ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಯಾದ ಕ್ಷಣದಿಂದಲೇ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಡುಗಡೆಯ ಮೊದಲ ದಿನ ಅಬ್ಬರದ ಕಲೆಕ್ಷನ್ ದಾಖಲಿಸಿದ ಸಿನಿಮಾ, ಎರಡನೇ ದಿನವೇ ತೀರಾ ಕುಸಿತ ಕಂಡಿದೆ. ಮೊದಲ ದಿನ ಭಾರತದಲ್ಲಿ ಸುಮಾರು 101 ಕೋಟಿ ರೂ. ನೆಟ್ ಕಲೆಕ್ಷನ್ ದಾಖಲಿಸಿದ್ದ ಚಿತ್ರ, ಎರಡನೇ ದಿನ ಕೇವಲ 36.40 ಕೋಟಿ ರೂ.ಗೆ ಇಳಿದಿದೆ. ಅಂದರೆ, ಒಂದೇ ದಿನದಲ್ಲಿ ಕಲೆಕ್ಷನ್ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಆದರೂ ಚಿತ್ರದ ಒಟ್ಟು ಗಳಿಕೆ ಇನ್ನೂ ದೊಡ್ಡ ಮಟ್ಟದಲ್ಲೇ ಇದೆ ಮತ್ತು ಜಾಗತಿಕವಾಗಿ 200 ಕೋಟಿ ರೂ. ಕ್ಲಬ್ಗೆ ಸೇರುವ ಹಾದಿಯಲ್ಲಿದೆ. ಆದರೆ, ಬಾಕ್ಸ್ ಆಫೀಸ್ನ ಅಬ್ಬರ ಮತ್ತು ಪ್ರೇಕ್ಷಕರ ತೃಪ್ತಿ ಒಂದೇ ವಿಷಯವಲ್ಲ ಎಂಬುದನ್ನು ‘ಟಾಕ್ಸಿಕ್’ ಮತ್ತೊಮ್ಮೆ ನೆನಪಿಸಿದೆ.
ಸಿನಿಮಾ ಬಿಡುಗಡೆಯ ಮೊದಲು ಚಿತ್ರದ ಮೇಲಿನ ನಿರೀಕ್ಷೆಗಳು ಅಸಾಮಾನ್ಯವಾಗಿದ್ದವು. ‘ಕೆಜಿಎಫ್’ ನಂತರ ಯಶ್ ಯಾವ ರೀತಿಯ ಚಿತ್ರವನ್ನು ಆಯ್ಕೆಮಾಡುತ್ತಾರೆ ಎಂಬ ಕುತೂಹಲ, ಗೀತು ಮೋಹನ್ದಾಸ್ ನಿರ್ದೇಶನ, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಎಂಬ ದೊಡ್ಡ ತಾರಾಗಣ—ಇವೆಲ್ಲವೂ ಚಿತ್ರವನ್ನು ಸಾಮಾನ್ಯ ವಾಣಿಜ್ಯ ಸಿನಿಮಾವಾಗಿರದೆ, ಹೊಸದೇನನ್ನೋ ಮಾಡುವ ಪ್ರಯತ್ನವೆಂದು ಪ್ರೇಕ್ಷಕರು ನಿರೀಕ್ಷಿಸುವಂತೆ ಮಾಡಿತ್ತು. ಆದರೆ, ಬಿಡುಗಡೆಯ ನಂತರದ ನಿರೀಕ್ಷೆ ಕುಸಿದಿದೆ; ‘ಸಿನಿಮಾ ದೊಡ್ಡದಾಗಿ ಕಾಣುತ್ತದೆ, ಜೋರಾಗಿ ಕೇಳಿಸುತ್ತದೆ, ಆದರೆ ಅದರೊಳಗಿನ ಕಥೆ ಮತ್ತು ಭಾವನೆಗಳು ಅಷ್ಟೇ ದೊಡ್ಡದಾಗಿಲ್ಲ’ ಎಂಬ ಟೀಕೆ-ವಿಮರ್ಶೆಗಳು ಕೇಳುಬರುತ್ತಿವೆ.
