ಕರ್ನಾಟಕದ ರಾಜಕಾರಣದಲ್ಲಿ ಮತ್ತೊಮ್ಮೆ ಬಳ್ಳಾರಿ ಜಿಲ್ಲೆ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರತಿಪಕ್ಷ ಬಿಜೆಪಿ ಆರಂಭಿಸಿರುವ ಹೋರಾಟವು ಕೇವಲ ಭ್ರಷ್ಟಾಚಾರದ ಆರೋಪ ಅಥವಾ ಒಬ್ಬ ಸಚಿವರ ರಾಜೀನಾಮೆಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಈ ಬೆಳವಣಿಗೆಯ ಹಿಂದೆ ರಾಜ್ಯ ರಾಜಕಾರಣದ ಅಧಿಕಾರ ಸಮೀಕರಣ, ವಾಲ್ಮೀಕಿ ಸಮುದಾಯದ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಆಂತರಿಕ ಬಣಗಳ ಲೆಕ್ಕಾಚಾರಗಳು ಸೇರಿಕೊಂಡಿವೆ.
2024ರಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 89 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು. ಆ ತಕ್ಷಣವೇ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ತನಿಖೆ ಮುಂದುವರಿದು 2026ರ ಜೂನ್ ತಿಂಗಳಿನಲ್ಲಿ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಬಿ. ನಾಗೇಂದ್ರ ಸೇರಿದಂತೆ ಒಟ್ಟು 30 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿತು. ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ ವ್ಯವಹಾರಗಳ ಮೂಲಕ 89.63 ಕೋಟಿ ರೂ. ಹಣವನ್ನು ಸುಮಾರು 600 ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು ನಗದು, ಚಿನ್ನ ಹಾಗೂ ವಾಹನಗಳ ರೂಪಕ್ಕೆ ಪರಿವರ್ತಿಸಲಾಗಿದೆ ಎಂಬ ಗಂಭೀರ ಅಂಶಗಳನ್ನು ತನಿಖಾ ಸಂಸ್ಥೆ ಉಲ್ಲೇಖಿಸಿತ್ತು. ಅಲ್ಲದೆ, ನಾಗೇಂದ್ರ ಅವರ ಸಂಬಂಧಿಕರು ಮತ್ತು ಆಪ್ತರ ಖಾತೆಗಳಿಗೂ ಈ ಹಣ ಹರಿದಿದೆ ಎಂದು ಸಿಬಿಐ ಉಲ್ಲೇಖಿಸಿತ್ತು. ಇವೆಲ್ಲವೂ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದ್ದು ಸಾಬೀತಾಗಬೇಕಾದ ಆರೋಪಗಳಾಗಿದ್ದರೂ, ರಾಜಕೀಯವಾಗಿ ಭಾರಿ ಸಂಚಲನ ಮೂಡಿಸಿವೆ.
ತನಿಖೆ ನಡೆಯುತ್ತಿರುವಾಗಲೇ, 2026ರ ಆಗಸ್ಟ್ 3ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನೀಡಲಾಗಿದೆ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ತಮ್ಮ ಪಕ್ಷದ ಕ್ರಮವನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. “ತನಿಖೆಯ ಅಧಿಕೃತ ವರದಿಯಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾದ ನಂತರವೇ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮಕ್ಕೆ ಒಳಗಾಗಿದ್ದ ಹಣದಲ್ಲು 95% ರಷ್ಟನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ನಾಗೇಂದ್ರ ಅವರಿಗೆ ಮಂತ್ರಿಗಿರಿ ಕೊಟ್ಟಿರುವುದನ್ನು ವಿಪಕ್ಷ ಬಿಜೆಪಿಗೆ ಪ್ರಬಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿದ್ದ ಹಣ ದುರುಪಯೋಗ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ವ್ಯಕ್ತಿಗೆ ಮತ್ತೆ ಮಂತ್ರಿಗಿರಿ ನೀಡಿದ್ದನ್ನು ಬಿಜೆಪಿ ಕಟುವಾಗಿ ಪ್ರಶ್ನಿಸತೊಡಗಿದೆ.
ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲೂ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದು ನಿರಂತರ ಪ್ರತಿಭಟನೆಗಳನ್ನು ನಡೆಸಿದರು. ಪರಿಣಾಮ ಕಲಾಪಗಳಿಗೆ ತೀವ್ರ ಅಡ್ಡಿಯಾಗಿ, ನಿಗದಿತ ಸಮಯಕ್ಕಿಂತ ಮೂರು ದಿನ ಮುಂಚಿತವಾಗಿಯೇ ಅಧಿವೇಶನ ಕೊನೆಗೊಂಡಿತು. ಅಧಿವೇಶನ ಮುಗಿಯುತ್ತಿದ್ದಂತೆಯೇ ಬಿಜೆಪಿ, ಸೆಪ್ಟೆಂಬರ್ 1ರಿಂದ ರಾಯಚೂರಿನಿಂದ ಬಳ್ಳಾರಿಯವರೆಗೆ ಸುಮಾರು 170 ಕಿಲೋಮೀಟರ್‌ಗಳ ಬೃಹತ್ ಪಾದಯಾತ್ರೆಗೆ ಯೋಜನೆ ರೂಪಿಸಿದೆ. ಕೇಂದ್ರ ಸಚಿವರು ಮತ್ತು ಬಿಜೆಪಿ-ಜೆಡಿಎಸ್ ಮುಖಂಡರು ಭಾಗವಹಿಸಲಿರುವ ಈ ಪಾದಯಾತ್ರೆಯ ಅಂತಿಮ ಗುರಿ ಬಳ್ಳಾರಿ.
ಬಳ್ಳಾರಿಯು ದಶಕಗಳಿಂದಲೂ ಗಣಿಗಾರಿಕೆ, ಹಣಬಲ, ಜಾತಿ ಸಮೀಕರಣ ಹಾಗೂ ರಾಜ್ಯಮಟ್ಟದ ನಾಯಕತ್ವವನ್ನು ರೂಪಿಸುವ ರಾಜಕೀಯ ಪ್ರಯೋಗಶಾಲೆ ಗುರುತಿಸಿಕೊಂಡಿದೆ. ಹಿಂದೆ ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ ಶ್ರೀರಾಮುಲು ಅವರ ಮೂಲಕ ಬಿಜೆಪಿ ಇಲ್ಲಿ ಗಟ್ಟಿ ನೆಲೆ ಹೊಂದಿತ್ತು. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವವನ್ನು ಮರುಸ್ಥಾಪಿಸಿತು. ಈ ಬೆಳವಣಿಗೆಯಲ್ಲಿ ವಾಲ್ಮೀಕಿ-ನಾಯಕ ಸಮುದಾಯದ ಮುಖಗಳಾಗಿ ಬಿ. ನಾಗೇಂದ್ರ ಮತ್ತು ಇ. ತುಕಾರಾಂ ಕಾಂಗ್ರೆಸ್‌ನಲ್ಲಿ ಮುಂಚೂಣಿಗೆ ಬಂದರು.
ಈ ಪ್ರದೇಶದಲ್ಲಿ, ಬಿಜೆಪಿಗೆ ಅದೇ ವಾಲ್ಮೀಕಿ ಸಮುದಾಯದ ಬಿ. ಶ್ರೀರಾಮುಲು ಅವರೇ ಪ್ರಮುಖ ನಾಯಕರಾಗಿದ್ದಾರೆ. ಆದ್ದರಿಂದ ನಾಗೇಂದ್ರ ವಿರುದ್ಧದ ಪ್ರತಿಭಟನೆ ಮತ್ತು ಪಾದಯಾತ್ರೆಗಳಲ್ಲಿ ಶ್ರೀರಾಮುಲು ಅವರನ್ನೇ ಬಿಜೆಪಿ ಮುಂಚೂಣಿಯಲ್ಲಿ ಇರಿಸಿದೆ. ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಉತ್ತರ ಕರ್ನಾಟಕದ ಎಸ್‌ಟಿ ಮತದಾರರಿಗೆ “ವಾಲ್ಮೀಕಿ ಸಮುದಾಯದ ಅಭಿವೃದ್ಧಿ ನಿಧಿಯನ್ನು ಕಾಂಗ್ರೆಸ್ ರಕ್ಷಿಸಲಿಲ್ಲ” ಎಂಬ ಸಂದೇಶವನ್ನು ರವಾನಿಸಲು ಬಿಜೆಪಿ ತಂತ್ರ ಹೆಣೆದಿದೆ. ನಾಗೇಂದ್ರ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾದರೆ ವಾಲ್ಮೀಕಿ ಮತಬ್ಯಾಂಕ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರವೂ ಇದರಲ್ಲಿದೆ.
