿದ್ದರು. ಕೇವಲ ನಾಲ್ಕನೇ ತರಗತಿಯವರೆಗೆ ಓದಿದ್ದ ಅಣ್ಣಾವ್ರಿಗೆ ಇದ್ದ ವಿವೇಕ ಇಂಜಿನಿಯರಿಂಗ್ ಓದಿದ ಸುದೀಪ್‌ರಂಥವರಿಗೆ ಇಲ್ಲದಿರುವುದು ಖೇದಕರ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಯ ಹಸ್ತಗಳಿಗೆ ಮೆತ್ತಿದೆ ಇದ್ರೀಸ್ ನೆತ್ತರು

ಸುದೀಪ್ ಒಬ್ಬರೇ ಅಲ್ಲ; ದರ್ಶನ್, ರಿಷಬ್ ಶೆಟ್ಟಿ, ಯಶ್ ಮುಂತಾದವರನ್ನೂ ಬಿಜೆಪಿ ಸೆಳೆಯಲು ಯತ್ನಿಸುತ್ತಿದೆ. ಆಡಳಿತ ವಿರೋಧಿ ಅಲೆಯಿಂದ ಬಿಜೆಪಿಗೆ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ಧರ್ಮ, ಹಿಂದುತ್ವ ಎಂದು ಜನರ ಸಮಸ್ಯೆಗಳನ್ನು ಕೊಂಚವೂ ಲಕ್ಷಿಸದೇ ಆಡಳಿತ ನಡೆಸಿದ, ಬಡವರ ಬದುಕನ್ನು ಪಾತಾಳಕ್ಕೆ ತುಳಿದ ಬಿಜೆಪಿ, ಈಗ ಚುನಾವಣೆಯಲ್ಲಿ ಸೋಲುವ ಆತಂಕದಿಂದ ಸಿನಿಮಾ ತಾರೆಯರ ಬೆನ್ನು ಬಿದ್ದಿದೆ. ಅದರ ಭಾಗವಾಗಿ ಹಿಂದುತ್ವದ ಅಜೆಂಡಾಗೆ ಹೊಂದುವಂಥ ಚಿತ್ರಗಳ ಮೇಲೆ, ನಟ ನಟಿಯರ ಮೇಲೆ ಬಿಜೆಪಿ ವಿಶೇಷವಾಗಿ ಕಣ್ಣು ಇಟ್ಟಿದೆ. ಉತ್ತರದಲ್ಲಿ ಇದೇ ರೀತಿ ‘ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವಿಶೇಷ ಮುತುವರ್ಜಿಯಿಂದ ಪ್ರಚಾರ ಮಾಡಿತ್ತು. ಕನ್ನಡದಲ್ಲಿ ಇತ್ತೀಚಿನ ಚಿತ್ರಗಳ ಪೈಕಿ ಅವರ ನೆಚ್ಚಿನ ಚಿತ್ರ ‘ಕಾಂತಾರ’. ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ‘ಕಾಂತಾರ’ ಸಿನಿಮಾ ನೋಡಿ ಕೊಂಡಾಡಿದ್ದರು. ಮೋದಿ ಕರ್ನಾಟಕಕ್ಕೆ ಬಂದಿದ್ದ ವೇಳೆ ‘ಕಾಂತಾರ’ ಚಿತ್ರ ನಿರ್ಮಿಸಿದ ‘ಹೊಂಬಾಳೆ’ಯ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ, ಯಶ್ ಮುಂತಾದವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು.

ಕರಾವಳಿ ಮೂಲದ ನಟ ರಿಷಬ್ ಶೆಟ್ಟಿ ಹಿಂದಿನಿಂದಲೂ ತಾನು ಬಿಜೆಪಿ ಪರ ಎಂದು ಪ್ರರೋಕ್ಷವಾಗಿ ಸೂಚಿಸುತ್ತಲೇ ಬರುತ್ತಿದ್ದಾರೆ. ‘ಹೊಂಬಾಳೆ’ಯ ವಿಜಯ್ ಕಿರಗಂದೂರು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರ ಸಂಬಂಧಿ. ಇನ್ನು ನಟ ದರ್ಶನ್, ಯಶ್, ಸುಮಲತಾ ಮುಂತಾದವರದ್ದು ಒಂದು ಗುಂಪು ಎನ್ನಬಹುದಾದರೆ, ಆ ಗುಂಪಿನ ಮುಂದಾಳುಗಳು ರಾಕ್‌ಲೈನ್ ವೆಂಕಟೇಶ್ ಮತ್ತು ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ. ಇವರ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡು, ತನ್ನ ಲಾಭಕ್ಕೆ ಬಳಸಿಕೊಳ್ಳಲು ಹೊರಟಿದೆ ಎನ್ನುವ ಮಾತುಗಳಿವೆ.

ಧರ್ಮದ ಜೊತೆ ರಾಜಕಾರಣ ಸೇರಿದರೆ ಹಿಂಸೆ ಹುಟ್ಟುತ್ತದೆ ಎನ್ನುವ ಮಾತಿದೆ. ಅದೇ ರಾಜಕೀಯದ ಜೊತೆ ಸಿನಿಮಾ ಸೇರಿದರೆ ಅನೀತಿ ಹುಟ್ಟುತ್ತದೆ. ಇಂಥವುಗಳನ್ನು ಪ್ರೋತ್ಸಾಹಿಸುವ, ಇಂಥವರನ್ನು ಅನುಸರಿಸುವ ನಾಡಿಗೆ ಮತ್ತು ಜನತೆಗೆ ದುರಂತ ಕಾದಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...

ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?

ಹಿಟ್ಲರ್ ಮತ್ತು ಪುಟಿನ್ ಮಾಡಿದಂತೆ, ಮೋದಿ ಅವರು ದೇಶದಲ್ಲಿ ವಿರೋಧ ಪಕ್ಷಗಳಿಲ್ಲದಂತೆ,...

ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

ಮನಮೋಹನ್ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರಚಾರ ಬಯಸಲಿಲ್ಲ,...