ʼToxicʼ ಬಿಡುಗಡೆಗೆ ದಿನಗಣನೆ; ಮುಹೂರ್ತದಿಂದ ರಿಲೀಸ್‌ವರೆಗಿನ ಹೈಪ್‌ ಹೇಗಿತ್ತು ಗೊತ್ತೇ?

Date:

‘ಕೆಜಿಎಫ್‌: ಚಾಪ್ಟರ್‌ 2’ ಬಳಿಕ ರಾಕಿಂಗ್‌ ಸ್ಟಾರ್‌ ಯಶ್‌ ಅವರನ್ನು ದೊಡ್ಡ ಪರದೆಯಲ್ಲಿ ಕಾಣಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆ ನಿರೀಕ್ಷೆಗೆ ಇನ್ನೆರಡು ದಿನಗಳಲ್ಲಿ ತೆರೆ ಬೀಳಲಿದೆ. ಹಲವು ಹಂತದ ಚಿತ್ರೀಕರಣ, ತಾರಾಬಳಗದ ಸೇರ್ಪಡೆ, ಬದಲಾದ ಬಿಡುಗಡೆ ದಿನಾಂಕಗಳು, ಹಾಡು-ಟ್ರೇಲರ್‌ನ ಹೈಪ್‌ ಹೀಗೆ ಸತತವಾಗಿ ಸುದ್ದಿಯಲ್ಲಿದ್ದ ‘Toxic: A Fairy Tale for Grown-Ups’ ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ.

- Advertisement -

ನಟ ಯಶ್‌ ಅವರ ವೃತ್ತಿಜೀವನದ 19ನೇ ಸಿನಿಮಾವಾಗಿ ಆರಂಭವಾದ ‘ಟಾಕ್ಸಿಕ್‌’, ಘೋಷಣೆಯಾದ ಕ್ಷಣದಿಂದಲೇ ಭಾರಿ ನಿರೀಕ್ಷೆ ಹುಟ್ಟುಹಾಕಿತ್ತು. ಅದರಲ್ಲೂ ‘ಕೆಜಿಎಫ್‌’ನಂತಹ ಪ್ಯಾನ್‌ ಇಂಡಿಯಾ ಯಶಸ್ಸಿನ ಬಳಿಕ ಯಶ್‌ ಯಾವ ರೀತಿಯ ಕಥೆ ಆಯ್ಕೆ ಮಾಡುತ್ತಾರೆ ಎಂಬ ಕುತೂಹಲಕ್ಕೆ ಈ ಸಿನಿಮಾದ ಶೀರ್ಷಿಕೆಯೇ ಮೊದಲ ಉತ್ತರವಾಗಿತ್ತು. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಹಾಗೂ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ನಿರ್ಮಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

2023ರ ಡಿಸೆಂಬರ್‌ನಲ್ಲಿ ‘ಯಶ್‌ 19’ ಅಧಿಕೃತವಾಗಿ ಘೋಷಣೆಯಾಯಿತು. ಬಳಿಕ ‘ಟಾಕ್ಸಿಕ್‌: ಎ ಫೇರಿ ಟೇಲ್‌ ಫಾರ್‌ ಗ್ರೋನ್‌-ಅಪ್ಸ್‌’ ಎಂಬ ಶೀರ್ಷಿಕೆ ಬಹಿರಂಗವಾಯಿತು. ಘೋಷಣಾ ವಿಡಿಯೊದಲ್ಲಿನ ಯಶ್‌ ಅವರ ಲುಕ್‌, ಜೋಕರ್‌ ಥೀಮ್‌ ಹಾಗೂ ಚಿತ್ರದ ಟೈಟಲ್‌ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹುಟ್ಟುಹಾಕಿತು. ಆಗಲೇ ಚಿತ್ರವನ್ನು 2025ರ ಏಪ್ರಿಲ್‌ 10ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ನಿರ್ಮಾಣ ಕಾರ್ಯದ ಅವಧಿ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಆ ದಿನಾಂಕಕ್ಕೆ ಸಿನಿಮಾ ತೆರೆಗೆ ಬರಲಿಲ್ಲ.

‘ಮೂತೋನ್‌’ನಂತಹ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಗೀತು ಮೋಹನ್‌ದಾಸ್‌ ಅವರೊಂದಿಗೆ ಯಶ್‌ ಕೈಜೋಡಿಸಿದ್ದು ‘ಟಾಕ್ಸಿಕ್‌’ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಮಾಸ್‌ ಇಮೇಜ್‌ ಹೊಂದಿರುವ ಯಶ್‌ ಮತ್ತು ವಿಭಿನ್ನ ಕಥೆಗಳಿಗೆ ಹೆಸರಾದ ಗೀತು ಅವರ ಕಾಂಬಿನೇಷನ್‌ ಯಾವ ರೀತಿಯ ಸಿನಿಮಾ ನೀಡಲಿದೆ ಎಂಬ ಕುತೂಹಲ ಆರಂಭದಿಂದಲೂ ಇತ್ತು. ಚಿತ್ರದ ಕಥೆಯ ಬಹುತೇಕ ವಿವರಗಳನ್ನು ಚಿತ್ರತಂಡ ಗೌಪ್ಯವಾಗಿಯೇ ಇಟ್ಟಿದೆ. ಹೀಗಾಗಿ ಪ್ರತಿಯೊಂದು ಪೋಸ್ಟರ್‌, ಲುಕ್‌ ಹಾಗೂ ವಿಡಿಯೊವೂ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

WhatsApp Image 2026 08 24 at 4.28.43 PM 1

‘ಟಾಕ್ಸಿಕ್‌’ಗೆ ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ಪ್ರಮುಖ ಕಲಾವಿದರು ಸೇರ್ಪಡೆಯಾಗಿರುವುದು ಗೊತ್ತೇ ಇದೆ. ಟೀಸರ್‌ ಹಾಗೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಂತೆ, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ಕನ್ನಡದ ರುಕ್ಮಿಣಿ ವಸಂತ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಯಶ್‌ ಮತ್ತು ನಯನತಾರಾ ಕಾಂಬಿನೇಷನ್‌ ಹೇಗಿರಲಿದೆ ಎಂಬ ಕುತೂಹಲ ಕನ್ನಡ ಸಿನಿಪ್ರೇಕ್ಷಕರಲ್ಲಿದೆ. ಕಿಯಾರಾ ಅಡ್ವಾಣಿ ಸೇರ್ಪಡೆಯಿಂದ ಸಿನಿಮಾದ ಪ್ಯಾನ್‌ ಇಂಡಿಯಾ ವ್ಯಾಪ್ತಿಯೂ ಮತ್ತಷ್ಟು ವಿಸ್ತರಿಸಿದೆ.

‘ಟಾಕ್ಸಿಕ್‌’ ಸಾಮಾನ್ಯ ಬಜೆಟ್‌ನ ಸಿನಿಮಾ ಅಲ್ಲ ಎಂಬುದು ಆರಂಭದಿಂದಲೇ ಸ್ಪಷ್ಟವಾಗಿತ್ತು. ಭಾರಿ ಸೆಟ್‌ಗಳು, ಆ್ಯಕ್ಷನ್‌ ದೃಶ್ಯಗಳು ಹಾಗೂ ವಿಭಿನ್ನ ದೃಶ್ಯ ಸಂಯೋಜನೆಗಾಗಿ ಚಿತ್ರತಂಡ ದೊಡ್ಡ ಪ್ರಮಾಣದ ಸಿದ್ಧತೆ ಮಾಡಿಕೊಂಡಿತು. 2024ರ ಅಕ್ಟೋಬರ್‌ನಲ್ಲಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ದೊರೆಯಿತು. ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಯಿತು. ಚಿತ್ರದ ನಿರ್ಮಾಣ ಗುಣಮಟ್ಟದ ಬಗ್ಗೆ ಚಿತ್ರತಂಡ ಆರಂಭದಿಂದಲೂ ರಾಜಿ ಮಾಡಿಕೊಂಡಿಲ್ಲ.

