ನವೆಂಬರ್ 14 ಮತ್ತು 15ರಂದು ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯಲಿರುವ ಬೀದರ ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ ಡಾ.ಬಸವರಾಜ ಬಲ್ಲೂರ ಅವರನ್ನು ಪ್ರಭುರಾವ ಕಂಬಳಿವಾಲೆ ಪ್ರತಿಷ್ಠಾನದ ವತಿಯಿಂದ ಶಾಂತಕುಮಾರ ಉದಗಿರೆ ಸನ್ಮಾನಿಸಿ ಅಭಿನಂದಿಸಿದರು.
ಉಪನ್ಯಾಸಕ ಬಸವರಾಜ ಮಯೂರ ಮಾತನಾಡಿ, “ಡಾ.ಬಸವರಾಜ ಬಲ್ಲೂರ ಅವರು ಸಾತ್ವಿಕ ಗುಣ ಹಾಗೂ ಶರಣ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಯಾಗಿದ್ದಾರೆ. ಚನ್ನಬಸವ ಪಟ್ಟದ್ದೇವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿರುವ ಅವರು ಕನ್ನಡ ನಾಡು-ನುಡಿ, ಶರಣ ತತ್ವ ಹಾಗೂ ಸರಳ ಜೀವನದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ” ಎಂದು ಹೇಳಿದರು.
“ಡಾ.ಜಯದೇವಿತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಅವರ ಹೋರಾಟ ಮತ್ತು ನಾಡು-ನುಡಿ ಸೇವೆಯನ್ನು ಸದಾ ಸ್ಮರಿಸುವ ಬಲ್ಲೂರ ಅವರು ಕನ್ನಡ ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ಉಂಟಾದಾಗ ತಕ್ಷಣ ಧ್ವನಿ ಎತ್ತುವ ಪ್ರವೃತ್ತಿ ಹೊಂದಿದ್ದಾರೆ. ಕನ್ನಡಪರ ಸಂಘಟನೆಗಳೊಂದಿಗೆ ಸಕ್ರಿಯವಾಗಿ ಗುರುತಿಸಿಕೊಂಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಹಾಗೂ ಜಿಲ್ಲಾ ಘಟಕಗಳ ಪದಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಶಾಲಾ-ಕಾಲೇಜುಗಳಿಗೆ ಮಾತ್ರ ಸೀಮಿತಗೊಳಿಸದೆ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಿದ್ದಾರೆ” ಎಂದರು.

ಜನ್ಮದಿನಾಚರಣೆ, ಮದುವೆ, ಗೃಹಪ್ರವೇಶ ಸೇರಿದಂತೆ ಕೌಟುಂಬಿಕ ಸಮಾರಂಭಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯದ ಸ್ಪರ್ಶ ನೀಡಿದ ಅವರು, ಜಾತ್ರೆ ಹಾಗೂ ಉತ್ಸವಗಳಲ್ಲಿಯೂ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಕನ್ನಡದ ಹಿರಿಮೆಯನ್ನು ಜನಸಾಮಾನ್ಯರಿಗೆ ಪರಿಚಯಿಸಿದ್ದಾರೆ ಎಂದು ತಿಳಿಸಿದರು.
‘ಕಲ್ಯಾಣ ಪಣತೆ’, ‘ಗುರುಕುಲ ದರ್ಶನ’, ‘ವ್ಯಷ್ಟಿ ಸಮಷ್ಟಿ ಪ್ರಜ್ಞೆ’, ‘ಸಮರಸ ದಾಂಪತ್ಯ’, ‘ದಾಂಪತ್ಯ ಗೀತೆ’ ಹಾಗೂ ‘ಅನುಭವ ಮಂಟಪದ ಚಾರಿತ್ರಿಕ ನೆಲೆಗಳು’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿ, ಸಂಪಾದಿಸಿರುವ ಅವರು ಅನೇಕ ವಿದ್ಯಾರ್ಥಿಗಳು ಹಾಗೂ ಸ್ನೇಹಿತರಲ್ಲಿ ಕನ್ನಡಾಭಿಮಾನ ಬೆಳೆಸಿದ್ದಾರೆ. ಇಂತಹ ನಿಸ್ವಾರ್ಥ ಕನ್ನಡ ಸೇವಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸೂಕ್ತ ಗೌರವ ಸಂದಿರುವುದು ಸಂತಸದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನವೆಂಬರ್ 7ರಂದು ನಡೆಯಲಿರುವ ಬೀದರ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾರುತಿ ಬೌದ್ಧೆ ಅವರನ್ನು ಸಹ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬರಹಗಾರ ನಾಗಶೆಟ್ಟಿ ಪಾಟೀಲ ಗಾದಗಿ, ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವಿಂದ್ರ ಬರಗಾಲೆ, ಕಲಾವಿದ ವಿಜಯಕುಮಾರ ಸೋನಾರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಂ.ಎಸ್. ಮನೋಹರ, ವಿಷ್ಣುಕಾಂತ ಮಹೇಂದ್ರಕರ್ ಹಾಗೂ ಬೀದರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಎಂ. ಮಚ್ಚೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್ | ಬಸ್ ಪ್ರಯಾಣ, ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ




