ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹ ಮತ್ತು ಸರಣಿ ಭೂಸಸಿತಗಳಿಂದಾಗಿ 160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಾಣೆಯಾಗಿದ್ದಾರೆ. ಈ ಪೈಕಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಕಾಣೆಯಾಗಿದ್ದು, ಇವರಲ್ಲಿ ತಮಿಳುನಾಡಿನ 37 ಯಾತ್ರಿಕರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯು ನೇಪಾಳದ ರಸುವಾ, ಧಾಡಿಂಗ್ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಮತ್ತು ಮೂಲಸೌಕರ್ಯಗಳ ನಾಶಕ್ಕೆ ಕಾರಣವಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (USGS) ನೀಡಿರುವ ವರದಿಯ ಪ್ರಕಾರ, ಪ್ರಕೃತಿ ವಿಕೋಪಕ್ಕೆ ಹಿಮನದಿಯ ಕುಸಿತ ಮತ್ತು ಅದರಿಂದ ಉಂಟಾದ ಶೀತಲ ಮಣ್ಣಿನ ಹರಿವು ಪ್ರಮುಖ ಕಾರಣವಾಗಿದೆ. ಆರಂಭದಲ್ಲಿ ಈ ಪ್ರದೇಶದಲ್ಲಿ ಸಂಭವಿಸಿದ 5.2 ತೀವ್ರತೆಯ ಕಂಪನವನ್ನು ಭೂಕಂಪ ಎಂದು ಭಾವಿಸಲಾಗಿತ್ತಾದರೂ, ಉಪಗ್ರಹ ಚಿತ್ರಗಳು ಮತ್ತು ಭೂಕಂಪನ ರೇಖೆಗಳ ವಿಶ್ಲೇಷಣೆಯಿಂದ ಇದು ಹಿಮಪಾತ ಮತ್ತು ಹಿಮನದಿ ಕುಸಿತದಿಂದ ಉಂಟಾದ ಕಂಪನ ಎಂಬುದು ಸ್ಪಷ್ಟವಾಗಿದೆ. ಇದರಿಂದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿ ನದಿಯ ದಂಡೆಯಲ್ಲಿದ್ದ ಇಡೀ ಗ್ರಾಮಗಳು, ಕಟ್ಟಡಗಳು ಹಾಗೂ ಜಲವಿದ್ಯುತ್ ಯೋಜನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಕಾಣೆಯಾದ ಭಾರತೀಯರನ್ನು ಪತ್ತೆಹಚ್ಚಲು ಮತ್ತು ಸಂಕಷ್ಟದಲ್ಲಿರುವವರನ್ನು ರಕ್ಷಿಸಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕಾಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೇಪಾಳ ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿವೆ. ಭಾರತವು 10 ಟನ್ ತುರ್ತು ಪರಿಹಾರ ಸಾಮಗ್ರಿಗಳು ಮತ್ತು ಔಷಧಿಗಳನ್ನು ಭಾರತೀಯ ವಾಯುಪಡೆಯ ಮೂಲಕ ಕಾಠ್ಮಂಡುವಿಗೆ ರವಾನಿಸಿದೆ. ತಮಿಳುನಾಡು ಸರ್ಕಾರವೂ ತನ್ನ ರಾಜ್ಯದ ಯಾತ್ರಿಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನವದೆಹಲಿ ಮತ್ತು ನೇಪಾಳದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ನೇಪಾಳದ ಸೇನೆ, ಪೊಲೀಸ್, ಸಶಸ್ತ್ರ ಪಡೆಗಳು ಹಾಗೂ ಚೀನಾದ ರಕ್ಷಣಾ ಸಿಬ್ಬಂದಿಗಳು ದುರಂತ ಪೀಡಿತ ಪ್ರದೇಶಗಳಲ್ಲಿ ಮಣ್ಣು ಮತ್ತು ರಾಡಿ ತೆರವುಗೊಳಿಸಿ ಕಾಣೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ, ಮತ್ತೊಂದು ಪ್ರವಾಹದ ಭೀತಿಯೂ ಎದುರಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.



