ಭಾರತ–ಅಮೆರಿಕ ತಂತ್ರಜ್ಞಾನ ಮತ್ತು ನಾವೀನ್ಯತಾ ಸಹಭಾಗಿತ್ವದ ಪ್ರಮುಖ ಕೇಂದ್ರವಾಗಿ ಬೆಂಗಳೂರು ಬೆಳೆಯುತ್ತಿದ್ದು, ನಗರದಲ್ಲಿ ಪೂರ್ಣ ಪ್ರಮಾಣದ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ಬುಧವಾರ ಆಯೋಜಿಸಿದ್ದ ‘ಕ್ವಾಂಟಮ್’ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಬೆಂಗಳೂರಿನಲ್ಲಿ 700ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು, 10 ಸಾವಿರಕ್ಕೂ ಅಧಿಕ ನವೋದ್ಯಮಗಳು (ಸ್ಟಾರ್ಟ್ಅಪ್) ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಅಮೆರಿಕದ ಅತಿದೊಡ್ಡ ತಂತ್ರಜ್ಞಾನ ಪಾಲುದಾರ ನಗರವಾಗಿರುವ ಇಲ್ಲಿ ಪೂರ್ಣ ಪ್ರಮಾಣದ ಕಾನ್ಸುಲೇಟ್ ಅಗತ್ಯವಿದೆ. ಇದರಿಂದ ಸಂಶೋಧನೆ, ರಕ್ಷಣೆ, ಬಾಹ್ಯಾಕಾಶ, ವಿಮಾನಯಾನ ಮತ್ತು ನಾವೀನ್ಯತಾ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ಮತ್ತಷ್ಟು ವಿಸ್ತರಿಸಲಿದೆ” ಎಂದು ವಿವರಿಸಿದರು.
ಕಾನ್ಸುಲೇಟ್ ಸ್ಥಾಪನೆಗೆ ಅಗತ್ಯವಿರುವ ರಾಜ್ಯಮಟ್ಟದ ಎಲ್ಲ ಅನುಮತಿಗಳನ್ನು ತ್ವರಿತವಾಗಿ ನೀಡಲು ಸರ್ಕಾರ ಸಿದ್ಧವಿದ್ದು, ಅಮೆರಿಕದ ರಾಯಭಾರ ಕಚೇರಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಕ್ವಾಂಟಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಮುಂಚೂಣಿಯಲ್ಲಿದೆ. ಇದರ ಮುಂದಿನ ಹೆಜ್ಜೆಯಾಗಿ ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣವಾಗುತ್ತಿದ್ದು, ಇದು ಸಂಶೋಧನಾ ಪ್ರಯೋಗಾಲಯಗಳ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.
ತಂತ್ರಜ್ಞಾನದ ಬದ್ಧತೆ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಸರ್ಕಾರದ ‘ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ’ (LEAP) ಅಡಿಯಲ್ಲಿ, ಮೊದಲ ಬಾರಿಗೆ ಧಾರವಾಡದ ಐಐಐಟಿ (IIIT) ಯಲ್ಲಿ ‘ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ’ವನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
“ಕೇವಲ ರಸ್ತೆ, ಕಟ್ಟಡಗಳಂತಹ ಭೌತಿಕ ಮೂಲಸೌಕರ್ಯಗಳು ಮಾತ್ರ ಭವಿಷ್ಯದ ಆರ್ಥಿಕತೆಯನ್ನು ನಿರ್ಧರಿಸುವುದಿಲ್ಲ; ‘ಜ್ಞಾನ ಮೂಲಸೌಕರ್ಯ’ವೇ ಭವಿಷ್ಯದ ನಿಜವಾದ ಶಕ್ತಿ. ತರಗತಿಗಳನ್ನು ಪ್ರಯೋಗಾಲಯಗಳಿಗೆ, ಪ್ರಯೋಗಾಲಯಗಳನ್ನು ಸ್ಟಾರ್ಟ್ಅಪ್ಗಳಿಗೆ ಹಾಗೂ ಸ್ಟಾರ್ಟ್ಅಪ್ಗಳನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸುವುದು ನಮ್ಮ ಸರಳ ಗುರಿಯಾಗಿದೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಅಮೆರಿಕದ ಪ್ರಮುಖ ಶೈಕ್ಷಣಿಕ ಕೇಂದ್ರಗಳು, ಇನ್ಕ್ಯುಬೇಟರ್ಗಳು ಮತ್ತು ಸಂಶೋಧನಾ ಪಾರ್ಕ್ಗಳೊಂದಿಗೆ ಕರ್ನಾಟಕ ಆಳವಾದ ಪಾಲುದಾರಿಕೆ ಹೊಂದಲು ಬಯಸಿದೆ. ಇದರಿಂದ ರಾಜ್ಯದ ನವೋದ್ಯಮಗಳಿಗೆ ಜಾಗತಿಕ ಮಾರ್ಗದರ್ಶನ ಮತ್ತು ಬಂಡವಾಳ ದೊರೆಯಲಿದ್ದು, ಈ ನಿಟ್ಟಿನಲ್ಲಿ ನೆರವು ನೀಡುವಂತೆ ಕಾರ್ಯಕ್ರಮದಲ್ಲಿದ್ದ ಅಮೆರಿಕದ ರಾಯಭಾರಿ ಸರ್ಜಿಯೋ ಗೋರ್ ಅವರನ್ನು ಸಿಎಂ ಕೋರಿದರು.
ಕ್ವಾಂಟಮ್ ವಿಜ್ಞಾನವು ಭವಿಷ್ಯದ ಕಂಪ್ಯೂಟಿಂಗ್, ಸಂವಹನ ಮತ್ತು ಆರೋಗ್ಯ ಕ್ಷೇತ್ರವನ್ನು ಆಳಲಿದೆ. ಈ ಬೆಳವಣಿಗೆಯಲ್ಲಿ ಯುವಕರು ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ಸಾರ್ವಜನಿಕರಿಗೆ ವಿಜ್ಞಾನವನ್ನು ತಲುಪಿಸುವ ಸೈನ್ಸ್ ಗ್ಯಾಲರಿಯ ಆಶಯಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಕರ್ನಾಟಕದ ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಪ್ರೊ. ಅರಿಂದಮ್ ಘೋಷ್ ಮತ್ತು ಕ್ಯೂ-ಸಿಟಿ ಸಲಹಾ ಮಂಡಳಿ ಸದಸ್ಯೆ ಡಾ. ಜಾಹ್ನವಿ ಫಾಲ್ಕಿ ಅವರು ಈ ಕನಸಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ, ಕ್ವಾಂಟಮ್ ಪ್ರದರ್ಶನವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್, ಗೃಹ,ಐಟಿ & ಬಿಟಿ ಹಾಗೂ ಇ- ಆಡಳಿತ ಸಚಿವ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಷಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




