ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡದ ಹಳಿಯಾಳ–ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಹಳಿಯಾಳ ತಾಲೂಕಿನ ಕೆಸರೊಳ್ಳಿ ಅಂಚೆ ವ್ಯಾಪ್ತಿಯ ಅಜಗಾಂವ ಗ್ರಾಮದ ಮಾರುತಿ ರಾಮಾ ಹುಲಮನಿ (28) ಮೃತಪಟ್ಟವರು. ಇವರು ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದರು.
ರಾತ್ರಿ ಸುಮಾರು 8.15ರ ವೇಳೆಗೆ ಮಾರುತಿ ಅವರು ತಮ್ಮ ಬೈಕ್‌ನಲ್ಲಿ ಕೆಸರೊಳ್ಳಿಯಿಂದ ಅಜಗಾಂವ ಗ್ರಾಮದ ಕಡೆಗೆ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ 28ರಲ್ಲಿ ಮಾವಳು ಫಕ್ಕೀರಪ್ಪ ಅವರ ಮನೆಯ ಎದುರು ಹಳದಿ ಬಣ್ಣದ ಟ್ರ್ಯಾಕ್ಟರ್ ಟ್ರಾಲಿಯನ್ನು ರಸ್ತೆಯ ರಾಂಗ್ ಸೈಡ್‌ನಲ್ಲಿ ನಿಲ್ಲಿಸಲಾಗಿತ್ತು. ಟ್ರಾಲಿಗೆ ರಾತ್ರಿ ವೇಳೆ ವಾಹನ ಸವಾರರಿಗೆ ಸುಲಭವಾಗಿ ಕಾಣುವಂತೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಿರಲಿಲ್ಲ ಎನ್ನಲಾಗಿದೆ.
ಕತ್ತಲಿನಲ್ಲಿ ಟ್ರಾಲಿ ಸರಿಯಾಗಿ ಕಾಣಿಸದ ಕಾರಣ ಬೈಕ್ ನೇರವಾಗಿ ಅದರ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಜಖಂಗೊಂಡಿದ್ದು, ಮಾರುತಿ ಅವರ ಎಡಗಣ್ಣು, ಎಡಕಿವಿ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟ್ರ್ಯಾಕ್ಟರ್ ಟ್ರಾಲಿಯನ್ನು ನಿರ್ಲಕ್ಷ್ಯದಿಂದ ರಸ್ತೆಯಲ್ಲಿ ನಿಲ್ಲಿಸಿರುವುದು ಹಾಗೂ ಬೈಕ್ ಸವಾರನ ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣವೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಅಜಗಾಂವ ಗ್ರಾಮದ ನಾಮದೇವ ಅರ್ಜುನ ಹುಲಮನಿ ಅವರು ಹಳಿಯಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 285, 281, 106(1) ಹಾಗೂ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



