ಅನುಗ್ರಹ ಯೋಜನೆ ಅಡಿಯಲ್ಲಿ ಆಡು, ಕುರಿ, ದನಗಳ ಆಕಸ್ಮಿಕ ಮರಣಕ್ಕೆ ರಾಜ್ಯ ಸರ್ಕಾರ ಪರಿಹಾರ ಧನ ನೀಡುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಪಶುಪಾಲಕರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಹಾಗಾಗಿ ಸರ್ಕಾರ ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಎಂದು ಪಶುಪಾಲಕ ಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ಕುರಿತು ಸಂಘಟನೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, “ಮರಣ ಹೊಂದಿದ ಆಡುಕುರಿಗಳಿಗೆ ₹7,500, ಆರು ತಿಂಗಳ ಒಳಗಿನ ಆಡು ಕುರಿಗಳಿಗೆ ₹5,000 ಕೊಡಲಾಗುತ್ತದೆ. ಹಸು, ಎತ್ತು, ಕೋಣ, ಕಡಸುಗಳ ಆಕಸ್ಮಿಕ ಮರಣಕ್ಕೆ ₹15,000 ಕೊಡಲಾಗುತ್ತದೆ. ಆದರೆ, ಪಶುಪಾಲಕರಿಗೆ ಈವರೆಗೆ ಈ ಕುರಿತಾದ ಪರಿಹಾರ ಸಿಗದೆ ಕಂಗಾಲಾಗಿದ್ದಾರೆ. ತೀವ್ರ ಬರಗಾಲದ ದವಡೆಯಲ್ಲಿ ಸಿಲುಕಿರುವ ಪಶುಪಾಲಕರು ಮೇವಿನ ಕೊರತೆಯಿಂದಾಗಿ ನರಳುತ್ತಿದ್ದಾರೆ” ಎನ್ನಲಾಗಿದೆ.
“ಕೃಷಿಕರು ಪಶುಪಾಲನೆಯನ್ನೇ ಕಷ್ಟಪಟ್ಟು ಮಾಡುತ್ತಿರುವ ಈ ಹೊತ್ತಿನಲ್ಲಿ ಅನುಗ್ರಹ ಯೋಜನೆ ಅಪಾರ ಮೆಚ್ಚುಗೆ ಪಡೆದಿದೆ. ಅಲ್ಲದೆ ಈ ಯೋಜನೆ ಇಡೀ ದೇಶಾದ್ಯಂತ ಕರ್ನಾಟಕದಲ್ಲಿ ಮಾತ್ರ ಜಾರಿಯಲ್ಲಿದೆ. ಬೇರೆ ರಾಜ್ಯದ ಪಶುಪಾಲಕರು ಈ ಯೋಜನೆ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮ್ಮ ರಾಜ್ಯದಲ್ಲಿಯೂ ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ” ಎಂದು ಸಂಘಟನಾಕಾರರು ಅಭಿಪ್ರಾಯ ವ್ಯಕ್ತಪಡಿಸಿದರು.
“ಇಂತಹ ಯೋಜನೆಯ ಪರಿಹಾರದ ದುಡ್ಡು ಬಿಡುಗಡೆ ಆಗದಿರುವುದರಿಂದ ಪಶುಪಾಲಕರು ಈಗ ತಮ್ಮ ದನಕರು, ಆಡು, ಕುರಿಗಳು ತೀರಿಕೊಂಡರೆ ಮರಣೋತ್ತರ ಪರೀಕ್ಷೆ ನಡೆಸಲುಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಅನುಗ್ರಹ ಯೋಜನೆಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿದರೆ ಪಶುಪಾಲಕರಿಗೆ ಸ್ವಲ್ಪವಾದರೂ ಬರಗಾಲದ ಬವಣೆಯಿಂದ ನಿರಾಳವಾಗುತ್ತದೆ” ಎಂದು ಪಶುಪಾಲಕ ಕರ್ನಾಟಕ ಸಂಘಟನೆ ಸರ್ಕಾಕ್ಕೆ ಮನವಿ ಮಾಡಿದೆ.
This video cannot be played in your browser. Open the video directly
ಈ ಸುದ್ದಿ ಓದಿದ್ದೀರಾ? ಶಿಕ್ಷಕರ ನೇಮಕಾತಿಯಲ್ಲಿ ಅನ್ಯಾಯ: ಭಾಷಾ ಅಲ್ಪಸಂಖ್ಯಾತ ಶಿಕ್ಷಕ ಅಭ್ಯರ್ಥಿಗಳ ನ್ಯಾಯಕ್ಕಾಗಿ ತೀವ್ರ ಹೋರಾಟದ ಎಚ್ಚರಿಕೆ
ಪಶುಪಾಲಕ ಕರ್ನಾಟಕದ ಪರವಾಗಿ ಮೊಳಕಾಲ್ಮೂರು ಜಯಲಕ್ಷ್ಮಿ ನಾಯಕ್, ಡಾ.ರಘುಪತಿ, ಕೂನಿಕೆರೆ ರಾಮಣ್ಣ, ಅಂಕಸಂದ್ರ ರಾಜಣ್ಣ, ಶಿವರಾಯಪ್ಪ ಜೋಗಿನ್ ಬಾದಾಮಿ, ಸೂರಪ್ಪನಹಟ್ಟಿ ಕೃಷ್ಣ ಇದ್ದರು.





