ಸಮಾಜವಾದಿ ಚಳವಳಿಗಳ ಕಾಲಘಟ್ಟದಿಂದ ಬಂದ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಯಾಗುವುದಷ್ಟೇ ಅಲ್ಲದೆ, ದೀರ್ಘಾವಧಿ ಕಾಲ ಸಿಎಂ ಆಗಿದ್ದ ದಾಖಲೆಯನ್ನೂ ನಿರ್ಮಿಸಿರುವ ಹಳೇ ಹುಲಿ. ಅವರು ಕಾಲವೇ ಸೃಷ್ಟಿಸಿಕೊಂಡ ಅಪರೂಪದ ನಾಯಕ. ಅವರು ರಾಷ್ಟ್ರರಾಜಕಾರಣಕ್ಕಾದರೂ ಹೋಗಲಿ ಅಥವಾ ಇಲ್ಲಿಯೇ ಇರಲಿ- ರಾಜಕೀಯ ದಾಳಗಳನ್ನು ಉರುಳಿಸದೆ ಇರುವುದಿಲ್ಲ.
ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಸಮಾಜವಾದಿ ಚಳವಳಿಗಳ ಕಾಲಘಟ್ಟ ಮತ್ತು ರಾಜಕಾರಣದ ಕೊನೆಯ ಕೊಂಡಿಯಾಗಿ ಕಾಣುವ ದೊಡ್ಡ ಹೆಸರು ಸಿದ್ದರಾಮಯ್ಯ ಎಂಬುದರಲ್ಲಿ ಎರಡು ಮಾತಿಲ್ಲ. ‘ಪಂಚೆಯುಟ್ಟ ಕೊನೆಯ ಮುಖ್ಯಮಂತ್ರಿ’ ಎಂದೂ ಕರೆಯಬಹುದಾದ ಸಿದ್ದರಾಮಯ್ಯನವರು, ಕುರ್ಚಿ ತೊರೆದ ಮೇಲೆ ಅಹಿಂದ ರಾಜಕಾರಣದಲ್ಲಿ ನಿರ್ವಾತ ಸೃಷ್ಟಿಯಾಗುತ್ತದೆಯೋ ಅಥವಾ ಸಿದ್ದರಾಮಯ್ಯನವರು ಸರ್ಕಾರವನ್ನು ಸಂಪೂರ್ಣ ಕಮಾಂಡ್ ಮಾಡುತ್ತಾರೋ ಎಂಬುದೇ ಸದ್ಯದ ಕುತೂಹಲ.
ಸಮಾಜವಾದದ ಹಿನ್ನೆಲೆಯ ಸಿದ್ದರಾಮಯ್ಯನವರು ಹಳೆಯ ತಲೆಮಾರಿನ ಕ್ಲಾಸಿಕ್ ರಾಜಕಾರಣಿ. ಜನ ಮೆಚ್ಚುಗೆಯ ಮುತ್ಸದಿ ನಾಯಕನಾಗಿಯೂ, ಸೈದ್ಧಾಂತಿಕ ಗಟ್ಟಿತನದಿಂದಲೂ ಗುರುತಿಸಿಕೊಂಡ ಅವರು, ಇತ್ತೀಚಿನ ವರ್ಷಗಳಲ್ಲಿ ಆಯಾಸಗೊಂಡವರಂತೆಯೂ ಕಾಣುತ್ತಿದ್ದದ್ದು ನಿಜ.
ಕಮ್ಯುನಲ್ ರಾಜಕಾರಣವು ಅಧಿಕಾರ ಗದ್ದುಗೆ ಏರುವ ಮುನ್ನ ದೇಶದಲ್ಲಿ ಚಾಲ್ತಿಯಲ್ಲಿದ್ದದ್ದು ಕಾಂಗ್ರೆಸ್ ಮತ್ತು ಕಾಂಗ್ರೆಸ್ ವಿರೋಧಿ ಸಮಾಜವಾದಿ ರಾಜಕಾರಣ. ಕಾಂಗ್ರೆಸ್ ತೊರೆದವರು ಮತ್ತು ಸೋಷಿಯಲಿಸ್ಟರು ಸೇರಿ ಕಟ್ಟಿದ ಜನತಾ ಪಾರ್ಟಿಯ ಉತ್ಪನ್ನಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಇಂದು ಕಾಣುತ್ತಿರುವ ಕೋಮು ಧ್ರುವೀಕರಣ ಅಂದು ಇರಲಿಲ್ಲ. 1990ರ ವೇಳೆಗೆ ಕೋಮುರಾಜಕಾರಣ ದೇಶವನ್ನು ಪ್ರವೇಶಿಸಿತು. ಅದೇ ವೇಳೆಗೆ ಬಹುಜನ ಮತ್ತು ದಲಿತ ಚಳವಳಿ ಮುಂಚೂಣಿಗೆ ಬಂದವು. ಬಾಬ್ರಿ ಮಸೀದಿ ಧ್ವಂಸದ ನಂತರ ಮುಸ್ಲಿಮರು ಧ್ರುವೀಕರಣವಾದರು. ಅಹಿಂದ, ಬಹುಜನ- ಇವೆಲ್ಲವೂ ಒಟ್ಟಿಗೆ ನಡೆಯಲು ಶುರುವಾದವು. ಆ ವೇಳೆಗೆ ಸಿದ್ದರಾಮಯ್ಯನಂಥವರು ಕಾಂಗ್ರೆಸ್ ವಿರೋಧಿ ಪಾಳೆಯದಲ್ಲೇ ಇದ್ದರು. 2000ನೇ ಇಸವಿ ದಾಟುವ ವೇಳೆಗೆ, ಅಂದರೆ ವಾಜಪೇಯಿಯವರು ಅಧಿಕಾರಕ್ಕೇರಿದ ಮೇಲೆ ರಾಜಕೀಯ ಸಮೀಕರಣಗಳು ಬದಲಾದವು. ಕೋಮುವಾದಿ ಮತ್ತು ಸಾಮಾಜಿಕ ನ್ಯಾಯ ವಿರೋಧಿ ಮುಖಹೊತ್ತವರು ಎನ್‌ಡಿಎ ಜೊತೆಗೆ, ಸೆಕ್ಯುಲರ್ ಮತ್ತು ಸಾಮಾಜಿಕ ನ್ಯಾಯ ಪರ ಇದ್ದವರು ಯುಪಿಎ ಕಡೆಗೆ ನಿಂತರು. ದೇಶದಲ್ಲಿ ಸ್ಪಷ್ಟ ರಾಜಕೀಯ ಧ್ರುವೀಕರಣ ಕಂಡುಬಂದಿತು. ಇಂತಹ ಸಮಯದಲ್ಲಿ ದೇವೇಗೌಡರ ಜೆಡಿಎಸ್‌ನಿಂದ ಹೊರಬಿದ್ದ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅನಿವಾರ್ಯವಾಗಿತ್ತು. ಎಸ್.ಎಂ. ಕೃಷ್ಣ ಅವರು ಮೆತ್ತಗಾಗುತ್ತಿದ್ದ ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪ್ರವೇಶವು ಕಾಂಗ್ರೆಸ್ ಪಕ್ಷಕ್ಕೂ ಹೊಸ ಹುರುಪು ತಂದಿತು.
