ತಮಗೂ ಹಾಗೂ ತಮ್ಮ ಅಪ್ರಾಪ್ತ ಮಗನಿಗೂ ಧರ್ಮಸ್ಥಳದ ಅತ್ಯಾಚಾರಿಗಳು ಹಾಗೂ ರಾಜಕೀಯ ಪ್ರಭಾವಿಗಳಿಂದ ತೀವ್ರ ಕಿರುಕುಳ ಮತ್ತು ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರಿಗೆ ಪತ್ರ ಬರೆದು ದೂರನ್ನು ಸಲ್ಲಿಸಿದ್ದಾರೆ. ನಾನು ಧರ್ಮಸ್ಥಳದ ಸೌಜನ್ಯ ಹೋರಾಟಕ್ಕೆ ಬೆಂಬಲಿಸಿದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಂತ್ರಸ್ತೆ ತಮಗೆ ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಹೆಗ್ಗನಹಳ್ಳಿಯ ‘ಇ ಕಥಾ ಚಾರಿಟಬಲ್ ಟ್ರಸ್ಟ್’ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಆದರೆ ಅಲ್ಲಿನ ಇನ್‌ಚಾರ್ಜ್ ತನುಜಾ ಮತ್ತು ರಾಜೇಶ್ವರಿ ಎಂಬುವವರು ಸಂತ್ರಸ್ತೆಗೆ ಆಶ್ರಯ ನೀಡಲು ಮೊದಲು ನಿರಾಕರಿಸಿ, ತೀವ್ರ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ʼಸಂಘಿ ಭಕ್ತರುʼ ಏಕೆ ಹೀಗೆ ಸಾವು-ನೋವು-ಸೋಲುಗಳನ್ನು ಸಂಭ್ರಮಿಸುತ್ತಾರೆ?
ತಾವು ತಂದಿದ್ದ ಕನಿಷ್ಠ ಸಾಮಾನು ಹಾಗೂ ಪಾತ್ರೆಗಳನ್ನು ಇಟ್ಟುಕೊಳ್ಳಲು ಬಿಡದೆ, ಸಣ್ಣಪುಟ್ಟ ವಿಷಯಗಳಿಗೂ ಕಿರುಚಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರದಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ತಾವು ಮಲಗಿರುವಾಗ ಅದೇ ರೂಮ್‌ನಲ್ಲಿರುವ ಮಹಿಳೆಯೊಬ್ಬರು ಮೊಬೈಲ್ ವಿಡಿಯೋ ಕಾಲ್ ಮೂಲಕ ಸಂತ್ರಸ್ತೆಯನ್ನು ಅತ್ಯಾಚಾರಿಗಳ ಕಡೆಯವರಿಗೆ ತೋರಿಸುತ್ತಿರುವುದೂ ಸಂತ್ರಸ್ತೆ ಪತ್ತೆಹಚ್ಚಿದ್ದಾರೆ. ಅಲ್ಲಿರುವ ಸಣ್ಣ ಮಕ್ಕಳ ಮೂಲಕವೂ ತಮಗೆ ವಿಕೃತವಾಗಿ ಕಿರುಕುಳ ನೀಡುವಂತೆ ಪ್ರಚೋದಿಸಲಾಗುತ್ತಿದೆ ಎಂದು ಸಂತ್ರಸ್ತೆ ದೂರಿದ್ದಾರೆ.
ಈ ಇಡೀ ಕಿರುಕುಳದ ಹಿಂದೆ ಧರ್ಮಸ್ಥಳದ ಅತ್ಯಾಚಾರಿಗಳು ಮಾತ್ರವಲ್ಲದೆ, ಅವರಿಗೆ ಬೆಂಬಲ ನೀಡುತ್ತಾ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಸಂತ್ರಸ್ತೆ ನೇರ ಆರೋಪ ಮಾಡಿದ್ದಾರೆ.
ತಮಗೆ ಮತ್ತು ತಮ್ಮ ಮಗನನ್ನು ಕೊಲ್ಲುವ ಸಾಧ್ಯತೆಯಿದೆ. ಒಂದು ವೇಳೆ ತಮಗೆ ಏನಾದರೂ ಆಪತ್ತು ಸಂಭವಿಸಿದರೆ ಅದಕ್ಕೆ ಇವರೇ ನೇರ ಹೊಣೆಗಾರರಾಗುತ್ತಾರೆ ಎಂದು ಸಂತ್ರಸ್ತೆ ಆತಂಕ ವ್ಯಕ್ತಪಡಿಸಿದ್ದಾರೆ.
“ನಾನು ಧರ್ಮಸ್ಥಳದ ಸೌಜನ್ಯ ಹೋರಾಟಕ್ಕೆ ಬೆಂಬಲಿಸಿದ್ದು, ಅಲ್ಲಿ ಅತ್ಯಾಚಾರಕ್ಕೆ ಒಳಗಾಗಿ ನರಳಿ ಪ್ರಾಣ ಬಿಟ್ಟ ಹೆಣ್ಣು ಮಕ್ಕಳ ನ್ಯಾಯಕ್ಕಾಗಿ ಮಾತ್ರವೇ ಹೊರತು ಬೇರೆ ಯಾವುದೇ ದುರುದ್ದೇಶದಿಂದಲ್ಲ. ಇದೇ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಸಂತ್ರಸ್ತೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಇನ್ನು “ನಾನು ಯಾವುದೇ ಒತ್ತಡಕ್ಕೆ ಮಣಿದು ಈ ದೂರು ನೀಡುತ್ತಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಬೆದರಿಕೆಗೆ ಹೆದರಿ ದೂರು ಹಿಂಪಡೆದರೆ ಅದನ್ನು ಪರಿಗಣಿಸಬಾರದು” ಎಂದೂ ಸಂತ್ರಸ್ತೆ ವಿನಂತಿಸಿದ್ದಾರೆ.
ಹಾಗೆಯೇ, “ಈ ಪ್ರಕರಣವನ್ನು ಅತ್ಯಂತ ಸೂಕ್ಷ್ಮ ಹಾಗೂ ಗಂಭೀರ (Critical) ಎಂದು ಪರಿಗಣಿಸಿ, ತಮಗೆ ಶೀಘ್ರವಾಗಿ ನ್ಯಾಯ ಮತ್ತು ಸೂಕ್ತ ರಕ್ಷಣೆ ಒದಗಿಸಬೇಕು” ಎಂದು ಮಹಿಳಾ ಆಯೋಗವನ್ನು ಸಂತ್ರಸ್ತೆ ಒತ್ತಾಯಿಸಿದ್ದಾರೆ.




