ವಿಮಾನ ಅಪಘಾತದ ಸಂದರ್ಭದಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ವಿವಿಧ ಇಲಾಖೆಗಳ ನಡುವಿನ ಸಮನ್ವಯವನ್ನು ಪರಿಶೀಲಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಶುಕ್ರವಾರ ಮಂಗಳೂರಿನಲ್ಲಿ ವಿಮಾನ ಅಪಘಾತದ ಅಣಕು ಕಾರ್ಯಾಚರಣೆ ನಡೆಯಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿರುವ ಗುರುಪುರ ನದಿ ಸಮೀಪ ಬೆಳಗ್ಗೆ 10.20ಕ್ಕೆ 111 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಸೇರಿದಂತೆ ಒಟ್ಟು 117 ಮಂದಿಯನ್ನು ಹೊತ್ತ ಏರ್‌ಬಸ್ ಎ321 ವಿಮಾನ ಪತನಗೊಂಡಿರುವ ಕಾಲ್ಪನಿಕ ಸನ್ನಿವೇಶ ಸೃಷ್ಟಿಸಿ ಕಾರ್ಯಾಚರಣೆ ನಡೆಸಲಾಯಿತು. ಘಟನೆ ವಿಮಾನ ನಿಲ್ದಾಣದ ಹೊರವಲಯದಲ್ಲಿ ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಆಫ್‌ಸೈಟ್ ತುರ್ತು ಕಾರ್ಯಯೋಜನೆ ಜಾರಿಗೊಳಿಸಲಾಯಿತು.

ಬೆಳಗ್ಗೆ 10.22ಕ್ಕೆ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, 10.31ಕ್ಕೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. 10.37ಕ್ಕೆ ಆಂಬುಲೆನ್ಸ್‌ಗಳನ್ನು ರವಾನಿಸಿ, 10.44ಕ್ಕೆ ಪರಿಹಾರ ಕೇಂದ್ರ ಸ್ಥಾಪಿಸಲಾಯಿತು. ಬೆಳಗ್ಗೆ 10.56ಕ್ಕೆ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಹಚ್ಚಿ ಡಿಜಿಸಿಎ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಅಣಕು ಸನ್ನಿವೇಶದಲ್ಲಿ 42 ಮಂದಿಯನ್ನು ಗಂಭೀರ ಗಾಯಾಳುಗಳು, 21 ಮಂದಿಯನ್ನು ತುರ್ತು ಚಿಕಿತ್ಸೆ ಅಗತ್ಯವಿರುವವರು ಹಾಗೂ 45 ಮಂದಿಯನ್ನು ಸಣ್ಣಪುಟ್ಟ ಗಾಯಾಳುಗಳೆಂದು ವರ್ಗೀಕರಿಸಲಾಗಿತ್ತು. ಒಂಬತ್ತು ಸಾವುಗಳನ್ನೂ ಸನ್ನಿವೇಶದಲ್ಲಿ ಸೇರಿಸಲಾಗಿತ್ತು. ಎನ್‌ಡಿಆರ್‌ಎಫ್ ತಂಡ ಗುರುಪುರ ನದಿಯಲ್ಲಿ ದೋಣಿಗಳ ಮೂಲಕ ಶೋಧ ಕಾರ್ಯ ನಡೆಸಿತು.

ವೆನ್ಲಾಕ್ ಜಿಲ್ಲಾಸ್ಪತ್ರೆ, ಎ.ಜೆ. ಆಸ್ಪತ್ರೆ ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆಗಳ ವೈದ್ಯಕೀಯ ತಂಡಗಳು ಭಾಗವಹಿಸಿದ್ದವು. ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರ ಮತ್ತು ಶವಾಗಾರ ವ್ಯವಸ್ಥೆ ಮಾಡಲಾಗಿತ್ತು. ರೋಗಿಗಳ ತ್ವರಿತ ಸಾಗಣೆಗೆ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದರು.
ಪೊಲೀಸ್, ವಿಮಾನ ನಿಲ್ದಾಣ ಪ್ರಾಧಿಕಾರ, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅಣಕು ಕ್ರಮ ಕೈಗೊಂಡರೆ, ಮಾಲಿನ್ಯ ನಿಯಂತ್ರಣ ಮಂಡಳಿ ನದಿ ನೀರಿನ ಮಾದರಿ ಸಂಗ್ರಹಿಸಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ನಾಲ್ಕನೇ ಆಫ್‌ಸೈಟ್ ಅಣಕು ಕಾರ್ಯಾಚರಣೆ ಇದಾಗಿದ್ದು, ದಕ್ಷಿಣ ಭಾರತದ ಈ ರೀತಿಯ ಮೊದಲ ವಿಮಾನ ಅಪಘಾತದ ಅಣಕು ಅಭ್ಯಾಸ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕಾರ್ಯಾಚರಣೆಯ ಮೂಲಕ ತುರ್ತು ಸ್ಪಂದನೆಯಲ್ಲಿನ ಲೋಪಗಳನ್ನು ಗುರುತಿಸಿ ವಿಪತ್ತು ನಿರ್ವಹಣಾ ಯೋಜನೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶ ಹೊಂದಲಾಗಿದೆ.




