ಸಗಣಿಯಿಂದ ಅಡುಗೆ ಅನಿಲವನ್ನು ಉತ್ಪಾದಿಸಿಕೊಳ್ಳುವುದು ಹೊಸ ತಂತ್ರಜ್ಞಾನವೇನಲ್ಲ. ಅದು ಬಹಳಷ್ಟು ಹಳೆಯ ತಂತ್ರಜ್ಞಾನವೇ. ಸುಮಾರು 50 ವರ್ಷಗಳ ಹಿಂದೆ, 1970-80ರ ದಶಕಗಳಲ್ಲಿ ಸಗಣಿಯಿಂದ ಜೈವಿಕ ಅನಿಲ ಅರ್ಥಾತ್ ‘ಗೋಬರ್ ಗ್ಯಾಸ್’ ತಯಾರಿಸಿ ಅಡುಗೆ ಮಾಡಲು ಬಳಸಲಾಗುತ್ತಿತ್ತು. ಗ್ರಾಮೀಣ ಪ್ರದೇಶದ ಸಿರಿವಂತರ ಮನೆಗಳ ಬಳಿ ಅಂತಹ ಸ್ಥಾವರಗಳನ್ನು ಅಳವಡಿಸಿಕೊಂಡಿದ್ದರು.
ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ದೇಶದ ಮೇಲೆ ಯುದ್ದ ಮಾಡುತ್ತಿರುವುದರಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದೆ. ನಮ್ಮ ದೇಶವು ಆಮದು ಮಾಡಿಕೊಳ್ಳುತ್ತಿರುವ ಶೇ. 60ರಿಂದ 65ರಷ್ಟು ಅಡುಗೆ ಅನಿಲದ ಪ್ರಮಾಣದಲ್ಲಿ ಶೇ. 85ರಿಂದ 97ರಷ್ಟು ಕತಾರ್, ಯುನೈಟೆಡ್ ಅರಬ್ ಎಮಿರೇಟಸ್, ಸೌದಿ ಅರೇಬಿಯಾ, ಕುವೈತ್ ಮತ್ತು ಒಮನ್ ದೇಶಗಳು ಪೂರೈಸುತ್ತಿವೆ. ಇರಾನ್ ದೇಶದ ಹಿಡಿತದಲ್ಲಿರುವ ಹೊರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ಅಡುಗೆ ಅನಿಲ ಬರಬೇಕಿದೆ. ಯುದ್ದದ ಕಾರಣದಿಂದ ಕೆಲವು ಪರ್ಶಿಯನ್ ದೇಶಗಳ ಮೇಲೆ ಪರೋಕ್ಷ ದಾಳಿಯಾಗುತ್ತಿರುವುದರಿಂದ ಅಡುಗೆ ಅನಿಲದ ಆಮದಿನಲ್ಲಿ ಏರುಪೇರಾಗಿದೆ.
ಅಡುಗೆ ಅನಿಲ ಲಭ್ಯತೆಯು ದುಸ್ತರವಾಗಿದ್ದರಿಂದ ಕೆಲವು ಹೋಟೆಲ್‍ಗಳು ದಿಢೀರ್ ಬಂದಾಗಿವೆ. ವಿದ್ಯಾರ್ಥಿನಿಲಯಗಳು ಮುಚ್ಚಲ್ಪಟ್ಟಿವೆ ಇಲ್ಲವೇ ಕೆಲವೇ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತಿದೆ. ಜೊತೆಗೆ, ಪೆಟ್ರೋಲಿಯಂ ಉತ್ಪನ್ನಗಳ ಆಮದಿನಲ್ಲಿ ಇಳಿಮುಖವಾಗಬಹುದಾದ್ದರಿಂದ ಕೋವಿಡ್ ಲಾಕ್‍ಡೌನ್‍ನಂತಹ ಪರಿಸ್ಥಿತಿ ತಲೆದೋರಬಹುದೆಂಬ ಮಾತುಗಳು ಕೇಳಿಬರುತ್ತಿವೆ.
