ನೀಟ್ ಪರೀಕ್ಷೆಯನ್ನು ರದ್ದು ಮಾಡಿರುವುದು ಕೇಂದ್ರ ಸರ್ಕಾರದ ಬಹು ದೊಡ್ಡ ವೈಫಲ್ಯವಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಜೊತೆಗೆ ಚೆಲ್ಲಾಟವಾಡಿತ್ತಿರುವ ಕೇಂದ್ರ ಸರಕಾರದ ಶಿಕ್ಷಣ ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ವೈದ್ಯಕೀಯ ಶಿಕ್ಷಣ ಡಾ.ಶರಣಪ್ರಕಾಶ ಪಾಟೀಲ್ ಆಗ್ರಹಿಸಿದ್ದಾರೆ.
ʼದೇಶದ ಪ್ರಧಾನಮಂತ್ರಿ ದೊಡ್ಡ ದೊಡ್ಡ ಭಾಷಣ ಮಾಡುವುದಲ್ಲ, ಇಂಥ ಸಂಕಷ್ಟ ಸಮಯದಲ್ಲಿ ಸ್ಪಂದಿಸಬೇಕು, ಪರಿಹಾರ ಕೊಡಿಸಬೇಕು. ದೇಶದಲ್ಲಿ ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸದ ಕೇಂದ್ರ ಸರ್ಕಾರ, ಪರೀಕ್ಷೆ ರದ್ದು ಮಾಡುವ ಮೂಲಕ ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆʼ ಎಂದು ಆಕ್ರೋಶ ಹೊರಹಾಕಿದ್ದಾರೆ.
ʼನೀಟ್ ಎನ್ನುವುದು ಕೇಂದ್ರ ಸರ್ಕಾರದ ಬಹುದೊಡ್ಡ ಹಗರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ನೀಟ್‌ನಲ್ಲಿ ಒಂದಲ್ಲ ಒಂದು ಗೊಂದಲಗಳು, ಅಕ್ರಮಗಳು ನಡೆಯುತ್ತಲೇ ಇವೆ. ಇದಕ್ಕೆ ಕೊನೆಯೇ ಇಲ್ಲದಂತಾಗಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆ. ಕೇಂದ್ರ ಸರ್ಕಾರವೇ ಇದರ ಸಂಪೂರ್ಣ ಹೊಣೆ ಹೊರಬೇಕು. ತಪ್ಪಿತಸ್ಥರನ್ನು ಕಾನೂನಿನ ಕಟ್ಟೆಯಲ್ಲಿ ನಿಲ್ಲಿಸಬೇಕು. ಇದು ಕೇಂದ್ರ ಸರ್ಕಾರ ಅಮರ್ಥನೆಗೆ ಸಾಕ್ಷಿಯಾಗಿದ್ದು. ಇದರಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಲೇಬೇಕುʼ ಎಂದು ಒತ್ತಾಯಿಸಿದ್ದಾರೆ.
ʼರದ್ದು ಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸುವುದರಿಂದ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತಾಗುತ್ತದೆ. ವಿದ್ಯಾರ್ಥಿಗಳು, ಕುಟುಂಬದವರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಮಾನಸಿಕ ಒತ್ತಡವೂ ಹೆಚ್ಚಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವ ಬದಲಿಗೆ ಇಂಥ ಸಮಸ್ಯೆಗಳಿಗೆ ಕೂಡಲೇ ಪರಿಹಾರ ದೊರಕಿಸಿಕೊಡಬೇಕು. “ಪರೀಕ್ಷಾ ಪೇ ಚರ್ಚಾ” ಮಾಡುವವರು ಈ ಪರೀಕ್ಷೆಯಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಲಿʼ ಎಂದರು.
ಕರ್ನಾಟಕದಲ್ಲಿ ನಾವು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಿದಾಗ ಇಂಥ ಯಾವುದೇ ಪ್ರಮಾದ ನಡೆದಿಲ್ಲ. ನಮ್ಮ ಪರೀಕ್ಷಾ ಮಾದರಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ಅವರಿಗೆ ಪರೀಕ್ಷೆ ನಡೆಸುವ ಗಂಧ ಗಾಳಿ ಗೊತ್ತಿಲ್ಲ. ಅದಕ್ಕಾಗಿ ಪ್ರತಿ ವರ್ಷ ತಪ್ಪುಗಳ ಮೇಲೆ ತಪ್ಪು ಎಸಗುತ್ತಲೇ ಇದ್ದಾರೆ. ಇಂಥವರಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ರಾಜಸ್ಥಾನ, ಹರಿಯಾಣದಲ್ಲಿರುವ ಕೋಚಿಂಗ್ ಸೆಂಟರ್‌ಗಳು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿಸಿ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದವರು ಕೂಡ ಇದರಲ್ಲಿ ಪಾಲುದಾರರಾಗಿದ್ದಾರೆ. ಸಂಬಂಧಪಟ್ಟ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ಅಕ್ರಮದಲ್ಲಿ ತೊಡಗುವ ಇಂಥ ಕೋಚಿಂಗ್ ಸೆಂಟರ್‌ಗಳ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರ : ಈಶ್ವರ ಖಂಡ್ರೆ
ನೀಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟ ಆಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ʼಬಿಜೆಪಿ ಆಡಳಿತಾವಧಿಯಲ್ಲಿ ನೇಮಕಾತಿ ಭ್ರಷ್ಟಾಚಾರ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ಹಗರಣಗಳು ನಡೆದಿವೆ. ಈಗ ಲಕ್ಷಾಂತರ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆʼ ಎಂದಿದ್ದಾರೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್, ಇವಿಎಂಗೆ ವಿರೋಧ : 9ನೇ ದಿನ ಪೂರೈಸಿದ ಏಕಾಂಗಿ ಉಪವಾಸ ಸತ್ಯಾಗ್ರಹ
ʼ2017ರಿಂದ 2024ರವರೆಗೆ ದೇಶದ ಹಲವು ರಾಜ್ಯಗಳಲ್ಲಿ 70ಕ್ಕೂ ಹೆಚ್ಚು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಅತ್ಯಂತ ಆತಂಕಕಾರಿ ಸಂಗತಿ. ಯುವಕರ ಕನಸು ಮತ್ತು ಶ್ರಮವನ್ನು ಹಾಳು ಮಾಡುವ ಈ ರೀತಿಯ ನಿರ್ಲಕ್ಷ್ಯ ಅಕ್ಷಮ್ಯ. ಕೇಂದ್ರ ಸರ್ಕಾರಕ್ಕೆ ಸಮರ್ಪಕವಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ರಾಜ್ಯ ಸರ್ಕಾರಗಳಿಗೆ ಆ ಜವಾಬ್ದಾರಿಯನ್ನು ವಹಿಸಬೇಕುʼ ಎಂದು ತಿಳಿಸಿದ್ದಾರೆ.