ಚಿತ್ರದ ಮೇಲೆ ಬಂದಿರುವ ಪ್ರಮುಖ ವಿಮರ್ಶೆಗಳಲ್ಲಿ ಒಂದು ಅತಿಯಾದ ಹಿಂಸೆ ಮತ್ತು ಅತಿರೇಕ. ಸಿನಿಮಾದಲ್ಲಿ ಗೀತು ಮೋಹನ್ದಾಸ್ ನಿರ್ಮಿಸಿರುವ ಜಗತ್ತು ದೃಶ್ಯಾತ್ಮಕವಾಗಿ ಪ್ರಭಾವಶಾಲಿಯಾಗಿರಬಹುದು. ಗೋವಾ, ಮಕಾವು ಸೇರಿದಂತೆ ಹಲವೆಡೆ ಸಾಗುವ ಗ್ಯಾಂಗ್ಸ್ಟರ್ ಜಗತ್ತು, ಬಂದೂಕು, ರಕ್ತಪಾತ, ಹೊಡೆದಾಟ, ಸ್ಫೋಟಗಳು ಹಾಗೂ ನಿರಂತರವಾಗಿ ಎದುರಾಗುವ ಶತ್ರುಗಳು—ಇವು ಕೆಲವರಿಗೆ ‘ಸ್ಟೈಲಿಷ್’ ಅನುಭವ ನೀಡಿದರೆ, ಬಹುಸಂಖ್ಯಾತ ಪ್ರೇಕ್ಷಕರಿಗೆ ಬೇಸರ ಮತ್ತು ಆಯಾಸ ತಂದಿವೆ.
ಇದಕ್ಕಿಂತ ಗಂಭೀರವಾದ ವಿಚಾರ ‘ಕುಟುಂಬ ಸಮೇತ ನೋಡಬಹುದಾದ ಸಿನಿಮಾ ಅಲ್ಲ’ ಎಂಬ ಪ್ರತಿಕ್ರಿಯೆ. ಚಿತ್ರದಲ್ಲಿನ ಅತಿಯಾದ ಹಿಂಸೆ, ಲೈಂಗಿಕತೆಯ ದೃಶ್ಯಗಳು, ಅಸಭ್ಯ ಅಥವಾ ಮಹಿಳೆಯನ್ನು ವಸ್ತುವಿನಂತೆ ನೋಡುವ ಸಂಭಾಷಣೆಗಳು, ಪುರುಷಾಧಿಪತ್ಯವನ್ನು ವಿಜೃಂಭಿಸುವ ಭಾವಭಂಗಿಗಳು—ಇವು ಕುಟುಂಬ ಪ್ರೇಕ್ಷಕರಿಗೆ ಮುಜುಗರ ಉಂಟುಮಾಡಿವೆ. ಸ್ವತಃ ಯಶ್ ಅವರೇ ಸಿನಿಮಾ ಬಿಡುಗಡೆಯ ಮೊದಲು ಚಿತ್ರದ ಕೆಲವು ದೃಶ್ಯಗಳು ಮಕ್ಕಳು ವೀಕ್ಷಿಸಲು ಸೂಕ್ತವಲ್ಲ ಎಂದು ಹೇಳಿದ್ದೂ ಇದೆ.
ಹೀಗಾಗಿ, ‘ಕೆಜಿಎಫ್’ ಮೂಲಕ ಯಶ್ಗೆ ಬೆಳೆದ ಕುಟುಂಬ ಪ್ರೇಕ್ಷಕರಲ್ಲಿ (ಫ್ಯಾಮಿಲಿ ಆಡಿಯನ್ಸ್) ಒಂದು ವರ್ಗ ‘ಟಾಕ್ಸಿಕ್’ ಮೇಲೆ ಭ್ರಮನಿರಸನಗೊಂಡಿದೆ. ಯಶ್ ಸಿನಿಮಾ ಎಂದರೆ ಕುಟುಂಬದೊಂದಿಗೆ ಹೋಗಬಹುದು ಎಂಬ ವಿಶ್ವಾಸದೊಂದಿಗೆ ಬಂದವರಿಗೆ ಇದು ಸಂಪೂರ್ಣ ವಿಭಿನ್ನ ಅನುಭವ ನೀಡಿದೆ.
ಚಿತ್ರದ ಮತ್ತೊಂದು ದೊಡ್ಡ ಭರವಸೆ ಮಹಿಳಾ ಪಾತ್ರಗಳ ಕುರಿತಾಗಿತ್ತು. ಬಿಡುಗಡೆಯ ಮೊದಲು ಯಶ್ ಸಾರ್ವಜನಿಕ ವೇದಿಕೆಯಲ್ಲಿ ‘ಟ್ರೇಲರ್ ನೋಡಿಕೊಂಡು ತೀರ್ಮಾನಿಸಬೇಡಿ, ಈ ಸಿನಿಮಾದಲ್ಲಿ ಮಹಿಳೆಯರ ಧ್ವನಿ ಇದೆ’ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಮಹಿಳಾ ನಿರ್ದೇಶಕಿ ಗೀತು ಮೋಹನ್ದಾಸ್ ಇರುವುದರಿಂದ ಸಿನಿಮಾ ಸಾಂಪ್ರದಾಯಿಕ ಪುರುಷಕೇಂದ್ರಿತ ಗ್ಯಾಂಗ್ಸ್ಟರ್ ಸಿನಿಮಾಗಳಿಗಿಂತ ವಿಭಿನ್ನವಾಗಿರಬಹುದು ಎಂಬ ನಿರೀಕ್ಷೆಯೂ ಇತ್ತು. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಎಂಬ ಐದು ಪ್ರಮುಖ ನಟಿಯರಿರುವುದರಿಂದ ಮಹಿಳಾ ಪಾತ್ರಗಳಿಗೆ ಹೆಚ್ಚು ಅವಕಾಶವುಳ್ಳ ಸ್ವತಂತ್ರ ಕಥಾಹಂದರಗಳು ಇರಬಹುದು ಎಂಬ ಭಾವನೆ ಸಹಜವಾಗಿತ್ತು.
ಆದರೆ, ಬಿಡುಗಡೆಯ ನಂತರ ಈ ನಿರೀಕ್ಷೆಯೂ ಹುಸಿಯಾಗಿದೆ. ಚಿತ್ರದಲ್ಲಿ ಐದು ಪ್ರಮುಖ ಮಹಿಳಾ ಪಾತ್ರಗಳಿದ್ದರೂ, ಅವುಗಳಲ್ಲಿ ಬಹುತೇಕ ಪಾತ್ರಗಳು ರಾಯಾ ಎಂಬ ಯಶ್ ಪಾತ್ರದ ಸುತ್ತಲೇ ತಿರುಗುತ್ತವೆ. ನಯನತಾರಾ ಅಭಿನಯಿಸಿರುವ ಗಂಗಾ ಬಲಿಷ್ಠಳಾಗಿದ್ದರೂ, ಅವಳ ಬದುಕಿನ ಬಹುಪಾಲು ಅರ್ಥ ತಮ್ಮ ಸಹೋದರನ ಏಳಿಗೆಯಲ್ಲೇ ಸೀಮಿತವಾಗುತ್ತದೆ. ಕಿಯಾರಾ ಅಭಿನಯಿಸಿರುವ ನಾದಿಯಾ ಭಾವನಾತ್ಮಕವಾಗಿ ಉತ್ತಮ ಪಾತ್ರವಾಗಬಹುದಾದ ಅವಕಾಶ ಹೊಂದಿತ್ತಾದರೂ, ಅವಳ ನೋವು ಅಂತಿಮವಾಗಿ ನಾಯಕನ ಕಥೆಯನ್ನು ಮುಂದಕ್ಕೆ ಸಾಗಿಸಲು ಬಳಕೆಯಾಗುತ್ತದೆ. ತಾರಾ ಸುತಾರಿಯಾ ಪಾತ್ರವು ನಾಯಕನ ಭಾವನಾತ್ಮಕ ಪ್ರಯಾಣದ ಮಧ್ಯಂತರ ಹಂತದಂತೆ ಕಾಣುತ್ತದೆ. ರುಕ್ಮಿಣಿ ವಸಂತ್ ಪಾತ್ರಕ್ಕೆ ನಾಯಕನತ್ತ ಆಕರ್ಷಣೆಯ ಸ್ಪಷ್ಟ ಕಾರಣವೇ ಸಿಗುವುದಿಲ್ಲ. ಹುಮಾ ಖುರೇಷಿ ಪಾತ್ರದ ಮಹತ್ವ ಬಹಳ ತಡವಾಗಿ ಪ್ರದರ್ಶನಗೊಳ್ಳುತ್ತದೆ. ಹೀಗಾಗಿ ‘ಐದು ಮಹಿಳೆಯರು ಇದ್ದಾರೆ, ಆದರೆ ಸ್ವತಂತ್ರ ಕಥಾ ಪಯಣ ಇಲ್ಲ’ ಎಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಕೇಳಿಬಂದಿವೆ.