ನಗರ ಪ್ರದೇಶದಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೆ ಅಡುಗೆ ಅನಿಲದ ಬಳಕೆಯು ವ್ಯಾಪಕವಾಗಿದೆ. ಅತಿ ಸಣ್ಣ ರೈತರು, ಬಡವರು ಕೂಡ ಅಡುಗೆ ಅನಿಲ ಬಳಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಸೌದೆ ಒಲೆಗಳು ಕಾಣೆಯಾಗುತ್ತಿವೆ. ಹಳ್ಳಿಗಳಲ್ಲಿ ಸೌದೆ ಒಲೆಗಳಿಗೆ ಆಸ್ಪದವಿಲ್ಲದಂತೆ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಆಶ್ಚರ್ಯವೆಂಬಂತೆ ಹೆದ್ದಾರಿ ಹೋಟೆಲುಗಳ ಬಳಿ ‘ಒಲೆ ಊಟ’ ಎಂಬ ನಾಮಫಲಕಗಳು ರಾರಾಜಿಸಿ ಪ್ರಯಾಣಿಕರನ್ನು ರುಚಿಕರ ಒಲೆ ಊಟಕ್ಕೆ ಆಹ್ವಾನಿಸುತ್ತಿವೆ.
ಒಟ್ಟಿನಲ್ಲಿ, ಅಡುಗೆ ಅನಿಲದ ಲಭ್ಯತೆಯು ದುಸ್ತರವಾಗಿರುವುದರಿಂದ ಪರ್ಯಾಯ ಇಂದನ ಮೂಲಗಳಿಗೆ ಮೊರೆ ಹೋಗಬೇಕಿದೆ. ಅಂತಹ ಒಂದು ಪ್ರಯತ್ನವೆಂದರೆ ಅಡುಗೆ ಅನಿಲವಾಗಿ ಬಳಸಬಹುದಾದ ‘ಜೈವಿಕ ಅನಿಲ’ದ ಉತ್ಪಾದನೆ.

ಸಗಣಿಯಿಂದ ಅಡುಗೆ ಅನಿಲ
ಸಗಣಿಯಿಂದ ಅಡುಗೆ ಅನಿಲವನ್ನು ಉತ್ಪಾದಿಸಿಕೊಳ್ಳುವುದು ಹೊಸ ತಂತ್ರಜ್ಞಾನವೇನಲ್ಲ. ಅದು ಬಹಳಷ್ಟು ಹಳೆಯ ತಂತ್ರಜ್ಞಾನವೇ. ಸುಮಾರು 50 ವರ್ಷಗಳ ಹಿಂದೆ, 1970-80ರ ದಶಕಗಳಲ್ಲಿ ಸಗಣಿಯಿಂದ ಜೈವಿಕ ಅನಿಲ ಅರ್ಥಾತ್ ‘ಗೋಬರ್ ಗ್ಯಾಸ್’ ತಯಾರಿಸಿ ಅಡುಗೆ ಮಾಡಲು ಬಳಸಲಾಗುತ್ತಿತ್ತು. ಗ್ರಾಮೀಣ ಪ್ರದೇಶದ ಸಿರಿವಂತರ ಮನೆಗಳ ಬಳಿ ಅಂತಹ ಸ್ಥಾವರಗಳನ್ನು ಅಳವಡಿಸಿಕೊಂಡಿದ್ದರು. ಈಗ ಮತ್ತೆ ಅಂತಹ ಜೈವಿಕ ಇಂಧನ ತಯಾರಿಕೆಗೆ ಅಲ್ಲಲ್ಲಿ ಮರುಜೀವ ನೀಡಬೇಕಿದೆ. ಅದರಿಂದ ಹಳ್ಳಿಗಾಡಿನಲ್ಲಿ ಸ್ವಾವಲಂಬನೆಯ ಬದುಕಿಗೆ ಅಡಿಪಾಯ ಹಾಕಬಹುದಾಗಿದೆ.