‘ಟಾಕ್ಸಿಕ್‌’ನ ಪಯಣದಲ್ಲಿ ಪದೇಪದೇ ಚರ್ಚೆಗೆ ಬಂದದ್ದು ಬಿಡುಗಡೆ ದಿನಾಂಕ. ಮೊದಲಿಗೆ 2025ರ ಏಪ್ರಿಲ್‌ 10ರಂದು ಬಿಡುಗಡೆ ಎಂದು ಘೋಷಿಸಿದ್ದ ಚಿತ್ರ ನಂತರ 2026ರವರೆಗೆ ಸಾಗಿತು. ಮಾರ್ಚ್‌ 19ರಂದು ‘ಟಾಕ್ಸಿಕ್‌’ ಹಾಗೂ ‘ಧುರಂಧರ್‌: ದಿ ರಿವೆಂಜ್‌’ ಮುಖಾಮುಖಿಯಾಗಬೇಕಿತ್ತು. ಎರಡೂ ಚಿತ್ರಗಳ ನಡುವೆ ಭಾರಿ ಬಾಕ್ಸ್‌ ಆಫೀಸ್‌ ಕ್ಲ್ಯಾಶ್‌ ನಿರೀಕ್ಷಿಸಲಾಗಿತ್ತು. ಆದರೆ ಮಾರ್ಚ್‌ 4ರಂದು ‘ಟಾಕ್ಸಿಕ್‌’ ತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿ ಜೂನ್‌ 4ಕ್ಕೆ ನಿಗದಿಪಡಿಸಿತು. ಮಧ್ಯಪ್ರಾಚ್ಯದಲ್ಲಿನ ಅನಿಶ್ಚಿತ ಪರಿಸ್ಥಿತಿಯನ್ನು ಅಧಿಕೃತ ಕಾರಣವಾಗಿ ಚಿತ್ರತಂಡ ನೀಡಿದರೂ, ರಣವೀರ್‌ ಸಿಂಗ್‌ ಅಭಿನಯದ ‘ಧುರಂಧರ್‌ 2’ ಜತೆಗಿನ ನೇರ ಪೈಪೋಟಿಯಿಂದ ಹಿಂದೆ ಸರಿದಿರುವುದು ಚಿತ್ರರಂಗದಲ್ಲೂ ಚರ್ಚೆಗೆ ಕಾರಣವಾಯಿತು.

ನಂತರ ಜೂನ್‌ 4 ಹೊಸ ದಿನಾಂಕವಾಗಿ ಘೋಷಣೆಯಾಯಿತು. ಆದರೆ ಜೂನ್‌ 4ಕ್ಕೂ ಸಿನಿಮಾ ತೆರೆಗೆ ಬರಲಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಚಿತ್ರವನ್ನು ಸಮರ್ಪಕವಾಗಿ ಬಿಡುಗಡೆ ಮಾಡಲು ಇನ್ನಷ್ಟು ಸಮಯ ಬೇಕಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಿತ್ರರಂಡ ಹೇಳಿತು. ಕೊನೆಗೂ ಜೂನ್‌ 21ರಂದು ಯಶ್‌ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಿದರು. ‘Honour Thy Father’ ಎಂಬ ಸಾಲಿನೊಂದಿಗೆ ಆಗಸ್ಟ್‌ 26ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಪ್ರಕಟಿಸಲಾಯಿತು.

2026ರಲ್ಲಿ ಬಿಡುಗಡೆಯಾದ ಯಶ್‌ ಅವರ ‘ರಾಯ’ ಪಾತ್ರದ ಲುಕ್‌ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿತು. ವಿಭಿನ್ನ ಗೆಟಪ್‌ನಲ್ಲಿದ್ದ ಯಶ್‌ ಅವರ ಲುಕ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಯಿತು. ‘ಟಾಕ್ಸಿಕ್‌’ನಲ್ಲಿ ಯಶ್‌ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಈ ಲುಕ್‌ ಕೆಲವು ಸುಳಿವು ನೀಡಿದರೂ, ಕಥೆಯ ಪ್ರಮುಖ ಅಂಶಗಳನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ.

