ಕೆಎಂಎಫ್‌ನ ನಂದಿನಿ ಉತ್ಪನ್ನಗಳಿಂದ ಕ್ಯಾನ್ಸರ್ ಬರುತ್ತದೆ ಎಂದು ಅಪಪ್ರಚಾರ ಮಾಡಿದ್ದ ಡಾ.ಶರಣ್ಯ ಸಂತೋಷ್ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ನಂದಿನಿ ಹಾಲು ಇಷ್ಟವಿಲ್ಲದಿದ್ರೆ ಕುಡಿಬೇಡಿ. ಅದನ್ನು ಬಿಟ್ಟು ಇಂತಹ ಕೆಲಸ ಯಾಕೆ ಮಾಡುತ್ತೀರಿ” ಎಂದು ಪ್ರಶ್ನಿಸಿದೆ.
ವೈದ್ಯೆ ಶರಣ್ಯ ಅವರು ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಶರಣ್ಯ ಬೆಂಬಲಕ್ಕೆ ನಿಂತರೆ ಇನ್ನು ಕೆಲವರು ಇವೆಲ್ಲವೂ ನಂದಿನಿಗೆ ಜಾಗತಿಕವಾಗಿ ಇರುವ ಸ್ಥಾನಮಾನವನ್ನು ತಗ್ಗಿಸಲು ಇತರೆ ಕಂಪನಿಗಳು ನಡೆಸುತ್ತಿರುವ ಮಾರುಕಟ್ಟೆ ತಂತ್ರವೆಂದು ಹೇಳಿದ್ದರು.
ಇದನ್ನೂ ಓದಿ: ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ: ವಾಸ್ತವವೋ, ಇತರೆ ಕಂಪನಿಗಳ ಮಾರುಕಟ್ಟೆ ತಂತ್ರವೋ?
ಡಾ. ಶರಣ್ಯ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಕೆಎಂಎಫ್ ತನ್ನ ಜನಪ್ರಿಯ ಉತ್ಪನ್ನಗಳು ಸುರಕ್ಷಿತವೆಂದು ಸ್ಪಷ್ಟನೆಯನ್ನು ನೀಡಿತ್ತು. ಹಾಗೆಯೇ ಡಾ. ಶರಣ್ಯ ಸಂತೋಷ್ ವಿರುದ್ಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡಾ ದಾಖಲಿಸಲಾಗಿತ್ತು.
ಈ ಎಫ್‌ಐಆರ್‌ಗೆ ತಡೆ ನೀಡುವಂತೆ ಕೋರಿ ಶರಣ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಎಫ್ಐಆರ್‌ಗೆ ತಡೆ ನೀಡಲು ನಿರಾಕರಿಸಿ ಶರಣ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
“ನೀವು ಹೇಗೆ ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಹೇಳುತ್ತೀರಾ? ಹಾಗೆ ಹೇಳಿ ಜನರನಲ್ಲಿ ಆತಂಕ ಮೂಡಿಸಿದ್ದೀರಿ. ನೀವು ಹಾಲು ಪರೀಕ್ಷೆ ಮಾಡಿ, ದೃಢೀಕರಣ ಮಾಡಿದ್ದೀರಾ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದೀರಾ? ಇನ್‌ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಾಗಿಯೇ” ಎಂದು ಹೈಕೋರ್ಟ್ ಪ್ರಶ್ನಿಸಿದೆ.
ಎಫ್‌ಐಆರ್ ರದ್ದು ಮಾಡಲು ನಿರಾಕರಿಸಿದ ಹೈಕೋರ್ಟ್ ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.