ಜಿಕೆವಿಕೆ ಆವರಣದಲ್ಲಿ ಜೈವಿಕ ಅನಿಲದ ಉತ್ಪಾದನೆ
ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ 2011ರಲ್ಲಿ ಸ್ಥಾಪನೆಯಾಗಿರುವ ಒಂದು ದೊಡ್ಡ ಪ್ರಾತ್ಯಕ್ಷಿಕೆಯಿದೆ. ಅದಕ್ಕೆ ತಗುಲಿದ ವೆಚ್ಚ ಸುಮಾರು 35 ಲಕ್ಷಗಳು. ಅಲ್ಲಿ ಸಗಣಿಯಿಂದ ಜೈವಿಕ ಅನಿಲ ಮತ್ತು ವಿದ್ಯುತ್ ಎರಡನ್ನೂ ಉತ್ಪಾದಿಸಲಾಗುತ್ತಿದೆ. ಅಡುಗೆ ಅನಿಲವನ್ನು ಕೆಲವು ವಿದ್ಯಾರ್ಥಿ ನಿಲಯಗಳಿಗೆ ಪೂರೈಸಲಾಗುತ್ತಿತ್ತು. ಆದರೆ, ಸಿಲಿಂಡರಿನಲ್ಲಿ ಅನಿಲದ ಒತ್ತಡ ನಿರ್ವಹಣೆ ತುಸು ತ್ರಾಸದಾಯಕ. ಅಲ್ಲಿ ಮೀಥೇನ್ ಅನಿಲದಿಂದ ತಯಾರಾದ ವಿದ್ಯುತ್ ಅನ್ನು ಹಲವು ಕಚೇರಿಗಳಿಗೆ, ಕೊಳವೆಬಾವಿಯಿಂದ ನೀರೆತ್ತಲು, ಮತ್ತಿತರ ಕೆಲಸಗಳಿಗಾಗಿ ಬಳಸಲಾಗುತ್ತಿದೆ. ಪುಣೆಯ ಮೆಲ್‍ಹೆಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ. ಬೃಹತ್ ಪ್ರಮಾಣದ ಸ್ಥಾವರ ನಿರ್ಮಾಣಕ್ಕಾಗಿ ಭೇಟಿ ಕೊಡಬಹುದಾದ ವೆಬ್ ಸೈಟ್ ವಿಳಾಸ :www.mailhem.com. ಮೇಲ್‍ಹೆಮ್ ಪದದ ಅರ್ಥವು ‘ಕಸದಿಂದ ಬಂಗಾರ’ (mail:ಕಸ, hem ಬಂಗಾರ).

ಸರ್ಕಾರದ ಅನಿಲ ಯೋಜನೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಅನಿಲ ಉತ್ಪಾದನೆಗಾಗಿ ‘ಅನಿಲ ಯೋಜನೆ’ಯನ್ನು 1981-82ರ ಸುಮಾರಿಗೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯವು ಸುಮಾರು 25 ವರ್ಷಗಳ ಹಿಂದೆ ಅನಿಲ ಯೋಜನೆಯ ಜಾರಿ ವಿಷಯದಲ್ಲಿ ಪ್ರಶಸ್ತಿ ಪಡೆದಿತ್ತು. ಇತ್ತೀಚೆಗೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವಲ್ಲಿ ಅಸಡ್ಡೆ ತೋರಿಸಿದಂತೆ ಕಾಣುತ್ತಿದೆ.
ಕರ್ನಾಟಕ ರಾಜ್ಯ ಜೈವಾನಿಲ ತಂತ್ರಜ್ಞರ ಸಂಘ (ನೋಂ)ವು ಗ್ರಾಮೀಣ ಪ್ರದೇಶದಲ್ಲಿ ಮನೆಯೊಂದಕ್ಕೆ ಸಾಕಾಗುವಷ್ಟು ಅಡುಗೆ ಅನಿಲ ಉತ್ಪಾದಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿ ಸ್ಥಾವರಗಳನ್ನು ನಿರ್ಮಾಣ ಮಾಡಿಕೊಡಲು ಸಹಾಯ ಹಸ್ತ ಚಾಚಿದೆ. ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಡಿ. ಎಚ್. ಶ್ರೀನಿವಾಸ್‍ರವರು (9448180694) ಅಡುಗೆ ಅನಿಲ ಉತ್ಪಾದಿಸುವ ಪರಿಕರಗಳನ್ನು ತಯಾರು ಮಾಡುತ್ತಿದ್ದಾರೆ. ಅವರು ಕೇವಲ 50,000 ರೂಪಾಯಿಗಳ ವೆಚ್ಚದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು ಆರು ಸದಸ್ಯರಿರುವ ಕುಟುಂಬವೊಂದಕ್ಕೆ ಸಾಕಾಗುವಷ್ಟು ಅಡುಗೆ ಅನಿಲ ಉತ್ಪಾದಿಸುವ ಸ್ಥಾವರವನ್ನು ನಿರ್ಮಿಸಿಕೊಡುತ್ತಿದ್ದಾರೆ. ಅವರಿಗೆ ಈ ಕ್ಷೇತ್ರದಲ್ಲಿ ಸುಮಾರು 25 ವರ್ಷಗಳ ಅನುಭವವಿದೆ.

