ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಭಾನುವಾರ ಹಾದುಹೋಗಬೇಕಿದ್ದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳಿರುವ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದೆ. ಬೆಂಗಳೂರಿನ ಹೊರವಲಯದ ಕಗ್ಗಲೀಪುರ ಬಳಿಯಿರುವ ತಾತಗುಣಿಯಲ್ಲಿ ಈ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
‘ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ಅದರ ಸಂಸ್ಥಾಪಕ ರವಿಶಂಕರ್ ಅವರ 70ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಭಾನುವಾರ ನಗರಕ್ಕೆ ಆಗಮಿಸಿದ್ದರು.
ಇದನ್ನು ಓದಿದ್ದೀರಾ? ಲಖೀಂಪುರ್ ಖೇರಿ ಪ್ರಕರಣ: ಪ್ರಭಾವಿಯ ಪುತ್ರನ ರಕ್ಷಣೆಗೆ ಸಾಕ್ಷ್ಯಗಳ ವಿಚಾರಣೆ ವಿಳಂಬವೇ?
ಮೂಲಗಳ ಪ್ರಕಾರ, ತಾತಗುಣಿ ಬಳಿ ರಸ್ತೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಒಂದನ್ನು ಗಮನಿಸಿದ ನಂತರ ಭದ್ರತಾ ಸಿಬ್ಬಂದಿ ಅದನ್ನು ಪರಿಶೀಲಿಸಿದ್ದಾರೆ. ಈ ತಪಾಸಣೆಯ ವೇಳೆ ಬ್ಯಾಗ್ ಒಳಗೆ ಜಿಲೆಟಿನ್ ಕಡ್ಡಿಗಳು ಇರುವುದು ದೃಢಪಟ್ಟಿದೆ.
ಈ ಸಂಬಂಧ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಕೋರಮಂಗಲದಲ್ಲಿ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಶಂಕಿತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಘಟನೆಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.




