ಅತಿ ಶೀಘ್ರದಲ್ಲಿ ಸ್ಥಳೀಯ ಸರ್ಕಾರಗಳ ಚುನಾವಣೆ ಘೋಷಣೆ ಮಾಡಬೇಕು. ಒಂದು ವೇಳೆ ವಿಳಂಬವಾದರೆ ಕಾನೂನಾತ್ಮಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಗೆ ಸರ್ಕಾರ ಬಿಡಿಗಾಸಿನ ಬೆಲೆಯನ್ನೂ ಕೊಡದೆ ಸಂವಿಧಾನ ವಿರೋಧಿ ನೀತಿಯ ಹಾದಿ ತುಳಿಯುತ್ತಿರುವುದು ಖಂಡನೀಯ. ಕಾನೂನು, ನೀತಿ-ನಿಯಮಗಳ ಚೌಕಟ್ಟಿಗೆ ನಾವು ಸಂವಿಧಾನ ಎನ್ನುತ್ತೇವೆ. ಆದರೆ ಸ್ಥಳೀಯ ಸರ್ಕಾರಗಳ ಚುನಾವಣೆ ಘೋಷಣೆ ಮಾಡದೇ ಕಾನೂನು, ನೀತಿ-ನಿಯಮಗಳನ್ನು ಗಾಳಿಗೆ ತೂರಿ ಮನ ಬಂದಂತೆ ವರ್ತಿಸುತ್ತಿರುವ ಸರ್ಕಾರದ ನಡೆ ಎಷ್ಟರಮಟ್ಟಿಗೆ ಸರಿ?
ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಮುಂಬರುವ ದಿನ-ಮಾನಗಳಲ್ಲಿ ಸಾಧಿಸಬೇಕಾದ ಗುರಿಗಳನ್ನು ಸ್ಥಳೀಯ ಜನ ಸಮುದಾಯದೊಂದಿಗೆ ಕಾರ್ಯರೂಪಕ್ಕೆ ತರುವುದೇ ʼದೂರದೃಷ್ಠಿ ಯೋಜನೆʼಯಾಗಿದೆ.
ಹಳ್ಳಿ, ಗ್ರಾಮ, ನಗರ ಮತ್ತು ಪಟ್ಟಣಗಳ ಅಭಿವೃದ್ಧಿ ಸ್ಥಳೀಯ ಸರ್ಕಾರದ ಉಪಸ್ಥಿತಿಯಿಂದ ಮಾತ್ರ ಸಾಧ್ಯ. ಸರ್ಕಾರ ಎಂದರೆ ಒಂದು ರೈಲು ಬೋಗಿ ಇದ್ದಂತೆ. ಅದಕ್ಕೆ ಸ್ಥಳೀಯ ಸರ್ಕಾರಗಳು ಎಂಜಿನ್ ಇದ್ದಹಾಗೆ. ಹಾಗೆಯೇ ಬೋಗಿಗಳೆಂದರೆ ವಿಧಾನ ಪರಿಷತ್ತು ಮತ್ತು ವಿಧಾನಸಭೆ ಸದಸ್ಯರುಗಳು. ಆದರೆ ಈಗ ಮರವನ್ನು ಕಡಿಯಲು ಬಳಸುವ ಕೊಡಲಿಯ ಮರದ ಭಾಗವೇ ಆ ಮರಕ್ಕೆ ಮಾರಕ ಎಂಬಂತೆ ಸ್ಥಳೀಯ ಜನ ಪ್ರತಿನಿಧಿಗಳಿಂದ ಆಯ್ಕೆಯಾದ ಶಾಸಕರು ಸ್ಥಳೀಯ ಚುನಾವಣೆಗಳ ಬಗ್ಗೆ ಚಕಾರ ಎತ್ತದೆ ಮೌನಿಗಳಾಗಿರುವುದು ಏಕೆ?
ನೂರಾರು ಹಳ್ಳಿಗಳ ಸಮಸ್ಯೆ ಪರಿಹರಿಸುವುದು ಕೇವಲ ಒಬ್ಬ ಚುನಾಯಿತ ಪ್ರತಿನಿಧಿ ಎಂಎಲ್‌ಎ ಅಥವಾ ಎಂಎಲ್‌ಸಿಗಳಿಂದ ಅಸಾಧ್ಯ. ಹಾಗೂ ಪಂಚಾಯಿತಿ ಆಡಳಿತಾಧಿಕಾರಿ ಅಥವಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಹತ್ತಾರು ಹಳ್ಳಿಗಳ ಸಮಸ್ಯೆ ಪರಿಹರಿಸುವುದೂ ಕಷ್ಟಸಾಧ್ಯ.
ಸ್ಥಳೀಯ ಆಡಳಿತ ಮಂಡಳಿ ಇಲ್ಲದೇ ರಾಜ್ಯಾದ್ಯಂತ ಪಂಚಾಯಿತಿಗಳ ಪರಿಸ್ಥಿತಿ ಹೇಗಾಗಿದೆ ಎಂದರೆ, ʼನಾವಿಕ ಇಲ್ಲದ ಹಡಗುʼ ಎಂಬಂತಾಗಿವೆ. ಇದನ್ನರಿತು ಇತ್ತೀಚಿಗೆ ಆಡಳಿತಾರೂಢ ಪಕ್ಷದ ಪ್ರಭಾವಿ ಮಂತ್ರಿಯವರು ಕಾರ್ಯಕರ್ತರಿಂದ ಸರ್ಕಾರ, ಕಾರ್ಯಕರ್ತರಿಂದ ಅಧಿಕಾರ ಬಂದಿದೆ ಎನ್ನುತ್ತಾರೆ. ಅಂತೆಯೇ ಇನ್ನು ವಿಳಂಬ ಮಾಡದೆ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು.
ಇದನ್ನೂ ಓದಿದ್ದೀರಾ? ಕಾಂಗ್ರೆಸ್ ಅವಧಿಯಲ್ಲಿಯೂ ನಡೆಯದ ಪಂಚಾಯತ್ ಚುನಾವಣೆ: ರಾಜೀವ್ ಗಾಂಧಿ ಕನಸಿಗೆ ಎಳ್ಳುನೀರು
ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅತಿ ಶೀಘ್ರದಲ್ಲಿ ಸ್ಥಳೀಯ ಸರ್ಕಾರಗಳ ಚುನಾವಣೆ ಘೋಷಣೆ ಮಾಡಬೇಕು. ಒಂದು ವೇಳೆ ವಿಳಂಬವಾದರೆ ಕಾನೂನಾತ್ಮಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಈ ಮೂಲಕ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಮಹಾ ಒಕ್ಕೂಟದ ಪರವಾಗಿ ಎಚ್ಚರಿಸುತ್ತಿದ್ದೇನೆ.

ದೇಸಾಯಿ ಅರ್ಜುನ ಗಾಳಿ
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು



