ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಗುರುವಾರ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಲ್ಲದ ಕಾರಣ ರಾಜ್ಯಪಾಲರ ಕಾರ್ಯದರ್ಶಿ ಪ್ರಭು ಶಂಕರ್ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ. ಇಂದು ರಾಜ್ಯಪಾಲರು ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಶೀಘ್ರವೇ ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
“ಭಾರತದ ಸಂವಿಧಾನದ 164(1) ನೇ ವಿಧಿಯ ಅಡಿಯಲ್ಲಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲನಾದ ನಾನು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ. ಅವರ ನೇತೃತ್ವದ ಸಚಿವ ಸಂಪುಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಿದ್ದೇನೆ” ಎಂದು ರಾಜ್ಯಪಾಲರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಹಿಂದ ರಾಜಕಾರಣ: ‘ಹಳೇ ಹುಲಿ ಸಿದ್ದರಾಮಯ್ಯ’ನವರ ‘ಅಸಲಿ ಆಟ’ ಈಗ ಶುರು!?
ಇನ್ನು ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸುವವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದೂ ಅಂಗೀಕಾರ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಭೇಟಿ ಮಾಡಿ, ಹೊಸ ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿದ್ದಾರೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಎಐಸಿಸಿ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಹೈಕಮಾಂಡ್ ನಾಯಕತ್ವದೊಂದಿಗೆ ರಾಜ್ಯಸಭಾ ಅಭ್ಯರ್ಥಿ, ಸಂಪುಟ ಪುನರ್ರಚನೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಇನ್ನು ಸಿದ್ದರಾಮಯ್ಯ ಸಂಪುಟದ ಹಲವಾರು ಸಚಿವರು ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆಯಿದೆ. ಸರ್ಕಾರದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಸಮತೋಲನವನ್ನು ಕಾಯ್ದುಕೊಳ್ಳಲು ಮೂರು ಅಥವಾ ನಾಲ್ಕು ಉಪಮುಖ್ಯಮಂತ್ರಿಗಳನ್ನು ನೇಮಿಸಬಹುದು ಎಂದೂ ಹೇಳಲಾಗುತ್ತಿದೆ.




