“50 ವರ್ಷ ಕಳೆದರೂ PTCL ಕಾಯ್ದೆಯ ಅನುಷ್ಠಾನದಲ್ಲಿರುವ ಸಮಸ್ಯೆಗಳ ಕುರಿತು ವರದಿಗಳೇ ಬಂದಿರಲಿಲ್ಲ. ಸರ್ಕಾರ ಮಾಡಬೇಕಿರುವ ಕೆಲಸವನ್ನು ಹಲವು ಪ್ರಜ್ಞಾವಂತ ಕಾನೂನು ತಜ್ಞರುಗಳು ಸೇರಿಕೊಂಡು ಕಾಯ್ದೆಯ ಅನುಷ್ಠಾನದಲ್ಲಿರುವ ಸಮಸ್ಯೆಗಳ ಕುರಿತು ವರದಿಯನ್ನು ಕೊಟ್ಟಿದ್ದಾರೆ. ಈ ವರದಿಯ ಮೂಲಕ ದಲಿತರು ಕಳೆದುಕೊಂಡಿರುವ ಭೂಮಿಯನ್ನು ಮರುಸ್ಥಾಪಿಸಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ” ಎಂದು ಪರ್ಯಾಯ ಕಾನೂನು ವೇದಿಕೆಯ ಕ್ಲಿಫ್ಟನ್ ರೊಜಾರಿಯೋ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಶಾಸಕರ ಭವನದಲ್ಲಿ ಮಂಗಳವಾರ ನಡೆದ PTCL ಕಾಯ್ದೆ 1978 ಅನುಷ್ಠಾನದಲ್ಲಿರುವ ಸಮಸ್ಯೆಗಳ ಕುರಿತು ತೀರ್ಪುಗಾರರ ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, “ಈ ವರದಿಯನ್ನು ಪ್ರತಿ ಎಸ್‌ಸಿ/ಎಸ್‌ಟಿ ಜನರು ಓದಲೇಬೇಕು. ಆ ಮೂಲಕ ತಮ್ಮ ಭೂಮಿಯ ಹಕ್ಕನ್ನು ಉಳಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಮಾಜ ಕಲ್ಯಾಣ ಮಂತ್ರಿ ಹೆಚ್.ಸಿ. ಮಹದೇವಪ್ಪನವರು ಮಾತನಾಡಿದರು. “ಈ ವರದಿ ನಮಗೆಲ್ಲ ಬಹಳ ಅನಿವಾರ್ಯವಾಗಿತ್ತು. ಸರ್ಕಾರ ಮಾಡಬೇಕಿರುವ ಕೆಲಸವನ್ನು ನೀವೆಲ್ಲಾ ಮಾಡಿದ್ದೀರಿ. ಈ ವರದಿಯನ್ನು ಒಪ್ಪಿಕೊಳ್ಳಲು ಯಾವುದೇ ಪರಾಮರ್ಶೆಯ ಅಗತ್ಯವಿಲ್ಲ, ನಾವೆಲ್ಲಾ ಒಟ್ಟಾಗಿ ಸೇರಿ ಈ ವರದಿಯಲ್ಲಿನ ಶಿಫಾರಸ್ಸನ್ನು ಅನುಷ್ಠಾನಗೊಳಿಸಲು ಕಂದಾಯ ಮಂತ್ರಿಗಳ ಮೇಲೆ ಒತ್ತಡ ಹೇರಬೇಕು. ಆ ಮೂಲಕ ದಲಿತರ ಭೂಮಿಯ ಹಕ್ಕನ್ನು ಉಳಿಸಿಕೊಳ್ಳಬೇಕು” ಎಂದರು.
ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿಯವರು ಮಾತನಾಡಿ, “ಯಾವುದೋ ಕಾಲದಲ್ಲಿ ಉದ್ಬವವಾದ ಒಳಮೀಸಲಾತಿ ಒಡಕಿನಿಂದಾಗಿ ಮೀಸಲಾತಿ ಹಕ್ಕನ್ನು ರಕ್ಷಣೆ ಮಾಡಿಕೊಳ್ಳುವ ದಿಕ್ಕಿನಲ್ಲಿ ಯೋಚನೆ ಮಾಡುತ್ತಿಲ್ಲ. ನಮ್ಮಲ್ಲಿನ ಒಡಕು ಧ್ವನಿಯಿಂದಾಗಿ ನಮ್ಮ ಹಕ್ಕುಗಳನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ ಅನಿಸುತ್ತಿದೆ” ಎಂದು ಅಭಿಪ್ರಾಯಪಟ್ಟರು.
ವರದಿಯಲ್ಲಿನ ಪ್ರಮುಖ ಶಿಫಾರಸುಗಳು
Nekkanti Rama Lakshmi review petition ನಲ್ಲಿ ರಾಜ್ಯ ಸರ್ಕಾರ ಪರಣಾಮಕಾರಿಯಾಗಿ ಪ್ರತಿನಿಧಿಸಬೇಕು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿ PTCL ಕಾಯ್ದೆಯ ಅನುಷ್ಠಾನ ಮತ್ತು ನ್ಯಾಯಾಂಗದ ತೀರ್ಪುಗಳ ಪರಿಣಾಮವನ್ನು ಪರಿಶೀಲಿಸಬೇಕು.
Nekkanti ನಂತರ ವಿಳಂಬದ ಆಧಾರದ ಮೇಲೆ ಭೂಮಿ ಕಳೆದುಕೊಂಡ ಕುಟುಂಬಗಳಿಗೆ ಅದೇ ಜಿಲ್ಲೆಯಲ್ಲಿ ಪರ್ಯಾಯ ಭೂಮಿ ಒದಗಿಸಬೇಕು.
PTCL ಪ್ರಕರಣಗಳಿಗೆ ವಿಶೇಷ ಕಾನೂನು ನೆರವು ಮತ್ತು ತರಬೇತಿ ಪಡೆದ ವಕೀಲರ ವ್ಯವಸ್ಥೆ ಮಾಡಬೇಕು. ಸೆಕ್ಷನ್6 ಮತ್ತು 8ನ್ನು ಕಟ್ಟುನಿಟ್ಟಗಿ ಜಾರಿಗೊಳಿಸಿ, ಅಕ್ರಮ ನೋಂದಣಿ ಮತ್ತು ಅಕ್ರಮ ವರ್ಗಾವಣೆಗೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕಂದಾಯ ಆಧಿಕಾರಿಗಳಿಗೆ PTCL ಕಾಯ್ದೆಯ ಸಾಮಾಜಿಕ ನ್ಯಾಯದ ಉದ್ದೇಶ ಮತ್ತು ಸಾಮಾಜಿಕ ಹಿನ್ನೆಲೆ ಕುರಿತು ವಿಶೇಷ ತರಬೇತಿ ನೀಡಿ, ಮರುಸ್ಥಾಪನಾ ಆದೇಶಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು.
ವರದಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಡಿ. ತಂಗರಾಜ್ ಹಾಗೂ ಭೂಶಕ್ತಿ ಕೇಂದ್ರದ ಅಧ್ಯಕ್ಷರಾದ ಜ್ಯೋತಿ ರಾಜ್ ಅವರು ಸಂಕ್ಷಿಪ್ತವಾಗಿ ವಿವರಿಸಿದರು.




