ಕರ್ನಾಟಕದ ಜೀವನಾಡಿಯಾಗಿರುವ ಕಾವೇರಿ ನದಿ ಮತ್ತು ಅದರ ಪ್ರಮುಖ ಜಲಾಶಯಗಳಾದ ಕೃಷ್ಣರಾಜಸಾಗರ (ಕೆಆರ್‌ಎಸ್), ಕಬಿನಿ ಮತ್ತು ಹಾರಂಗಿ ಇಂದು ತೀವ್ರ ಜಲಕ್ಷಾಮದ ಸುಳಿಗೆ ಸಿಲುಕಿವೆ. ಕೊಡಗು ಮತ್ತು ವೈನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ವಿಳಂಬವಾಗಿರುವುದು ಮತ್ತು ವಾಡಿಕೆಗಿಂತ ಭಾರಿ ಮಳೆ ಕೊರತೆಯಾಗಿರುವುದು ಕಾವೇರಿ ಕೊಳ್ಳದ ರೈತರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು, ಆದರೆ ಈ ಬಾರಿ ಚಿತ್ರಣ ಸಂಪೂರ್ಣ ವ್ಯತಿರಿಕ್ತವಾಗಿದೆ. ಕಳೆದ ವರ್ಷ 720.6 ಮಿಲಿಮೀಟರ್ ಮಳೆಯಾಗಿದ್ದ ಜಾಗದಲ್ಲಿ, ಈ ಬಾರಿ ಕೇವಲ 204.2 ಮಿಲಿಮೀಟರ್ ಮಳೆಯಾಗಿರುವುದು, ಅಂದರೆ ಸುಮಾರು ಶೇ.70ರಷ್ಟು ಮಳೆ ಕೊರತೆ ದಾಖಲಾಗಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಹಾರಂಗಿ ಜಲಾಶಯಕ್ಕೆ ಬರುತ್ತಿದ್ದ ನೀರಿನ ಒಳಹರಿವು ಕಳೆದ ವರ್ಷದ 5000 ಕ್ಯೂಸೆಕ್ಸ್‌ಗೆ ಹೋಲಿಸಿದರೆ, ಈಗ ಕೇವಲ 380 ಕ್ಯೂಸೆಕ್ಸ್‌ಗೆ ಕುಸಿದಿದೆ. 2859 ಅಡಿಗಳಷ್ಟು ಗರಿಷ್ಠ ಸಾಮರ್ಥ್ಯ ಹೊಂದಿರುವ ಹಾರಂಗಿ ಅಣೆಕಟ್ಟಿನಲ್ಲಿ ಈಗ ನೀರಿನ ಮಟ್ಟ 2825.97 ಅಡಿಗಳಿಗೆ ಇಳಿಕೆಯಾಗಿರುವುದು ಮತ್ತು ಕಳೆದ ವರ್ಷಕ್ಕಿಂತ 24 ಅಡಿಗಳಷ್ಟು ನೀರಿನ ಮಟ್ಟ ಕಡಿಮೆಯಾಗಿರುವುದು ರೈತರನ್ನು ಚಿಂತೆಗೀಡುಮಾಡಿದೆ.
ಈ ಜಲಕ್ಷಾಮದ ನೇರ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಬಿದ್ದಿದೆ. ಕಬಿನಿ ಜಲಾಶಯ ಈಗಾಗಲೇ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿರುವುದರಿಂದ, ಸದ್ಯ ಉಳಿದಿರುವ ನೀರನ್ನು ಬೆಂಗಳೂರು, ಮೈಸೂರು ಹಾಗೂ ಮಂಡ್ಯ ನಗರಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಕೇವಲ 6 ಟಿಎಂಸಿಗಳಷ್ಟನ್ನು ಮಾತ್ರ ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಬಿನಿಯಿಂದ ನೀರು ಲಭ್ಯವಿಲ್ಲದ ಕಾರಣ ಕೆಆರ್‌ಎಸ್ ಅಣೆಕಟ್ಟಿನ ಮೇಲೆ ಸಂಪೂರ್ಣ ಒತ್ತಡ ಬಿದ್ದಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ನಿತ್ಯ 1800 ಕ್ಯೂಸೆಕ್ ನೀರು ಪೂರೈಸಬೇಕಿರುವುದರಿಂದ, ಲಭ್ಯವಿರುವ 6 ಟಿಎಂಸಿ ನೀರನ್ನು ಮುಂದಿನ 3 ತಿಂಗಳ ಕಾಲ ನಿರ್ವಹಿಸಬೇಕಿದೆ.
ನದಿಯ ಹರಿವು ಕಡಿಮೆಯಾದಂತೆ, ಮಣ್ಣಿನಲ್ಲಿ ಲವಣಾಂಶಗಳ ಸಾಂದ್ರತೆ ಹೆಚ್ಚಾಗುತ್ತದೆ, ಇದು ದೀರ್ಘಾವಧಿಯಲ್ಲಿ ಭೂಮಿಯನ್ನು ಬರಡು ಮಾಡುವ ಅಪಾಯ ಹೊಂದಿದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿನ ಅನಿಯಂತ್ರಿತ ನಿರ್ಮಾಣ ಕಾರ್ಯಗಳು ಪರಿಸರ ನಾಶಕ್ಕೆ ಕಾರಣವಾಗಿದ್ದು, ಹವಾಮಾನ ಬದಲಾವಣೆಯ (Climate Change) ಪರಿಣಾಮವಾಗಿ ಮಳೆ ಮೋಡಗಳನ್ನು ಆಕರ್ಷಿಸುವ ಸಾಮರ್ಥ್ಯವೂ ಕಡಿಮೆಯಾಗಿದೆ. ಕೃಷಿ ಉತ್ಪಾದನೆ ಕಡಿಮೆಯಾಗುತ್ತಿರುವುದರಿಂದ ರಾಜ್ಯದ ಜಿಡಿಪಿ (GDP) ಮೇಲೂ ಇದು ನೇರ ಹೊಡೆತ ನೀಡಲಿದೆ.
