ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಂಘ ಪರಿವಾರವನ್ನು ಸಮಾಧಾನಪಡಿಸುವ ಉದ್ದೇಶದಿಂದ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಹರಡಿ ಗಲಭೆ ಸೃಷ್ಟಿಸಿದವರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿರುವ ನಿರ್ಧಾರವು ರಾಜ್ಯದ ಜನತಂತ್ರ ಮತ್ತು ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ. ಆದ್ದರಿಂದ ಸರ್ಕಾರವು ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆದು, ಸಂಬಂಧಿತ ಪ್ರಕರಣಗಳಲ್ಲಿ ಕೋಮುವಾದಿ ಗೂಂಡಾಗಳಿಗೆ ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೇಶ್ವರ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಸಮಾಜದಲ್ಲಿ ದ್ವೇಷ ಭಾಷಣಗಳ ಮೂಲಕ ಅಶಾಂತಿ ಸೃಷ್ಟಿಸಿದವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿದವರು, ಅಲ್ಪಸಂಖ್ಯಾತರು ಹಾಗೂ ದಲಿತರ ವಿರುದ್ಧ ನಿರಂತರವಾಗಿ ವಿಷಕಾರಿ ಭಾಷಣ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದು ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ. “ಕಾನೂನು ಎಲ್ಲರಿಗೂ ಸಮಾನ” ಎಂದು ಹೇಳಿಕೊಳ್ಳುವ ಸರ್ಕಾರವೇ ಸಮಾಜಘಾತುಕ ಶಕ್ತಿಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ಕೋಮು ಕ್ರಿಮಿಗಳಿಗೆ ವಿಶೇಷ ರಿಯಾಯಿತಿ ನೀಡುತ್ತಿರುವ ಸರ್ಕಾರದ ನಡೆ ಪ್ರಶ್ನಾರ್ಹವಾಗಿದೆ.
ರಾಜ್ಯ ಸರ್ಕಾರವು ಅಮಾಯಕರ ಮೇಲಿನ ಪ್ರಕರಣಗಳನ್ನು, ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಾಗೂ ರೈತರ ಹೋರಾಟಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಹಿಂಪಡೆದಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಪುನರಾವರ್ತಿತವಾಗಿ ಕೋಮು ಪ್ರಚೋದನೆ ಮಾಡುವ, ಕೋಮು ಘರ್ಷಣೆ ಮತ್ತು ಗಲಭೆಗಳಿಗೆ ಉತ್ತೇಜನ ನೀಡುವ ರೀತಿಯಲ್ಲಿ ಹೇಳಿಕೆ ನೀಡುವ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಮೇಲಿನ ಪ್ರಕರಣಗಳನ್ನು ಹಿಂಪಡೆದಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
“ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ” ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರವು ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ “ಕಾನೂನು ಅಡಚಣೆ” ಎಂಬ ನೆಪ ಹೇಳಿ ನ್ಯಾಯ ನೀಡದೆ ಕಾಲಹರಣ ಮಾಡುತ್ತಿದೆ. ಆದರೆ, ಸಮಾಜದಲ್ಲಿ ಬಹಿರಂಗವಾಗಿ ದ್ವೇಷ ಹರಡುವವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಾಗ ಯಾವುದೇ ಕಾನೂನು ಅಡ್ಡಿ ಕಾಣಿಸುತ್ತಿಲ್ಲ. ಸರ್ಕಾರದ ಈ ದ್ವಂದ್ವ ನಿಲುವು ಅನೇಕ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ, ಹುಬ್ಬಳ್ಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅಮಾಯಕ ಯುವಕರು ಈ ಭ್ರಷ್ಟ ಮತ್ತು ತಾರತಮ್ಯಪೂರ್ಣ ವ್ಯವಸ್ಥೆಗೆ ಬಲಿಯಾಗಿ ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದಾರೆ. ಈ ಕುಟುಂಬಗಳ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಎಸ್.ಡಿ.ಪಿ.ಐ ಪ್ರಶ್ನಿಸಿದೆ.
ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರರಂತಹ ಕೋಮು ಕ್ರಿಮಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಯಾವ “ಗುಪ್ತ ರಾಜಕೀಯ ಅಜೆಂಡಾ” ಜಾರಿಗೆ ತರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಲೇಬೇಕು ಎಂದು ಎಸ್.ಡಿ.ಪಿ.ಐ ಆಗ್ರಹಿಸಿದೆ. ದ್ವೇಷ ರಾಜಕಾರಣಕ್ಕೆ ರಕ್ಷಣೆ ನೀಡಿ, ಅಮಾಯಕ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಗುರಿಯಾಗಿಸುವ ನೀತಿಯನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ. ಆದ್ದರಿಂದ ಸರ್ಕಾರ ತನ್ನ ಈ ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಎಸ್.ಡಿ.ಪಿ.ಐ ಒತ್ತಾಯಿಸಿದೆ.





