ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿ ಹಾಗೂ ರಾಜ್ಯ ಹೆದ್ದಾರಿ–122ರ ಕಳಪೆ ಕಾಮಗಾರಿಯನ್ನು ಖಂಡಿಸಿ ಚಿಟಗುಪ್ಪ ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅಹಿಂದ ಚಿಂತಕರ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಗ್ರಾಮದ ವಿವಿಧ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ನಾಡ ಕಚೇರಿಗೆ ತೆರಳಿದರು. ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಈಶ್ವರ ಖಂಡ್ರೆ ಅವರ ಹೆಸರಿಗೆ ಬರೆದ ಮನವಿಯನ್ನು ಚಿಟಗುಪ್ಪ ತಹಸೀಲ್ದಾರ್ ಮಂಜುನಾಥ ಪಂಚಾಳ ಅವರಿಗೆ ಸಲ್ಲಿಸಿದರು.
ಅಹಿಂದ ಚಿಂತಕರ ವೇದಿಕೆ ಜಿಲ್ಲಾಧ್ಯಕ್ಷ ಧನರಾಜ ಬೇಮಳಖೇಡ ಮಾತನಾಡಿ, “ಮಹಾರಾಷ್ಟ್ರ ಗಡಿಯಿಂದ ನಿರ್ಮಿಸಲಾಗಿರುವ ಸುಮಾರು 120 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ-122ರ ಕಾಮಗಾರಿ ಕಳಪೆಯಾಗಿದ್ದು, ರಸ್ತೆ ನಿರ್ಮಿಸಿ ಮೂರು ವರ್ಷವೂ ಪೂರ್ಣಗೊಂಡಿಲ್ಲ. ಈಗಾಗಲೇ ಹಲವೆಡೆ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಕಳಪೆ ಕಾಮಗಾರಿಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಯುವ ಮುಖಂಡ ಬಲಭದ್ರ ದಾಮಾ ಮಾತನಾಡಿ, “ಬೇಮಳಖೇಡ ಗ್ರಾಮದಲ್ಲಿ ಸುಮಾರು ₹4 ಕೋಟಿ ಅನುದಾನದಲ್ಲಿ ಕೈಗೊಂಡಿರುವ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಕಳಪೆಯಾಗಿದ್ದು, ಬಹುತೇಕ ಮನೆಗಳ ನಲ್ಲಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಜೆಜೆಎಂ ಕಾಮಗಾರಿ ಹೆಸರಿನಲ್ಲಿ ಗ್ರಾಮದಲ್ಲಿ ರಸ್ತೆಗಳನ್ನೆಲ್ಲ ಬೇಕಾಬಿಟ್ಟಿಯಾಗಿ ಅಗೆದು ಹಾಕಲಾಗಿದ್ದು, ಕಾಮಗಾರಿ ಪೂರ್ಣಗೊಂಡರೂ ರಸ್ತೆಗಳನ್ನು ದುರಸ್ತಿಪಡಿಸದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೂಡಲೇ ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ, ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ದುರಸ್ತಿಪಡಿಸಬೇಕು. ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಬಕ್ಕಪ್ಪ ಮಾಣಿಕಪ್ಪ, ಬಸವರಾಜ ನಾಗಯ್ಯ ಸ್ವಾಮಿ, ಜಗನಾಥ ಶರಣಪ್ಪ, ಜಾನಸನ್, ಕರೀಂ, ಮಹಾವೀರ, ವಿಜಯಕುಮಾರ, ಶಿವರಾಜ, ಮಲ್ಲಿಕಾರ್ಜುನ ಕಾಶಿನಾಥ, ಈಶ್ವರ ಬಂಡೆಪ್ಪ, ಭಕ್ತರಾಜ ಪಾಟೀಲ್, ವಿನೋದ ಪಾಟೀಲ್,ರಾಚಪ್ಪ ನಿರ್ಣಾ ಸೇರಿದಂತೆ ಗ್ರಾಮಸ್ಥರು ಹಾಗೂ ಅಹಿಂದ ಚಿಂತಕರ ವೇದಿಕೆಯ ಪ್ರಮುಖರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | ವಸತಿ ಶಾಲೆಗಳ ಪ್ರಾಂಶುಪಾಲರು, ಮೇಲ್ವಿಚಾರಕರ ವರ್ಗಾವಣೆಗೆ ಡಿವಿಪಿ ಆಗ್ರಹ





