“1896ರಿಂದಲೂ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತಿದೆ. ಸಂಪ್ರದಾಯದಂತೆ ನಾವು ಎರಡೇ ಚರಣಗಳನ್ನು ಹಾಡುವುದನ್ನು ಮುಂದುವರೆಸುತ್ತೇವೆ. ನಮ್ಮನ್ನು ಜೈಲಿಗೆ ಹಾಕಲಿ ಅಥವಾ ನೇಣಿಗೆ ಏರಿಸಲಿ, ನಾವು ಎರಡೇ ಚರಣಗಳನ್ನು ಹಾಡುವುದು” ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಹೇಳಿದರು.
ಇಂದು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ ಕೆ ಹರಿಪ್ರಸಾದ್, “1896ರ ಮುಕ್ತ ಹಾಗೂ ಅಧಿಕೃತ ಕಾಂಗ್ರೆಸ್ ಅಧಿವೇಶನದಿಂದಲೂ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡುವ ಪದ್ಧತಿ ರೂಢಿಯಲ್ಲಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಸೋನಿಯಾ ಕ್ಷಮೆಯಾಚನೆಗೆ ಬಂಕಿಮ್ ಚಂದ್ರ ವಂಶಜ, ಬಿಜೆಪಿ ಶಾಸಕ ಆಗ್ರಹ: ಏನಿದು ವಂದೇ ಮಾತರಂ ವಿವಾದ?
ವಂದೇ ಮಾತರಂ ಗೀತೆಯ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ 1925 ರಿಂದ ಇಂದಿನವರೆಗೂ ಆರ್‌ಎಸ್‌ಎಸ್ ತನ್ನ ಶಾಖೆಗಳಲ್ಲಿ ಎಂದಿಗೂ ವಂದೇ ಮಾತರಂ ಹಾಡಿಲ್ಲ. ಹಾಗಿರುವಾಗ ದೇಶಭಕ್ತಿಯ ಪ್ರಮಾಣಪತ್ರವನ್ನು ತಮಗೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ನಿಂದ ಬೇಕಿಲ್ಲ” ಎಂದು ಟೀಕಿಸಿದರು.
ಈ ಸಂದರ್ಭದಲ್ಲೇ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಕಡ್ಡಾಯಗೊಳಿಸುವ ಮೂಲಕ ರಾಷ್ಟ್ರಗೀತೆಯಾದ ‘ಜನಗಣಮನ’ವನ್ನು ಎರಡನೇ ದರ್ಜೆಗೆ ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹರಿಪ್ರಸಾದ್ ದೂರಿದ್ದಾರೆ.
ಹಿಂದೂ ದೇವತೆಗಳ ಉಲ್ಲೇಖ ಇರುವ ವಂದೇ ಮಾತರಂ ಸಂಪೂರ್ಣ ಗೀತೆಯ ಎಲ್ಲ ಚರಣಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುವ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗಳ ಮಧ್ಯೆ ಬಿ. ಕೆ. ಹರಿಪ್ರಸಾದ್ ಅವರ ಈ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.




