ಮಾಲಾಶ್ರೀ ಮತ್ತು ಭೂಮಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಹಿಳಾ ಕೇಂದ್ರಿತ ‘ಕೆಂಡದ ಸೆರಗು’ ಚಿತ್ರವು ಏಪ್ರಿಲ್ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಕಿ ಸೋಮ್ಲಿ ನಿರ್ದೇಶನದ ಈ ಚಿತ್ರವು ಸಾಮಾಜಿಕ ಸಂದೇಶವಿರುವ ಕ್ರೈಮ್ ಇನ್ವೆಸ್ಟಿಗೇಷನ್ ಕಥಾಹಂದರವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ.
ಸಮಕಾಲೀನ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಮಹಿಳೆಯರ ಘನತೆ ಮತ್ತು ಇಂದಿನ ಸಮಾಜದಲ್ಲಿ ಯುವತಿಯರು ಎದುರಿಸುತ್ತಿರುವ ಅಸುರಕ್ಷಿತತೆಯನ್ನು ಎತ್ತಿ ತೋರಿಸುತ್ತದೆ. ತಪ್ಪು ವ್ಯಕ್ತಿಯನ್ನು ನಂಬುವ ಯುವತಿಯೊಬ್ಬಳ ನಿರ್ಧಾರವು ಆಕೆಯ ಜೀವನವನ್ನು ಹೇಗೆ ಬದಲಾಯಿಸುತ್ತದೆ ಮತ್ತು ಆಕೆಯನ್ನು ಹೇಗೆ ಶೋಷಣೆಯ ಜಾಲಕ್ಕೆ ಸಿಲುಕಿಸುತ್ತದೆ ಎಂಬುದನ್ನು ಸಿನಿಮಾ ವಿವರಿಸುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಯುವತಿಯರನ್ನು ವಂಚಿಸುವ ಜಾಲದ ತನಿಖೆ ನಡೆಸುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿ ಮಾಲಾಶ್ರೀ ಕಾಣಿಸಿಕೊಂಡಿದ್ದಾರೆ. ಇದು ಅವರ ಆ್ಯಕ್ಷನ್ ಶೈಲಿಯ ಪಾತ್ರವೇ ಆಗಿದ್ದು, ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ನಟಿ ಭೂಮಿ ಶೆಟ್ಟಿ ಅವರು ಉತ್ತರ ಕರ್ನಾಟಕದ ಹಳ್ಳಿಯೊಂದರ ಪ್ರತಿಭಾವಂತ ಕುಸ್ತಿ ಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವು ತನ್ನ ಗುರಿಯನ್ನು ಬೆನ್ನಟ್ಟುವ ಹಾದಿಯಲ್ಲಿ ಎದುರಾಗುವ ಸಂಕಷ್ಟಗಳು ಮತ್ತು ಶೋಷಣೆಯ ಜಾಲದ ಸುತ್ತ ಕತೆಯನ್ನು ಕೊಂಡೊಯ್ಯುತ್ತದೆ.
‘ಶ್ರೀ ಮುತ್ತು ಟಾಕೀಸ್’ ಬ್ಯಾನರ್ ಅಡಿಯಲ್ಲಿ ಕೊಟ್ರೇಶ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶೋಭಿತಾ, ಪ್ರತಿಮಾ ಠಾಕೂರ್, ಮೋಹನ್ ಕುಮಾರ್, ವರ್ಧನ್, ಯಶ್ ಶೆಟ್ಟಿ, ಸಿಂಧು ಲೋಕನಾಥ್ ಹಾಗೂ ಹರೀಶ್ ಅರಸು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.
ಸಿನಿಮಾಗೆ ವಿಪಿನ್ ಅವರ ಛಾಯಾಗ್ರಹಣ ಮತ್ತು ವೀರೇಶ್ ಕಂಬ್ಳಿ ಅವರ ಸಂಗೀತವಿದೆ.



