ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ-2009)ಯನ್ನು ಪೂರ್ಣವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ‘ಸರ್ಕಾರಿ ಶಾಲೆಗಳ ಸಬಲೀಕರಣ ವೇದಿಕೆ’ಯು ನವೆಂಬರ್ 26ರಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದೆ. ಈ ಬೃಹತ್ ಜನಾಂದೋಲನದ ರೂಪುರೇಷೆಗಳನ್ನು ಚರ್ಚಿಸಲು ನವೆಂಬರ್ 5ರಂದು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ.
ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ 56,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲೇ 26,000ಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ. ರಾಯಚೂರಿನ ದೇವದುರ್ಗ ತಾಲ್ಲೂಕು ಒಂದರಲ್ಲೇ 105 ಶಾಲೆಗಳು ಶೂನ್ಯ (0) ಶಿಕ್ಷಕರನ್ನು ಹೊಂದಿವೆ. ಇದಲ್ಲದೆ, 2020ರಿಂದ 2026ರ ಅವಧಿಯಲ್ಲಿ ರಾಜ್ಯದಲ್ಲಿ 3,617 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. 17 ವರ್ಷಗಳ ಹಿಂದೆಯೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವಲ್ಲಿ ವಿಫಲವಾಗಿದೆ ಎಂದು ವೇದಿಕೆ ಆರೋಪಿಸಿದೆ.
ತರಗತಿ ಹಾಗೂ ವಿಷಯವಾರು ಶಿಕ್ಷಕರ ಕೊರತೆಯಿಂದಾಗಿ ಮಕ್ಕಳಿಗೆ ಕನಿಷ್ಠ ಓದು, ಬರಹ ಮತ್ತು ಲೆಕ್ಕಾಚಾರವೂ ಬಾರದಂತಾಗಿದ್ದು, ಅವರ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಸರ್ಕಾರಿ ಶಾಲೆಗಳನ್ನು ನೆಚ್ಚಿಕೊಂಡಿರುವ ಬಡ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಜಾರಿಗೆ ತಂದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಪ್ರಸ್ತುತ ಅದೇ ಸರ್ಕಾರ ಉಲ್ಲಂಘಿಸುತ್ತಿದೆ ಎಂದು ವೇದಿಕೆ ಕಳವಳ ವ್ಯಕ್ತಪಡಿಸಿದೆ.
ಕಳೆದ 10 ವರ್ಷಗಳಿಂದ ಶಾಲೆಗಳ ಉಳಿವಿಗೆ, ಮೂಲಸೌಕರ್ಯ ಹಾಗೂ ಸಹಾಯಕ (ಪರಿಚಾರಕ)ರ ನೇಮಕಕ್ಕೆ ಆಗ್ರಹಿಸಿ ನಿರಂತರ ಹೋರಾಟ ನಡೆಸಲಾಗುತ್ತಿದೆ. 2024ರ ಜನವರಿಯಲ್ಲಿ ಕಲಬುರಗಿಯಲ್ಲಿ ನಡೆದ ಅಹೋರಾತ್ರಿ ಧರಣಿ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ 2025ರ ಜನವರಿಯಲ್ಲಿ ರಾಯಚೂರಿನಲ್ಲಿ ನಡೆದ ಧರಣಿ ವೇಳೆ ಸಚಿವ ಶರಣಪ್ರಕಾಶ ಪಾಟೀಲ ಅವರು ಭರವಸೆ ನೀಡಿದ್ದರಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. 60ಕ್ಕೂ ಹೆಚ್ಚು ತಾಲ್ಲೂಕು ಹಾಗೂ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನವೆಂಬರ್ 26ರಂದು ನಡೆಯಲಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ಜನರು, ವಿಶೇಷವಾಗಿ ಮಹಿಳೆಯರು ಭಾಗವಹಿಸಲಿದ್ದಾರೆ. ಈ ಹೋರಾಟದ ವಿಧಿವಿಧಾನ ಹಾಗೂ ಒಮ್ಮತದ ಬೇಡಿಕೆಗಳನ್ನು ಸಿದ್ಧಪಡಿಸಲು ನವೆಂಬರ್ 05, 2026ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶಿವಾನಂದ ವೃತ್ತದ ಬಳಿ ಇರುವ ಗಾಂಧಿ ಭವನದ ಮೊದಲನೇ ಮಹಡಿಯ ವಿನೋಬಾ ಭಾವೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಯಲ್ಲಿ ರಾಜ್ಯದ ಎಲ್ಲ ಸಾಮೂಹಿಕ ಸಂಘಟನೆಗಳ ಪ್ರತಿನಿಧಿಗಳು, ಹೋರಾಟಗಾರರು, ಶಿಕ್ಷಣ ತಜ್ಞರು, ಚಿಂತಕರು ಹಾಗೂ ಬರಹಗಾರರು ಭಾಗವಹಿಸಲಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇರುವ ಎಲ್ಲರೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ವೇದಿಕೆಯ ಮುಖಂಡರಾದ ಅಭಯ್ ಕುಮಾರ್, ವಿ.ಪಿ. ನಿರಂಜನಾರಾಧ್ಯ, ವಿದ್ಯಾ ಪಾಟೀಲ್, ಹಫೀಜುಲ್ಲಾ ಹಾಗೂ ಬಸವರಾಜು ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




