ಬಡವರಿಗೆ ಕೇವಲ ನಿವೇಶನಗಳನ್ನು ಹಂಚಿಕೆ ಮಾಡುವ ಬದಲು, ಅವರಿಗೆ ಮನೆಗಳನ್ನೇ ನಿರ್ಮಿಸಿಕೊಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಸತಿ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ‘ವಸತಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಅವರು ಮಾತನಾಡಿದರು. “ಖಾಲಿ ನಿವೇಶನಗಳನ್ನು ನೀಡಿದರೆ ಆ ಜಾಗಗಳು ಸ್ಲಂಗಳಾಗಿ (ಕೊಳಗೇರಿ) ತಲೆ ಎತ್ತುತ್ತವೆ. ಇದಕ್ಕೆ ಅವಕಾಶ ನೀಡಬಾರದು. ಯಾವುದೇ ವಸತಿ ಯೋಜನೆಗೆ ಕೈ ಹಾಕುವ ಮುನ್ನವೇ ಸ್ಪಷ್ಟ ಯೋಜನೆ ಇರಬೇಕು. ನಿರ್ಮಿಸಿದ ಬಳಿಕ ಮನೆಗಳ ಮಾರಾಟಕ್ಕೆ ಪರದಾಡುವ ಪರಿಸ್ಥಿತಿ ಬರಬಾರದು. ಹೀಗಾಗಿ ಗುಣಮಟ್ಟದಲ್ಲಿ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಬೇಕು” ಎಂದು ತಾಕೀತು ಮಾಡಿದರು.
ಕೊಳಗೇರಿಗಳ (ಸ್ಲಂ) ಮರು ಅಭಿವೃದ್ಧಿಗಾಗಿ ಮುಂಬೈ ಮಾದರಿಯಲ್ಲಿ ಯೋಜನೆ ಸಿದ್ಧಪಡಿಸುವಂತೆ ಸಿಎಂ ನಿರ್ದೇಶನ ನೀಡಿದರು. “ಮುಂಬೈಗಿಂತಲೂ ಹೆಚ್ಚು ವಿಸ್ತೀರ್ಣವುಳ್ಳ ಮನೆಗಳನ್ನು ನಾವು ನಿರ್ಮಿಸಬೇಕು. ಅಧಿಕಾರಿಗಳ ತಂಡವೊಂದು ಮುಂಬೈಗೆ ತೆರಳಿ ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿಕೊಂಡು ಬರಬೇಕು. ಅವರಿಗಿಂತ ಉತ್ತಮ ಮಾದರಿಯಲ್ಲಿ ನಾವೇನು ಮಾಡಬಹುದು ಎಂಬ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯೊಳಗೆ ವರದಿ ಸಲ್ಲಿಸಬೇಕು” ಎಂದು ಸೂಚಿಸಿದರು.
2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳ ‘ನಮ್ಮ ಮನೆ’ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯಡಿ 2,914 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ 1,665 ಎಕರೆ ಜಮೀನು ಬಳಸಿ ಮುಂದಿನ ಎರಡು ವರ್ಷಗಳಲ್ಲಿ 50,000 ನಿವೇಶನಗಳನ್ನು ರಿಯಾಯಿತಿ ದರದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ. ಆದರೆ, ಈ ಯೋಜನೆಯಡಿಯೂ ಫಲಾನುಭವಿಗಳಿಗೆ ಕೇವಲ ನಿವೇಶನ ಹಂಚುವ ಬದಲು, ಗೃಹ ನಿರ್ಮಾಣ ಮಾಡಿಕೊಡುವ ಬಗ್ಗೆಯೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
This video cannot be played in your browser. Open the video directly
ಸರ್ಕಾರದ ವಸತಿ ಯೋಜನೆಗಳಲ್ಲಿ ಹರಾಜು ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಸಾರ್ವಜನಿಕವಾಗಿ ಲಾಟರಿ ಎತ್ತುವ ಮೂಲಕ ಮನೆಗಳನ್ನು ಹಂಚಿಕೆ ಮಾಡಬೇಕು. ಯಾವುದೇ ಕಾರಣಕ್ಕೂ ನೈಜ ಮತ್ತು ಅರ್ಹ ಫಲಾನುಭವಿಗಳಿಗೆ ಮಾತ್ರವೇ ಸವಲತ್ತು ಸಿಗುವಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸ್ಪಷ್ಟಪಡಿಸಿದರು. ಹಳ್ಳಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಬಡವರು ಮನೆಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಬೇಕು. ಗ್ರಾಮೀಣ ವಸತಿ ಮನೆಗಳ ನಿರ್ಮಾಣ ಹಾಗೂ ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ವಿಳಂಬ ಧೋರಣೆ ಸಲ್ಲದು ಎಂದರು.
