ಖಾಸಗಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ
ಅಪರಿಚಿತರ ವಿರುದ್ಧ ಪ್ರಕರಣ ದಾಖಲು
ಸ್ಯಾಂಡಲ್‌ವುಡ್‌ನ ಸ್ಟಾರ್ ನಟ ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಹೊತ್ತಿನಲ್ಲೇ ನಟನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಅಪರಿಚಿತರು ಬೆದರಿಕೆ ಪತ್ರ ಬರೆದಿದ್ದಾರೆ. ಪತ್ರ ಸ್ವೀಕರಿಸಿರುವ ಸುದೀಪ್ ಆಪ್ತ ಸಹಾಯಕ ಜ್ಯಾಕ್ ಮಂಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದೀಪ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪರಿಚಿತರು ಎರಡು ಪತ್ರಗಳನ್ನು ಬರೆದಿದ್ದಾರೆ. ಈ ಎರಡೂ ಬೆದರಿಕೆ ಪತ್ರಗಳು ಅವರ ಆಪ್ತ ಸಹಾಯಕ ಜ್ಯಾಕ್ ಮಂಜು ಅವರಿಗೆ ಕೈಗೆ ಸಿಕ್ಕಿವೆ. ನಟನ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿಯೂ ಬೆದರಿಕೆ ಹಾಕಲಾಗಿದೆ.
ಈ ಹಿನ್ನೆಲೆ ಜ್ಯಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆದರಿಕೆ ಪತ್ರದ ಮೂಲಕ ಸುದೀಪ್ ಅವರ ಘನತೆಗೆ ಧಕ್ಕೆಯುಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ. ದೂರಿನನ್ವಯ ಪೊಲೀಸರು ಸೆಕ್ಷನ್ 506 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದು ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸುದೀಪ್, ದರ್ಶನ್ ಇಂದು ಬಿಜೆಪಿ ಸೇರುವ ಸಾಧ್ಯತೆ
ಮಾರ್ಚ್ 29ರಂದು ಸುದೀಪ್ ಅವರ ಮನೆಗೆ ಬೆದರಿಕೆ ಪತ್ರಗಳು ಬಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ನಟ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಚರ್ಚೆ ಶುರುವಾದ ಬೆನ್ನಲ್ಲೇ ಬೆದರಿಕೆ ಪತ್ರದ ಪ್ರಕರಣ ಬಹಿರಂಗಗೊಂಡಿದೆ.