ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಇದೀಗ ಸಿನಿಮಾ ರಂಗದಿಂದಲೂ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ‘ಕಾಂತಾರ’ ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ ಅವರು ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟದ ಪರವಾಗಿ ದನಿ ಎತ್ತಿದ್ದು, “ವ್ಯವಸ್ಥೆಯನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು” ಎಂದು ಖಡಕ್ ಆಗಿ ನುಡಿದಿದ್ದಾರೆ.
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಸಿಜೆಪಿ ಆಂದೋಲನದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ವ್ಯವಸ್ಥೆಯನ್ನು ಪ್ರಶ್ನಿಸಿದ ತಕ್ಷಣ ನಿರ್ದಿಷ್ಟ ಹಣೆಪಟ್ಟಿ ಕಟ್ಟುವ ಟ್ರೆಂಡ್ ಬಗ್ಗೆಯೂ ಸ್ಪಷ್ಟನೆ ನೀಡಿದ ಅವರು, “ನಾನು ದೇವರ ದರ್ಶನ ಪಡೆಯುತ್ತೇನೆ, ಹಾಗಂತ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಕೇಳಿದ ತಕ್ಷಣ ನಾನು ಹಿಂದೂ ವಿರೋಧಿ ಆಗುವುದಿಲ್ಲ. ರಾಜಕೀಯ ಬೇರೆ, ಧರ್ಮ ಎಂಬುದು ಸಂಪೂರ್ಣವಾಗಿ ವೈಯಕ್ತಿಕ ವಿಚಾರ” ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ವಿದ್ಯಾರ್ಥಿಗಳು ಹಾಗೂ ಸಿಜೆಪಿ ನಡೆಯನ್ನು ಸಮರ್ಥಿಸಿಕೊಂಡಿರುವ ಅವರು, ಹೋಟೆಲ್ ಒಂದರ ನೈಜ ಉದಾಹರಣೆ ನೀಡಿದ್ದಾರೆ. “ಹೋಟೆಲ್‌ನಲ್ಲಿ ಊಟ ಚೆನ್ನಾಗಿಲ್ಲ ಎಂದರೆ, ನಾವು ನೇರವಾಗಿ ಮ್ಯಾನೇಜರ್ ಅನ್ನು ಪ್ರಶ್ನಿಸುತ್ತೇವೆ, ಕೊನೆಗೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿರುವುದು ಅವರ ಪ್ರಜಾಪ್ರಭುತ್ವದ ಹಕ್ಕು. ಸಚಿವರೊಬ್ಬರನ್ನು ತೆಗೆದ ತಕ್ಷಣ ಇಡೀ ವ್ಯವಸ್ಥೆ ಬದಲಾಗದಿರಬಹುದು, ಆದರೆ ಮುಂದೆ ಬರುವವರಿಗೆ ಒಂದು ಭಯ ಇರುತ್ತದೆ ಮತ್ತು ಸಿಸ್ಟಮ್ ಸರಿಹೋಗಬಹುದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಸಂಪೂರ್ಣವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ. ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀಟ್ ಮರುಪರೀಕ್ಷೆ ನಡೆಸುವುದೂ ಕೂಡ ನಮ್ಮ-ನಿಮ್ಮ ತೆರಿಗೆ ಹಣದಿಂದಲೇ ಆಗಿರುವುದರಿಂದ, ವ್ಯವಸ್ಥೆಯನ್ನು ಪ್ರಶ್ನಿಸುವ ಹಕ್ಕು ಸಾರ್ವಜನಿಕರಿಗೆ ಇದೆ ಎಂದು ಹೇಳಿದ್ದಾರೆ.
ಹಿಂದಿನ ತಲೆಮಾರಿಗೆ ಹೋಲಿಸಿದರೆ ಈಗಿನ ವಿದ್ಯಾರ್ಥಿಗಳು ತೋರುತ್ತಿರುವ ಅಪ್ರತಿಮ ಧೈರ್ಯವನ್ನು ಸಪ್ತಮಿ ಶ್ಲಾಘಿಸಿದ್ದಾರೆ. “ನಮಗೆಲ್ಲಾ ಆ ಕಾಲದಲ್ಲಿ ಇಂತಹ ವಿಚಾರಗಳನ್ನು ಪ್ರಶ್ನಿಸುವ ಗಟ್ಸ್ ಅಥವಾ ಧೈರ್ಯ ಇರಲಿಲ್ಲ. ಆದರೆ, ಇಂದಿನ ವಿದ್ಯಾರ್ಥಿಗಳು ಧೈರ್ಯ ಮಾಡಿ ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅವರ ಆ ಪ್ರಶ್ನೆಗಳಿಗೆ ಸರ್ಕಾರ ಕನಿಷ್ಠ ಉತ್ತರವನ್ನಾದರೂ ನೀಡಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ನೀಟ್ ಆಕಾಂಕ್ಷಿಗಳ ಮೇಲಿರುವ ಮಾನಸಿಕ ಒತ್ತಡದ ಬಗ್ಗೆ ತಮಗೆ ಸ್ವತಃ ಅರಿವಿರುವುದಾಗಿ ತಿಳಿಸಿದ ಅವರು, “ನನ್ನ ತಂಗಿಯೂ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಕೋಚಿಂಗ್‌ಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಇದರ ಜೊತೆಗೆ ಪೋಷಕರೂ ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ. ಮೊದಲ ಬಾರಿ ಪರೀಕ್ಷೆ ಬರೆದು ಪಡೆದ ಅಂಕಗಳನ್ನೇ ಮರುಪರೀಕ್ಷೆಯಲ್ಲೂ ಪಡೆಯುತ್ತಾರೆ ಎಂಬುದಕ್ಕೆ ಯಾವುದೇ ಖಾತರಿ ಇರುವುದಿಲ್ಲ. ಈ ಎಲ್ಲಾ ನೋವು ನನಗೂ ಅರ್ಥವಾಗುತ್ತಿದೆ, ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಬೇಕು” ಎಂದು ಸಪ್ತಮಿ ಗೌಡ ಒತ್ತಾಯಿಸಿದ್ದಾರೆ.




