ಜಾತಿ, ಮತ, ಧರ್ಮಗಳ ಭೇದಭಾವಗಳನ್ನು ಮೀರಿ ತಮ್ಮ ಕೀರ್ತನೆಗಳು, ಮುಂಡಿಗೆಗಳು ಹಾಗೂ ಸಾಹಿತ್ಯದ ಮೂಲಕ ಸಮಾಜಕ್ಕೆ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಭಕ್ತ ಶ್ರೇಷ್ಠ ಕನಕದಾಸರು ಎಂದು ಬೀದರ್ ಲೋಕಸಭಾ ಸದಸ್ಯ ಸಾಗರ ಖಂಡ್ರೆ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಕನಕದಾಸರು ಯಾವುದೇ ಒಂದು ವರ್ಗಕ್ಕೆ ಸೀಮಿತರಾಗದೆ ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದವರು. ಅವರ ಮಾನವೀಯ ಮೌಲ್ಯಗಳು ಹಾಗೂ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವ ನೆಲೆಸಲು ಸಾಧ್ಯವಾಗುತ್ತದೆ” ಎಂದರು.
“ದೇವರು ಜಾತಿ ಅಥವಾ ಧರ್ಮವನ್ನು ನೋಡುವುದಿಲ್ಲ, ಭಕ್ತಿಯನ್ನು ಮಾತ್ರ ಪರಿಗಣಿಸುತ್ತಾನೆ. ಪ್ರಾಣಿ-ಪಕ್ಷಿಗಳಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೂ, ಬುದ್ಧಿವಂತರೆನಿಸಿಕೊಂಡ ಮನುಷ್ಯರಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳೆನ್ನದೆ ಇಂದಿಗೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ವಿಷಾದನೀಯ. ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಮಹಾಪುರುಷರು ಸಾರಿದ ಸಮಾನತೆಯ ತತ್ವಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ ನಿತ್ಯ ಜೀವನದಲ್ಲಿ ಪಾಲಿಸಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಂ ಖಾನ್ ಮಾತನಾಡಿ, “ಜಾತಿ-ಧರ್ಮದ ಆಧಾರದ ಮೇಲೆ ಕೆಲಸ ಮಾಡದೆ ಎಲ್ಲರೂ ಸಮಾನರು ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕನಕದಾಸರ ಮಾನವೀಯ ಮೌಲ್ಯಗಳು ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಉಪನ್ಯಾಸ ನೀಡಿದ ಡಾ.ರವೀಂದ್ರ ಲಂಜವಾಡಕರ ಮಾತನಾಡಿ, “ಕನಕದಾಸರು ಹರಿಭಕ್ತಿಯ ಜೊತೆಗೆ ಸಮಾಜಮುಖಿ ಚಿಂತನೆಗಳನ್ನೂ ಹೊಂದಿದ್ದರು. ದೇವರನ್ನು ಒಲಿಸಿಕೊಳ್ಳಲು ಜಾತಿ ಮುಖ್ಯವಲ್ಲ, ಭಕ್ತಿ ಮುಖ್ಯ ಎಂಬ ಸಂದೇಶವನ್ನು ತಮ್ಮ ಬದುಕು ಹಾಗೂ ಸಾಹಿತ್ಯದ ಮೂಲಕ ಸಾರಿದರು. ತಮ್ಮ ಅಚಲ ಭಕ್ತಿಯಿಂದ ಕೃಷ್ಣನನ್ನೇ ತನ್ನತ್ತ ಸೆಳೆದ ಶ್ರೇಷ್ಠ ಸಂತ ಕನಕದಾಸರು” ಎಂದು ಬಣ್ಣಿಸಿದರು.
ಇದನ್ನೂ ಓದಿ : ಬೀದರ್ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ ಚಿಮ್ಮಕೊಡೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನೋದಕುಮಾರ ಅಪ್ಪೆ, ಅಪರ ಜಿಲ್ಲಾಧಿಕಾರಿ ಸುರೇಖಾ ಕೆ., ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಸಮಾಜದ ಮುಖಂಡರಾದ ಬಾಬುರಾವ ಮಲ್ಕಪೂರೆ, ಪಂಡಿತ ಚಿದ್ರೆ, ಮಲ್ಲಿಕಾರ್ಜುನ ಬಿರಾದಾರ, ಸಚಿನ್ ಮಲ್ಕಪೂರೆ, ಮಾಳಪ್ಪ ಅಡಸಾರೆ, ಸಂತೋಷ ಜೋಳದಾಪಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.




