ಕಠಿಣ ಕಾನೂನು ಮತ್ತು ಜಾಮೀನು ಮಿತಿಗಳ ಹೊರತಾಗಿಯೂ, ವಿಚಾರಣೆಯಲ್ಲಿ ವಿಳಂಬವಾಗುತ್ತಿದ್ದರೆ ಒಬ್ಬ ವ್ಯಕ್ತಿಯನ್ನು ದೀರ್ಘಾವಧಿಯವರೆಗೆ ಕಸ್ಟಡಿಯಲ್ಲಿ ಇಡಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯು ಸುಪ್ರೀಂ ಕೋರ್ಟ್‌ನ ಮುಂದಿದೆ. ಈ ಹಿನ್ನೆಲೆಯಲ್ಲಿ, 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ಯುವ ಹೋರಾಟಗಾರ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ದೆಹಲಿ ಗಲಭೆಗೆ ಸಂಚು ರೂಪಿಸಿದ್ದಾರೆಂದು ಆರೋಪಿಸಲಾದ ಪ್ರಕರಣದಲ್ಲಿ ಆರೋಪಿಗಳಾಗಿರುವ ಉಮರ್ ಖಾಲಿದ್, ಶರ್ಜೀಲ್ ಇಮಾಮ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ತಸ್ಲೀಮ್ ಅಹ್ಮದ್ ಅವರು ಯಾವುದೇ ವಿಚಾರಣೆಯಲ್ಲಿದೆ ಕಳೆದ 6 ವರ್ಷಗಳಿಂದ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ಜಾಮೀನಿಗಾಗಿ ನಿರಂತರವಾಗಿ ನ್ಯಾಯಾಲಯ ಕದ ತಟ್ಟುತ್ತಲೇ ಇದ್ದಾರೆ. ಇತ್ತೀಚೆಗೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ಪೀಠವು ಉಮರ್ ಮತ್ತು ಶರ್ಜೀಲ್‌ಗೆ ಜಾಮೀನು ನಿರಾಕರಿಸುವ ತೀರ್ಪನ್ನು ತೀವ್ರವಾಗಿ ಟೀಕಿಸಿತ್ತು. ಆ ಬಳಿಕ, ಇತ್ತೀಚೆಗೆ ಈ ನಾಲ್ವರೂ ಜಾಮೀನು ಕೋರಿ ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಲೆ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿದೆ. ಈ ವೇಳೆ, ನ್ಯಾಯಮೂರ್ತಿ ನಾಗರತ್ನ ಅವರು ಜಾಮೀನು ನಿರಾಕರಣೆಯನ್ನು ಟೀಕಿಸಿದ್ದರ ಕುರಿತು ಯಾವುದೇ ವ್ಯಾಖ್ಯಾನಗಳನ್ನು ನೀಡದಿರಲು ನಿರ್ಧರಿಸಿದೆ.
ಅರ್ಜಿಯ ವಿಚಾರಣೆ ವೇಳೆ, “ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ-1967 (UAPA)ಯ ಅಡಿಯಲ್ಲಿರುವ ಕಠಿಣ ಜಾಮೀನು ನಿಯಮಗಳಿಗಿಂತ, ವಿಚಾರಣೆಗೆ ಮುನ್ನ ಅನುಭವಿಸುವ ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ನ್ಯಾಯಾಲಯದ ನಡಾವಳಿಗಳಲ್ಲಿ ಆಗುವ ವಿಳಂಬಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ವಿಸ್ತೃತ ಪೀಠದ ಮುಂದೆ ಇಡಬೇಕು” ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
ದೆಹಲಿ ಪೊಲೀಸರ ಮನವಿಯನ್ನೂ ಗಮನಿಸಿದ ಪೀಠವು, “ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸುವ ನಿರ್ಧಾರವನ್ನು, ಪ್ರತಿಯೊಬ್ಬ ಆರೋಪಿಯ ಪಾತ್ರ ಮತ್ತು ಅವರ ವಿರುದ್ಧದ ಸಾಕ್ಷ್ಯಗಳನ್ನು ಪ್ರತ್ಯೇಕವಾಗಿ ಮೌಲ್ಯಮಾಪನ ಮಾಡಿದ ನಂತರವೇ ತೆಗೆದುಕೊಳ್ಳಲಾಗುತ್ತದೆ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ‘ಅಮೆರಿಕ ಖಜಾನೆ’ ಜೊತೆ ಡೀಲ್ ಕುದುರಿಸಿದ ಅದಾನಿ ಗ್ರೂಪ್; ಕ್ರಿಮಿನಲ್ ಕೇಸ್ ಖುಲಾಸೆಗೆ ತೆತ್ತ…
ಅಲ್ಲದೆ, ಜಾಮೀನು ಅರ್ಜಿದಾರರಲ್ಲಿ ಇಬ್ಬರಾದ ಅಬ್ದುಲ್ ಖಾಲಿದ್ ಸೈಫಿ ಮತ್ತು ತಸ್ಲೀಮ್ ಅಹ್ಮದ್ ಅವರಿಗೆ ಷರತ್ತುಬದ್ಧ ಆರು ತಿಂಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಇಬ್ಬರಲ್ಲಿ ಯಾರಾದರೂ ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ, ಅವರ ಜಾಮೀನು ರದ್ದುಗೊಳಿಸುವಂತೆ ಪ್ರಾಸಿಕ್ಯೂಷನ್ (ಸರ್ಕಾರಿ ಪರ ವಕೀಲರು) ಕೋರಬಹುದು ಎಂದೂ ಪೀಠವು ಹೇಳಿದೆ.
ಆದಾಗ್ಯೂ, ಉಮರ್ ಮತ್ತು ಶರ್ಜೀಲ್ ಅವರಿಗೆ ಜಾಮೀನು ನೀಡಲು ಹಿಂದೇಟು ಹಾಕಿರುವ ಪೀಠವು, ಪ್ರಕರಣದಲ್ಲಿ ಅಡಕವಾಗಿರುವ ಕಾನೂನಾತ್ಮಕ ಪ್ರಶ್ನೆಗೆ ಸಂಬಂಧಿಸಿದಂತೆ ಅಧಿಕೃತ ಮತ್ತು ನಿರ್ಣಾಯಕ ತೀರ್ಪು ನೀಡಲು ಸೂಕ್ತ ಪೀಠವನ್ನು ರಚಿಸುವಂತೆ ಕೋರಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿಗೆ ಪ್ರಸ್ತಾವನೆ ಕಳಿಸಲು ನಿರ್ದೇಶಿಸಿದೆ.