ಅಡುಗೆ ಅನಿಲ ಸ್ಥಾವರದ ನಿರ್ಮಾಣಕ್ಕೆ ಮುಖ್ಯವಾಗಿ ಸಗಣಿ ಮತ್ತು ನೀರು ಬೇಕು. ಪಶು ಸಾಕಾಣಿಕೆಯ ರೈತರಿಗಂತೂ ಸಗಣಿಗೆ ಬರವಿಲ್ಲ. ದಿನಕ್ಕೆ 50 ಕಿಲೋಗ್ರಾಂ ಸಗಣಿ ಇದ್ದರೆ ಸಾಕು. ಮಿಶ್ರತಳಿ ಹಸುವು ದಿನವೊಂದಕ್ಕೆ 20ರಿಂದ 25 ಕಿಲೋಗ್ರಾಂ ಸಗಣಿ ಕೊಡುತ್ತದೆ. ಎರಡು ಮಿಶ್ರತಳಿ ಹಸುಗಳಿದ್ದರೆ ಬೇಕಾಗುವಷ್ಟು ಸಗಣಿ ಸಿಗುತ್ತದೆ.
ಅನಿಲ ಉತ್ಪಾದನೆಯ ವಿಜ್ಞಾನ
ಒಂದು ಗುಂಡಿಯಲ್ಲಿ ಸಗಣಿ ಮತ್ತು ನೀರನ್ನು ಕಲಿಸಿದಾಗ ಸಗಣಿಯಲ್ಲಿರುವ ನಿರ್ಗಾಳಿ ಸೂಕ್ಷ್ಮಜೀವಿಗಳು (Anaerobic Microorganisms) ಆದಂತಹ ಬ್ಯಾಕ್ಟೀರಿಯಾ, ಪ್ರೋಟೋಜೋವಾ ಮತ್ತು ಶಿಲೀಂಧ್ರಗಳು ಸಗಣಿಯನ್ನು ಮತ್ತಷ್ಟು ಹುದುಗುವಿಕೆಗೆ (Fermentation) ಒಳಪಡಿಸುತ್ತವೆ. ದನಗಳ ಹೊಟ್ಟೆಯಲ್ಲಿ ಜರುಗುವುದು ಇಂತಹ ಹುದುಗುವಿಕೆ ಕ್ರಿಯೆಯೇ. ಹುದುಗುವಿಕೆಯಲ್ಲಿ ಸಗಣಿಯಲ್ಲಿನ ಗಟ್ಟಿ ಪದಾರ್ಥಗಳು ಜೀರ್ಣಗೊಂಡು ಜೈವಿಕ ಅನಿಲದ ಉತ್ಪಾದನೆಯಾಗುತ್ತದೆ. ಕೊಳೆಯಬಹುದಾದ ಅಡುಗೆ ಮನೆಯ ತ್ಯಾಜ್ಯ ವಸ್ತುಗಳನ್ನು ಸಗಣಿಯೊಂದಿಗೆ ಸೇರಿಸಬಹುದು. ಮೊದಲ ಬಾರಿಗೆ ಸಾಕಷ್ಟು ಜೈವಿಕ ಅನಿಲ ಉತ್ಪತ್ತಿಯಾಗಲು ಸುಮಾರು ಒಂದು ವಾರ ಬೇಕು. ನಂತರ ನಿರಂತರವಾಗಿ ಅನಿಲ ಉತ್ಪತ್ತಿಯಾಗುತ್ತಿರುತ್ತದೆ. ಅನಿಲದಲ್ಲಿ ಶೇ. 60ರಷ್ಟು ಇಂಗಾಲದ ಡೈಯಾಕ್ಸೈಡ್ ಮತ್ತು ಶೇ. 40 ರಷ್ಟು ಮೀಥೇನ್ ಅನಿಲಗಳಿರುತ್ತವೆ. ನೈಟ್ರೋಜನ್ ಮತ್ತು ಹೈಡ್ರೋಜನ್ ಸಲ್ಪೈಡ್‍ನಂತಹ ಅನಿಲಗಳಿದ್ದರೂ ಅವುಗಳ ಪ್ರಮಾಣ ಅತ್ಯಲ್ಪ.