ವಾಸ್ತವದಲ್ಲಿ ಸಿದ್ದರಾಮಯ್ಯನವರು ತಾವೇ ಒಂದು ಪಕ್ಷ ಕಟ್ಟಿ ರಾಜಕೀಯ ನಡೆಸುವ ವ್ಯಕ್ತಿತ್ವದವರಲ್ಲ. ಆದರೆ ಯಾವ ಪಕ್ಷದೊಳಗೆ ಇರುತ್ತಿದ್ದರೋ ಆ ಪಕ್ಷಕ್ಕೆ ಬಲ ತರುತ್ತಿದ್ದರು. ಜನತಾ ದಳದಲ್ಲಿ ಇದ್ದಾಗಲೂ ಅವರು ಐಕಾನ್ ಆಗಿಯೇ ಇದ್ದರು. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದ ಅವರು, ಜನ ಸಂಘಟಕರೇನೂ ಆಗಿರಲಿಲ್ಲ. ಜನರನ್ನು ಒಗ್ಗೂಡಿಸಿ, ಬೃಹತ್ ಸಮಾವೇಶಗಳನ್ನು ನಡೆಸಬಲ್ಲ ಸಾಹಸಗಳನ್ನು ಮಾಡಿದ್ದೂ ಇಲ್ಲ. ಆದರೆ ಭ್ರಷ್ಟಾಚಾರವನ್ನು ಮೈಗತ್ತಿಸಿಕೊಂಡವರಲ್ಲ. 2023ರ ಚುನಾವಣೆ ಗೆಲ್ಲುವವರೆಗೂ ಅವರ ಬಗ್ಗೆ ಯಾರು ಕೂಡ ದುಡ್ಡಿನ ವಿಚಾರವಾಗಿ ಆರೋಪಿಸಿದ್ದಿಲ್ಲ. ಈವತ್ತಿಗೂ ಅಂತಹ ಸಾಮ್ರಾಜ್ಯವನ್ನು ಅವರು ಕಟ್ಟಿಕೊಂಡಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಶುದ್ಧಹಸ್ತರು. ಸೈದ್ಧಾಂತಿಕ ಸ್ಪಷ್ಟತೆಯೇ ಅವರ ಬಹುದೊಡ್ಡ ಶಕ್ತಿಯಾಗಿತ್ತು.
ಇದನ್ನು ಓದಿದ್ದೀರಾ?: ಯಾರಿಗೆ ಕೊಕ್, ಯಾರಿಗೆ ಅವಕಾಶ; ನೂತನ ಸಂಪುಟದಲ್ಲಿ ಶುರುವಾಗಲಿದೆಯೆ ಮತ್ತಷ್ಟು ಪೀಕಲಾಟ?
ಸಿದ್ದರಾಮಯ್ಯನವರು ಕಾಂಗ್ರೆಸ್ ಪ್ರವೇಶಿಸುವ ಕಾಲಕ್ಕೆ ಅಹಿಂದ ಸಮುದಾಯಗಳು ಕಾಂಗ್ರೆಸ್ ಜೊತೆಗೂ, ಪ್ರಬಲ ಸಮುದಾಯಗಳು ಜೆಡಿಎಸ್ ಮತ್ತು ಬಿಜೆಪಿ ಜೊತೆಗೂ ಗುರುತಿಸಿಕೊಂಡಿದ್ದವು. ಸಿದ್ದರಾಮಯ್ಯನವರ ತಾರಾ ವರ್ಚಸ್ಸು ಪಕ್ಷಕ್ಕೆ ಹೊಸ ಹುರುಪು ತಂದು 2013ರಲ್ಲಿ ಸಿಎಂ ಕೂಡ ಆದರು. ಆದರೆ ಸಿದ್ದರಾಮಯ್ಯನವರು 2ನೇ ಅವಧಿಗೆ ಬರುವ ವೇಳೆಗೆ ಇಡೀ ದೇಶದಲ್ಲಿ ರಾಜಕೀಯ ನಡೆಯುವ ರೀತಿಯನ್ನೇ ಬಿಜೆಪಿ ಬದಲಿಸಿತ್ತು. ಸಾಂವಿಧಾನಿಕ ಸ್ವತಂತ್ರ ಸಂಸ್ಥೆಗಳನ್ನು ಇಟ್ಟುಕೊಂಡು ಪ್ರತಿಪಕ್ಷಗಳನ್ನು ಬೆದರಿಸುವ ಕೆಲಸವನ್ನು ಬಿಜೆಪಿ ಶುರುಮಾಡಿತ್ತು. ಇಂತಹ ರಾಜಕೀಯ ಯುಗದಲ್ಲಿ ಐಟಿ- ಇ.ಡಿ ದಾಳಿಗಳಂತಹ ಬೆದರಿಕೆಗಳನ್ನು ಎದುರಿಸಿ ಗಟ್ಟಿಯಾಗಿ ನಿಂತವರು ಡಿ.ಕೆ. ಶಿವಕುಮಾರ್. ಪಕ್ಷ ಸಂಘಟನೆ ಮಾಡುವುದು, ಹೊಸ ರೀತಿಯ ಏಜೆನ್ಸಿಗಳನ್ನು ನೇಮಿಸುವುದು, ಹೊಸ ನೆರೇಟಿವ್‌ಗಳನ್ನು ತರುವುದು, ಮೀಡಿಯಾಗಳನ್ನು ಮ್ಯಾನೇಜ್ ಮಾಡುವುದು- ಇದೆಲ್ಲವನ್ನೂ ಸಶಕ್ತವಾಗಿ ನಡೆಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ. ಇಷ್ಟೆಲ್ಲ ಶ್ರಮ ಹಾಕಿದ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವ ಕನಸು ಕಂಡರು. ಅವರ ಸಂಘಟನಾ ಚತುರತೆ ಮತ್ತು ಜನನಾಯಕ ಸಿದ್ದರಾಮಯ್ಯನವರ ವರ್ಚಸ್ಸು ಸೇರಿಕೊಂಡೇ ಪಕ್ಷ ಗೆದ್ದದ್ದು.
ಸಿದ್ದರಾಮಯ್ಯನವರ ಶಕ್ತಿ ಏನೆಂಬುದು ಚುನಾವಣಾ ಪೂರ್ವದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವವೇ ಸಾಬೀತು ಮಾಡಿತ್ತು. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅಷ್ಟರಮಟ್ಟಿಗೆ ಜನ ಸೇರಿದ ಮತ್ತೊಂದು ಸಮಾವೇಶವನ್ನು ಕಂಡವರಿಲ್ಲ. ಆದರೆ ಅಧಿಕಾರಕ್ಕೇರುವ ವೇಳೆಗೆ ಸಿದ್ದರಾಮಯ್ಯ ಮೆತ್ತಗಾಗಿದ್ದರು. ಮೂರು ವರ್ಷ ಹೇಗೋ ಸರ್ಕಾರ ನಡೆದುಕೊಂಡು ಹೋಯಿತು. ‘ಅಹಿಂದ’ ನಾಯಕರಾಗಿ ಗುರುತಿಸಿಕೊಂಡ ಅವರ ಮೇಲಿದ್ದ ನಿರೀಕ್ಷೆಗಳು ಅಷ್ಟಾಗಿ ಕೈಗೂಡಲಿಲ್ಲ.

