ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳ ನಡುವೆಯೂ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಮತ್ತು ಅಮೆರಿಕ ಪಡೆಗಳ ನಡುವಿನ ದಾಳಿ ಹಾಗೂ ಪ್ರತಿದಾಳಿಗಳ ಸರಣಿ ತೀವ್ರಗೊಂಡಿದೆ.
ಸದ್ಯ ಉಭಯ ರಾಷ್ಟ್ರಗಳು ಪರಸ್ಪರ ದಾಳಿಗಳನ್ನು ಸ್ಥಗಿತಗೊಳಿಸಲು (Stand Down) ಒಪ್ಪಿಕೊಂಡಿವೆ. ಹಾರ್ಮುಜ್ ಜಲಸಂಧಿಯ ವಿವಾದವನ್ನು ಬಗೆಹರಿಸಲು ಜೂನ್ 30ರಂದು ಕತಾರ್‌ನ ದೋಹಾದಲ್ಲಿ ಮತ್ತೊಮ್ಮೆ ಮಹತ್ವದ ಮಾತುಕತೆ ನಡೆಯಲಿದೆ ಎಂದು ಹಿರಿಯ ಯುಸ್ ಅಧಿಕಾರಿಗಳು ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಆದರೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ಇದನ್ನೂ ಓದಿ: ಟ್ರಂಪ್ ಬೆದರಿಕೆ; ಮಾತುಕತೆಯಿಂದ ಹೊರನಡೆದ ಇರಾನ್ ಅಧಿಕಾರಿಗಳು: ಉದ್ವಿಗ್ನತೆ ತೀವ್ರ
ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ‘ಎವರ್ ಲವ್ಲಿ’ ಮತ್ತು 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಹೊತ್ತಿದ್ದ ಪನಾಮ ಧ್ವಜದ ‘ಕಿಕು’ ತೈಲ ಟ್ಯಾಂಕರ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಪ್ರತಿದಾಳಿ ನಡೆಸಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬಳಿಕ ಅಮೆರಿಕ ಭಾನುವಾರ ಇರಾನಿನ ಮೇಲೆ ಪ್ರತಿದಾಳಿ ಆರಂಭಿಸಿದೆ.
ಇರಾನ್‌ನ ಡ್ರೋನ್ ಸಂಗ್ರಹಾಗಾರಗಳು, ಕ್ಷಿಪಣಿ ನೆಲೆಗಳು ಹಾಗೂ ಕರಾವಳಿ ರಾಡಾರ್ ಕೇಂದ್ರಗಳು ಸೇರಿದಂತೆ 10 ಪ್ರಮುಖ ಸೇನಾ ನೆಲೆಗಳ ಮೇಲೆ ಸರಣಿ ವೈಮಾನಿಕ ದಾಳಿ ನಡೆಸಲಾಗಿದೆ. ಈ ದಾಳಿಗೆ ಪ್ರತೀಕಾರವಾಗಿ ಇರಾನ್ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ 8 ಯುಎಸ್ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
ಈ ನಡುವೆ ಒಪ್ಪಂದ ಜಾರಿ ತರುವ ಕುರಿತು ಚರ್ಚಿಸಲು ಅಮೆರಿಕ ಮತ್ತು ಇರಾನ್ ನಾಯಕರು ಈ ವಾರ ದೋಹಾದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ. ವಿಶ್ವದ ಅತ್ಯಂತ ಮುಖ್ಯವಾದ ಹಡಗು ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಸಂಬಂಧಿಸಿದಂತೆ ಮಾತುಕತೆ ನಡೆಯಲಿದೆ ಎಂದು ಆಕ್ಸಿಯಾಸ್ ವರದಿ ಮಾಡಿದೆ.