ಚಿತ್ರದ ಪ್ರಚಾರಕ್ಕೆ ಹಾಡುಗಳು ಮತ್ತಷ್ಟು ವೇಗ ನೀಡಿದವು. ‘ತಬಾಹಿ’, ‘ಲೇಡೀಸ್‌ ಆ್ಯಂಡ್‌ ಲೇಡೀಸ್‌’, ‘ಮಧೋಶ್‌’ ಸೇರಿದಂತೆ ಹಾಡುಗಳು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದವು. ಹಾಡುಗಳಲ್ಲಿನ ಯಶ್‌ ಅವರ ಲುಕ್‌, ನೃತ್ಯ ಹಾಗೂ ಅದ್ಧೂರಿ ಮೇಕಿಂಗ್‌ ಅಭಿಮಾನಿಗಳ ಗಮನ ಸೆಳೆಯಿತು. ಇದರೊಂದಿಗೆ ಸಿನಿಮಾದ ಬಿಡುಗಡೆಗೆ ಮುನ್ನವೇ ಚಿತ್ರದ ಬಗ್ಗೆ ಚರ್ಚೆ ತಾರಕಕ್ಕೇರಿತು.

ಆಗಸ್ಟ್‌ 8ರಂದು ಬೆಂಗಳೂರಿನಲ್ಲಿ ಚಿತ್ರದ ಬಹುನಿರೀಕ್ಷಿತ ಟ್ರೇಲರ್‌ ಬಿಡುಗಡೆಯಾಯಿತು. ಟ್ರೇಲರ್‌ನಲ್ಲಿ ಯಶ್‌ ಅವರ ‘ರಾಯ’ ಪಾತ್ರದ ಜತೆಗೆ ಆ್ಯಕ್ಷನ್‌, ಗ್ಯಾಂಗ್‌ಸ್ಟರ್‌ ಜಗತ್ತು, ಸಂಬಂಧಗಳು ಹಾಗೂ ಸಂಘರ್ಷದ ಹಲವು ಪದರಗಳ ಝಲಕ್‌ ಸಿಕ್ಕಿತು. ಟ್ರೇಲರ್‌ ಚಿತ್ರದ ಕಥೆಯನ್ನು ಸಂಪೂರ್ಣವಾಗಿ ಬಿಚ್ಚಿಡದಿದ್ದರೂ, ಸಿನಿಮಾ ಕುರಿತು ಹೈಪ್‌ ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಯಶ್‌ ಅವರ ಸ್ಟೈಲ್‌ ಮತ್ತು ಆ್ಯಕ್ಷನ್‌ ದೃಶ್ಯಗಳು ಅಭಿಮಾನಿಗಳಿಂದ ಮೆಚ್ಚುಗೆ ಪಡೆದವು.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದೃಶ್ಯಗಳು, ಪಾತ್ರಗಳ ಚಿತ್ರಣ, ಕಥೆಯ ಸ್ವರೂಪ ಹಾಗೂ ಮೇಕಿಂಗ್‌ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾದವು. ವಿಶೇಷವಾಗಿ ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಹಿಂಸಾತ್ಮಕ ದೃಶ್ಯಗಳು, ಗ್ಲಾಮರ್‌ ಅಂಶಗಳು ಹಾಗೂ ಮಹಿಳಾ ಪಾತ್ರಗಳ ಪ್ರಾತಿನಿಧ್ಯದ ಬಗ್ಗೆ ಕೆಲವರು ಟೀಕೆ ವ್ಯಕ್ತಪಡಿಸಿದರು. ಜತೆಗೆ, ‘ಟಾಕ್ಸಿಕ್‌’ನ ಟೀಸರ್‌ ಮತ್ತು ಟ್ರೇಲರ್‌ ನಿರೀಕ್ಷೆ ಹುಟ್ಟಿಸುವ ಭರದಲ್ಲಿ ಕಥೆಯ ಬಗ್ಗೆ ಸ್ಪಷ್ಟತೆ ನೀಡಿಲ್ಲ ಎಂಬ ಅಭಿಪ್ರಾಯವೂ ಕೆಲವು ವಲಯಗಳಲ್ಲಿ ಕೇಳಿಬಂತು. ಮತ್ತೊಂದೆಡೆ, ಯಶ್‌ ಅವರ ಹೊಸ ಲುಕ್‌, ಆ್ಯಕ್ಷನ್‌ ದೃಶ್ಯಗಳು, ಛಾಯಾಗ್ರಹಣ ಹಾಗೂ ವಿಭಿನ್ನ ದೃಶ್ಯ ವಿನ್ಯಾಸವನ್ನು ಅಭಿಮಾನಿಗಳು ಮೆಚ್ಚಿಕೊಂಡರು.