ತಯಾರಾದ ಅನಿಲವನ್ನು ಕಬ್ಬಿಣದ ಟ್ಯಾಂಕಿನಲ್ಲಿ ಸಂಗ್ರಹಿಸಿ, ಅಲ್ಲಿಂದ ಪೈಪಿನ ಮೂಲಕ ಸ್ಟೌವ್‍ಗೆ ಹಾಯಿಸಲಾಗುತ್ತದೆ. ಮೀಥೇನ್ ಒಂದು ಉರಿಯುವ ಅನಿಲ (Flammable Gas). ಅದು ಉರಿಯುತ್ತದೆ. ಅಡುಗೆ ಮಾಡಲು ಬಳಸುವ ಜೈವಿಕ ಅನಿಲವದು. ಮತ್ತೊಂದು ಕಡೆ ಹಾಗೆ ಹುದುಗುವಿಕೆಗೆ ಒಳಗಾದ ಸಗಣಿಯು ಬೆಳೆಗಳಿಗೆ ಉತ್ತಮ ಸಾವಯವ ಗೊಬ್ಬರವಾಗುತ್ತದೆ. ಒಂದು ಕಡೆ ಅಡುಗೆ ಅನಿಲವನ್ನು ಮತ್ತೊಂದು ಕಡೆ ಸಗಣಿಯ ಉತ್ತಮ ಗೊಬ್ಬರವನ್ನು ಪಡೆಯಬಹುದು. ಇದು ದುಪ್ಪಟ್ಟು ಉಪಯೋಗದ ಸ್ವಾವಲಂಬನೆಯ ಯೋಜನೆ. ಸದರಿ ತಂತ್ರಜ್ಞಾನದಿಂದ ಮತ್ತೊಂದು ಅಗೋಚರ ಉಪಯೋಗವಿದೆ. ಅದೆಂದರೆ, ಮೀಥೇನ್ ಅನ್ನು ಉರುವಲಾಗಿ ಬಳಸುವುದರಿಂದ ಪರಿಸರಕ್ಕೆ ಮೀಥೇನ್ ಅನಿಲದ ಸೇರ್ಪಡೆಯ ಪ್ರಮಾಣವು ಕುಗ್ಗಿ ಓಜೋನ್ ಪದರಕ್ಕೆ ಧಕ್ಕೆಯಾಗುವ ಸಂಭವ ಕಡಿಮೆ ಎಂಬ ನಂಬಿಕೆಯಿದೆ.
ಮಿತವ್ಯಯದ ಪರಿಸರಸ್ನೇಹಿ ಯೋಜನೆ
ಕರ್ನಾಟಕ ರಾಜ್ಯ ಜೈವಾನಿಲ ತಂತ್ರಜ್ಞರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‍ರವರು ವಿವರಿಸುವಂತೆ ಇದೊಂದು ಪರಿಸರಸ್ನೇಹಿ ಮತ್ತು ಮಿತವ್ಯಯದ ಯೋಜನೆ. ಒಮ್ಮೆ ಸ್ಥಾಪನೆಯಾದ ಮೇಲೆ ಪ್ರತಿ ತಿಂಗಳು ಅಡುಗೆ ಅನಿಲಕ್ಕೆ ತಗುಲುವ ವೆಚ್ಚ ಅತ್ಯಲ್ಪ. ಐದಾರು ಸದಸ್ಯರಿರುವ ಕುಟುಂಬಕ್ಕೆ ತಿಂಗಳಿಗೊಂದು ಎಲ್‍ಪಿಜಿ ಸಿಲಿಂಡರ್ ಬೇಕು. ಅದಕ್ಕಾಗಿ ಪ್ರತಿ ತಿಂಗಳಿಗೆ ತಗಲುವ ವೆಚ್ಚ ಅಂದಾಜು ರೂ. 800ರಿಂದ 900. ಆದರೆ, ಜೈವಿಕ ಅನಿಲಕ್ಕೆ ತಗಲುವ ವೆಚ್ಚ ಕೇವಲ ರೂ. 18ರಿಂದ 30. ಹೆಚ್ಚೆಂದರೆ ದಿನಕ್ಕೆ ಒಂದು ರೂಪಾಯಿ ಮಾತ್ರ.