“ಜೀವಿತಾವಧಿಯಲ್ಲಿ ಸ್ವಂತದ್ದೊಂದು ಮನೆ ಇರಬೇಕು ಎಂಬುದು ಬಡ ಹಾಗೂ ಮಧ್ಯಮ ವರ್ಗದವರ ಬಹುದೊಡ್ಡ ಕನಸು. ಹಲವು ವರ್ಷಗಳ ಹಿಂದೆಯೇ ಮನೆಗಾಗಿ ಅರ್ಜಿ ಸಲ್ಲಿಸಿ, ಠೇವಣಿ ಕಟ್ಟಿದವರು ಇಂದಿಗೂ ಕಾಯುತ್ತಿದ್ದಾರೆ. ಪಾಪ, ಅವರೆಲ್ಲಾ ಇನ್ನೆಷ್ಟು ವರ್ಷ ಕಾಯಬೇಕು? ಫಲಾನುಭವಿಗಳ ಪಟ್ಟಿಯನ್ನು ಶೀಘ್ರವಾಗಿ ಒದಗಿಸುವಂತೆ ನಾನು ಶಾಸಕರೊಂದಿಗೆ ಮಾತನಾಡುತ್ತೇನೆ. ಅರ್ಜಿದಾರರನ್ನು ಇನ್ನಷ್ಟು ಕಾಯಿಸದೆ ತಕ್ಷಣವೇ ಮನೆಗಳನ್ನು ವಿತರಿಸಬೇಕು” ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.
ಮನೆಗಳನ್ನು ಕಟ್ಟಿದರೆ ಮಾತ್ರ ಸಾಲದು, ಆ ಬಡಾವಣೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು ಹಾಗೂ ಸೂಕ್ತ ಸಂಪರ್ಕವನ್ನು (ಕನೆಕ್ಟಿವಿಟಿ) ಕಲ್ಪಿಸುವ ಕಡೆಗೂ ಗಮನಹರಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಶಿವರಾಮ ಕಾರಂತ ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಬಿಡಿಎಗೆ (BDA) ವಹಿಸುವಂತೆಯೂ ಇದೇ ವೇಳೆ ಸೂಚನೆ ನೀಡಿದರು.
ಇದನ್ನು ಓದಿದ್ದೀರಾ? ಗಾಜಾ ಶಾಂತಿ ಮಂಡಳಿ ಸೇರಲ್ಲ ಎಂದ ಫ್ರಾನ್ಸ್: ವೈನ್ ಮೇಲೆ ಶೇ.200 ತೆರಿಗೆ ಹಾಕುವುದಾಗಿ ಟ್ರಂಪ್ ಬೆದರಿಕೆ
ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಅನುಮೋದನೆಗೊಂಡಿರುವ ಒಟ್ಟು 568 ಯೋಜನೆಗಳ ಪೈಕಿ, 280 ಯೋಜನೆಗಳು ಮಾತ್ರ ಅನುಷ್ಠಾನಗೊಂಡಿವೆ. ಬಾಕಿ ಉಳಿದಿರುವ 288 ಯೋಜನೆಗಳಿಗೆ ಎದುರಾಗಿರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿ ಶೀಘ್ರಗತಿಯಲ್ಲಿ ಕಾಮಗಾರಿ ಮುಗಿಸಬೇಕು. ಇದರಲ್ಲಿ ಯಾವುದೇ ರೀತಿಯ ದುರುಪಯೋಗವಾಗದಂತೆ ಜಾಗ್ರತೆ ವಹಿಸಬೇಕು ಎಂದು ಸಿಎಂ ಎಚ್ಚರಿಸಿದರು.
ಸರ್ಕಾರದಿಂದ ಕಡಿಮೆ ದರದಲ್ಲಿ ನಿವೇಶನ ಪಡೆದವರು 3 ರಿಂದ 5 ವರ್ಷದೊಳಗೆ ಕಡ್ಡಾಯವಾಗಿ ಮನೆ ನಿರ್ಮಿಸುವ ನಿಯಮವನ್ನು ಮರುಪರಿಶೀಲಿಸುವಂತೆ ತಿಳಿಸಿದ ಅವರು, ವರ್ಷಾನುಗಟ್ಟಲೆ ನಿವೇಶನಗಳನ್ನು ಖಾಲಿ ಬಿಡುವ ಬದಲು ನಿಗದಿತ ಸಮಯದಲ್ಲಿ ಮನೆ ಕಟ್ಟಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಸೂಚಿಸಿದರು. ಇದೇ ವೇಳೆ, ಸಂಡೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿರ್ಮಿಸಲಾಗಿರುವ ಮನೆಗಳ ಗುಣಮಟ್ಟವನ್ನು ಸಿಎಂ ಪ್ರಶಂಸಿದರು.
ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ವಿವಿಧ ವಸತಿ ಯೋಜನೆಗಳಡಿ ಮೇ ಅಂತ್ಯದವರೆಗೆ ರಾಜ್ಯಾದ್ಯಂತ ಒಟ್ಟು 53.57 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.
ಕರ್ನಾಟಕ ಗೃಹ ಮಂಡಳಿಯಲ್ಲಿ (KHB) ಒಟ್ಟು 610 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 293 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 164 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ವಸತಿ ಇಲಾಖೆ ಕಾರ್ಯದರ್ಶಿ ಮೋಹನ್ ರಾಜ್, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ ಶಿನ್ನಾಳಕರ್, ಕರ್ನಾಟಕ ಗೃಹ ಮಂಡಳಿ ಆಯುಕ್ತ ದಯಾನಂದ ಕೆ.ಎ., ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ರಾಘವೇಂದ್ರ ಟಿ. ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.