ವಾಸ್ತವದಲ್ಲಿ ಅಹಿಂದ ಎಂಬುದು ಗ್ರಾಮ ಮಟ್ಟದಲ್ಲಿ ಸಂಘಟಿತವಾಗಿ ರೂಪುಗೊಂಡಿದ್ದೇನೂ ಅಲ್ಲ. ಅದನ್ನು ಸಿದ್ದರಾಮಯ್ಯನವರು ಕಟ್ಟಲೂ ಇಲ್ಲ. ಆದರೆ ಸಿದ್ದರಾಮಯ್ಯನವರನ್ನು ಅಹಿಂದ ನಾಯಕ ಎನ್ನುವುದಕ್ಕೆ ಕಾರಣವಿತ್ತು. ಅಹಿಂದ ಎಂಬ ಮೌಲ್ಯದ ಪ್ರತಿರೂಪವಾಗಿ ಅವರು ಕಾಣಿಸಿಕೊಂಡಿದ್ದರು. ಹಿಂದುಳಿದ ವರ್ಗದವರಾದರೂ ದಲಿತ ಮತ್ತು ಅಲ್ಪಸಂಖ್ಯಾತರ ವಿಚಾರಗಳನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕ ಅವರಾಗಿದ್ದರು. ಜನರ ಕಷ್ಟಗಳನ್ನು ಕೇಳಿಸಿಕೊಳ್ಳಬಲ್ಲ ಹೃದಯ ಅವರಿಗಿತ್ತು. ಆದರೆ ಎರಡನೇ ಅವಧಿಯ ಅಧಿಕಾರದಲ್ಲಿ ಈ ಸಮುದಾಯಗಳ ವಿಚಾರದಲ್ಲಿ ಮತ್ತು ನೀತಿ ನಿಯಮಗಳನ್ನು ರೂಪಿಸುವಲ್ಲಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಅವರೊಳಗೆ ಸಮುದಾಯಗಳ ಪರ ಮೌಲ್ಯಗಳಿದ್ದರೂ ಅವುಗಳು ಕಾನೂನುಗಳಾಗಿ ಹೊಮ್ಮಲಿಲ್ಲ.
ರಾಜಕೀಯ ವಿಶ್ಲೇಷಕ ಎ.ನಾರಾಯಣ ಅವರು ಅಹಿಂದ ರಾಜಕಾರಣ ಮತ್ತು ಸಿದ್ದರಾಮಯ್ಯ ಅವರನ್ನು ಹೀಗೆ ನೋಡುತ್ತಾರೆ: “ಅಹಿಂದ ರಾಜಕಾರಣ ಸಿದ್ದರಾಮಯ್ಯನವರ ಕಾಲದಲ್ಲಿ ದೊಡ್ಡಮಟ್ಟದಲ್ಲಿ ಇತ್ತೆಂದು ನನಗೆ ಅನಿಸುವುದಿಲ್ಲ. ಅಹಿಂದ ಎನ್ನುವುದು ಕಲ್ಪನೆಯಾಗಿ ಇತ್ತೇ ಹೊರತು ವಾಸ್ತವದಲ್ಲಿ ಕಾಣುವುದಿಲ್ಲ. ಬಿಜೆಪಿಗೆ ಮತಹಾಕಲು ಇಷ್ಟವಿಲ್ಲದ ಕಾರಣ, ದಲಿತರು ಮತ್ತು ಮುಸ್ಲಿಮರು ಕಾಂಗ್ರೆಸ್‌ನೊಂದಿಗೆ ಇದ್ದರು. ಇಲ್ಲಿ ಸಿದ್ದರಾಮಯ್ಯನವರ ಕೊಡುಗೆ ಎಂದರೆ- ದಲಿತರು ಮತ್ತು ಅಲ್ಪಸಂಖ್ಯಾತರೊಂದಿಗೆ ಕುರುಬರನ್ನು ಬೆಸೆದದ್ದು. ಅವರ ದೊಡ್ಡ ಕೊಡುಗೆ ಇದೊಂದೇ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಕುರುಬರು ಮತ ಹಾಕುತ್ತಿದ್ದರು. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿದಿದ್ದರೂ 2028ರಲ್ಲಿ ಕುರುಬರು ಕಾಂಗ್ರೆಸ್‌ನೊಂದಿಗೆಯೇ ಇರುತ್ತಾರೆಂಬ ಗ್ಯಾರಂಟಿ ಇರಲಿಲ್ಲ. ಯಾಕೆಂದರೆ ಮತ್ತೆ ಮುಖ್ಯಮಂತ್ರಿಯಾಗುತ್ತಾರೆಂಬ ಭರವಸೆ ಸಮುದಾಯಕ್ಕಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ಅನುಪಸ್ಥಿತಿ ಕಾಡಿದರೆ ಕುರುಬರ ಮತಬ್ಯಾಂಕ್ ಏನಾಗುತ್ತದೆ ಎಂಬುದೇ ಇಲ್ಲಿರುವ ಪ್ರಶ್ನೆ”.
ಮುಂದುವರಿದು, “ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಶಕ್ತಿಯನ್ನು ತುಲನೆ ಮಾಡಿ ನೋಡಬೇಕೆಂದು ಹೊರಟರೆ, ನಾವು ಆಯ್ಕೆ ಮಾಡಿಕೊಳ್ಳಬೇಕಾಗಿರುವುದು 2013ರ ಸಿದ್ದರಾಮಯ್ಯನವರ ಶಕ್ತಿಯನ್ನೇ ಹೊರತು ಇಂದಿನ ಸಿದ್ದರಾಮಯ್ಯನವರನ್ನಲ್ಲ. 2013ರ ಸಿದ್ದರಾಮಯ್ಯನವರ ರೂಪವನ್ನು ಇಂದು ಶಿವಕುಮಾರ್ ಧರಿಸಬಲ್ಲರೇ? ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇಲ್ಲದಿದ್ದರೂ ತಾವು ಸೂಚಿಸಿದ ಕಡೆ ಮತ ಚಲಾಯಿಸುವಂತೆ ಸಮುದಾಯಗಳನ್ನು ಪ್ರೇರೇಪಿಸಬಲ್ಲರೇ?” ಎಂದು ನಾರಾಯಣ್ ಕೇಳುತ್ತಾರೆ.
“ಕಮ್ಯುನಲ್ ರಾಜಕಾರಣವನ್ನು ತಡೆಯಬಲ್ಲ ಅತಿದೊಡ್ಡ ಶಕ್ತಿ ಇದ್ದದ್ದು ಸಿದ್ದರಾಮಯ್ಯನವರಿಗೆ ಮಾತ್ರ. ಆದರೆ ಈ ವಿಚಾರದಲ್ಲಿ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿ ಕಂಡುಬರಲಿಲ್ಲ ಎಂಬುದು ವಿಷಾದನೀಯ. ಇನ್ನು ಮೋದಿಯವರ ಕಾಲಕ್ಕಾಗಲೇ ಬಿಜೆಪಿ ಕಡೆಗೆ ಒಬಿಸಿಗಳ ಪಯಣ ಪ್ರಾರಂಭವಾಗಿತ್ತು. ಸಿದ್ದರಾಮಯ್ಯನವರು ಕುರುಬರನ್ನು ಸೆಕ್ಯುಲರ್ ಶಕ್ತಿಯೊಂದಿಗೆ ಹಿಡಿದಿಟ್ಟುಕೊಂಡರೂ ಇತರೆ ಒಬಿಸಿಗಳ ವಿಶ್ವಾಸ ಗಳಿಸಲಿಲ್ಲ. ಕುರುಬೇತರ ಸಣ್ಣಪುಟ್ಟ ಒಬಿಸಿಗಳಲ್ಲಿ ಸಿದ್ದರಾಮಯ್ಯನವರ ವಿರುದ್ಧ ಇರುವ ಕೋಪವು, ಕಾಂಗ್ರೆಸ್ ವಿರೋಧಿಯಾಗಿಯೂ ಪರಿವರ್ತನೆಯಾಗಿದೆ. ಮೈಕ್ರೊ ಲೆವೆಲ್‌ನಲ್ಲಿರುವ ಒಬಿಸಿಗಳು ದೊಡ್ಡಮಟ್ಟದಲ್ಲಿ ಬಿಜೆಪಿಗೆ ಹೊರಳಿದ್ದು ಅಹಿಂದದ ದೊಡ್ಡ ದುರಂತ” ಎಂದು ಅಭಿಪ್ರಾಯಪಡುತ್ತಾರೆ.
