ಟಿಬೆಟ್ನ ಸ್ವಾಯತ್ತ ಪ್ರದೇಶದಲ್ಲಿ (TAR) ಉಂಟಾಗಿರುವ ಪ್ರವಾಹ ಮತ್ತು ಸರಣಿ ಭೂಕುಸಿತದ ಕಾರಣಕ್ಕೆ ಅಲ್ಲಿಯೇ ಸಿಲುಕಿಕೊಂಡಿರುವ 70 ಸದಸ್ಯರ ಭಾರತೀಯ ಪ್ರವಾಸಿಗರ ತಂಡದಲ್ಲಿರುವ 35 ಕನ್ನಡಿಗರು, ತಮ್ಮನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಚೀನಾ ಹಾಗೂ ನೇಪಾಳ ಗಡಿ ಭಾಗಕ್ಕೆ ಹತ್ತಿರವಿರುವ ಟಿಬೆಟ್ನ ನೈಲಾಮ್ (Nyalam) ಎಂಬಲ್ಲಿ ಈ ತಂಡವು ಪ್ರಸ್ತುತ ಸಿಲುಕಿಕೊಂಡಿದೆ. ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಯಾತ್ರಿಕರು ಈ ತಂಡದಲ್ಲಿದ್ದು, ಹಲವು ಹಿರಿಯ ನಾಗರಿಕರೂ ಸೇರಿದ್ದಾರೆ.
ಇದನ್ನೂ ಓದಿ: ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: 160ಕ್ಕೂ ಹೆಚ್ಚು ಸಾವು, 133 ಭಾರತೀಯರು ನಾಪತ್ತೆ
ರಾಜ್ಯ ಸರ್ಕಾರದ ತುರ್ತು ಕಾರ್ಯಾಚರಣೆ ಕೇಂದ್ರ (SEOC) ನೀಡಿದ್ದ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿದ ಬಳಿಕ, ಸರ್ಕಾರಿ ಅಧಿಕಾರಿಗಳಿಂದ ಕರೆಗಳು ಬಂದಿದ್ದವು. “ಏನು ನೆರವು ಬೇಕು?” ಎಂದು ಕೇಳಿದಾಗ “ನಮ್ಮನ್ನು ಇಲ್ಲಿಂದ ಸುರಕ್ಷಿತವಾಗಿ ರಕ್ಷಿಸಿ ” ಎಂದು ಮನವಿ ಮಾಡಿದ್ದೆವು. ಆದರೆ ಆ ನಂತರ ಯಾವುದೇ ಪ್ರಗತಿ ಅಥವಾ ಅಪ್ಡೇಟ್ ಸಿಕ್ಕಿಲ್ಲ ಎಂದು ಬೆಂಗಳೂರಿನ ಕೃಷ್ಣ ಎಂಬ ಸಂತ್ರಸ್ತರು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಹಾಗೆಯೇ ಸುಮಾರು 45ಕ್ಕೂ ಹೆಚ್ಚು ಅಧಿಕೃತ ಇಮೇಲ್ ವಿಳಾಸಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಮನವಿ ರವಾನಿಸಿದರೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ ಎಂದು ಯಾತ್ರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಗಾ ಪ್ರದೇಶದಿಂದ ಚೀನಾ ಅಧಿಕಾರಿಗಳ ಸೂಚನೆ ಮೇರೆಗೆ ಹೊರಟ ಈ ತಂಡ, ಸುಮಾರು 5 ಕಡೆ ಭೂಕುಸಿತ, ಕೆಸರು ಹಾಗೂ ಕಲ್ಲುಗಳು ಬೀಳುತ್ತಿದ್ದ ಅಪಾಯಕಾರಿ ಹಾದಿಯಲ್ಲೇ 4 ಕಿಲೋಮೀಟರ್ ನಡೆದು ನೈಲಾಮ್ ತಲುಪಿದೆ.
ಆದರೆ ಸರ್ಕಾರ ಹೇಳುವುದೇನು?
ಇನ್ನೊಂದೆಡೆ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮತ್ತು ಕರ್ನಾಟಕ ಭವನದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಸಿಲುಕಿರುವ ಪ್ರಜೆಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ಟಿಬೆಟ್ ಮತ್ತು ನೇಪಾಳ ಗಡಿಯಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ವ್ಯತ್ಯಯಗೊಂಡಿದ್ದು, ದುಬಾರಿ ವಿಮಾನ ದರ ಹಾಗೂ ರಸ್ತೆ ತಡೆಗಳಿಂದಾಗಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನೆರವಿನ ನಿರೀಕ್ಷೆಯಲ್ಲಿದ್ದಾರೆ.




