ಜವಾಹರಲಾಲ್ ನೆಹರೂ ಅವರು ಭಾರತ ಕಂಡ ಅತ್ಯುತ್ತಮ ಪ್ರಧಾನಿ. ಆದರೆ, ಪ್ರಧಾನಿಯಾಗುವ ಅವಕಾಶ ಸಿಗದ ದೇಶದ ಶ್ರೇಷ್ಠ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಜೈರಾಮ್ ರಮೇಶ್ ಬಣ್ಣಿಸಿದ್ದಾರೆ.
ಸುದ್ದಿಸಂಸ್ಥೆ ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಸದಸ್ಯರನ್ನು ‘ನಕಲಿ ರಾಷ್ಟ್ರೀಯವಾದಿಗಳು’ ಎಂದು ಟೀಕಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಸುಳ್ಳುಗಳ ಸರದಾರ’ (ಮಾಸ್ಟರ್ ಆಫ್ ಫಾಲ್ಸ್‌ಹುಡ್ಸ್) ಎಂದು ಜರಿದರು.
ಸಂದರ್ಶನದ ಕ್ಷಿಪ್ರ-ಪ್ರಶ್ನೋತ್ತರ (ರ‍್ಯಾಪಿಡ್-ಫೈರ್) ಸುತ್ತಿನಲ್ಲಿ, ಒಂದೇ ಪದದಲ್ಲಿ ಉತ್ತರಿಸುವಂತೆ ಕೇಳಲಾದ ಪ್ರಶ್ನೆಗಳಿಗೆ ಅವರು ಸ್ವಾರಸ್ಯಕರ ಉತ್ತರಗಳನ್ನು ನೀಡಿದರು. ‘ಭಾರತದ ಅತ್ಯುತ್ತಮ ಪ್ರಧಾನಿ ಯಾರು?’ ಎಂಬ ಪ್ರಶ್ನೆಗೆ, ‘ನಿಸ್ಸಂದೇಹವಾಗಿ ಜವಾಹರಲಾಲ್ ನೆಹರೂ’ ಎಂದು ಉತ್ತರಿಸಿದರು. ‘ದೇಶಕ್ಕೆ ಒಲಿಯದ ಅತ್ಯುತ್ತಮ ಪ್ರಧಾನಿ ಯಾರು?’ ಎಂಬ ಪ್ರಶ್ನೆಗೆ ‘ಸರ್ದಾರ್ ಪಟೇಲ್’ ಎಂದು ತಮ್ಮ ಆಯ್ಕೆಯನ್ನು ತಿಳಿಸಿದರು.
ತಮ್ಮ ಹಿಂದಿನ ಸಚಿವ ಸ್ಥಾನಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದಕ್ಕಿಂತ ಪರಿಸರ ಸಚಿವನಾಗಿದ್ದ ಅವಧಿಯನ್ನು ಹೆಚ್ಚು ಇಷ್ಟಪಡುವುದಾಗಿ ತಿಳಿಸಿದರು. ಹಾಗೆಯೇ, ಯಾವುದೇ ರಾಜ್ಯದ ಎಐಸಿಸಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಕಾರ್ಯತಂತ್ರ ರೂಪಿಸುವ ಜವಾಬ್ದಾರಿಯನ್ನು ನಿರ್ವಹಿಸುವುದು ತಮಗೆ ಅಚ್ಚುಮೆಚ್ಚು ಎಂದರು.
ಇದನ್ನು ಓದಿದ್ದೀರಾ? ಗಾಜಾ ಶಾಂತಿ ಮಂಡಳಿ ಸೇರಲ್ಲ ಎಂದ ಫ್ರಾನ್ಸ್: ವೈನ್ ಮೇಲೆ ಶೇ.200 ತೆರಿಗೆ ಹಾಕುವುದಾಗಿ ಟ್ರಂಪ್ ಬೆದರಿಕೆ
ಲೇಖಕ, ರಣತಂತ್ರಗಾರ (ಸ್ಟ್ರಾಟೆಜಿಸ್ಟ್) ಮತ್ತು ಪರಿಸರ ಸಂರಕ್ಷಣಾಕಾರ – ಈ ಮೂರೂ ಆಯಾಮಗಳು ತಮ್ಮ ವ್ಯಕ್ತಿತ್ವದ ಭಿನ್ನ ಮುಖಗಳು. ಕಳೆದ 10 ವರ್ಷಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದೇನೆ. ಸಂಶೋಧನೆ ಮಾಡುವುದು, ಹಳೆಯ ದಾಖಲೆಗಳನ್ನು ಕೆದುಕುವುದು, ಪರಿಸರದ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಮತ್ತು ಸಂಸದನಾಗಿ ಕೆಲಸ ಮಾಡುವುದನ್ನು ಸಮಾನವಾಗಿ ಆನಂದಿಸುತ್ತೇನೆ ಎಂದು ಅವರು ಹೇಳಿದರು.
ತಮ್ಮ ರಾಜಕೀಯ ಪ್ರವೇಶದ ದಿನಗಳನ್ನು ಸ್ಮರಿಸಿದ ರಮೇಶ್, ತಾವು ಪೂರ್ಣಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಳ್ಳಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಕಾರಣ ಎಂದರು. “ಸ್ಯಾಮ್ ಪಿತ್ರೋಡಾ ಅವರ ಮೂಲಕ ರಾಜೀವ್ ಗಾಂಧಿ ಅವರೊಂದಿಗೆ ತಂತ್ರಜ್ಞಾನ ಮಿಷನ್‌ಗಳಲ್ಲಿ ಕೆಲಸ ಮಾಡಿದ್ದೆ. 1990ರ ಸುಮಾರಿಗೆ ಚುನಾವಣೆ ಸಮೀಪಿಸುತ್ತಿದ್ದಾಗ ರಾಜೀವ್ ಗಾಂಧಿ ಅವರು ಪಕ್ಷಕ್ಕಾಗಿ ಪೂರ್ಣಾವಧಿ ಕೆಲಸ ಮಾಡಲು ಆಹ್ವಾನಿಸಿದರು. ಅಲ್ಲಿಂದ ಶುರುವಾದ ನನ್ನ ಪಯಣ ಕಾಂಗ್ರೆಸ್ ಪಕ್ಷದಲ್ಲಿ ಈಗ 35ನೇ ವರ್ಷಕ್ಕೆ ಕಾಲಿಟ್ಟಿದೆ. ನಾನು ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದವನು. ಯುವಕರನ್ನು ಪ್ರೋತ್ಸಾಹಿಸುತ್ತಿದ್ದ ರಾಜೀವ್ ಗಾಂಧಿ ಅವರೇ ನನ್ನ ರಾಜಕೀಯ ಜೀವನಕ್ಕೆ ದೊಡ್ಡ ಪ್ರೇರಣೆ,” ಎಂದು ಜೈರಾಮ್ ರಮೇಶ್ ವಿವರಿಸಿದರು.