ಒಂದು ವೇಳೆ, ಬಿಜೆಪಿಯ ಈ ಸತತ ಒತ್ತಡದ ನಡುವೆ ನಾಗೇಂದ್ರ ಅವರ ರಾಜೀನಾಮೆಯ ಸನ್ನಿವೇಶ ಎದುರಾದರೆ, ಅದರ ರಾಜಕೀಯ ಲಾಭವನ್ನು ಬಿಜೆಪಿಗೆ ಬಿಟ್ಟುಕೊಡದಿರಲು ಕಾಂಗ್ರೆಸ್ ತನ್ನದೇ ತಂತ್ರ ರೂಪಿಸಿದೆ. ಆದ್ದರಿಂದಲೇ, ಸಚಿವ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ಹೆಸರು ಮುನ್ನೆಲೆಗೆ ಬಂದಿದೆ.
ಅನ್ನಪೂರ್ಣ ಅವರು ಬಳ್ಳಾರಿ ಸಂಸದ ಇ. ತುಕಾರಾಂ ಅವರ ಪತ್ನಿ. 2024ರ ಲೋಕಸಭಾ ಚುನಾವಣೆಯಲ್ಲಿ ತುಕಾರಾಂ ಅವರು ಸಂಡೂರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಅವರು ಸಂಸದರಾದ ಬಳಿಕ, ತೆರವಾದ ಶಾಸಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅನ್ನಪೂರ್ಣ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇನ್ನೊಂದು ಸಂಗತಿ ಎಂದರೆ, ಇ ತುಕಾರಾಂ ಅವರೂ 2008ರಿಂದ ನಿರಂತರವಾಗಿ ಸಂಡೂರು ಶಾಸಕರಾಗಿದ್ದರು. ಮಾತ್ರವಲ್ಲ, 2024ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಾಗಿ ಸ್ಪರ್ಧಿಸುವ ಧೈರ್ಯ ಮಾಡಿದ್ದ ಕಾಂಗ್ರೆಸ್ ನ ಏಕೈಕ ನಾಯಕ ಕೂಡ. ಆದ್ದರಿಂದ, ಅವರ ವಿಚಾರದಲ್ಲಿ ಕಾಂಗ್ರೆಸ್ ಒಲವು ಹೊಂದಿದೆ. ಜೊತೆಗೆ, ಇತ್ತೀಚೆಗೆ ಸ್ವತಃ ಅನ್ನಪೂರ್ಣ ಅವರೇ, ತುಕಾರಾಂ ಅವರು ಲೋಕಸಭೆಗೆ ಸ್ಪರ್ಧಿಸುವಾಗಲೇ ತಮ್ಮ ಕುಟುಂಬಕ್ಕೆ ಸಚಿವ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿತ್ತು ಎಂದು ಬಹಿರಂಗವಾಗಿ ಹೇಳಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ; ಪ್ರಸ್ತುತ ಸಚಿವ ಸಂಪುಟದಲ್ಲಿ ಕೇವಲ ಒಂದೇ ಒಂದು ಸೀಟು ಖಾಲಿ ಇದ್ದು, ನಿಯಮ ಮತ್ತು ಪಕ್ಷದ ಸಮೀಕರಣದ ಪ್ರಕಾರ ಆ ಸ್ಥಾನವನ್ನು ಮಹಿಳೆಯೊಬ್ಬರಿಗೆ ನೀಡಲೇಬೇಕು. ಒಂದು ವೇಳೆ, ಈಗಿರುವ ಪರಿಸ್ಥಿತಿಯಲ್ಲಿಯೇ ಸಚಿವ ಸಂಪುಟ ಭರ್ತಿಯಾದರೆ, ಒಬಿಸಿ/ಕುರುಬ ಸಮುದಾಯದ ಪ್ರಾತಿನಿಧ್ಯದ ಅಡಿಯಲ್ಲಿ ಗಾಯತ್ರಿ ಶಾಂತೇಗೌಡ ಅವರಿಗೆ ಆ ಅವಕಾಶ ಒಲಿಯಬೇಕಾಗುತ್ತದೆ. ಆದರೆ, ಬ್ಯಾಡಗಿ ಶಾಸಕ ಶಿವಣ್ಣನವರ್‌ಗೆ ಮಂತ್ರಿ ಹುದ್ದೆ ನೀಡಬೇಕೆಂದು ಬಯಸಿರುವ ಸಿದ್ದರಾಮಯ್ಯನವರ ಅಸಮಾಧಾನ ಮುಂದುವರೆಯುತ್ತದೆ.