ರೈತರು ಸಗಣಿಯಿಂದ ವಿದ್ಯುತ್ ತಯಾರಿಸುವ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಸ್ವಾವಲಂಬನೆ ಸಾಧ್ಯ. ಭಾರತ ಸರ್ಕಾರದ ನವೀನ ಮತ್ತು ಮರುಬಳಕೆ ಇಂದನ ಸಚಿವಾಲಯವು ಈ ಯೋಜನೆಗೆ ಒತ್ತು ನೀಡಬೇಕಿದೆ. ಸಬ್ಸಿಡಿ ನೀಡುವ ವಿಧಾನವನ್ನು ಸರಳಗೊಳಿಸಬೇಕಿದೆ. ‘ಟರ್ನ್ ಕೀ ಬೇಸಿಸ್’ನಂತೆ ಯೋಜನೆ ಜಾರಿಯಾದರೆ ಚೆನ್ನ. ಮಹಾನಗರಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು, ಉಪ ನಗರಗಳು, ಮಾದರಿ ಗ್ರಾಮಗಳು, ಕೈಗಾರಿಕೆಗಳು, ವಿಶೇಷ ಆರ್ಥಿಕ ವಲಯಗಳು, ವಿಶ್ವವಿದ್ಯಾಲಯಗಳ ಆವರಣಗಳು ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬಹುದು.
ಕೊನೆಯ ಮಾತು
ಆಸಕ್ತ ರೈತರು ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದ ಜಿಕೆವಿಕೆ ಆವರಣಕ್ಕೆ ಭೇಟಿಕೊಟ್ಟು ಅಲ್ಲಿ ಸ್ಥಾಪಿಸಲಾಗಿರುವ ಸಗಣಿಯಿಂದ ಅನಿಲ ಮತ್ತು ವಿದ್ಯುತ್ ಉತ್ಪಾದನೆಯ ಅತಿದೊಡ್ಡ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಬಹುದು. ಕರ್ನಾಟಕ ರಾಜ್ಯ ಜೈವಾನಿಲ ತಂತ್ರಜ್ಞರ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀನಿವಾಸ್ (9448180694)ರವರನ್ನು ಸಂಪರ್ಕಿಸಿ ಅವರು ಈಗಾಗಲೇ ರೈತರಿಗೆ ನಿರ್ಮಿಸಿಕೊಟ್ಟಿರುವ ಸಾವಿರಾರು ಜೈವಿಕ ಅನಿಲ ಸ್ಥಾವರಗಳಲ್ಲಿ ಯಾವುದಾದರೊಂದಕ್ಕೆ ಭೇಟಿ ಕೊಟ್ಟು ವಿವರಗಳನ್ನು ಪಡೆದು ತಮ್ಮ ಹಟ್ಟಿಯಲ್ಲಿ, ಹಿತ್ತಲಲ್ಲಿ ಅಂತಹ ಸ್ಥಾವರದ ಸ್ಥಾಪನೆಗೆ ಮುಂದಾಗಬಹುದು. ಆಗ ಎಲ್‍ಪಿಜಿ ಅನಿಲಕ್ಕೆ ಕಾಯಬೇಕಾದ ಪ್ರಮೇಯವೇ ಬರುವುದಿಲ್ಲ. ಅಡುಗೆ ಅನಿಲ ಸರಬರಾಜಿನ ಬಿಕ್ಕಟ್ಟಿನ ಪರಿಹಾರಕ್ಕೆ ರೈತರು ತಮ್ಮ ಕೊಡುಗೆಯನ್ನು ನೀಡಬಹುದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸರ್ಕಾರದ ಜಾಲತಾಣದಲ್ಲಿ ಅರ್ಜಿ ಭರ್ತಿಮಾಡುವ ವಿಧಾನವನ್ನು ರೈತರಿಗೆ ತಿಳಿಸಿಕೊಡುವುದೊಳಿತು. ಸರ್ಕಾರಗಳು ಕಾಲಕಾಲಕ್ಕೆ ಅನುದಾನ ನೀಡಿ ಜೈವಿಕ ಅನಿಲ ಉತ್ಪಾದನೆಯನ್ನು ಉತ್ತೇಜಿಸಬಹುದು.

ಪ್ರೊ. ಎಂ. ನಾರಾಯಣ ಸ್ವಾಮಿ
ನಿವೃತ್ತ ಡೀನ್ ಪಶುವೈದ್ಯಕೀಯ ಮಹಾವಿದ್ಯಾಲಯ, ಹೆಬ್ಬಾಳ


