ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ‘ಕಾಕ್ರೋಚ್ ಜನತಾ ಪಾರ್ಟಿ’ ಸಿಜೆಪಿ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್‌ಗಳು ಬಹುತೇಕರು ಪಾಕಿಸ್ತಾನದವರು ಎಂಬ ಸುಳ್ಳು ಸುದ್ದಿಯನ್ನು ಹರಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.
ರಾಜಾಜಿನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸದ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಒಂದು ಉದಯೋನ್ಮುಖ ರಾಜಕೀಯ ಪಕ್ಷ ಹಾಗೂ ಅದರ ಬೆಂಬಲಿಗರ ಕುರಿತು ಪರಿಶೀಲನೆ ಇಲ್ಲದೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ ಎಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ದೂರಿನಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಕಾಕ್‌ರೋಚ್ ಪಕ್ಷದ ಶೇ. 49ರಷ್ಟು ಪಾಕಿಸ್ತಾನದ ಫಾಲೋವರ್ಸ್‌ಗಳೆ? ಸುಳ್ಳು ವೈರಲ್ ಪೋಸ್ಟರ್‌ಗೆ ಅಸಲಿ ಉತ್ತರ ಇಲ್ಲಿದೆ
“ಯಾರಾದರೂ ವ್ಯಕ್ತಿಯ ಸಾಮಾಜಿಕ ಜಾಲತಾಣ ಖಾತೆಯನ್ನು ಹ್ಯಾಕ್ ಮಾಡುವುದು ಅಥವಾ ಅನಧಿಕೃತವಾಗಿ ಬಳಸುವುದು ಭಾರತೀಯ ಕಾನೂನಿನ ಪ್ರಕಾರ ಅಪರಾಧ. ಆದರೆ ಯಾವುದೇ ಸಮಗ್ರ ತನಿಖೆ ಅಥವಾ ದೃಢಪಟ್ಟ ಮಾಹಿತಿಯಿಲ್ಲದೆ ಸಾರ್ವಜನಿಕವಾಗಿ ಈ ರೀತಿಯ ಪೋಸ್ಟ್ ಮಾಡಿರುವುದು ಜನರಲ್ಲಿ ಗೊಂದಲ, ತಪ್ಪು ಕಲ್ಪನೆ ಹಾಗೂ ಉದ್ವಿಗ್ನತೆ ಉಂಟುಮಾಡುವ ಸಾಧ್ಯತೆಯಿದೆ” ಎಂದು ಹೇಳಿದೆ.
“ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಗ್ರ ತನಿಖೆ ನಡೆಸಿ ಕಾನೂನು ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕಾಕ್ರೋಚ್ ಪಕ್ಷದ ಇನ್‌ಸ್ಟಾಗ್ರಾಂನ ಫಾಲೋವರ್ಸ್‌ಗಳು ಪಾಕಿಸ್ತಾನಿಗಳೇ ಆಗಿದ್ದಾರೆ ಎಂಬ ಸುಳ್ಳು ಸುದ್ದಿಯ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸಿಜೆಪಿ ಖಾತೆಯನ್ನು ಹಿಂಬಾಲಿಸುತ್ತಿರುವವರಲ್ಲಿ ಶೇಕಡಾ 49ರಷ್ಟು ಮಂದಿ ಪಾಕಿಸ್ತಾನದವರು ಎಂದು ಬಿಂಬಿಸುವ ನಕಲಿ ಪೈ ಚಾರ್ಟ್ ವೈರಲ್ ಆಗುತ್ತಿತ್ತು. ಇದನ್ನೇ ಶಾಸಕ ಸುರೇಶ್ ಕುಮಾರ್ ಹಂಚಿಕೊಂಡಿದ್ದರು. ಈ ಬಗ್ಗೆ ಖುದ್ದು ಆ ಖಾತೆಯ ಸ್ಥಾಪಕ ಅಭಿಜೀತ್ ದಿಪ್ಕೆ ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿ ಬೆಂಬಲಿಗರು ಸೃಷ್ಟಿಸಿರುವ ‘ತಿರುಚಿದ ಪೋಸ್ಟರ್’ ಎಂದು ಆರೋಪಿಸಿದ್ದಾರೆ.




