ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳ ಪೂರ್ವಾನುಮತಿ ಪಡೆಯದೆ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ವಿದೇಶಿ ಪ್ರವಾಸ ಕೈಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಶರತ್ ಅನಂತಮೂರ್ತಿ ಅವರಿಗೆ ರಾಜ್ಯಪಾಲರ ಕಚೇರಿ ನೋಟಿಸ್ ಜಾರಿಮಾಡಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ನೋಟಿಸ್ ಕಳಿಸಿದ್ದಾರೆ. “ಕುಲಪತಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಪ್ರೊ. ಶರತ್ ಅನಂತಮೂರ್ತಿ ಅವರು 4 ಬಾರಿ ಕೆನಡಾಗೆ ವೈಯಕ್ತಿಕ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸಗಳಿಗೆ ರಾಜ್ಯಪಾಲರು ಮತ್ತು ಕುಲಾಧಿಪತಿಗಳ ಪೂರ್ವಾನುಮತಿ ಪಡೆದಿಲ್ಲ” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನೋಟಿಸ್ ಪ್ರಕಾರ, ಪ್ರೊ. ಶರತ್ ಅನಂತಮೂರ್ತಿ ಅವರು ಮೊದಲ ಬಾರಿಗೆ 2024ರ ಜೂನ್ 19ರಿಂದ ಜುಲೈ 11ರವರೆಗೆ 23 ದಿನಗಳ ಕಾಲ ಕೆನಡಾಕ್ಕೆ ವೈಯಕ್ತಿಕ ಕಾರಣಕ್ಕಾಗಿ ತೆರಳಿದ್ದರು. ಎರಡನೇ ಬಾರಿ 2024ರ ಡಿಸೆಂಬರ್ 16ರಿಂದ 2025ರ ಜನವರಿ 6ರವರೆಗೆ 24 ದಿನ, ಮೂರನೇ ಬಾರಿ 2025ರ ಜುಲೈ 14ರಿಂದ ಜುಲೈ 25ರವರೆಗೆ 12 ದಿನ ಹಾಗೂ ನಾಲ್ಕನೇ ಬಾರಿ 2026ರ ಆಗಸ್ಟ್ 17ರಿಂದ ಸೆಪ್ಟೆಂಬರ್ 5ರವರೆಗೆ 20 ದಿನಗಳ ಕಾಲ ಕೆನಡಾ ಪ್ರವಾಸ ಕೈಗೊಂಡಿದ್ದಾರೆ ಎಂದು ವಿವರಿಸಲಾಗಿದೆ.
ಈ ನಾಲ್ಕೂ ಪ್ರವಾಸಗಳಿಗೂ ರಾಜ್ಯಪಾಲರ ಕಚೇರಿಯಿಂದ ಪೂರ್ವಾನುಮತಿ ಪಡೆಯಲಾಗಿಲ್ಲ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
“ಕುಲಪತಿ ಹುದ್ದೆಯಲ್ಲಿರುವವರು ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳ ಪೂರ್ವಾನುಮತಿ ಪಡೆಯದೆ ವೈಯಕ್ತಿಕ ಕಾರಣಕ್ಕಾಗಿ ವಿದೇಶ ಪ್ರವಾಸ ಕೈಗೊಂಡಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ, ಕುಲಪತಿ ಹುದ್ದೆಗೆ ಸಂಬಂಧಿಸಿದ ಕರ್ತವ್ಯ, ಬಾಧ್ಯತೆ ಮತ್ತು ನಡವಳಿಕೆಯ ಮಾನದಂಡಗಳನ್ನು ಪಾಲಿಸಲಾಗಿದೆಯೇ ಎಂಬ ಅನುಮಾನಕ್ಕೂ ಕಾರಣವಾಗುತ್ತದೆ” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
“ಪೂರ್ವಾನುಮತಿ ಇಲ್ಲದೆ ವಿದೇಶ ಪ್ರವಾಸ ಕೈಗೊಂಡಿರುವುದಕ್ಕಾಗಿ ತಮ್ಮ ವಿರುದ್ಧ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ವಿವರಣೆ ನೀಡಬೇಕು. ಅನುಮತಿ ಪಡೆಯದಿರುವುದಕ್ಕೆ ಕಾರಣವೇನು, ಯಾವ ಸಂದರ್ಭಗಳಲ್ಲಿ ಈ ಪ್ರವಾಸಗಳನ್ನು ಕೈಗೊಳ್ಳಲಾಯಿತು ಎಂಬುದರ ಕುರಿತು ವಿವರವಾದ ಲಿಖಿತ ವಿವರಣೆಯನ್ನು ನೋಟಿಸ್ ಜಾರಿಯಾದ 7 ದಿನಗಳೊಳಗೆ ಸಲ್ಲಿಸಬೇಕು” ರಾಜ್ಯಪಾಲರ ಕಚೇರಿ ನಿರ್ದೇಶಿಸಿದೆ.
“ನಿಗದಿತ ಅವಧಿಯಲ್ಲಿ ಉತ್ತರ ನೀಡದಿದ್ದರೆ, ಈ ವಿಚಾರದಲ್ಲಿ ತಮಗೆ ವಿವರಣೆ ನೀಡಲು ಯಾವುದೇ ಕಾರಣಗಳಿಲ್ಲ ಎಂದು ಪರಿಗಣಿಸಲಾಗುತ್ತದೆ. ನಂತರ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.