ಆಗಸ್ಟ್‌ 22ರಂದು ಹೈದರಾಬಾದ್‌ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರೀ-ರಿಲೀಸ್‌ ಕಾರ್ಯಕ್ರಮದಲ್ಲಿ ಅನಿರೀಕ್ಷಿತ ಅವಘಡ ಸಂಭವಿಸಿತು. ಯಶ್‌ ಅವರನ್ನು ನೋಡಲು ಸಾವಿರಾರು ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಸೇರಿದ್ದ ಕಾರ್ಯಕ್ರಮದಲ್ಲಿ ಸೌಂಡ್‌ ಬಾಕ್ಸ್‌/ಸೌಂಡ್‌ ಸಿಸ್ಟಂನ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕೆಲವರು ಗಾಯಗೊಂಡರು.

ಘಟನೆ ಸಂಭವಿಸಿದ ವೇಳೆ ಯಶ್‌ ವೇದಿಕೆಯಲ್ಲಿದ್ದರು. ತಕ್ಷಣವೇ ತಮ್ಮ ಭಾಷಣ ನಿಲ್ಲಿಸಿ ಗಾಯಗೊಂಡವರತ್ತ ಗಮನ ಹರಿಸುವಂತೆ ಆಯೋಜಕರು ಹಾಗೂ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಜನರು ಅಪಾಯಕಾರಿ ರೀತಿಯಲ್ಲಿ ವೇದಿಕೆ ಅಥವಾ ಇತರೆ ಸೆಟ್‌ಗಳ ಮೇಲೆ ಹತ್ತದಂತೆ ಯಶ್‌ ಮನವಿ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ‘ಟಾಕ್ಸಿಕ್‌’ನ ಟೀಸರ್‌ ಮತ್ತು ಟ್ರೇಲರ್‌ನಲ್ಲಿ ಮಹಿಳೆಯರ ಚಿತ್ರಣದ ಬಗ್ಗೆ ವ್ಯಕ್ತವಾಗಿದ್ದ ಟೀಕೆಗಳಿಗೂ ಯಶ್‌ ಪ್ರತಿಕ್ರಿಯಿಸಿದರು. ಪ್ರಚಾರದ ತುಣುಕುಗಳು ಇಡೀ ಸಿನಿಮಾವನ್ನು ಪ್ರತಿಬಿಂಬಿಸುವುದಿಲ್ಲ. ಸಿನಿಮಾದಲ್ಲಿ ಮಹಿಳೆಯರಿಗೂ ಬಲವಾದ ಧ್ವನಿ ಇದೆ; ಚಿತ್ರ ನೋಡಿದ ಬಳಿಕ ಅದು ಅರ್ಥವಾಗಲಿದೆ ಎಂದು ಅವರು ಸಮರ್ಥಿಸಿಕೊಂಡರು.

image 2026 08 24T163537.613

ಸೆನ್ಸಾರ್‌ ಪ್ರಕ್ರಿಯೆ ಪೂರ್ಣಗೊಳಿಸಿರುವ ‘ಟಾಕ್ಸಿಕ್‌’, ‘A’ ಸರ್ಟಿಫಿಕೇಟ್‌ ಪಡೆದುಕೊಂಡಿದೆ. ಹೀಗಾಗಿ ಚಿತ್ರವನ್ನು ವಯಸ್ಕರು ಮಾತ್ರ ವೀಕ್ಷಿಸಬಹುದಾಗಿದೆ. ಟ್ರೇಲರ್‌ನಲ್ಲಿ ಕಾಣಿಸಿಕೊಂಡ ಹಿಂಸಾತ್ಮಕ ದೃಶ್ಯಗಳು ಹಾಗೂ ಚಿತ್ರದ ಒಟ್ಟಾರೆ ಟೋನ್‌ ಗಮನಿಸಿದರೆ ‘ಟಾಕ್ಸಿಕ್‌’ ಯಶ್‌ ಅವರ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾದ ವಲಯದಲ್ಲಿ ಸಾಗಲಿದೆ ಎಂಬ ನಿರೀಕ್ಷೆಯಂತೂ ಮೂಡಿದೆ.