ಕಾವೇರಿ ಕೊಳ್ಳದ ಕೃಷಿಕರು ಈ ಬಾರಿ ಮಳೆ ಕೊರತೆಯ ಜೊತೆಗೆ ಬೆಳೆ ನಷ್ಟದ ಭೀತಿಯನ್ನೂ ಎದುರಿಸುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಭತ್ತ ಮತ್ತು ಕಬ್ಬು ಬೆಳೆಯುವ ಈ ಭಾಗದಲ್ಲಿ, ನೀರಿಲ್ಲದ ಕಾರಣ ರೈತರು ಪರ್ಯಾಯ ಬೆಳೆಗಳತ್ತ ನೋಡುವಂತಾಗಿದೆ. ಮಣ್ಣಿನ ತೇವಾಂಶ ಕಡಿಮೆಯಾಗುತ್ತಿದ್ದು, ಸ್ಪ್ರಿಂಕ್ಲರ್ ಪದ್ಧತಿ ಬಳಸಿದರೂ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳು ಕೈಕೊಡುತ್ತಿವೆ. ನದಿಯ ಒಡಲಲ್ಲೇ ಮರಳು ಮಾಫಿಯಾಗಳ ಚಟುವಟಿಕೆಗಳು ಹೆಚ್ಚಾಗುವ ಆತಂಕವೂ ಇದೆ.
ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಇತ್ತೀಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ತಮಿಳುನಾಡು ಅಧಿಕಾರಿಗಳು, ಕರ್ನಾಟಕದಿಂದ ತಮಗೆ ಬರಬೇಕಾದ ನೀರಿನ ಕೋಟಾವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ತೀವ್ರ ಒತ್ತಡ ಹೇರಿದ್ದಾರೆ. ಸಭೆಯಲ್ಲಿ ತನ್ನ ವಾದ ಮಂಡಿಸಿದ ತಮಿಳುನಾಡು ಸರ್ಕಾರ, “ಜೂನ್ ತಿಂಗಳಿನಲ್ಲಿ ನಿಗದಿತ ವೇಳಾಪಟ್ಟಿಯಂತೆ ಕರ್ನಾಟಕವು 9.19 ಟಿಎಂಸಿ ನೀರನ್ನು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 2.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಂದರೆ ಸರಿಸುಮಾರು 6.5 ಟಿಎಂಸಿ ನೀರಿನ ಕೊರತೆಯಾಗಿದೆ” ಎಂದು ದೂರು ನೀಡಿ, ಈ ಕೊರತೆಯನ್ನು ತಕ್ಷಣವೇ ಭರಿಸಬೇಕು ಎಂದು ಪ್ರಾಧಿಕಾರದ ಮುಂದೆ ಪಟ್ಟು ಹಿಡಿದಿದೆ.
ಇದನ್ನೂ ಓದಿ: ಇರಾನ್-ಅಮೆರಿಕ ದಾಳಿ, ಪ್ರತಿದಾಳಿ: ಶಾಂತಿ ಮರೀಚಿಕೆ; ಕದನ ವಿರಾಮ ತತ್ತರ!
ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎಂಬ ಕರ್ನಾಟಕದ ವಾದವನ್ನು ತಮಿಳುನಾಡು ಸಾರಾಸಗಟಾಗಿ ತಳ್ಳಿಹಾಕಿದೆ. “ಫೆಬ್ರವರಿಯಿಂದ ಮೇ ತಿಂಗಳವರೆಗೆ ಕರ್ನಾಟಕವು ತನ್ನ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಬಳಸಿಕೊಂಡಿದೆ. ಇದರಿಂದಾಗಿಯೇ ಈಗ ನೀರಿನ ಮಟ್ಟ ಕುಸಿದಿದೆ. ನಿಮ್ಮ ತಪ್ಪು ನಿರ್ವಹಣೆಗೆ ನಾವು ಬೆಲೆ ತೆರಲು ಸಾಧ್ಯವಿಲ್ಲ” ಎಂದು ತಮಿಳುನಾಡು ಅಧಿಕಾರಿಗಳು ಗಂಭೀರ ಆರೋಪ ಮಾಡಿದ್ದಾರೆ. ಜೂನ್ ತಿಂಗಳ ಬಾಕಿ ಉಳಿದಿರುವ ನೀರಿನ ಜೊತೆಗೆ, ಜುಲೈ ತಿಂಗಳ ಕೋಟಾ ಆದ 31.24 ಟಿಎಂಸಿ ನೀರನ್ನು ಹರಿಸಲು ಕರ್ನಾಟಕಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಪ್ರಾಧಿಕಾರವನ್ನು ಅವರು ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯು ಈಗಾಗಲೇ ಮಳೆ ಕೊರತೆಯಿಂದ ತತ್ತರಿಸಿರುವ ಕರ್ನಾಟಕಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.