ಆದ್ದರಿಂದ, ಕಾಂಗ್ರೆಸ್ ಮುಂದಿರುವ ಪರಿಹಾರ; ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಕೊಡಿಸಿ, ಅವರ ಜಾಗಕ್ಕೆ ಅನ್ನಪೂರ್ಣ ತುಕಾರಾಂ ಅವರನ್ನು ಸಂಪುಟಕ್ಕೆ ತರುವುದು. ಹೀಗೆ ಮಾಡುವುದರಿಂದ ಎಸ್‌ಟಿ (ವಾಲ್ಮೀಕಿ) ಕೋಟಾ ಮತ್ತು ಮಹಿಳಾ ಕೋಟಾ ಎರಡೂ ಒಟ್ಟಿಗೆ ಭರ್ತಿಯಾಗುತ್ತದೆ. ಇದರಿಂದಾಗಿ ಸಂಪುಟದಲ್ಲಿ ಮೊದಲೇ ಖಾಲಿ ಇದ್ದ ಮತ್ತೊಂದು ಸೀಟು ಮುಕ್ತವಾಗಿ ಉಳಿಯುತ್ತದೆ. ಅದನ್ನು ಒಬಿಸಿ ಸಮುದಾಯಕ್ಕೆ ನೀಡಬಹುದು.
ಇದಿಷ್ಟೇ ಅಲ್ಲದೆ, ಅನ್ನಪೂರ್ಣ ತುಕಾರಾಂ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವುದು ಕಾಂಗ್ರೆಸ್‌ಗೆ ಹಲವು ರೀತಿಯಲ್ಲಿ ರಾಜಕೀಯ ಅನುಕೂಲವನ್ನು ನೀಡಲಿದೆ: ನಾಗೇಂದ್ರ ಮತ್ತು ಅನ್ನಪೂರ್ಣ ಇಬ್ಬರೂ ಎಸ್‌ಟಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದು, ನಾಗೇಂದ್ರರನ್ನು ತೆಗೆದರೂ ಆ ಸಮುದಾಯದ ಪ್ರಾತಿನಿಧ್ಯ ಕೈತಪ್ಪಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಮಾತ್ರವಲ್ಲದೆ, ಪ್ರಸ್ತುತ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕಡಿಮೆಯಿದೆ ಎಂಬ ಟೀಕೆಯಿದ್ದು, ಅನ್ನಪೂರ್ಣ ಅವರ ಆಯ್ಕೆಯಿಂದ ಮಹಿಳಾ ಮತ್ತು ಎಸ್‌ಟಿ ಎರಡೂ ಪ್ರಾತಿನಿಧ್ಯವೂ ಒಂದೇ ಬಾರಿಗೆ ಪೂರ್ಣವಾಗಲಿದೆ. ಜೊತೆಗೆ, ನಾಗೇಂದ್ರರ ಸ್ಥಾನವನ್ನು ಬಳ್ಳಾರಿಯವರಿಗೇ ನೀಡುವುದರಿಂದ ಬಳ್ಳಾರಿಯ ಕಾಂಗ್ರೆಸ್ಸಿಗರು ಮತ್ತು ವಾಲ್ಮೀಕಿ ಸಮುದಾಯದ ಅಸಮಾಧಾನವನ್ನು ಶಮನಗೊಳ್ಳುತ್ತದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ನಾಗೇಂದ್ರ ನಿರ್ಗಮನ ಮತ್ತು ಅನ್ನಪೂರ್ಣ ಅವರ ಆಗಮನದ ಜೊತೆಗೆ ಸಂಪುಟದಲ್ಲಿ ಖಾಲಿ ಉಳಿದಿರುವ ಸ್ಥಾನಕ್ಕೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್ ನೇಮಕಗೊಳ್ಳುವ ಹಾದಿಯೂ ಸುಗಮವಾಗಲಿದೆ. ಕಳೆದ ಸಂಪುಟ ವಿಸ್ತರಣೆಯ ಸಂದರ್ಭದಲ್ಲೇ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಶಿಫಾರಸು ಮಾಡಿದ್ದರು. “ಸಿದ್ದರಾಮಯ್ಯ ಅವರು ನನ್ನ ಗಾಡ್‌ಫಾದರ್, ನನಗೆ ಸಚಿವ ಸ್ಥಾನ ನೀಡಲು ಕೊನೆಯವರೆಗೂ ಒತ್ತಾಯಿಸಿದ್ದರು” ಎಂದು ಶಿವಣ್ಣನವರ್ ಕೂಡ ಹೇಳಿಕೊಂಡಿದ್ದರು. ಅಂತಿಮ ಕ್ಷಣದಲ್ಲಿ ಅವಕಾಶ ಕೈತಪ್ಪಿದ್ದರಿಂದ ಅವರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದರು. ಸಿದ್ದರಾಮಯ್ಯನವರ ಬೆಂಬಲದೊಂದಿಗೆ ಶಿವಣ್ಣನವರ್ ಮಂತ್ರಿ ಸ್ಥಾನಕ್ಕಾಗಿ ಕಾಯುತ್ತಿದ್ದಾರೆ. ಶಿವಣ್ಣನವರ್ ಅವರಿಗೆ ಮಂತ್ರಿಗಿರಿ ನೀಡಿದರೆ ಸಿದ್ದರಾಮಯ್ಯ ಅವರಿಗೂ ಸಮಾಧಾನವಾಗುತ್ತದೆ. ಜೊತೆಗೆ ಒಬಿಸಿ ಕೋಟಾದಡಿ ಮತ್ತೊಂದು ನೇಮಕವೂ ಆದಂತಾಗುತ್ತದೆ. ಅಂತೆಯೇ, ಕುರುಬ ಸಮುದಾಯ ಮತ್ತು ಉತ್ತರ ಕರ್ನಾಟಕಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗುತ್ತದೆ.
ಇದೆಲ್ಲದರ ನಡುವೆ ಮತ್ತೊಂದು ಗಂಭೀರ ಸವಾಲು ಕೂಡ ಕಾಂಗ್ರೆಸ್ ಮುಂದಿದೆ. ಅದು ಬೆಂಗಳೂರಿನ ಪ್ರಭಾವಿ ನಾಯಕ ಲೇಔಟ್ ಕೃಷ್ಣಪ್ಪ (ಎಂ ಕೃಷ್ಣಪ್ಪ) ಅವರನ್ನು ಸಮಾಧಾನಪಡಿಸುವುದು. ಲೇಔಟ್ ಕೃಷ್ಣಪ್ಪ ಅವರನ್ನು ಸಚಿವರನ್ನಾಗಿ ಮಾಡಲು ಸಂಪುಟದಲ್ಲಿ ಜಾಗವಿಲ್ಲದ ಕಾರಣ, ಶಾಸಕ ಎಚ್.ಸಿ ಬಾಲಕೃಷ್ಣ ಅವರಿಂದ ರಾಜೀನಾಮೆ ಕೊಡಿಸುವ ಮತ್ತೊಂದು ಚರ್ಚೆ ಕಾಂಗ್ರೆಸ್ ಅಂಗಳದಲ್ಲಿ ನಡೆದಿದೆ.
ಬಾಲಕೃಷ್ಣ ಅವರ ತಂದೆ ಚೆನ್ನಪ್ಪ ಅವರು ಕೂಡ ಈ ಹಿಂದೆ ಕೇವಲ 10 ರಿಂದ 15 ದಿನಗಳ ಕಾಲ ಸಚಿವರಾಗಿ ರಾಜೀನಾಮೆ ನೀಡಿದ್ದ ಇತಿಹಾಸವಿದೆ. ಅದೇ ಮಾದರಿಯಲ್ಲಿ ಈಗ ಬಾಲಕೃಷ್ಣ ಅವರು ಕೂಡ ಕೇವಲ ಒಂದು ತಿಂಗಳ ಕಾಲ ಸಚಿವರಾಗಿ, ನಂತರ ರಾಜೀನಾಮೆ ನೀಡಿ ಆ ಜಾಗವನ್ನು ಲೇಔಟ್ ಕೃಷ್ಣಪ್ಪ ಅವರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಆದಾಗ್ಯೂ, ಬಾಲಕೃಷ್ಣ ಅವರಿಂದ ರಾಜೀನಾಮೆ ಕೊಡಿಸುವ ರಾಜ್ಯ ಕಾಂಗ್ರೆಸ್ ತಂತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಎಲ್ಲ ಆಂತರಿಕ ಲೆಕ್ಕಾಚಾರಗಳು, ಬಣಗಳ ಸಮತೋಲನ ಹಾಗೂ ಹೈಕಮಾಂಡ್ ಅನ್ನು ಒಪ್ಪಿಸಿ ಅಂತಿಮ ನಿರ್ಧಾರಕ್ಕೆ ಬರಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ.