ಇದನ್ನೂ ಓದಿ: ಸೌಕಾರ್ ಜಾನಕಿ: ಬದುಕಿನ ಏಳುಬೀಳಿನಲ್ಲಿ ಅರಳಿದ ಕಲಾವಿದೆ

ಇದೀಗ ಚಿತ್ರದ ಅಡ್ವಾನ್ಸ್‌ ಬುಕಿಂಗ್‌ ಕೂಡ ಆರಂಭವಾಗಿದ್ದು, ಆರಂಭಿಕ ಪ್ರತಿಕ್ರಿಯೇ ಗಮನ ಸೆಳೆಯುತ್ತಿದೆ. ವರದಿಗಳ ಪ್ರಕಾರ ಭಾರತದಲ್ಲಿ ಈಗಾಗಲೇ ₹30 ಕೋಟಿಗೂ ಅಧಿಕ ಮೌಲ್ಯದ ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿದ್ದು, 6 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಬುಕ್‌ ಆಗಿವೆ. ಕರ್ನಾಟಕ ಮಾತ್ರವಲ್ಲದೆ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಚಿತ್ರದ ಶೋಗಳಿಗೆ ಬೇಡಿಕೆ ಹೆಚ್ಚಾಗಿದೆ. ಕೆಲವು ಕಡೆ ಮುಂಜಾನೆ ಪ್ರದರ್ಶನಗಳನ್ನೂ ಹೆಚ್ಚಿಸಲಾಗಿದೆ.

ಕಥೆಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗದಿರುವುದೇ ಸಿನಿಮಾದ ಮೇಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ನಾಲ್ಕು ವರ್ಷಗಳ ನಿರೀಕ್ಷೆ, ಬದಲಾಗುತ್ತಲೇ ಬಂದ ಬಿಡುಗಡೆ ದಿನಾಂಕ, ಟೀಸರ್‌-ಟ್ರೇಲರ್‌ಗೆ ವ್ಯಕ್ತವಾದ ಪರ-ವಿರೋಧದ ಪ್ರತಿಕ್ರಿಯೆಗಳು, ಪ್ರಚಾರದ ವೇಳೆ ಎದುರಾದ ಸಣ್ಣಪುಟ್ಟ ವಿವಾದಗಳನ್ನೂ ದಾಟಿ ‘ಟಾಕ್ಸಿಕ್‌’ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ‘ಕೆಜಿಎಫ್‌’ ಬಳಿಕ ಯಶ್‌ ಆಯ್ಕೆ ಮಾಡಿಕೊಂಡಿರುವ ಈ ವಿಭಿನ್ನ ಕಥೆ ಮತ್ತು ಗೀತು ಮೋಹನ್‌ದಾಸ್‌ ಅವರ ನಿರ್ದೇಶನದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ಆದರೆ ನಿರೀಕ್ಷೆ ಎಷ್ಟೇ ದೊಡ್ಡದಾಗಿದ್ದರೂ, ಅಂತಿಮವಾಗಿ ಸಿನಿಮಾದ ಗೆಲುವನ್ನು ನಿರ್ಧರಿಸುವುದು ಪ್ರೇಕ್ಷಕರ ಪ್ರತಿಕ್ರಿಯೆಯೇ. ಆಗಸ್ಟ್‌ 26ರಂದು ತೆರೆ ಕಾಣಲಿರುವ ‘ಟಾಕ್ಸಿಕ್‌’, ಯಶ್‌ ಅವರ ಸ್ಟಾರ್‌ ಪವರ್‌ಗೆ ಮತ್ತೊಂದು ದಾಖಲೆ ಸೇರಿಸಲಿದೆಯೇ, ಇಲ್ಲವೇ ವಿಭಿನ್ನ ಪ್ರಯತ್ನವಾಗಿ ಹೊಸ ದಾರಿ ತೆರೆದಿಡಲಿದೆಯೇ ಎಂಬುದನ್ನು ಕಾದುನೋಡಬೇಕು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...