ಮತ ರಾಜಕಾರಣವನ್ನು ಗಂಭೀರವಾಗಿ ವಿಶ್ಲೇಷಿಸುವ ಸಾಮಾಜಿಕ ಹೋರಾಟಗಾರ ಡಾ.ಎಚ್.ವಿ. ವಾಸು ಅವರು ಮತ್ತೊಂದು ಆಯಾಮವನ್ನು ವಿಶ್ಲೇಷಿಸುತ್ತಾರೆ. “ಸಿದ್ದರಾಮಯ್ಯನವರ ನಿರ್ವಾತ ಸಂಪೂರ್ಣವಾಗಿ ಕಂಡುಬಂದರಷ್ಟೇ, ದೊಡ್ಡಮಟ್ಟದ ವೋಟ್ ಶಿಫ್ಟ್ ಆಗಬಹುದು. ಡಿ.ಕೆ.ಶಿವಕುಮಾರ್ ಕಾರಣಕ್ಕೆ ಒಕ್ಕಲಿಗರೆಲ್ಲ ಕಾಂಗ್ರೆಸ್ ಜೊತೆ ನಿಂತುಬಿಡುತ್ತಾರೆಂದು ಹೇಳಲಾಗದು. ಹಾಗೆಯೇ ಸಿದ್ದರಾಮಯ್ಯ ಅವರಿಲ್ಲದಿದ್ದರೆ ಕುರುಬರೆಲ್ಲರೂ ಕಾಂಗ್ರೆಸ್ ಬಿಟ್ಟುಬಿಡುತ್ತಾರೆ ಎನ್ನಲಾಗದು” ಎಂಬ ಅಭಿಪ್ರಾಯ ತಾಳುವ ವಾಸು ಅವರು, “ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯನವರೇ ಮತ್ತಷ್ಟು ಬಲಶಾಲಿ” ಎಂದು ಹೇಳುತ್ತಾರೆ.
“ಸಿದ್ದರಾಮಯ್ಯನವರು ಅಧಿಕಾರದಿಂದ ಇಳಿದ ತಕ್ಷಣ ರಾಜಕಾರಣದಿಂದ ದೂರ ಸರಿದು ಬಿಡುವುದಿಲ್ಲ. ಅವರು ಈಗಿನಕ್ಕಿಂತ ಹೆಚ್ಚಿನ ಶಕ್ತಿ ಪಡೆಯುತ್ತಾರೆ. ತಮ್ಮ ಕೈಯಲ್ಲಿ ಅಧಿಕಾರವಿದ್ದಾಗ ಅದನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿತ್ತು. ಆದರೆ ಸಿಎಂ ಸ್ಥಾನದಲ್ಲಿ ಇನ್ನೊಬ್ಬರು ಇದ್ದಾಗ ಕಮಾಂಡ್ ಮಾಡುವುದು ಸುಲಭದ ಕೆಲಸ” ಎನ್ನುತ್ತಾರೆ.
ಇದನ್ನು ಓದಿದ್ದೀರಾ?: ‘ಅಹಿಂದ’ ನಾಯಕನ ನಿರ್ಗಮನ
“ಇನ್ನೆರಡು ತಿಂಗಳಲ್ಲಿ ಕನಿಷ್ಠ 50 ಜನ ಭಿನ್ನಮತೀಯ ಎಂಎಲ್ಎಗಳು ಹುಟ್ಟಿಕೊಳ್ಳಬಹುದು. ಐದಾರು ಸಲ ಗೆದ್ದವರು ಮಂತ್ರಿ ಪದವಿಗಾಗಿ ಒತ್ತಡ ತರಬಹುದು. ಹಾಲಿ ಇರುವ ಕೆಲವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಬೇಕಾದಾಗ, ಅಧಿಕಾರ ಕಳೆದುಕೊಂಡವರ ಆಕ್ರೋಶವನ್ನು ಡಿ.ಕೆ. ಶಿವಕುಮಾರ್ ಎದುರಿಸಬೇಕಾಗುತ್ತದೆ. ಆಗ ಅವರೆಲ್ಲರೂ ಸಿದ್ದರಾಮಯ್ಯನವರನ್ನು ಹುಡುಕಿಕೊಂಡು ಹೋಗುತ್ತಾರೆ. ಸಿದ್ದರಾಮಯ್ಯನವರು ಡಿ.ಕೆ.ಶಿವಕುಮಾರ್ ಅವರಿಗೆ ಪಾಲಿಸಿ ವಿಚಾರದಲ್ಲಿ ಗೈಡ್ ಮಾಡಬೇಕಾಗುತ್ತದೆ. ಕ್ಯಾಬಿನೆಟ್ ಇತ್ಯಾದಿಗಳನ್ನು ಸಿದ್ದರಾಮಯ್ಯ ಅವರು ಹೇಳಿದಂತೆ ನಡೆಸಬೇಕಾಗುತ್ತದೆ” ಎಂದು ಸಂಭವನೀಯ ರಾಜಕೀಯ ಸನ್ನಿವೇಶಗಳನ್ನು ವಿವರಿಸುತ್ತಾರೆ.

