ಬಹುಜನ ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಜಾಗೃತಿ ಮೂಡಿಸುವ ಹಾಗೂ ಮಹಾಪುರುಷರ ಸೈದ್ಧಾಂತಿಕ ಸಂದೇಶಗಳನ್ನು ಪಸರಿಸುವ ಉದ್ದೇಶದಿಂದ ಬಹುಜನ ವಿಚಾರ ವೇದಿಕೆ ತಾಲೂಕು ಘಟಕದ ನೂತನ ಹಂಗಾಮಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಬೇತಮಂಗಲದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯ ಜಿಲ್ಲಾಧ್ಯಕ್ಷರಾದ ಎಸ್. ಚಿನ್ನ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸರ್ವಜನರ ಚಿಂತನಾ ಸಭೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪ್ರಗತಿಪರ ಯುವಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಂಘಟನೆಯ ಪ್ರಮುಖರು, ಮಹಾತ್ಮ ಜ್ಯೋತಿಬಾ ಫುಲೆಯವರ ಸತ್ಯಶೋಧಕ ಸಮಾಜ ಚಳವಳಿ, ಛತ್ರಪತಿ ಶಾಹು ಮಹಾರಾಜ್, ನಾರಾಯಣಗುರು, ಪೆರಿಯಾರ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಸೈದ್ಧಾಂತಿಕ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಯಾವುದೇ ಪ್ರತ್ಯೇಕ ಅಜೆಂಡಾ ಇಲ್ಲದೆ, ಸಂವಿಧಾನದ ಚೌಕಟ್ಟಿನಲ್ಲೇ ಪ್ರಬುದ್ಧ ಭಾರತವನ್ನು ಕಟ್ಟುವುದು ಹಾಗೂ ದೇಶದಲ್ಲಿ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸುವುದೇ ನಮ್ಮ ಸಂಘಟನೆಯ ಮುಖ್ಯ ಗುರಿಯಾಗಿದೆ ಎಂದು ಅಕ್ಷರ ಅಕಾಡೆಮಿಯ ಅಧ್ಯಕ್ಷರಾದ ರಾಜಣ್ಣ ಅವರು ಸ್ಪಷ್ಟಪಡಿಸಿದರು.
ಇಂದಿನ ಶಿಕ್ಷಿತ ಯುವಕರಲ್ಲಿ ಪ್ರತಿಭೆ ಮತ್ತು ಸಮಯ ಎರಡೂ ಇವೆ. ಪ್ರಸ್ತುತ ಸಮಾಜದಿಂದ ಜ್ಞಾನ ಮತ್ತು ಉದ್ಯೋಗವನ್ನು ಪಡೆದು ಆರ್ಥಿಕವಾಗಿ ಸಬಲರಾಗಿರುವವರು ಮರಳಿ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಇದಕ್ಕಾಗಿ ವೇದಿಕೆಯ ವತಿಯಿಂದ ಐವತ್ತು ಮತ್ತು ಮೂವತ್ತು ಅಳತೆಯ ನಾಲ್ಕು ಅಂತಸ್ತುಗಳ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈಗಾಗಲೇ ಸುಮಾರು ನಲವತ್ತು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಟ್ಟಡದಲ್ಲಿ ಅಕ್ಷರ ಅಕಾಡೆಮಿ ಆರಂಭಿಸಿ, ಬಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ದ್ವಿತೀಯ ದರ್ಜೆ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಸೆಂಟರ್ ತೆರೆಯುವ ಮೂಲಕ ಹೊಸ ತಲೆಮಾರನ್ನು ಸೌಹಾರ್ದಯುತವಾಗಿ ಕಟ್ಟಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕು ಮಟ್ಟದ ನೂತನ ಪದಾಧಿಕಾರಿಗಳನ್ನು ಆಯ್ಕೆ:
ಬಹುಚನ ವಿಚಾರ ವೇದಿಕೆಯ ಕೆಜಿಎಫ್ ತಾಲೂಕು ಅಧ್ಯಕ್ಷರಾಗಿ ನ್ಯೂಟನ್ ಪ್ರಶಾಂತ್, ಹಿರಿಯ ಉಪಾಧ್ಯಕ್ಷರಾಗಿ ವಿ. ಹರೀಶ್, ಉಪಾಧ್ಯಕ್ಷರಾಗಿ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ವಿ. ಜಯರಾಮ್, ಕಾರ್ಯದರ್ಶಿಗಳಾಗಿ ಎಂ. ಮುನೇಶ್, ಸುಪ್ರೀತ್, ಎನ್. ಎಸ್. ಸುದೀಪ್ ಹಾಗೂ ಖಜಾಂಚಿಯಾಗಿ ಎಂ. ಆರ್. ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಇದನ್ನು ಓದಿದ್ದೀರಾ..? ಕೆಜಿಎಫ್ | ಗಂದೋಡಹಳ್ಳಿಯಲ್ಲಿ ನೀರಿನ ಅದಾಲತ್: ಮೂಲಭೂತ ಸೌಕರ್ಯಗಳಿಗೂ ಆದ್ಯತೆ
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಎಂ.ವಿ. ರಾಜಣ್ಣ, ಆಫ್ರೋಜ್ ಪಾಷಾ, ಪ್ರಸನ್ನ, ಪ್ರಕಾಶ್, ಶ್ರೀಕಾಂತ್, ನಿತಿನ್, ಆನಂದ್, ದೀಪಿತ್ ರಾಜ್, ಬಂಗಾರಪೇಟೆ ಬಾಬು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆಯ್ಕೆಯಾದ ಎಲ್ಲಾ ನೂತನ ಪದಾಧಿಕಾರಿಗಳಿಗೆ ವೇದಿಕೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.