ಇದು ‘ಟಾಕ್ಸಿಕ್’ ಮೇಲೆ ಇರುವ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ. ಏಕೆಂದರೆ, ಈ ಸಿನಿಮಾದಲ್ಲಿ ಮಹಿಳೆಯರನ್ನು ಸರಳ ಗ್ಲಾಮರ್ ಅಲಂಕಾರಗಳಾಗಿ ಮಾತ್ರ ಬಳಸುವುದಿಲ್ಲ ಎಂಬ ಭರವಸೆ ಮೊದಲೇ ನೀಡಲಾಗಿತ್ತು. ಆದರೆ ಉತ್ತಮ ವೇಷಭೂಷಣ, ಉತ್ತಮ ಲೈಟಿಂಗ್, ಹೆಚ್ಚು ಸ್ಕ್ರೀನ್ ಟೈಮ್ ಹಾಗೂ ಹೆಚ್ಚು ಸಂಭಾಷಣೆ ಸಿಗುವುದೇ ಮಹಿಳಾ ಪ್ರತಿನಿಧಿತ್ವವಲ್ಲ. ಪಾತ್ರಕ್ಕೆ ತನ್ನದೇ ಆಶಯ, ಸಂಘರ್ಷ, ನಿರ್ಧಾರ ಹಾಗೂ ಸ್ವತಂತ್ರ ಕಥಾಹಂದರ ಇರಬೇಕು. ಈ ವಿಚಾರದಲ್ಲಿ ‘ಟಾಕ್ಸಿಕ್’ ನಿರೀಕ್ಷೆ ತಲುಪಿಲ್ಲ ಎಂಬ ವಿಮರ್ಶೆ ಬಲವಾಗಿದೆ.
ಇನ್ನೊಂದೆಡೆ, ಸಿನಿಮಾವನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು ಎನ್ನುವ ವಾದವೂ ಇದೆ. ‘ಟಾಕ್ಸಿಕ್’ ವಾಸ್ತವವಾಗಿ ಪುರುಷಾಧಿಪತ್ಯ, ಅಹಂಕಾರ, ಹಿಂಸೆ ಹಾಗೂ ‘ಆಲ್ಫಾ ಮೇಲ್’ (ಪುರುಷಾಹಂಕಾರ) ಸಂಸ್ಕೃತಿಯನ್ನು ಆಚರಿಸುವುದಿಲ್ಲ; ಅವುಗಳ ಪರಿಣಾಮವನ್ನು ಪ್ರಶ್ನಿಸಲು ಯತ್ನಿಸುತ್ತದೆ ಎಂಬ ವಾದವನ್ನೂ ಕೆಲವರು ಮುಂದಿಟ್ಟಿದ್ದಾರೆ. ರಾಯಾ ತನ್ನದೇ ಹಿಂಸೆ ಮತ್ತು ಅಹಂಕಾರದ ಪರಿಣಾಮಗಳಿಗೆ ಒಳಗಾಗುವ ವ್ಯಕ್ತಿಯಾಗಿ ಚಿತ್ರಿತನಾಗುತ್ತಾನೆ. ಕೊನೆಯ ಭಾಗದಲ್ಲಿ ಅವನ ವಿಷಪೂರಿತ ಪುರುಷತ್ವವೇ ಅವನ ವಿರುದ್ಧ ತಿರುಗುತ್ತದೆ. ಆ ಮೂಲಕ ಸಿನಿಮಾ ‘ಪುರುಷಾಧಿಪತ್ಯ’ ಕಲ್ಪನೆಯನ್ನು ಧ್ವಂಸಗೊಳಿಸುವ ಪ್ರಯತ್ನ ಮಾಡುತ್ತದೆ ಎಂದು ಯಶ್ ಅಭಿಮಾನಿಗಳ ಗುಂಪು ವಾದಿಸುತ್ತದೆ.
ಆದಾಗ್ಯೂ, ಸಿನಿಮಾದಲ್ಲಿ ವಿಷಪೂರಿತ ಪುರುಷಾಹಂಕಾರವನ್ನು ಅತಿಯಾಗಿ ಆಕರ್ಷಕ, ಸ್ಟೈಲಿಷ್ ಹಾಗೂ ಚಪ್ಪಾಳೆ ಹೊಡೆಯುವ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಹೀಗಾಗಿ ಪ್ರೇಕ್ಷಕರು ಯಾವ ಹಂತದಲ್ಲಿ ಅದನ್ನು ವಿಮರ್ಶಾತ್ಮಕವಾಗಿ ನೋಡಬೇಕು, ಯಾವ ಹಂತದಲ್ಲಿ ಆಚರಿಸಬೇಕು ಎಂಬ ಗಡಿ ಮಸುಕಾಗುತ್ತದೆ. ಪರದೆಯ ಮೇಲೆ ರಾಯಾದ ಸೆಕ್ಸಿಸ್ಟ್ ಸಂಭಾಷಣೆಗಳಿಗೆ, ಹಿಂಸಾತ್ಮಕ ಅತಿರೇಕಕ್ಕೆ, ಮಹಿಳೆಯರ ಮೇಲಿನ ಅಧಿಪತ್ಯಕ್ಕೆ ಚಿತ್ರಮಂದಿರದಲ್ಲೇ ಚಪ್ಪಾಳೆ ಮತ್ತು ಕೂಗು ಕೇಳಿಬರುತ್ತಿರುವುದು ‘ಪುರುಷಾಧಿಪತ್ಯವನ್ನು ಧ್ವಂಸ’ಗೊಳಿಸುವ ಸಿನಿಮಾದ ಪ್ರಯತ್ನ ಮತ್ತು ವಾದ ಫಲಿಸಿಲ್ಲ ಎಂಬುದನ್ನು ಎತ್ತಿತೋರುತ್ತದೆ ಎಂಬ ವಿಮರ್ಶೆಗಳಿವೆ.
ಚಿತ್ರವು ಹೇಳಲು ಬಯಸಿದದ್ದು ‘ಇಂತಹ ಪುರುಷತ್ವವೇ ವಿಷಕಾರಿ’ ಎಂಬುದನ್ನೇ ಆಗಿದ್ದರೂ, ಅದನ್ನು ತೋರಿಸುವ ದೃಶ್ಯಭಾಷೆ ಕೆಲವೊಮ್ಮೆ ಅದೇ ವಿಷವನ್ನು ಮಾರುಕಟ್ಟೆಗೆ ಮಾರುವಂತಾಗುತ್ತದೆ. ಹೀಗಾಗಿ ಚಿತ್ರದ ಸಂದೇಶವೇ ಅದರದೇ ಸ್ಟೈಲ್ನಡಿ ಮುಚ್ಚಿಹೋಗಿದೆ ಎನ್ನುತ್ತಾರೆ ವಿಮರ್ಶಕರು.
ಕಥನದಲ್ಲಿಯೂ ಗೊಂದಲವಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಹಲವಾರು ಕಾಲಘಟ್ಟಗಳು, ವಿವಿಧ ಪಾತ್ರಗಳು, ಸ್ಥಳಾಂತರಗೊಳ್ಳುವ ಹಿನ್ನೆಲೆ, ದ್ವಿಪಾತ್ರದಂತಿರುವ ತಿರುವುಗಳು ಹಾಗೂ ಕೊನೆಯ ಹಂತದ ಮನೋವೈಜ್ಞಾನಿಕ ವಿವರಗಳು ಬಹಳಷ್ಟು ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡಿವೆ. ಸಿನಿಮಾ ಮುಗಿದ ಬಳಿಕ ‘ನಿಜವಾಗಿ ಏನಾಯಿತು?’ ಎಂಬ ಪ್ರಶ್ನೆಯೊಂದಿಗೆ ಹೊರಬಂದರೇ ಹೆಚ್ಚು ಎಂಬುದನ್ನು ಸಾಮಾಜಿಕ ಜಾಲತಾಣದ ಚರ್ಚೆಗಳು ಬಹಿರಂಗಗೊಳಿಸಿವೆ.
ಈ ಲೇಖನ ಓದಿದ್ದೀರಾ?: ನಾಗೇಂದ್ರ ಪ್ರಕರಣ | ಬಿಜೆಪಿ-ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರವೇನು? ಒಂದೇ ಏಟಿಗೆ ಎರಡು ಹಕ್ಕಿ ಹೊಡೆವುದೇ ಕಾಂಗ್ರೆಸ್
ಇದೆಲ್ಲದರ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ BookMyShow ರೇಟಿಂಗ್ ಕಾಣೆಯಾಗಿರುವ ವಿಚಾರವೂ ಚರ್ಚೆಗೆ ಕಾರಣವಾಗಿದೆ. ‘ಆರಂಭದಲ್ಲಿ ಕಡಿಮೆ ರೇಟಿಂಗ್ ಕಾಣಿಸುತ್ತಿತ್ತು, ನಂತರ ಅದು ಕಾಣಿಸದೆ ಕೇವಲ ‘ಲೈಕ್ಸ್’ ಮಾತ್ರ ಉಳಿದಿದೆ’ ಎಂಬ ಆರೋಪಗಳಿವೆ. ಇದಕ್ಕೆ ಅಧಿಕೃತ ದೃಢೀಕರಣ ಇಲ್ಲವಾದರೂ, ಈಗಾಗಲೇ ಚಿತ್ರದ ಕುರಿತ ನಿರಾಶೆಯ ವಾತಾವರಣದಲ್ಲಿ ಈ ಸಂಗತಿ ಮತ್ತಷ್ಟು ಚರ್ಚೆಗೆ ಗುರಿಯಾಗಿದೆ.
ಚಿತ್ರದ ಕೆಲವು ಪ್ರದರ್ಶನಗಳಲ್ಲಿ ನಿರಾಶರಾದ ಪ್ರೇಕ್ಷಕರು ಹಣ ಮರಳಿ ಕೇಳಿದ ಘಟನೆಗಳೂ ವರದಿಯಾಗಿವೆ. ಇದು ಸಾಮಾನ್ಯ ಪ್ರೇಕ್ಷಕನ ನಿರೀಕ್ಷೆ ಮತ್ತು ಸಿನಿಮಾ ನೀಡಿದ ಅನುಭವದ ನಡುವಿನ ಅಂತರ ಎಷ್ಟು ದೊಡ್ಡದಾಗಿದೆ ಎಂಬುದನ್ನು ಸೂಚಿಸುತ್ತದೆ.
ಸದ್ಯ, ‘ಟಾಕ್ಸಿಕ್’ ಚಿತ್ರತಂಡದ ಮುಂದೆ ಎರಡು ಪ್ರಶ್ನೆಗಳಿವೆ; ಮೊದಲನೆಯದು, ಸಿನಿಮಾ ತನ್ನದೇ ಭರವಸೆಗಳನ್ನು ಎಷ್ಟು ಈಡೇರಿಸಿದೆ? ಎರಡನೆಯದು, ಸಿನಿಮಾವನ್ನು ನೋಡುತ್ತಿರುವ ಸಮಾಜ ಯಾವ ದೃಷ್ಟಿಯಿಂದ ಮಹಿಳೆ, ಪುರುಷಾಧಿಪತ್ಯ ಹಾಗೂ ಲೈಂಗಿಕತೆಯನ್ನು ಅಳೆಯುತ್ತಿದೆ?
ಒಟ್ಟಿನಲ್ಲಿ ‘ಟಾಕ್ಸಿಕ್’ ತನ್ನ ದೃಶ್ಯ ವೈಭವ, ತಾಂತ್ರಿಕತೆ, ಯಶ್ನ ಪರದೆಯ ಪ್ರಭಾವ, ಗೀತು ಮೋಹನ್ದಾಸ್ ಅವರ ಕೆಲವು ಧೈರ್ಯಶಾಲಿ ಕಲ್ಪನೆಗಳು ಹಾಗೂ ಕೊನೆಯ ಹಂತದ ವಿಷಯಾತ್ಮಕ ಪ್ರಯತ್ನಗಳು ಗಮನಾರ್ಹ. ಆದರೆ, ದೊಡ್ಡ ನಿರೀಕ್ಷೆಗಳನ್ನು ಹುಟ್ಟುಹಾಕಿದ ಸಿನಿಮಾ, ಕಥೆ, ಭಾವನೆ, ಮಹಿಳಾ ಪಾತ್ರಗಳ ಸ್ವತಂತ್ರತೆ ಹಾಗೂ ಕುಟುಂಬ ಪ್ರೇಕ್ಷಕರ ವಿಚಾರದಲ್ಲಿ ದೊಡ್ಡ ಮಟ್ಟದ ಭ್ರಮನಿರಸನ ಮೂಡಿಸಿದೆ. ಸಿನಿಮಾ ಹೇಳಲು ಹೊರಟ ಸಂದೇಶವೇ ಎಲ್ಲೋ ಕಳೆದುಹೋಗಿದೆ…!