“ಒಬ್ಬ ಒಬಿಸಿ ನಾಯಕನನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿರುವುದರಿಂದ ಕುರುಬ ಸಮುದಾಯದ ಆಕ್ರೋಶವನ್ನು ತಣಿಸಬೇಕಾಗುತ್ತದೆ. ಸಿದ್ದರಾಮಯ್ಯನವರ ಲೆಗಸಿ ಮುಂದುವರಿದಿರುವ ಮೆಸೇಜ್ ಹೋಗಬೇಕೆಂದರೆ, ಯತೀಂದ್ರರಿಗೆ ಇಷ್ಟವಿಲ್ಲದಿದ್ದರೂ ಡಿಸಿಎಂ ಮಾಡಲೇಬೇಕಾಗುತ್ತದೆ” ಎಂದು ಅಭಿಪ್ರಾಯಪಡುತ್ತಾರೆ. ಅಂದರೆ ಸಿದ್ದರಾಮಯ್ಯನವರ ರಾಜಕಾರಣ ಮುಗಿದಿಲ್ಲ, ಹೊರತಾಗಿ ಮತ್ತೊಂದು ಗೆರೆಯನ್ನು ಹೆಚ್ಚಿಸಿಕೊಂಡಿದೆ!
Anyway, ಸಮಾಜವಾದಿ ಚಳವಳಿಗಳ ಕಾಲಘಟ್ಟದಿಂದ ಬಂದ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಯಾಗುವುದಷ್ಟೇ ಅಲ್ಲದೆ, ದೀರ್ಘಾವಧಿ ಕಾಲ ಸಿಎಂ ಆಗಿದ್ದ ದಾಖಲೆಯನ್ನೂ ನಿರ್ಮಿಸಿರುವ ಹಳೇ ಹುಲಿ. ಅವರು ಕಾಲವೇ ಸೃಷ್ಟಿಸಿಕೊಂಡ ಅಪರೂಪದ ನಾಯಕ. ಅವರು ರಾಷ್ಟ್ರರಾಜಕಾರಣಕ್ಕಾದರೂ ಹೋಗಲಿ ಅಥವಾ ಇಲ್ಲಿಯೇ ಇರಲಿ- ರಾಜಕೀಯ ದಾಳಗಳನ್ನು ಉರುಳಿಸದೆ ಇರುವುದಿಲ್ಲ. ಅವರ ಆಣತಿಯನ್ನು ಮೀರಿ ಸರ್ಕಾರ ನಡೆಯುತ್ತದೆ ಎಂದೂ ಹೇಳಲಾಗದು. ಕ್ಯಾಬಿನೆಟ್ ರಚನೆಯಾಗುವಷ್ಟರಲ್ಲಿ ಸಿದ್ದರಾಮಯ್ಯನವರ ಅಸಲಿ ‘ಪವರ್’ ಏನೆಂಬುದು ಹೊರಜಗತ್ತಿಗೆ ತೆರೆದುಕೊಳ್ಳಬಹುದು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.



